ರೈತರಿಗೆ ಸ್ಪಂದಿಸದ ಸರ್ಕಾರ: ಬಿಜೆಪಿ

ಬೆಳಗಾವಿ

        ರೈತರಿಗೆ ಸ್ಪಂದಿಸದ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು. ರೈತರ ಸಮಸ್ಯೆಗೆ ಸ್ಪಂದಿಸಿ, ಇಲ್ಲವಾದರೆ ಖುರ್ಚಿಬಿಟ್ಟು ಹೊರಡಿ ಎಂದು ಬಿಜೆಪಿ ಸರ್ಕಾರಕ್ಕೆ ನೇರ ಸವಾಲೆಸೆದಿದೆ.

        ಚಳಿಗಾಲದ ಅಧಿವೇಶನದ ಮೊದಲ ದಿನವೇ ಸುವರ್ಣ ಸೌಧದ ಸನಿಹದಲ್ಲಿ ದೊಡ್ಡ ಸಮಾವೇಶ ನಡೆಸಿದ ಬಿಜೆಪಿ, ಸರ್ಕಾರಕ್ಕೆ ಗಡಸು ದನಿಯಲ್ಲಿ ಎಚ್ಚರಿಕೆ ನೀಡಿತು.

       ರೈತರ ಸಾಲಮನ್ನಾ ಅನುಷ್ಠಾನ ತಡವಾಗುತ್ತಿರುವ ಹಾಗೂ ಕಬ್ಬು ಬೆಳೆಗಾರ ಸಮಸ್ಯೆಗೆ ಪರಿಹಾರಕೊಡದೇ ಇರುವ ಕಾರಣಕ್ಕೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲು ಕಮಲ ನಾಯಕರು ಇದೇ ವೇದಿಕೆಯಲ್ಲಿ ಸಂಕಲ್ಪ ಮಾಡಿದರು.

        ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಈ ಸರ್ಕಾರ ಬದುಕಿದಂತೆ ಕಾಣಿಸುತ್ತಿಲ್ಲ. ಕುಂಭಕರ್ಣ ನಿದ್ರೆಯಲ್ಲಿರುವವರನ್ನು ಬಡಿದೆಬ್ಬಿಸಲು ಇಲ್ಲಿಂದಲೇ ಹೋರಾಟ ಆರಂಭಿಸಲಾಗುತ್ತದೆ ಎಂದರು.

        ಸರ್ಕಾರ ರಚನೆಯಾಗಿ ಆರು ತಿಂಗಳಾದರೂ ರೈತರ ಜ್ವಲಂತ ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನಿಸಿಲ್ಲ. ರೈತರ ಸಾಲಮನ್ನಾ ಮಾಡದೇ ಕುಂಟು ನೆಪ ಹೇಳಿ ಚೆಲ್ಲಾಟವಾಡುತ್ತಿದೆ, ನೂರು ತಾಲೂಕಲ್ಲಿ ಬರ ಇದ್ದು ಸ್ಪಂದನೆ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ರಾಜ್ಯದ ಮುಖ್ಯಮಂತ್ರಿ ಜನ ಹಿತ ಮರೆತು ತುಘಲಕ್ ದರ್ಬಾರ್ ನಡೆಸಿದ್ದಾರೆ. ಆರು ತಿಂಗಳಿಂದ ರೈತರ ಸಾಲ ಮನ್ನಾ ಎಂದು ಅಭಿವೃದ್ಧಿ ಕಡೆಗಣಿಸಿದ್ದಾರೆ. ಇನ್ನೊಂದೆಡೆ ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ. ನೆಪ ಮಾತ್ರಕ್ಕೆ ರೈತರ ಸಾಲಮನ್ನ ಮಾಡಿ ದೊಡ್ಡ ಸಾಧನೆ ಪ್ರಯತ್ನ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

       ಮುಖ್ಯಮಂತ್ರಿಯವರು ಮಾತೆತ್ತಿದರೆ ಉತ್ತರ ಕರ್ನಾಟಕದ ಜನ ಓಟು ಕೊಟ್ಟಿಲ್ಲ ಅಂತಾರೆ, ಕಬ್ಬು ಹೋರಾಟಗಾರ್ತಿಗೆ ಎಲ್ಲಿ ಮಲಗಿದ್ದೆ ಎಂದು ಪ್ರಶ್ನಿಸುತ್ತಾರೆ, ಸ್ವಾತಂತ್ರ್ಯ ಇತಿಹಾಸದಲ್ಲಿ ಇಷ್ಟು ಹಗುರ ಸಿಎಂ ಕಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

        ಮಾಧ್ಯಮ, ಪ್ರತಿಪಕ್ಷ ಜೀತದಂತೆ ನಡೆದುಕೊಳ್ಳಬೇಕೆಂದು ಸಿಎಂ ಭಾವಿಸಿದಂತಿದೆ ಎಂದ ಅವರು ಸರ್ಕಾರಕ್ಕೆ ಆರು ತಿಂಗಳು ಸಮಯ ಕೊಟ್ಟಿದ್ದೆವು. ಅನೇಕಬಾರಿ ಚರ್ಚೆ ಮಾಡಿದರೂ ಪರಿಹಾರ ಸಿಗಲ್ಲ, ಇದೀಗ ಹೋರಾಟ ಆರಂಭವಾಗಿದೆ. ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡುತ್ತೇವೆ ಎಂದರು.

         ರಾಜ್ಯದಲ್ಲಿ ಬರ ಆವರಿಸಿದೆ. ಸರ್ಕಾರ ಬದುಕಿದೆಯೇ? ಮಂತ್ರಿ ಇದ್ದಾನೆಯೇ? ಒಬ್ಬ ಸಚಿವನಾದರೂ ಸ್ಪಂದಿಸಿದ್ದಾನಾ, ಗೋವುಗಳಿಗೆ ಮೇವು ಅನುಕೂಲ ಮಾಡಲಾಗಿದೆಯೇ ಎಂದು ಪ್ರಶ್ನಿಸಿದ ಬಿಎಸ್ ವೈ, ಸರ್ಕಾರ ರೈತರ ಜೀವನದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಟೀಕಿಸಿದರು. ಬೆಳಗಾವಿ ಅಧಿವೇಶನ ಆರಂಭವಾಗುತ್ತಿದ್ದಂತೆ 15-16 ಟೆಂಟಲ್ಲಿ ರೈತರು ಪ್ರತಿ ಭಟಿಸುತ್ತಿದ್ದಾರೆ ಎಂದರೆ ರಾಜ್ಯದ ರೈತ ಸಮೂಹಕ್ಕೆ ವಿಶ್ವಾಸ ಇಲ್ಲ ಎಂಬುದು ಗೊತ್ತಾಗುತ್ತಿದೆ.

        ಈ ಸಂದರ್ಭದಲ್ಲಿ ಪ್ರತಿಪಕ್ಷದಲ್ಲಿ ನಾವು 104 ಶಾಸಕರಿದ್ದೇವೆ, ಈ ಸರ್ಕಾರವನ್ನು ಒಂಟಿ ಕಾಲಲ್ಲಿ ನಿಲ್ಲಿಸಿ, ರೈತರ ಸಮಸ್ಯೆಗೆ ಸ್ಪಂದಿಸುವಂತೆ ಮಾಡುತ್ತೇವೆ ಎಂದು ಭರವಸೆ ನೀಡುತ್ತೇನೆಂದರು.

        ವಿವುಧ ಬೆಳೆಗಳಿಗೆ ಮೋದ ಸರಗಕಾರಿ ಬೆಂಬಲ ಬೆಲೆ ಘೋಷಿಸಿದರೆ ರೈತರಿಂದ ಖರೀದಿಸಲು ಸರ್ಕಾರ ಸಿದ್ಧವಿಲ್ಲ. ನಾವು ಪ್ರಶ್ನೆ ಮಾಡಿದರೆ ಸಿಎಂ ಸೊಕ್ಕಿನ ಉತ್ತರ ನೀಡುತ್ತಾರೆ. ನಾವು ಅವರಿಗೆ ಸರಿಯಾದ ಪ್ರತ್ಯುತ್ತರ ನೀಡುತ್ತೇವೆ ಎಂದು ಹೇಳಿದರು.

ಜೆಡಿಎಸ್ ಮನೆಗೆ:

        ಈ ಯಡಿಯೂರಪ್ಪಗೆ ವಯಸ್ಸಾಗಿದೆ ಎಂದು ಕೆಲವರು ಹೇಳಿದ್ದಾರೆ, ನಮ್ಮ ಕೈಕಾಲು ಇನ್ನೂ ಗಟ್ಟಿಯಾಗಿದೆ. ನಾನು ಇನ್ನು ಹದಿನೈದು ವರ್ಷ ರಾಜಕಾರಣದಲ್ಲಿ ಇರುತ್ತೇನೆ ಎಂದು ಯಡಿಯೂರಪ್ಪ ನಸುನಕ್ಕರು.

        ಚುನಾವಣೆಯಲ್ಲಿ 37 ಸ್ಥಾನ ಗೆದ್ದು, ಇಲ್ಲ ಸಲ್ಲದ ಭರವಸೆ ಕೊಟ್ಟು, ಜನರಿಗೆ ದ್ರೋಹ ಮಾಡಿರುವ ಸರ್ಕಾರ ಇದು ಎಂದು ಟೀಕಿಸಿದ ಅವರು ಜೆಡಿಎಸ್ ಮನೆಗೆ ಕಳಿಸಬೇಕಿದೆ ಎಂದು ಗುಡುಗಿದರು.

ಸಿಎಂಗೆ ಪ್ರಶ್ನೆ:

          ಅಧಿಕಾರಕ್ಕೇರಿ ಆರು ತಿಂಗಳಾಯಿತು, ಇಷ್ಟು ದಿನಗಳಲ್ಲಿ ಎಷ್ಟು ಜಿಲ್ಲೆಗೆ ಹೋಗಿಬಂದಿದ್ದೀರಿ? ಹುಬ್ಬಳ್ಳಿಯಲ್ಲಿ ಮಬೆಮಾಡಿ ಎಷ್ಟು ದಿನ ವಾಸವಾಗಿದ್ದಿರಿ? ಗ್ರಾಮ ವಾಸ್ತವ್ಯ ಎಷ್ಟು ಮಾಡಿದಿರಿ? ಎಂದು ಸಿಎಂ ಉತ್ತರಿಸಲಿ ಎಂದ ಅವರು, ಕೇವಲ ಭರವಸೆ ನೀಡಿ ಜನರಿಗೆ ದ್ರೋಹ ಮಾಡಿದ್ದೀರಿ ಎಂದು ಏರಿದ ದನಿಯಲ್ಲಿ ಆರೋಪಗಳ ಮಳೆಗರೆದರು.

        ಈಗ ನಾನು ಭವಿಷ್ಯ ಹೇಳುತ್ತಿಲ್ಲ, ಈ ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಕಾಂಗ್ರೆಸ್ ನವರಂತೂ ತಬ್ಬಲಿಗಳಾಗಿದ್ದಾರೆ. ಈ ಅನುಭವ ಅವರಿಗೆ ಆಗಿದೆ. ಕಾಂಗ್ರೆಸ್ ನಿಂದಲೇ ಸರ್ಕಾರ ಬೀಳುತ್ತದೆ ಎಂದರು.

          ಗಂಗಾ ಕಲ್ಯಾಣ ಯೋಜನೆಯಲ್ಲಿ ಒಂದೇ ಒಂದು ಬೋರ್ ವೆಲ್ ತೋಡಿಸಿಲ್ಲ,, ಹಾಲು  ಧನ ನೀಡುತ್ತಿಲ್ಲ, ಅತಿಥಿ ಉಪನ್ಯಾಸಕರಿಗೆ ವೇತನ ನೀಡುತ್ತಿಲ್ಲ, ಅಂಗನವಾಡಿ ಸಿಬ್ಬಂದಿಗೆ ವೇತನಕೊಟ್ಟಿಲ್ಲ. ಹಾಗಿದ್ದರೆ ಈ ಸರ್ಕಾರ ಏನು ಮಾಡುತ್ತಿದೆ? ಜನ ತೆರಿಗೆ ಕೊಟ್ಟರೂ ಜನಹಿತ ಮರೆತಿರುವ ಸರ್ಕಾರ ಇದು ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap