ಪುರಸಭೆಯ ಅವ್ಯವಹಾರದ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹ

ಕುಣಿಗಲ್

        ಪುರಸಭೆಯಲ್ಲಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತ ಹಲವು ಅಕ್ರಮ, ಅವ್ಯವಹಾರವನ್ನು ಮಾಡುತ್ತಿರುವ ಬಗ್ಗೆ ಕೂಡಲೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಕೆ.ಎಲ್.ಹರೀಶ್ ಆಗ್ರಹಿಸಿದರು.

         ಅವರು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಏಳು ಕುಡಿಯುವ ನೀರಿನ ಘಟಕಗಳನ್ನು ಏಕಪಕ್ಷೀಯವಾಗಿ ಅಧ್ಯಕ್ಷೆ ನಳಿನಾ, ಮುಖ್ಯಾಧಿಕಾರಿ ರಮೇಶ್ ಸದಸ್ಯರ ಗಮನಕ್ಕೆ ತರದೆ ಟೆಂಡರ್ ಪ್ರಕ್ರಿಯೆ ಮಾಡದೆ ಗೋಲ್‍ಮಾಲ್ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಕಳೆದ 8 ತಿಂಗಳ ಜಮಾ-ಖರ್ಚನ್ನು ಸಭೆಯಲ್ಲಿ ಅನುಮೋದನೆ ಇಲ್ಲದಿದ್ದರೂ ಅನುಮೋದನೆ ಮಾಡಿದ್ದಾರೆ ಎಂದು ಠರಾವು ಪುಸ್ತಕದಲ್ಲಿ ಬರೆದುಕೊಂಡಿರುವುದು ಅಕ್ರಮದಿಂದ ಕೂಡಿದೆ ಎಂದರು.

       ನೂತನ ಮುಖ್ಯಾಧಿಕಾರಿ ಕಚೇರಿಯಲ್ಲಿ ಕುಳಿತುಕೊಳ್ಳದೆ ಯಾವಾಗಲೂ ಶಾಸಕರ ಕೈಗೊಂಬೆಯಾಗಿದ್ದು ಅವರ ಸಭೆಗಳ ಹಿಂದೆ ಹೋಗುವುದೆ ಅವರ ಕೆಲಸವಾಗಿದೆ ಎಂದು ಲೇವಡಿ ಮಾಡಿದರು.

        ಈ ಹಿಂದೆ ತಾಲ್ಲೂಕಿನಲ್ಲಿದ್ದ ಹುಚ್ಚಮಾಸ್ತಿಗೌಡರು, ವೈಕೆಆರ್, ನಾಗರಾಜಯ್ಯ, ಮುದ್ದಹನುಮೇಗೌಡರು ಎಂದು ಬರಿ ಅಧಿಕಾರಿಗಳನ್ನ ಹಿಂದಿಕ್ಕಿಕೊಂಡು ಸಭೆಮಾಡುವ ನೆಪದಲ್ಲಿ ಊರೂರು ಸುತ್ತಲಿಲ್ಲ. ಇವರೆಲ್ಲ ಅಧಿಕಾರಿಗಳಿಗೆ ತಾಖೀತು ಮಾಡಿ ಜನಸಾಮಾನ್ಯರ ಕೆಲಸ ಮಾಡುವಂತೆ ಎಚ್ಚರಿಕೆ ನೀಡಿ ಕೆಲಸ ಮಾಡಿಸುತ್ತಿದ್ದರು. ಆದರೆ ಇವರು ಇದಕ್ಕೆ ವಿರುದ್ಧವಾಗಿದ್ದಾರೆ ಎಂದು ಆರೋಪಿಸಿದರು.

         ಶಾಸಕರು ಪ್ರತಿವಾರ್ಡಿಗೆ ಭೇಟಿ ನೀಡಿ ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಮಾಡುವುದನ್ನ ನಿಲ್ಲಿಸಲಿ. ಪುರಸಭೆಯ ಎಲ್ಲಾ ಸದಸ್ಯರುಗಳನ್ನ ಆಯಾ ವಾರ್ಡ್‍ಗೆ ಭೇಟಿ ನೀಡಿದಾಗ ಕರೆಯದೆ ಬರೀ ಅವರ ಪಕ್ಷದ ಹಿಂಬಾಲಕರನ್ನ ಜೊತೆಗಿಟ್ಟುಕೊಂಡು ವಾರ್ಡ್‍ಗಳಲ್ಲಿ ಸುತ್ತಾಡುತ್ತಿರುವುದು ಬರುವ ಲೋಕಸಭೆಯ ಚುನಾವಣೆಯ ಗಿಮಿಕ್ ಆಗಿದೆ ಎಂದು ಟೀಕಿಸಿದರು. ಕಳೆದ ಆರು ತಿಂಗಳಿಂದ ಶಾಸಕರು ಹೇಮಾವತಿ ನೀರು ಕುಣಿಗಲ್ ದೊಡ್ಡಕೆರೆಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡದೆ ಸಚಿವ ಹೆಚ್.ಡಿ.ರೇವಣ್ಣ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ.

            ಶಾಸಕರ ಸಂಬಂಧಿಗಳೆ ಆದ ಡಿ.ಕೆ.ಶಿವಕುಮಾರ್‍ಗೆ ಮನವಿ ಮಾಡಿ ನೀರು ಏತಕ್ಕಾಗಿ ಹರಿಸುತ್ತಿಲ್ಲಾ ಎಂದು ಪ್ರಶ್ನಿಸಿದರು. ಎಸ್.ಪಿ. ಮುದ್ದಹನುಮೇಗೌಡರು ಶಾಸಕರಾಗಿದ್ದಾಗ ನೀಡಿದ ನಿವೇಶನಗಳನ್ನೇ ಮರು ಹಂಚಿಕೆ ಮಾಡುತ್ತೇವೆ ಎಂದು ಜನರಿಂದ ಅರ್ಜಿ ಆಹ್ವಾನಿಸಿ ಕಚೇರಿಗೂ ಮನೆಗೂ ನಿರ್ಗತಿಕ ಬಡ ಜನರು ಬರಿ ಹಣ ಖರ್ಚುಮಾಡುತ್ತ ಅಲೆದಾಡುವಂತಾಗಿದೆ ಎಂದರು. ವಸತಿ ಯೋಜನೆಯಲ್ಲಿ ಮನೆಕಟ್ಟಲು ಫಲಾನುಭವಿಗಳಿಂದ ಲಂಚ ಪಡೆಯುತ್ತಿದ್ದಾರೆ, ಬೀದಿದೀಪ ಮತ್ತು ಕುಡಿಯುವ ನೀರಿನಲ್ಲಿಯೂ ಅಕ್ರಮ ನಡೆದಿದೆ ಎಂದ ಅವರು, ಪುರಸಭೆಯಲ್ಲಿ ಹೇಳುವರು ಕೇಳುವರು ಇಲ್ಲದಂತಾಗಿದೆ.

            ಇನ್ನು ಕೆಲವೇ ದಿನ ಇವರೆ ಇದ್ದರೆ ಪುರಸಭೆಯನ್ನು ಮಾರಿಬಿಡುತ್ತಾರೆ ಎಂದು ಟೀಕಿಸಿದ ಅವರು, ಪುರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಸಂಪೂರ್ಣವಾಗಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದರು. ಸದಸ್ಯರಾದ ಅನ್ಸರ್‍ಪಾಷಾ, ಯುಸೆಫ್ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap