ಪಾವಗಡ: ಮಳೆಯಿಲ್ಲದೆ ಕಮರಿಹೋದ ಶೇಂಗಾ ಬೆಳೆ

0
32

ಪಾವಗಡ:

      ರಾಜ್ಯ ಹಾಗೂ ಜಿಲ್ಲೆಯ ಕೆಲವು ಭಾಗಗಳಲ್ಲಿ ಆಗಾಗ್ಗೆ ಕೆಲವೊಮ್ಮೆ ಮಳೆರಾಯ ಕೃಪೆ ತೋರಿದರೂ ಪಾವಗಡ ತಾಲ್ಲೂಕಿಗೆ ಮಾತ್ರ ವಕ್ರದೃಷ್ಟಿ ಬೀರಿದಂತೆ ಕಾಣುತ್ತಿದೆ. ಈ ಬಾರಿಯೂ ಮಳೆಯಿಲ್ಲದೆ ಮುಂದಿನ ದಿನಗಳು ತೀವ್ರ ಬರಗಾಲಕ್ಕೆ ಸಿಲುಕುವ ಎಲ್ಲಾ ಸನ್ನಿವೇಶಗಳು ನಿರ್ಮಾಣಗೊಂಡಿವೆ.

       ತಾಲ್ಲೂಕಿನ ಅತಿ ಹೆಚ್ಚು ರೈತರು ಖುಷ್ಕಿ ಜಮೀನನ್ನು ನಂಬಿದ್ದಾರೆ. ಶೇಂಗಾ ಬೆಳೆ ಬೆಳೆಯುತ್ತಾ ಬಂದಿದ್ದಾರೆ. ಸುಮಾರು 10 ವರ್ಷಗಳಿಂದ ಮಳೆ ಬೆಳೆಯಾಗದೇ ರೈತರು ನಷ್ಟ ಅನುಭವಿಸುತ್ತಲೇ ಇದ್ದಾರೆ. ರೈತ ಹೊಲದಲ್ಲಿ ಹುತ್ತಿದ ಬೆಳೆ ಬಾರದೆ ಇದಕ್ಕೆ ಸಂಬಂಧಿಸಿದ ವಿಮೆ ಸಹ ಬರದೇ ಸಾಲಗಾರರಾಗುತ್ತಲೇ ಇದ್ದಾರೆ. ಈ ಹಿಂದೆ ಮಾಡಿರುವ ಸಾಲ ಒಂದು ಕಡೆಯಾದರೆ ಈಗ ಮತ್ತೆ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶಗಳು ಎದುರಾಗುತ್ತಲೇ ಇವೆ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ಶೇಂಗಾ ಬಿತ್ತನೆ ಮಾಡಿದ್ದು, ಮಳೆ ಕೈಕೊಟ್ಟ ಕಾರಣ ನಷ್ಟ ಅನುಭವಿಸಿದ್ದಾರೆ.

         ವರ್ಷದ ಆರಂಭದಲ್ಲಿ ರೈತಾಪಿ ವರ್ಗಕ್ಕೆ ಒಂದಿಷ್ಟು ಸಂತಸದ ಸನ್ನಿವೇಶ ಉಂಟಾಗಿತ್ತು. ಈ ವರ್ಷ ಮಳೆ ಬರಬಹುದು ಎಂಬ ನಂಬಿಕೆಯಿಂದಲೇ ರೈತರು ಎದುರು ನೋಡುತ್ತಿದ್ದರು. ಅದಕ್ಕೆ ತಕ್ಕಂತೆ ಶೇಂಗಾ ಬಿತ್ತನೆ ಬೀಜ ಸಿದ್ಧ ಮಾಡಿಕೊಂಡಿದ್ದರು. ಆದರೆ ಬಿತ್ತನೆ ಬೀಜವನ್ನು ನೆಲಕ್ಕೆ ಬಿತ್ತುವ ಸಮಯಕ್ಕೆ ಮಳೆರಾಯ ಕೈಕೊಟ್ಟ. ಈಗ ಬರುವುದು, ಆಗ ಬರುವುದು ಎಂದು ಕಾಯುತ್ತಾ ಕುಳಿತ ರೈತನಿಗೆ ವರುಣನ ಕೃಪೆ ಆಗಲೇ ಇಲ್ಲ.

         ಆಗಸದತ್ತ ಮುಖ ಮಾಡಿಕೊಂಡು ಸೊರಗಿ ಹೋಗುವಂತಾಯಿತು. ಬಿತ್ತನೆ ಬೀಜಕ್ಕಾಗಿ ಸಿದ್ಧಪಡಿಸಿಕೊಂಡಿದ್ದ ಶೇಂಗಾ ಬೀಜವನ್ನು ಅನಿವಾರ್ಯವಾಗಿ ಮಾರಾಟ ಮಾಡುವುದು ಇಲ್ಲವೆ ಆತನೇ ಉಪಯೋಗಿಸಲು ಮುಂದಾದ ಸ್ಥಿತಿ ಈ ವರ್ಷ ಎದುರಾಯಿತು. ಆದರೂ ಆಗೊಮ್ಮೆ ಈಗೊಮ್ಮೆ ಎದುರಾದ ಮಳೆಯನ್ನೇ ನಂಬಿಕೊಂಡು ಕೆಲವು ರೈತರು ತಮ್ಮ ಜಮೀನುಗಳಲ್ಲಿ ಶೇಂಗಾ ಬೀಜ ಬಿತ್ತನೆ ಮಾಡಿಯೇ ಬಿಟ್ಟರು. ಬೀಜ ಮೊಳಕೆಯೊಡೆದು ಗಿಡಗಳು ಬೆಳೆಯತೊಡಗಿದವು. ಇನ್ನೇನು ಕಾಯಾಗುವ ಹಂತ ತಲುಪಿದಾಗ ಮತ್ತೆ ಮಳೆ ಕೈಕೊಟ್ಟ ಪರಿಣಾಮ ಶೇಂಗಾ ಗಿಡ ಬೆಳೆಯಲೇ ಇಲ್ಲ.

          ತಾಲ್ಲೂಕಿನ ಕೆಲವು ಪ್ರದೇಶಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಹೊಲಗಳಲ್ಲಿ ಶೇಂಗಾ ಒಣಗಿರುವ ದೃಶ್ಯ ಕಂಡುಬರುತ್ತದೆ. ನೀರಾವರಿ ಇರುವ ಪ್ರದೇಶಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ರೈತರಿಗೆ ಈ ಬಾರಿಯೂ ಶೇಂಗಾದಲ್ಲಿ ಇಳುವರಿ ಸಾಧ್ಯವಾಗುತ್ತಿಲ್ಲ. ಇದು ರೈತರಿಗೆ ಆತಂಕವನ್ನುಂಟು ಮಾಡಿದೆ.

         ರಾಜ್ಯ ಸರ್ಕಾರ 5-6 ವರ್ಷಗಳಿಂದ ಪಾವಗಡ ತಾಲ್ಲೂಕುನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದರು.. ಬರ ಪೀಡಿತ ಪ್ರದೇಶಕ್ಕೆ ಬಿಡುಗಡೆಯಾದ ಯೋಜನೆಯ ಸೌಲಭ್ಯ ಬಡವರಿಗೆ ಸಿಗುತ್ತಿಲ್ಲ. ಸರ್ಕಾರ ಬರಪೀಡಿತ ಪ್ರದೇಶವೆಂದು ಏಕೆ ಘೋಷಣೆ ಮಾಡುತ್ತಾರೋ ಗೊತ್ತಿಲ್ಲ. ಬರಪೀಡಿತ ಪ್ರದೇಶವೆಂದರೆ ಅತಿವೃಷ್ಠಿಯಿಂದಲೋ, ಅನಾವೃಷ್ಠಿಯಿಂದಲೋ ಆ ಪ್ರದೇಶದಲ್ಲಿ ಜನರ ಕಷ್ಟದಲ್ಲಿದ್ದಾಗ ಅಲ್ಲಿನ ಜನರ ಕಷ್ಟಗಳಿಗೆ ಸರ್ಕಾರಗಳು ಸಹಾಯ ಹಸ್ತ ನೀಡುವುದೇ ಇದರ ಉದ್ದೇಶವಾಗಿರುತ್ತದೆ.

         ಅದರೆ ಸರ್ಕಾರಗಳು ಇವು ಯಾವುದನ್ನೂ ಮಾಡದೇ ನಾಮಕಾವ್ಯಸ್ಥೆಗೆ ಘೋಷಣೆ ಮಾಡಿರಬಹುದು. ಬರಪೀಡಿತ ಪ್ರದೇಶದಲ್ಲಿ ಇರುವ ರೈತರಿಗೆ ಬೇಕಾಗಿರುವುದು ಪರಿಹಾರ. ಕೂಲಿ ಕಾರ್ಮಿಕರಿಗೆ ಉದ್ಯೋಗ ಕೊಡಾ ಬೇಕಾಗಿದ್ದು, ಇವೆಲ್ಲವನ್ನು ಗಾಳಿಗೆ ತೂರಿ ಮನಬಂದಂತೆ ಯೋಜನೆಗಳನ್ನು ರೂಪಿಸುತ್ತಿವೆ. ಬೇರೆ ಯೋಜನೆಗಳು ಬಿಡುಗಡೆ ಮಾಡಿದರೆ ಪ್ರತಿಫಲ ಏನು? ಎಂದು ಪ್ರಜ್ಞಾನವಂತರ ಮಾತಾಗಿದೆ.

         ಪಾವಗಡ ತಾಲ್ಲೂಕಿನ ರೈತರು ಶೇಂಗಾ ಬೆಳೆಯನ್ನು ನಂಬಿ ಜೀವನ ನಡೆಸುತ್ತಿದ್ದರು. ಸುಮಾರು 10 ವರ್ಷದಿಂದ ಮಳೆಯಾಗದೇ ಸಾಲಕ್ಕೆ ಸಿಲುಕಿ ಕಂಗಾಲಾಗಿದ್ದಾನೆ. ಈಗ ಬ್ಯಾಂಕ್‍ಗಳಲ್ಲೂ ಸಹ ಇವರಿಗೆ ಸಾಲ ನೀಡುತ್ತಿಲ್ಲ. ಇಷ್ಟಾದರೂ ಸರ್ಕಾರ ತಾಲ್ಲೂಕಿಗೆ ಯಾವುದೇ ಶಾಶ್ವತ ಪರಿಹಾರ ನೀಡಿಲ್ಲ. ಆಯ್ಕೆಯಾದ ಜನಪ್ರತಿನಿಧಿಗಳು ತಾಲ್ಲೂಕಿಗೆ ಮಾಡಿದ್ದಾದರೂ ಎಂದು ಈ ಭಾಗದ ರೈತರು ಜನಪ್ರತಿನಿಧಿಗಳನ್ನು ಜರಿಯುತ್ತಿದ್ದಾರೆ.

          ಪಾವಗಡ ತಾಲ್ಲೂಕಿಗೆ ಯಾವುದೇ ಮೂಲದಿಂದ ನೀರಾವರಿ ಯೋಜನೆ ಅನುಷ್ಠಾನವಾಗಿಲ್ಲ. ಬರದ ಹಿನ್ನೆಲೆಯಲ್ಲಿ ಜನತೆ ಬಡತನಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಇಂತಹ ಮಳೆಗಾಲದಲ್ಲಿಯೇ ಕುಡಿಯುವ ನೀರಿಗಾಗಿ ಜನರು ಪರಿತಪಿಸುತ್ತಿದ್ದು, ಮುಂದೇನು ಎಂಬ ಆತಂಕ ಇವರನ್ನು ಕಾಡತೊಡಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here