ನೆಲ, ಜಲದ ರಕ್ಷಣೆಗೆ ಮುಂದಾಗಿ : ಚಂದ್ರಶೇಖರ ಕಂಬಾರ

0
3

ಧಾರವಾಡ:

        ಕೆಲ ರಾಜಕೀಯ ಶಕ್ತಿಗಳು ತಮ್ಮ ಸ್ವಾರ್ಥಗೊಸ್ಕರ ಕನ್ನಡ ನಾಡನ್ನು ಇಬ್ಭಾಗ ಮಾಡುವ ಹುನ್ನಾರ ನಡೆಸಿದ್ದು, ಪ್ರತಿಯೊಬ್ಬ ಕನ್ನಡಿಗ ಒಗ್ಗಟ್ಟಿನಿಂದ ನೆಲ, ಜಲದ ರಕ್ಷಣೆಗೆ ಮುಂದಾಗಬೇಕಿದೆ ಎಂದು 84ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ ಹೇಳಿದರು.

        ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ಪೂರ್ವಜರು ಕರ್ನಾಟಕವನ್ನು ಏಕೀಕರಣಗೊಳಿಸಲು ತಮ್ಮ ರಕ್ತ ಹರಿಸಿದ್ದಾರೆ. ಆದರೆ, ಇಂದು ಅಖಂಡ ಕರ್ನಾಟಕವನ್ನು ಇಬ್ಭಾಗ ಮಾಡಲು ಕೆಲ ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕ ಏಕೀಕರಣಗೊಂಡು ಎಪ್ಪತ್ತು ವರ್ಷಗಳೇ ಗತಿಸಿದರು ಒಂದೇ ಆಡಳಿತ ಭಾಷೆಯನ್ನು ಜಾರಿಗೆ ತರಲು ನಾವು ವಿಫಲರಾಗಿದ್ದೇವೆ. ಸಾಲದೆಂಬಂತೆ ಬ್ರಿಟಿಷರು ಬಳುವಳಿಯಾಗಿ ಕೊಟ್ಟ ಇಂಗ್ಲಿಷನ್ನೇ ಈಗಲೂ ತಿದ್ದುತ್ತ ಕೂತಿದ್ದೇವೆ.

          ಕನ್ನಡಿಗರ ಸಾಮೂದಾಯಿಕ ಹರವು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ವಿಶ್ವವ್ಯಾಪಿಯಾಗಿದೆ. ನೃಪತುಂಗನ ಕಾಲದಲ್ಲಿ ಕಾವೇರಿ ಮತ್ತು ಗೋದಾವರಿಗಳ ನಡುನೆಲವೆಂದು ಕವಿರಾಜಮಾರ್ಗದಲ್ಲಿ ಗುರುತಿಸಲಾಗಿತ್ತು. ನಂತರ ಕನ್ನಡ ಪ್ರೇಮಿಗಳು ಕನ್ನಡದ ಕಂಪನ್ನು ಬೇರೆ ರಾಜ್ಯಗಳಲ್ಲಿ ಪಸರಿಸಿದರು. ಕನ್ನಡ ಮೂಲದ ವಚನ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿದ್ದ ಪಾಲ್ಕುರಿಕೆ ಸೋಮನಾಥನೆಂಬ ಕವಿ ತೆಲುಗು ನಾಡಿನಲ್ಲಿ ಹೊಸ ಬಗೆಯ ಕಾವ್ಯ ರಚಿಸಿದ್ದ. ತೆಲುಗಿನ ವೇಮನನೂ ಕೂಡ ಕನ್ನಡದ ಶರಣ ಚಿಂತನೆಯಿಂದ ಪ್ರೇರಿತನಾಗಿದ್ದ ಎಂದ ಕಂಬಾರ ಹೇಳಿದರು.

          ಇಡೀ ಪೂರ್ವೇಷಿಯಾದ ಸಂಸ್ಕೃತಿಯಲ್ಲಿ ಬದಲಾವಣೆಯನ್ನುಂಟು ಮಾಡಿದ ಬೋಧಿಧರ್ಮ ನಮ್ಮ ಕಡಲ ತೀರದ ಹೊನ್ನಾವರದವನೆಂಬ ಐತಿಹ್ಯವಿದೆ. ಕನ್ನಡದ ತವನಿಧಿ ವಚನ ಸಾಹಿತ್ಯ ಇಂಗ್ಲಿಷಗೆ ಅನುವಾದವಾದ ಮೇಲೆ ಇಡೀ ಪ್ರಪಂಚದ ಓದುಗರನ್ನು ಸೆಳೆಯುತ್ತಿದೆ. ಕನ್ನಡದ ಹೆಚ್ಚು ಹೆಚ್ಚು ಕೃತಿಗಳು ಅನುವಾದವಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಸಾರಸ್ವತ ಲೋಕದ ಬಗೆಗಿನ ಗೌರವ ಜಗತ್ತಿನ ಕಣ್ಣಿನಲ್ಲಿ ಇನ್ನೂ ಹೆಚ್ಚುವುದರಲ್ಲಿ ಅನುಮಾನವಿಲ್ಲ ಎಂದು ಹೆಮ್ಮೆಯಿಂದ ನುಡಿದರು.

         ಒಂದು ಮನೆಗೆ ನಾಲ್ಕು ಗೋಡೆಗಳು ಹಾಗೂ ಎರಡು ಬಾಗಿಲುಗಳು ಇರುತ್ತವೆ. ಗೋಡೆಗಳು ನಮ್ಮನ್ನು ಪ್ರಪಂಚದಿಂದ ಬೇರ್ಪಡಿಸಿ ಕಾಪಾಡುತ್ತವೆ. ಬಾಗಿಲುಗಳು ಹೊರಗಿನ ಪ್ರಪಂಚದೊಡನೆ ಸಂಪರ್ಕ ಸಾಧಿಸಲು ಅನುಕೂಲ ಕಲ್ಪಿಸುತ್ತವೆ. ಈಗಿನ ನಮ್ಮ ಮನೆಯ ಗೋಡೆ ಒಡೆದು ಇರುವ ಬಾಗಿಲುಗಳಿಗೆ ಇನ್ನಷ್ಟು ಬಾಗಿಲು ಹಚ್ಚಿ ಬಯಲು ಮಾಡುವುದು ಬೇಡವೆಂದು ಕಂಬಾರ ಪ್ರಾರ್ಥಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here