ಟಿಪ್ಪು ಜಯಂತಿಯನ್ನು ಸರ್ಕಾರ ಕೂಡಲೇ ಕೈ ಬಿಡಬೇಕು: ಬಿ ಎಸ್ ವೈ

ಬೆಂಗಳೂರು

       ರಾಜ್ಯದ ಜನರ ಭಾವನೆಗಳಿಗೆ ಗೌರವ ನೀಡಿ ವಿವಾದಾತ್ಮಕ ವ್ಯಕ್ತಿತ್ವದ ಟಿಪ್ಪುವಿನ ಜಯಂತಿ ಆಚರಣೆಯನ್ನು ವಿವಾದ ಮಾಡದೇ ರಾಜ್ಯ ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಆಗ್ರಹಿಸಿದ್ದಾರೆ.

        ಜನ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕೆಂಬ ಇಚ್ಛೆ ಸರಕಾರಕ್ಕೆ ಇದ್ದರೆ ಇಂತಹ ಟಿಪ್ಪು ಆಚರಣೆಯನ್ನು ಕೂಡಲೇ ಕೈ ಬಿಡಬೇಕು. ಈ ವಿಚಾರವನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಬಾರದು ಎಂದು ಹೇಳಿದ್ದಾರೆ.

        ಈ ಸಂದರ್ಭದಲ್ಲಿ ವ್ಯಕ್ತಿತ್ವದ ಬಗ್ಗೆ ಚರ್ಚೆ ಅನಗತ್ಯ ಎಂದು ನಾನು ಭಾವಿಸುತ್ತೇನೆ. ಆದರೂ ಟಿಪ್ಪು ವ್ಯಕ್ತಿತ್ವ ವಿವಾದದಿಂದ ಕೂಡಿದ್ದು, ಇದು ಜನರ ಮನಸ್ಸಿಗೆ ನೋವು ಉಂಟುಮಾಡುವ ಸಂಗತಿಯಾಗಿದೆ. ಹೋದವಾರ ಕೊಡವರು ದೆಹಲಿಯ ಫ್ರೆಂಚ್ ಎಂಬೆಸ್ಸಿ ಮುಂದೆ ಆಗಿನ ಫ್ರೆಂಚ್ ಸರ್ಕಾರವು ಟಿಪ್ಪುವಿನ ಜೊತೆ ಸೇರಿ ಕೂಡಿಕೊಂಡು ಸ್ಥಾನೀಯ ಜನರ ಮೇಲೆ ಸಾರಿದ ಯುದ್ದವನ್ನು ಪ್ರತಿಭಟಿಸಿದ್ದಾರೆ. ಮತ್ತು ಪ್ರಾನ್ಸ್ ಸರ್ಕಾರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಇದು ಟಿಪ್ಪುವಿನ ಬಗ್ಗೆ ಇದ್ದ ಜನರ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

        ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆಮಾಡಿರುವ ಅವರು, ಇತಿಹಾಸಕಾರರಿಗೆ ಅದರಲ್ಲೂ ಕೊಡವರಿಗೆ ಟಿಪ್ಪು ಹೇಗೆ ಕೊಡವರ ನರಮೇಧ ಮಾಡಿದ ಎಂಬುದು ಗೊತ್ತಿರುವ ವಿಷಯ, ಇತಿಹಾಸಕಾರರೇ ತಮ್ಮ ಪುಸ್ತಕಗಳಲ್ಲಿ ಟಿಪ್ಪು ಮಾಡಿದ ಕೊಡವರ ನರಮೇಧದ ಬಗ್ಗೆ ಉಲ್ಲೇಖಿಸಿದ್ದಾರೆ. ಮಂಡ್ಯಂ ಐಯ್ಯಂಗಾರ್ ಅವರುಗಳು ಮೈಸೂರಿನ ಮಹಾರಾಣಿಗೆ ಬೆಂಬಲಿಸಿದರು ಎಂಬ ಒಂದೇ ಕಾರಣಕ್ಕೆ 800 ಜನ ಮಂಡ್ಯಂ ಐಯ್ಯಂಗಾರ್‍ನ್ನು ದೀಪಾವಳಿಯಂದು ಕೊಲೆ ಮಾಡಿದ್ದು, ಮತ್ತು ಇಂದಿಗೂ ಕೂಡ ಮಂಡ್ಯಂ ಐಯ್ಯಂಗಾರ್‍ರವರು ದೀಪಾವಳಿಯನ್ನು ಆಚರಿಸದೇ ಪ್ರತಿಭಟಿಸುತ್ತಾರೆ ಎಂದು ಹೇಳಿದ್ದಾರೆ.

       ಇಂತೆಲ್ಲಾ ವಿವಾದಗಳ ಸುಳಿಯಲ್ಲಿ ಸಿಲುಕಿದ ಒಬ್ಬ ವ್ಯಕ್ತಿಯ ಹುಟ್ಟಹಬ್ಬವನ್ನು ಆಚರಿಸುವುದು ಒಂದು ಪ್ರಜಾಪ್ರಭುತ್ವದ ಸರ್ಕಾರಕ್ಕೆ ಎಷ್ಟು ಸಮಂಜಸ ಎಂದು ಪ್ರಶ್ನಿಸಿರುವ ಯಡಿಯೂರಪ್ಪ, ಪ್ರಜಾಪ್ರಭುತ್ವದಲ್ಲಿ ಎಂದಿಗೂ ಬಹುಸಂಖ್ಯಾತರ ಭಾವನೆಗಳಿಗೆ ಮತ್ತು ಮಾತಿಗೆ ಬೆಲೆ ಕೊಡಬೇಕು. ಇದನ್ನು ಬಿಟ್ಟು ಸರಕಾರ ಜನರಿಗೆ ಎದುರಿಸುವುದಾಗಲೀ ಅಥವಾ ಒತ್ತಡ ಹೇರಿ ಟಿಪ್ಪು ಜಯಂತಿ ಆಚರಿಸುವುದು ತರವಲ್ಲ ಎಂದಿದ್ದಾರೆ.

       ದೇಶಪ್ರೇಮ ಮತ್ತು ದೇಶದ ಮಹಾನುಭಾವರ ಬಗ್ಗೆ ಅಭಿಮಾನವಿದ್ದರೆ ಅಬ್ದುಲ್ ಕಲಾಂ ಅಥವಾ ಅಬ್ದುಲ್ ಹಮೀದ್ ಅವರ ಜಯಂತಿಯನ್ನು ಸರ್ಕಾರ ಆಚರಿಸಲಿ. ಪ್ರಧಾನಿ ನರೇಂದ್ರ ಮೋದಿ ಅವರು ಅಬ್ದುಲ್ ಹಮೀದ್ ಕುಟುಂಬದವರಿಗೆ ಭೇಟಿಯಾಗಿ ಅವರ ಜೊತೆ ಕಾಲಕಳೆದದ್ದು ನೆನಪಿಸಿಕೊಂಡು ರಾಜ್ಯ ಸರ್ಕಾರ ಟಿಪ್ಪುಜಯಂತಿ ಆಚರಿಸುವುದನ್ನು ತತ್‍ಕ್ಷಣದಿಂದ ಕೈ ಬಿಡಬೇಕು. ಮತ್ತು ರಾಜ್ಯದ ಜನರಿಗೆ ನೆಮ್ಮದಿಯಿಂದ ದೀಪಾವಳಿ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap