7.15 ಲಕ್ಷ ಮೌಲ್ಯದ 28 ಕೆಜಿ ಗಾಂಜಾ ವಶ

ದಾವಣಗೆರೆ:

     ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ನಾಲ್ವರನ್ನು ಬಂಧಿಸಿರುವ, ಚನ್ನಗಿರಿ ಪೊಲೀಸರು ಬಂಧಿತರಿಂದ 7.15 ಲಕ್ಷ ರೂ. ಮೌಲ್ಯದ 28 ಕೆ.ಜಿ. 600 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದ್ದಾರೆ.

       ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶದ ಕಡಪ ಜಿಲ್ಲೆಯ ನಿವಾಸಿಗಳಾದ ಸುಧಾಕರ್ ಅಲಿಯಾಸ್ ಲೋಮಡ ಸುಧಾಕರ್, ರಾಜೇಶ್ ಅಲಿಯಾಸ್ ಮಂಗಲ್ ರಾಜೇಶ್, ಮುನ್ನಯ್ಯ ಅಲಿಯಾಸ್ ಮಂಗಲ ಮುನ್ನಯ್ಯ, ಬಾಬಾ ಅಲಿಯಾಸ್ ಶೇಕ್ ಬಾಬಾ ಫಕೃದ್ದೀನ್ ಬಂಧಿತರಾಗಿದ್ದು, ಇನ್ನೋರ್ವ ಆರೋಪಿ ತರಪನಾಥ ತಲೆ ಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಹೇಳಿದರು.

        ಈ ಆರೋಪಿಗಳು ಆಂಧ್ರಪ್ರದೇಶದಿಂದ ಗಾಂಜಾ ಸೊಪ್ಪನ್ನು ಬಸ್‍ಗಳ ಮೂಲಕ ದಾವಣಗೆರೆ, ಭದ್ರಾವತಿ, ಶಿವಮೊಗ್ಗ ಸೇರಿದಂತೆ ಬೇರೆ, ಬೇರೆ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಮುಂಚೆಯಂತೆ ಆಂಧ್ರಪ್ರದೇಶದಿಂದ ಚನ್ನಗಿರಿ ಮಾರ್ಗವಾಗಿ ಸಾಗಾಣೆ ಮಾಡುತ್ತಿದ್ದ ಸಂದರ್ಭದಲ್ಲಿ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ವೃತ್ತದ ಬಸ್ ತಂದುದಾಣದಲ್ಲಿ ಸುಮಾರು 2ರಿಂದ 3 ಕೆಜಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿರುವ ಚನ್ನಗಿರಿ ಠಾಣೆ ಪಿಎಸ್‍ಐ ಶಿವರುದ್ರಪ್ಪ ಎಸ್. ಮೇಟಿ ನಾಲ್ವರನ್ನು ಬಂಧಿಸಿ, ಇವರಿಂದ 7.15 ಲಕ್ಷ ರೂ. ಮೌಲ್ಯದ 28 ಕೆ.ಜಿ. 600 ಗ್ರಾಂ ಗಾಂಜಾ ವಶಪಡೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

      ಇತ್ತೀಚೆಗೆ ಪೊಲೀಸ್ ಇಲಾಖೆ ಆಶ್ರಯದಲ್ಲಿ ವಿವಿಧ ಕಾಲೇಜು, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ನಡೆಸುತ್ತಿರುವ ಜನ ಜಾಗೃತಿ ಕಾರ್ಯಕ್ರಮಗಳಿಂದ ಮಾದಕ ವಸ್ತುಗಳ ಅಕ್ರಮ ಮಾರಾಟ, ಸಾಗಾಣೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿದೆ. ಆದ್ದರಿಂದ ಇತ್ತೀಚೆಗೆ ಅಕ್ರಮವಾಗಿ ಗಾಂಜಾ, ಮತ್ತು ಬರುವ ಔಷಧಿ ಮಾರಾಟ ಮಾಡುತ್ತಿರುವವರನ್ನು ವಶಕ್ಕೆ ಪಡೆಯಲು ಸಾಧ್ಯವಾಗಿದೆ ಎಂದರು.

       ಕಾರ್ಯಾಚರಣೆಯಲ್ಲಿ ಪಿಎಸ್‍ಐ ಶಿವರುದ್ರಪ್ಪ ಎಸ್. ಮೇಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ರುದ್ರೇಶ್ ಎಸ್.ಆರ್, ರುದ್ರೇಶ್, ಮಂಜುನಾಥ ಪ್ರಸಾದ, ಧರ್ಮಪ್ಪ, ರೇವಣಸಿದ್ದಪ್ಪ, ಸಂತೋಷ, ಹಾಲೇಶ, ಪ್ರವೀಣ್ ಗೌಡ, ರವೀಂದ್ರ, ಮಂಜು, ರಾಜಶೇಖರ್ ರೆಡ್ಡಿ ಭಾಗವಹಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ಮಂಜುನಾಥ್ ಕೆ. ಗಂಗಲ್, ವೃತ್ತ ನಿರೀಕ್ಷಕ ಗುರುಬಸವರಾಜ, ಪಿಎಸ್‍ಐ ಶಿವರುದ್ರಪ್ಪ ಎಸ್. ಮೇಟಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap