ಮಳೆಯಿಂದ ಹಾನಿಗೊಳಗಾಗಿರುವ ರೈತರಿಗೆ ಸಮರ್ಪಕ ಪರಿಹಾರಕ್ಕೆ ಒತ್ತಾಯ

ಹೊನ್ನಾಳಿ:

      ಬುಧವಾರ ರಾತ್ರಿಯಿಡೀ, ಗುರುವಾರ ಮಧ್ಯಾಹ್ನ ಒಂದೂವರೆ ಗಂಟೆ ಕಾಲ ಮತ್ತು ರಾತ್ರಿ ನಾಲ್ಕೈದು ತಾಸು ಸುರಿದ ಚಿತ್ತ ಮಳೆಯ ಆರ್ಭಟಕ್ಕೆ ಪಟ್ಟಣಕ್ಕೆ ಸಮೀಪದಲ್ಲಿನ ನೂರಾರು ಹೆಕ್ಟೇರ್‍ಗಳಷ್ಟು ಭತ್ತದ ಗದ್ದೆಗಳು ಜಲಾವೃತವಾಗಿವೆ. ಇಲ್ಲಿನ ಹಿರೇಕಲ್ಮಠದ ಸುತ್ತ-ಮುತ್ತಲಿನ ಪ್ರದೇಶ ಮತ್ತು ಸುಂಕದಕಟ್ಟೆ ಮಾರ್ಗದಲ್ಲಿನ ಭತ್ತದ ಗದ್ದೆಗಳು ಮಳೆಯಿಂದ ಹಾನಿಗೀಡಾಗಿವೆ.

        ಇಲ್ಲಿನ ಟಿ.ಬಿ. ವೃತ್ತದ ಕಡೇಮನೆ ಮಹಾಲಿಂಗಪ್ಪ, ಕಡೇಮನೆ ರಾಮಚಂದ್ರಪ್ಪ, ಕಡೇಮನೆ ಚನ್ನೇಶ್ ಎಂಬುವವರ ಸುಮಾರು ಏಳು ಎಕರೆಗಳಷ್ಟು ಪ್ರದೇಶದಲ್ಲಿನ ಭತ್ತ ಜಲಾವೃತವಾಗಿದ್ದು, ಸಂಪೂರ್ಣ ಬೆಳೆ ಹಾನಿಯ ಭೀತಿ ಎದುರಾಗಿದೆ. ಇದೇ ರೀತಿ, ಇವರ ಜಮೀನುಗಳಲ್ಲಿನ ಅಕ್ಕ-ಪಕ್ಕದ ಗದ್ದೆಗಳಿಗೂ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

         ಈ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ತೆರಳುವ ರಸ್ತೆಯಲ್ಲಿಯೂ ನೀರು ಹರಿಯುತ್ತಿದ್ದು, ಶುಕ್ರವಾರ ಬೆಳಿಗ್ಗೆಯಾದರೂ ನೀರಿನ ಹರಿವು ನಿಂತಿದ್ದಿಲ್ಲ. ಪರಿಣಾಮವಾಗಿ ಈ ಮಾರ್ಗದಲ್ಲಿ ತೆರಳುವವರು ಪ್ರಯಾಸಪಡಬೇಕಾಯಿತು.

       ತಾಲೂಕಿನ ಕೆಲವು ಗ್ರಾಮಗಳಲ್ಲಿನ ಭತ್ತದ ಗದ್ದೆಗಳು ನೀರಿಲ್ಲದೇ ಒಣಗುತ್ತಿದ್ದರೆ, ಈ ಭಾಗದಲ್ಲಿನ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿರುವುದು ಅಚ್ಚರಿಯ ಸಂಗತಿಯಾಗಿದೆ ಎನ್ನುತ್ತಾರೆ ರೈತರು. ಮತ್ತೆ ಕೆಲವೆಡೆ ಮೆಕ್ಕೆಜೋಳದ ಬೆಳೆ ಮಳೆ ಕೊರತೆ ಹಾಗೂ ಕೀಟಗಳ ಬಾಧೆಗೆ ನಲುಗಿ ಹೋಗಿದೆ. ಒಟ್ಟಿನಲ್ಲಿ, ರೈತರು ಅತಿವೃಷ್ಟಿ, ಅನಾವೃಷ್ಟಿ ಎರಡರಿಂದಲೂ ಹಾನಿ ಅನುಭವಿಸುವಂತಾಗಿರುವುದು ದುರ್ದೈವದ ಸಂಗತಿಯಾಗಿದೆ.

       ಹೊನ್ನಾಳಿ ಪಪಂ ಈ ಭಾಗದಲ್ಲಿ ನಿರ್ಲಕ್ಷ್ಯ ವಹಿಸಿದ ಪರಿಣಾಮವಾಗಿ ತ್ಯಾಜ್ಯಯುಕ್ತ ನೀರು ಸಮರ್ಪಕವಾಗಿ ಹರಿದುಹೋಗದೇ ಹೀಗೆ ಹೊಲಗಳಿಗೆ ಮಳೆ ನೀರು ನುಗ್ಗುವ ದುಸ್ಥಿತಿ ಉಂಟಾಗಿದೆ. ಈ ಬಗ್ಗೆ ಪಪಂ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ, ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಅವರಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎನ್ನುತ್ತಾರೆ ಹಾನಿ ಅನುಭವಿಸಿದ ರೈತರು.

       ಕಳೆದ ಸೆಪ್ಟಂಬರ್ ತಿಂಗಳ ಮೂರನೇ ವಾರದಲ್ಲಿ ಉತ್ತರ ಮಳೆ ಸುರಿದಾಗಲೂ ಇದೇ ರೀತಿ ಗದ್ದೆಗಳಿಗೆ ನೀರು ನುಗ್ಗಿತ್ತು. ಪರಿಣಾಮವಾಗಿ ಗದ್ದೆಯಲ್ಲಿನ ಭತ್ತದ ಬೆಳೆ ಕೊಂಚ ಹಾಳಾಗಿತ್ತು. ಗದ್ದೆಯಲ್ಲಿ ವಿಪರೀತ ಕಳೆ ಬೆಳೆದಿತ್ತು. ಆದರೆ, ಇದೀಗ ಮತ್ತೆ ಗದ್ದೆಗಳಿಗೆ ನೀರು ನುಗ್ಗಿರುವ ಕಾರಣ ಭತ್ತದ ಗದ್ದೆಗಳಲ್ಲಿ ಇನ್ನೂ ಚಂಟೆ(ಭತ್ತದ ತೆನೆ) ಒಡೆಯುತ್ತಿಲ್ಲ. ಫಸಲು ಲಭಿಸುವುದೇ ಅನುಮಾನವಾಗಿದೆ ಎಂದು ರೋದಿಸುತ್ತಾರೆ ಈ ಭಾಗದ ರೈತರು.

         ಒತ್ತಾಯ: ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಸಮೀಕ್ಷೆ ನಡೆಸಿ ಮಳೆಯಿಂದ ಹಾನಿಗೊಳಗಾಗಿರುವ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ನೊಂದ ರೈತರು ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap