ಜೆಸಿಟಿಯುನಿಂದ ಜ.8, 9ರಂದು ಸಾರ್ವತ್ರಿಕ ಮುಷ್ಕರ

ದಾವಣಗೆರೆ:

      ದೇಶದ ಎಲ್ಲಾ ಕಾರ್ಮಿಕರಿಗೆ ಕನಿಷ್ಟ ವೇತನವಾಗಿ 18 ಸಾವಿರ ರೂ. ಜಾರಿಗೊಳಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ವತಿಯಿಂದ ಜ.8 ಹಾಗೂ 9ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಎಐಟಿಯುಸಿ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ತಿಳಿಸಿದರು.

        ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಷ್ಕರದಲ್ಲಿ ಎಐಟಿಯುಸಿ, ಐಎನ್‍ಟಿಯುಸಿ, ಎಐಯುಟಿಯುಸಿ, ಸಿಐಟಿಯು ಸೇರಿದಂತೆ ದೇಶದ 10 ಕೇಂದ್ರ ಕಾರ್ಮಿಕ ಸಂಘಟನೆಗಳು, ಬ್ಯಾಂಕ್, ವಿಮಾ, ಟೆಲಿಕಾಂ ಹಾಗೂ ಕೇಂದ್ರ, ರಾಜ್ಯ ನೌಕರರ ಸಂಘಟನೆಗಳು ಭಾಗವಹಿಸಲಿವೆ ಎಂದರು.

         1991ರಿಂದ ದೇಶದಲ್ಲಿ ಜಾರಿಗೆ ತಂದ ಹೊಸ ಆರ್ಥಿಕ ನೀತಿಗಳನ್ನು ಇಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರೀ ರಭಸದಿಂದ ಜಾರಿಗೊಳಿಸುತ್ತಿದೆ. ಇದರಿಂದಾಗಿ ದೇಶದ ರೈತರು, ಕಾರ್ಮಿಕರು, ಕೂಲಿಕಾರರು, ವ್ಯಾಪಾರಿಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. 2013-14ರಲ್ಲಿ ಶೇ.1ರಷ್ಟು ಜನರಲ್ಲಿದ್ದ ದೇಶದ ಶೇ.43ರಷ್ಟು ಸಂಪತ್ತು 2017-18ರ ವೇಳೆಗೆ ಶೇ.73ರಷ್ಟು ಏರಿಕೆಯಾಗಿರುವುದನ್ನು ಅಂಕಿ-ಅಂಶಗಳು ಹೇಳುತ್ತಿವೆ. ಬಹುಪಾಲು ಜನರು ಸಂಕಷ್ಟದಲ್ಲಿ ಬದುಕುತ್ತಿದ್ದರೆ, ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಕ್ರೋಢೀಕರಣಗೊಳ್ಳುವ ಮೂಲಕ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ, ದೇಶವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ 2 ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

         ಎಲ್ಲಾ ಕಾರ್ಮಿಕರಿಗೆ ದೇಶವ್ಯಾಪಿ 18 ಸಾವಿರ ರೂ. ಕನಿಷ್ಟ ವೇತನ ಜಾರಿಗೊಳಿಸಬೇಕು. ಅಂಗನವಾಡಿ, ಆಶಾ, ಬಿಸಿಯೂಟ ಮುಂತಾದ ಸ್ಕೀಮ್‍ಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಸರ್ಕಾರಿ ನೌಕರರಾಗಿ ಖಾಯಂಗೊಳಿಸಿ, ಪಿಂಚಣಿ, ಸಾಮಾಜಿಕ ಭದ್ರತೆ ಒದಗಿಸಬೇಕು. ಗುತ್ತಿಗೆ, ಹೊರಗುತ್ತಿಗೆ, ಟ್ರೈನಿಗಳನ್ನು ಖಾಯಂಗೊಳಿಸಬೇಕು. ನೋಟು ಅಮಾನ್ಯೀಕರಣದಿಂದ ಕೆಲಸ ಕಳೆದುಕೊಂಡ, ಮುಚ್ಚಲ್ಪಟ್ಟ ಕೈಗಾರಿಕೆಗಳ ಕಾರ್ಮಿಕರಿಗೆ ಪುನರ್ ಉದ್ಯೋಗ ಸೃಷ್ಟಿಸಬೇಕು. ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶ ನಿಷೇಧಿಸಬೇಕೆಂದು ಆಗ್ರಹಿಸಿದರು.

         ಸಿಐಟಿಯು ಮುಖಂಡ ಕೆ.ಎಲ್.ಭಟ್ ಮಾತನಾಡಿ, ಆಳುವ ಸರ್ಕಾರಗಳ ನೀತಿಯಿಂದಾಗಿ ಸಂಪತ್ತು ಹಾಗೂ ಅಧಿಕಾರ ಕೆಲವೇ ಜನರ ಬಳಿ ಕೇಂದ್ರೀಕೃತವಾಗಿದ್ದು, ರೈತರು ಮತ್ತು ಕಾರ್ಮಿರನ್ನು ಜಾಗೃತಗೊಳಿಸಿ ಇವರ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡುವ ಉದ್ದೇಶದಿಂದ ಈ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಇದರ ಅಂಗವಾಗಿ ಜಿಲ್ಲಾ ಕೇಂದ್ರದಲ್ಲಿ ಬಹಿರಂಗ ಸಭೆಯನ್ನು ಜ.5ರಂದು ಸಂಜೆ 6ಕ್ಕೆ ರಾಮ್ ಅಂಡ್ ಕೋ ವೃತ್ತ, 7.30ಕ್ಕೆ ಭಗತ್ ಸಿಂಗ್ ನಗರ, ಜ.6ರಂದು ಸಂಜೆ 6ಕ್ಕೆ ಹೊಂಡದ ಸರ್ಕಲ್, 7.30ಕ್ಕೆ ಅಖ್ತರ್ ರಜಾ ಸರ್ಕಲ್‍ನಲ್ಲಿ ಏರ್ಪಡಿಸಲಾಗಿದೆ. ಜ.7ರಂದು ಬೆಳಗ್ಗೆ 11 ಗಂಟೆಗೆ ಜಯದೇವ ವೃತ್ತದಿಂದ ಬೈಕ್ ರ್ಯಾಲಿ ನಡೆಸಲಾಗುವುದು. ಜ.8ರಂದು ಬೆಳಗ್ಗೆ 9 ಗಂಟೆಗೆ ಜಯದೇವ ವೃತ್ತದಲ್ಲಿ ಕಾರ್ಮಿಕರ ಮೆರವಣಿಗೆ, 11ಕ್ಕೆ ಮಹಾನಗರ ಪಾಲಿಕೆ ಆವರಣದಲ್ಲಿ ಬಹಿರಂಗ ಸಭೆ, ಜ.9ರಂದು ಬೆಳಗ್ಗೆ 11 ಗಂಟೆಗೆ ಗಡಿಯಾರ ಕಂಬದ ಬಳಿ ಬಹಿರಂಗ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

          ಸುದ್ದಿಗೋಷ್ಠಿಯಲ್ಲಿ ಸಂಘಟನೆಗಳ ಮುಖಂಡರಾದ ಮಂಜುನಾಥ ಕುಕ್ಕುವಾಡ, ಹೆಚ್.ಜಿ.ಉಮೇಶ, ಆವರಗೆರೆ ಚಂದ್ರು, ರಾಘವೇಂದ್ರ ನಾಯರಿ, ಆನಂದರಾಜ, ತಿಪ್ಪೇಸ್ವಾಮಿ, ಆವರಗೆರೆ ವಾಸು ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap