ಮೇವು ಬ್ಯಾಂಕ್ : ರೈತರ ಜಾನುವಾರುಗಳಿಗೆ ಪ್ರಾಣ ಸಂಕಟ

ಮಧುಗಿರಿ/ ದೊಡ್ಡೇರಿ

      ಇತ್ತೀಚೆಗೆ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಆರಂಭಿಸಿದ ಮೇವು ಬ್ಯಾಂಕ್ ವಿರುದ್ಧ ಹೋಬಳಿಯ ರೈತರೆ ಅಪಸ್ವರದ ಮಾತುಗಳನ್ನಾಡಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

       ಮಾ.7 ರಂದು ಬರಗಾಲದ ಹಿನ್ನೆಲೆಯಲ್ಲಿ ಮೇವು ಬ್ಯಾಂಕ್‍ನ್ನು ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಇಂದಿರಾ ಗ್ರಾಮದಲ್ಲಿನ ಇಂದಿರಾ ತೋಟಗಾರಿಕೆ ಇಲಾಖೆಯ ಆವರಣದಲ್ಲಿಯೇ ಶಾಸಕ ಎಂ.ವಿ.ವೀರಭದ್ರಯ್ಯ ತಾಲ್ಲೂಕು ಆಡಳಿತದ ಅಧಿಕಾರಿಗಳೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಆದರೆ ಪಶು ಇಲಾಖೆಯ ಅಧಿಕಾರಿಗಳು ಮತ್ತು ಮೇವು ಸರಬರಾಜು ಮಾಡುವ ಗುತ್ತಿಗೆದಾರರ ಶಾಮೀಲಿನಿಂದಾಗಿ ಜಾನುವಾರುಗಳಿಗೆ ಕಳಪೆ ಮೇವನ್ನು ಅಧಿಕಾರಿಗಳು ವಿತರಿಸಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

        ಇಲ್ಲಿನ ಮೇವು ಬ್ಯಾಂಕ್‍ನಲ್ಲಿ ಪ್ರತಿ ದಿನ ಹೋಬಳಿಯ ಸುತ್ತಮುತ್ತಲ ಸುಮಾರು 20 ರಿಂದ 30 ಜನ ರೈತರಿಗೆ ಮಾತ್ರ ಟೋಕನ್‍ಗಳನ್ನು ವಿತರಿಸುತ್ತಿದ್ದಾರೆ. ಅದೂ ಕೂಡ ಸರಿಯಾಗಿ ಹಂಚಿಕೆಯಾಗುತ್ತಿಲ್ಲ. ವಿತರಣೆ ಮಾಡಲು ಬರುವ ಅಧಿಕಾರಿಗಳು ಸಮಯಪಾಲನೆ ಮಾಡುತ್ತಿಲ್ಲ. ಇಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಅವರು ಬಂದಿಲ್ಲ, ಇವರು ಬಂದಿಲ್ಲ ಎಂದು ಸಬೂಬು ಹೇಳುತ್ತಾ ತಮ್ಮ ಮನಸೋ ಇಚ್ಚೆ ವಿತರಿಸಿದ ಟೋಕನ್ ಗಳಿಗೂ ಸರಿಯಾದ ಮೇವನ್ನು ವಿತರಣೆ ಮಾಡುತ್ತಿಲ್ಲ ಎಂಬ ಆರೋಪ ಸ್ಥಳೀಯ ರೈತರಿಂದ ಕೇಳಿ ಬಂದಿದೆ.

       ಸದ್ಯದ ಪರಿಸ್ಥಿತಿಯಲ್ಲಿ ಮೇವು ವಿತರಣೆಯ ಗುತ್ತಿಗೆ ಪಡೆದಿರುವ ವ್ಯಕ್ತಿಯು ಪಶು ಇಲಾಖೆಯ ಅಧಿಕಾರಿಗಳು ತಿರಸ್ಕರಿಸಿರುವ ಹಸಿ ಮೇವನ್ನೇ ಯಾರಿಗೂ ಹೇಳದೆ ಕೇಳದೆ ಇಲ್ಲಿಯೇ ಸುರಿದು ಹೋಗುತ್ತಿದ್ದಾನೆ. ಈ ಬಗ್ಗೆ ವಿಚಾರಿಸಿದರೆ ತಹಸೀಲ್ದಾರ್‍ರವರಿಗೆ ಹೇಳಿ, ಎಸಿ, ಡಿಸಿಗೆ ಸೇರಿದಂತೆ ಸಂಬಂಧಪಟ್ಟ ಸಚಿವರಿಗೆ ಬೇಕಾದರೂ ಹೇಳಿಕೊಳ್ಳಿ ಎಂದು ಗುತ್ತಿಗೆದಾರ ಅಹಂಕಾರದ ಮಾತುಗಳನ್ನಾಡುತ್ತಿದ್ದಾರೆ. 9ನೆ ತಾರೀಖಿನಂದು ಪಡೆದಿರುವ ಟೋಕನ್‍ಗಳಿಗೆ ಇದೂವರೆವಿಗೂ ಸರಿಯಾಗಿ ಮೇವು ವಿತರಿಸಿಲ್ಲ. ಸರಿಯಾದ ಸೌಕರ್ಯಗಳನ್ನೇ ತಾಲ್ಲೂಕು ಆಡಳಿತ ಒದಗಿಸುತ್ತಿಲ್ಲ. ಚುನುವಣಾ ಸಂದರ್ಭವಾಗಿರುವುದರಿಂದ ನಮ್ಮ ಸಮಸ್ಯೆ ಬಗ್ಗೆ ಯಾರಿಗೆ ಹೇಳಿಕೊಳ್ಳಬೇಕೊ ಗೊತ್ತಾಗುತ್ತಿಲ್ಲ ಅಂತಾರೆ ಲಕ್ಷ್ಮೀನಾರಾಯಣಪ್ಪ.

      ಬೆಲ್ಲದಮಡು ಗ್ರಾಮಸ್ಥೆ ರಾಧ ಮಾತನಾಡಿ, ಮಕ್ಕಳನ್ನು ಮನೆಗಳ ಬಳಿಯೇ ಬಿಟ್ಟು ಪ್ರತಿ ದಿನ ಇಲ್ಲಿಗೆ ಬಂದರೂ ರಾಸುಗಳಿಗಾಗಿ ಮೇವು ಹಾಗೂ ನಮಗೆ ಕುಡಿಯಲು ನೀರನ್ನು ಸಹ ಕೊಡುತ್ತಿಲ್ಲ. ಈಗ ನೀಡುತ್ತಿರುವ ಮೇವು ಹಸಿ ಮೇವಾಗಿದ್ದು ನಾವು ತೂಕ ಮಾಡುವುದಿಲ್ಲ ಅಂತ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ವಿತರಿಸುತ್ತಿರುವ ಮೇವು ಯೋಗ್ಯವಾಗಿಲ್ಲ ಎಂದು ದೂರಿದರು.

       ದೊಡ್ಡೇರಿ ಜಿಪಂ ಸದಸ್ಯ ಚೌಡಪ್ಪ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಹಾಗೂ ಶಾಸಕರು ಸೇರಿ ಮೇವು ಬ್ಯಾಂಕ್‍ನ್ನು ಉದ್ಘಾಟಿಸಲಾಯಿತು. ಅಂದು ವಿತರಿಸಿದ ಮೇವು ಉತ್ತಮವಾಗಿತ್ತು. ಆದರೆ ಈಗ ರೈತರ ರಾಸುಗಳಿಗೆ ವಿತರಣೆ ಮಾಡುತ್ತಿರುವ ಮೇವು ಹಸಿಯಾಗಿದೆ ಮತ್ತು ಕಳಪೆಯಿಂದ ಕೂಡಿದೆ. ಇದರಿಂದ ಏನಾದರೂ ರಾಸುಗಳಿಗೆ ತೊಂದರೆಯಾದರೆ ಪಶು ಇಲಾಖೆಯ ಸಹಾಯಕ ನಿರ್ದೇಶಕರನ್ನೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

      ಪಶು ಇಲಾಖೆಯ ಸಹಾಯಕ ನಿರ್ದೇಶಕರು ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಕೆಲವರಿಗೆ ವಿವಿಧ ಸೌಲಭ್ಯಗಳನ್ನು ಕಚೇರಿಯ ಬಳಿಯೇ ವಿತರಿಸಿದ್ದಾರೆಂಬ ಆರೋಪ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದೆ. ಚುನಾವಣಾಧಿಕಾರಿಗಳು ಗಮನಹರಿಸಿಲ್ಲ ಹಾಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಮೇವು ಬ್ಯಾಂಕ್ ಬಗ್ಗೆ ಈ ಅಧಿಕಾರಿ ಕಾಳಜಿ ವಹಿಸುತ್ತಿಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ರಂಗನಾಥಪ್ಪ, ರಾಮಣ್ಣ, ಮಂಜಮ್ಮ, ಶಂಕರಪ್ಪ, ಮತ್ತಿತರರು ದೂರಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap