ಕೇಂದ್ರದ ವಿರುದ್ಧ ಜೆಸಿಟಿಯು ಹರತಾಳ

0
11

ದಾವಣಗೆರೆ

         ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಕೇಂದ್ರ ಕಾರ್ಮಿಕ ಜಂಟಿ ಸಂಘಟನೆ (ಜೆಸಿಟಿಯು) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದ ಎರಡನೇ ದಿನವಾದ ಬುಧವಾರದಂದು ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಬಹಿರಂಗ ಸಭೆ, ಹರತಾಳ ನಡೆಸಿದ್ದಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

        ಮುಷ್ಕರದ ಹಿನ್ನೆಲೆಯಲ್ಲಿ ಎರಡನೇ ದಿನದಂದು ನಗರದ ಗಡಿಯಾರ ಕಂಬದ ಬಳಿಯಲ್ಲಿ ಮೊದಲು ಹರತಾಳ ನಡೆಸಿ, ಬಹಿರಂಗ ಸಭೆ ನಡೆಸಿದ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಹಾಗೂ ಐಎನ್‍ಟಿಯುಸಿ ಕಾರ್ಯಕರ್ತರು ನಂತರ ಜಯದೇವ ವೃತ್ತಕ್ಕೆ ತೆರಳಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು.

ಎಂದಿನಂತೆ ಜನ-ಜೀವನ:

      ಎರಡನೇ ದಿನದ ಮುಷ್ಕರದಂದು ಕೆಲ ಸೇವೆ ವ್ಯತ್ಯಯ ಆಗಬಹುದೆಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿತ್ತು. ಆದರೆ, ಜನ ಜೀವನ ಎಂದಿನಂತೆ ಸಾಗಿದರೆ, ಶಾಲಾ-ಕಾಲೇಜುಗಳು, ಸರ್ಕಾರಿ, ಖಾಸಗಿ ಕಚೇರಿಗಳೂ ತಮ್ಮ ದೈನಂದಿನ ಕಾರ್ಯಗಳನ್ನು ನಿರ್ವಹಿಸಿದವು.

     ನಗರ ಸಾರಿಗೆ, ಸರ್ಕಾರಿ, ಖಾಸಗಿ ಬಸ್ಸುಗಳ ಸೇವೆ ಎಂದಿನಂತೆ ಲಭ್ಯವಿತ್ತು. ಅಲ್ಲದೆ, ಹೂವಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಸೇರಿದಂತೆ ವ್ಯಾಪಾರ ವಹಿವಾಟು ಸಹಜವಾಗಿಯೇ ಸಾಗಿತ್ತು. ಹೀಗಾಗಿ ನಿನ್ನೆ ಕೆಲ ಸೇವೆಗಳ ವ್ಯತ್ಯದಿಂದ ಕಂಗೆಟ್ಟಿದ್ದ ಜನತೆ ಇಂದು ನಿಟ್ಟುಸಿರು ಬಿಟ್ಟು, ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದರು.

       ಮುಷ್ಕರದ ಹಿನ್ನೆಲೆಯಲ್ಲಿ ನಗರದ ಗಡಿಯಾರ ಕಂಬದ ಬಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಎಐಯುಟಿಯುಸಿ ಮುಖಂಡ ಮಂಜುನಾಥ ಕುಕ್ಕುವಾಡ ಮಾತನಾಡಿ, ಲೋಕಸಭಾ ಚುನಾವಣೆಯ ಪೂರ್ವದಲ್ಲಿ ನೀಡಿದ ಯಾವ ಭರವಸೆಗಳನ್ನು ಸಹ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿದರು.

     ನಾಟಕೀಯ ಹೋರಾಟ ಮಾಡಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯು ಚುನಾವಣಾ ಪೂರ್ವ ನೀಡಿದ್ದ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ, ಎಫ್‍ಡಿಎ ರದ್ದು, ಲೋಕಾಪಾಲ್ ಮಸೂದೆ ಜಾರಿ, ಸ್ವಾಮಿನಾಥನ್ ವರದಿಯ ಶಿಫಾರಸು ಅನುಷ್ಠಾನ, ವಿದೇಶಿ ಕಪ್ಪು ಹಣ ತರುವುದು ಸೇರಿದಂತೆ ಇತರೆ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

      ಪ್ರಧಾನಿ ಮೋದಿ ಅವರ ನಾಲ್ಕೂವರೆ ವರ್ಷದ ಆಡಳಿತದಲ್ಲಿ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ದಿನೇ, ದಿನೇ ಗಗನಕ್ಕೇರುತ್ತಿದೆ. ಕಾರ್ಮಿಕರು, ಜನಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ. ಕಾರ್ಮಿಕರ ಹಕ್ಕುಗಳನ್ನು ಮೊಟಕು ಗೊಳಿಸುತ್ತಿದೆ. ಸುಗ್ರಿವಾಜ್ಞೆ ಜಾರಿಗೆ ತರುವ ಮೂಲಕ ರೈತರ ಭೂಮಿ ಕಿತ್ತುಕೊಂಡು ಉದ್ಯಮಿಗಳಿಗೆ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ಭ್ರಷ್ಟಚಾರ ನಿರ್ಮೂಲನೆ ಮಾಡುವುದಾಗಿ ಹೇಳಿ, ನೋಟು ಬ್ಯಾನ್ ಮಾಡಿದ ಕೇಂದ್ರ ಸರ್ಕಾರವು ಉದ್ಯಮಿಗಳ ಕಪ್ಪು ಹಣವನ್ನು ಬಿಳಿಯನ್ನಾಗಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ. ಈ ವರೆಗೂ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಯಾವುದೇ ಸರಕಾರಗಳು ಕಾರ್ಮಿಕರ ಹಿತಕಾಯುವ ಕೆಲಸ ಮಾಡಿಲ್ಲ. ಹೀಗಾಗಿ ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರೀಕರಣಗೊಂಡು, ಬಡವರು ಕಂಗಾಲಾಗಿದ್ದಾರೆಂದು ಆರೋಪಿಸಿದರು.

       ಎಐಟಿಯುಸಿ ಮುಖಂಡರಾದ ಎಂ.ಬಿ.ಶಾರದಮ್ಮ ಮಾತನಾಡಿ, ಆಹಾರ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಇದರಿಂದ ಕಾರ್ಮಿಕರು ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರಿಗೆ ಕೇಂದ್ರ ಸರಕಾರ ಕನಿಷ್ಠ ಕೂಲಿ ನೀಡಬೇಕು ಎಂದು ಆಗ್ರಹಿಸಿದರು.

          ಸಿಐಟಿಯು ಮುಖಂಡರಾದ ಕೆ.ಎಚ್. ಅನಂದರಾಜ್ ಮಾತನಾಡಿ, ಪ್ರತಿಯೊಂದು ಸರಕಾರಿ ಉದ್ಯಮಗಳನ್ನು ಖಾಸಗಿ ವಲಯಕ್ಕೆ ವಹಿಸುವ ಮೂಲಕ ಮೋದಿ ಅವರು ಕಾರ್ಮಿಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಹಣ ನೀಡದ ಬಂಡವಾಳ ಶಾಹಿಗಳ ಋಣ ತೀರಿಸಲು ಮೋದಿ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.

        ಹರತಾಳದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಕೆ.ಎಲ್.ಭಟ್, ಆವರಗೆರೆ ಚಂದ್ರು, ವಾಸು ಆವರಗೆರೆ, ಐರಣಿ ಚಂದ್ರು, ಆನಂದರಾಜು, ಮಂಜುನಾಥ ಕೈದಾಳೆ, ಬಿಎಸ್‍ಎನ್‍ಎಲ್ ಷಣ್ಮುಖಪ್ಪ, ಶಿವಮೂರ್ತಿ, ತಿಪ್ಪೇಸ್ವಾಮಿ, ನಾಗರಾಜ ಆಚಾರ್, ಹನುಮಂತಪ್ಪ, ಕೆ.ಬಾನಪ್ಪ, ವಿ.ಲಕ್ಷ್ಮಣ್, ಪ್ರಸನ್ನಕುಮಾರ, ಶಾರದಮ್ಮ, ಸರೋಜಮ್ಮ, ಮಲ್ಲಮ್ಮ, ಸೌಮ್ಯ, ಐರಣಿ ಚಂದ್ರು, ಭಾನಪ್ಪ ರಂಗನಾಥ್ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here