ಗಾಂಧಿ ರಂಗ ಪಯಣ ಎರಡನೆಯ ಹಂತದ ತಿರುಗಾಟ ತಂಡದ ತರಬೇತಿಗೆ ಚಾಲನೆ

0
16

ಹಾವೇರಿ:

       ಗಾಂಧಿ ನಾಟಕವನ್ನು ಅಭಿನಯಿಸುತ್ತಲೇ ಅವರ ಚಿಂತನೆ ಮತ್ತು ಆದರ್ಶಗಳನ್ನು ಕಲಾವಿದರು ನಿಜ ಜೀವನದಲ್ಲಿ ಅಳವಡಿಸಕೊಳ್ಳಬೇಕು. ಅಷ್ಟು ಸ್ಪುರದ್ರೂಪಿಯಲ್ಲದ ಗಾಂಧೀ ತಮ್ಮ ಮಾನಸಿಕ ಸೌಂದರ್ಯದಿಂದ ಜಗತ್ತನ್ನು ಗೆದ್ದ ಯುಗ ಪುರುಷ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

         ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಇದೇ ನವೆಂಬರ್ 20 ರಿಂದ 5 ತಿಂಗಳ ಕಾಲ ರಾಜ್ಯಾದ್ಯಂತ ಬಾಪೂಜಿ ಸಂದೇಶವನ್ನು ಹೊತ್ತು ಸಂಚರಿಸಲಿರುವ ‘ ಪಾಪು ಗಾಂಧೀ , ಬಾಪು ಗಾಂಧಿ ‘ರಂಗ ಪಯಣದ ಹೊಸ ತಂಡಗಳಿಗೆ ಶೇಷಗಿರಿಯ ಕಲಾ ಭವನದಲ್ಲಿ ಆಯೋಜಿಸಿರುವ ತರಬೇತಿ ಶಿಬಿರವನ್ನು ‘ಗಾಂಧೀ ಗಿಡ’ ಎಂಬ ಕವಿತೆ ವಾಚಿಸುವ ಮೂಲಕ ಗುರುವಾರ ಚಾಲನೆ ನೀಡಿದರು.

         ‘ಪಂಡಿತರಿಗೂ ಮತ್ತು ಸಾಮಾನ್ಯನಿಗೂ ಒಂದೇ ಕಾಲಕ್ಕೆ ಅರ್ಥವಾಗಬಲ್ಲ ದಾರ್ಶನಿಕ ಗಾಂಧೀಜಿಯವರು. ಗಾಂಧೀಜಿ ಅವರು ಯಾವ ಗಡಸು ಸಿದ್ಧಾಂತಗಳನ್ನು ಪ್ರತಿಪಾದಿಸದೇ, ಸರಳತೆ ಮತ್ತು ಸಹಜ ಜೀವನಕ್ಕೆ ಮಾದರಿಯಾದವರು. ಗಾಂಧೀ ಎಂದು ಹೇಳಿ ಜಗತ್ತಿನಲ್ಲಿ ಸರಳವಾಗಿ ಬದುಕುವುದೇ ಅತೀ ಕಠಿಣವಾದ ಸಂಗತಿಯಾಗಿದೆ ಎಂದರು.

        ಅಧ್ಯಕ್ಷತೆ ವಹಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಾದ ಡಾ. ಬಿ. ಆರ್ ರಂಗನಾಥ್ ಕುಳಗಟ್ಟೆ ಅವರು ಮಾತನಾಡಿ, ನಾಡಿನ ಎಳೆ ಮನಸುಗಳಿಗೆ ಗಾಂಧೀಜಿ ಅವರ ಸಂದೇಶವನ್ನು ಮುಟ್ಟಿಸುವುದು ‘ ಪಾಪು ಗಾಂಧೀ , ಬಾಪು ಗಾಂಧಿ’ ರಂಗ ಪಯಣ ಸಂಚಾರದ ಉದ್ದೇಶ, ಕಲಾವಿದರು ಗಾಂಧಿ ಪಯಣದ ಅಭಿಯನದ ಜೊತೆಗೆ ಅವರ ಶ್ರದ್ಧೆ, ಜೀವನ ಸರಳತೆ ಹಾಗೂ ಸಂದೇಶಗಳನ್ನು ರೂಢಿಸಿಕೊಂಡು ತಮ್ಮ ನಡೆ ಹಾಗೂ ಅಭಿನಯದ ಮೂಲಕ ನಾಡಿನ ಯುವ ಸಮೂಹವನ್ನು ಗೆಲ್ಲಬೇಕು ಎಂದು ಹೇಳಿದರು.

        ಗಾಂಧಿ ಪಯಣ ಸಂಚಾರದ ಬೃಹತ್ ಯೋಜನೆಯೊಂದು ರಾಜಧಾನಿಯಿಂದ ಜಿಲ್ಲೆಯ ಶೇಷಗಿರಿಯಲ್ಲಿ ಅನುಷ್ಠಾನಗೊಳ್ಳುವುದಕ್ಕಾಗಿ ಸಿದ್ಧಗೊಳ್ಳುತ್ತಿರುವುದು ಹೆಮ್ಮೆ ಪಡುವ ಸಂಗತಿ ಎಂದರು.

       ಗಾಂಧಿ ಪಯಣ ರಾಜ್ಯದ ನಾಲ್ಕು ಕಂದಾಯ ಭಾಗಗಳಲ್ಲಿ ನವಂಬರ್ 21 ರಿಂದ ಪ್ರದರ್ಶನ ಆರಂಭಗೊಳ್ಳಲಿದೆ. ರಾಜ್ಯದಲ್ಲಿ ಒಂದು ಸಾವಿರ ಪ್ರದರ್ಶನವನ್ನು ಆಯೋಜಿಸಲಾಗುವುದು. ನಾಲ್ಕು ತಂಡಗಳಾಗಿ ನವಂಬರ್ 21 ರಿಂದ ಮಾರ್ಚ್ 31ರವರೆಗೆ ಪ್ರದರ್ಶನ ನಡೆಯಲಿದೆ. ಈಗಾಗಲೇ ಎರಡು ತಂಡಗಳಿಗೆ ತರಬೇತಿ ಪೂರೈಸಲಾಗಿದೆ. ಉಳಿದ ಎರಡು ತಂಡಗಳಿಗೆ ಇಂದಿನಿಂದ ತರಬೇತಿ ಆರಂಭಗೊಳಿಸಲಾಗಿದೆ. ನವೆಂಬರ್ 20 ರಂದು ಸಂಜೆ ನಾಲ್ಕೂ ತಂಡಗಳ 60 ಕಲಾವಿದರ ಮೆಗಾ ಪ್ರದರ್ಶನ ಹಾವೇರಿಯಲ್ಲಿ ನಡೆಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

         ನಾಟಕದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ಡಾ. ಶ್ರೀಪಾದ ಭಟ್ಟರವರು ಪ್ರಾಸ್ತಾವಿಕ ಮಾತುಗಳನ್ನಾಡಿ ‘ ಕೇವಲ ಗಾಂಧಿ ನಾಟಕವನ್ನು ಮಾಡಿ ತೋರಿಸುವುದು ಈ ಶಿಬಿರದ ಉದ್ದೇಶವಲ್ಲ. ಗಾಂಧಿ ಚಿಂತನೆಗಳನ್ನು ಮಾನಸಿಕವಾಗಿ ರೂಢಿಸಿಕೊಳ್ಳಲು ಪ್ರತಿ ದಿನ ಇದೇ ರೀತಿ ಚಿಂತನೆಗಳ ಚಲನ ಚಿತ್ರ ಪ್ರದರ್ಶನ, ಗಾಂಧಿ ಸಾಹಿತ್ಯದ ಓದು, ಕಾವ್ಯ ಸಂವಾದ ಹಾಗೂ ಹಾಡುಗಾರಿಕೆ ತರಬೇತಿ ಕೂಡ ನಡೆಯುತ್ತದೆ. ನಾಡಿನ ಪ್ರಮುಖ ಚಿಂತಕ ಸಾಹಿತಿಗಳು ಆಗಾಗ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸುವರು. ಆ ಮೂಲಕ ಕಲಾವಿದರ ಮಾನಸಿಕ ಭೂಮಿಕೆಯನ್ನು ಸಿದ್ಧಪಡಿಸಲಾಗುವುದು ಎಂದರು.

           ವೇದಿಕೆಯಲ್ಲಿ ಶೇಷಗಿರಿ ಕಲಾ ತಂಡದ ಮುಖ್ಯಸ್ಥ ಪ್ರಭು ಗುರಪ್ಪನವರ ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಗೊಂಡ ಕಲಾವಿದರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here