ರಫೆಲ್ ಒಪ್ಪಂದಲ್ಲಿ ಎಚ್.ಎ.ಎಲ್ ಕಡೆಗಣನೆಗೆ ಹಾಲಿ ಮತ್ತು ನಿವೃತ್ತ ನೌಕರರ ಆಕ್ರೋಶ

ಬೆಂಗಳೂರು:

      ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಲ್ಲಿ ಎಚ್.ಎ.ಎಲ್ ಸಂಸ್ಥೆಯನ್ನು ಕಡೆಗಣಿಸಿ ಉದ್ಯಮಿ ಅನಿಲ್ ಧಿರೂಭಾಯಿ ಅಂಬಾನಿ ನೇತೃತ್ವದ ರಕ್ಷಣಾ ಸಂಸ್ಥೆಗೆ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಕ್ಕೆ ಎಚ್.ಎ.ಎಲ್ ಮತ್ತು ರಕ್ಷಣಾ ಪಡೆಗಳ ಹಾಲಿ ಮತ್ತು ನಿವೃತ್ತ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಕಬ್ಬನ್ ಪಾರ್ಕ್ ಸಮೀಪದ ಮೆಟ್ರೋ ರೈಲು ನಿಲ್ದಾಣ ಸಮೀಪದ ಮಿನ್ಸ್ ಸ್ಕೇರ್‍ನಲ್ಲಿ ಎಚ್.ಎ.ಎಲ್. ಆಡಳಿತ ಮಂಡಳಿ ಸಂವಾದದಲ್ಲಿ ಭಾಗಿಯಾಗಬಾರದೆಂದು ನೀಡಿದ್ದ ನೋಟಿಸ್‍ಗೂ ಸಹ ಜಗ್ಗದೇ ನೂರಾರು ಮಂದಿ ಜಮಾಯಿಸಿದ್ದರು. ಎಚ್.ಎ.ಎಲ್ ಸಮವಸ್ತ್ರ ತೊಟ್ಟು ಬಂದಿದ್ದ ಕಾರ್ಮಿಕರು ಕೇಂದ್ರ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

      ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಕೆಲ ವರ್ಷಗಳಲ್ಲಿ ಎಚ್.ಎ.ಎಲ್ ಇತಿಹಾಸದ ಪುಟ ಸೇರಲಿದೆ. ಈಗಾಗಲೇ ಎಚ್.ಎ.ಎಲ್‍ಗೆ ಬೇಡಿಕೆಗಳು ಕಡಿಮೆಯಾಗುತ್ತಿದೆ. ರಕ್ಷಣಾ ಉತ್ಪನ್ನಗಳ ಉತ್ಪಾದನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದು ಎಂದು ಒತ್ತಾಯಿಸಿದರು. ನಿವೃತ್ತ ಎಚ್.ಎ.ಎಲ್ ನೌಕರರ ಸಂಘದ ಮುಖಂಡ ಸಿರಾಜುದ್ದೀನ್, ಇಡೀ ದೇಶದಲ್ಲಿರುವುದು ಒಂದೇ ಒಂದು ಎಚ್.ಎ.ಎಲ್. ಕೇಂದ್ರ ಸರ್ಕಾರ ನಮ್ಮ ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ನಮಗೆ ಅಪಮಾನ ಮಾಡುತ್ತಿದ್ದಾರೆ. ಎಚ್.ಎ.ಎಲ್ ಇಡೀ ವಿಶ್ವದಲ್ಲೇ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಕೇಂದ್ರ ಸರ್ಕಾರ ನಾಶಮಾಡಿದ್ದಾರೆ ಎಂದು ಆಪಾದಿಸಿದರು.

      ಅನಿಲ್ ಅಂಬಾನಿ ಸಂಸ್ಥೆಗೆ ಗುತ್ತಿಗೆ ನೀಡಿರುವುದನ್ನು ನೋಡಿಕೊಂಡು ನಮ್ಮ ಆಡಳಿತ ಮಂಡಳಿ ಸುಮ್ಮನೆ ಕುಳಿತಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ನೋಟಿಸ್ ನೀಡಿದೆ. ಇದೊಂದು ಅಕ್ರಮವಾದ ಕ್ರಮ. ಆಡಳಿತ ಮಂಡಳಿಗೆ ನಾಚಿಕೆಯಾಗಬೇಕು. ನಮ್ಮ ಹೋರಾಟ ನಿರಂತರವಾಗಿರಲಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

       ಎಚ್.ಎ.ಎಲ್‍ನ ನಿವೃತ್ತ ಅಧಿಕಾರಿ ಹಾಗೂ ವಿಶ್ವ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ಮಹದೇವನ್ ಮಾತನಾಡಿ, ನಾವು ಎಚ್.ಎ.ಎಲ್‍ಗೆ 1961ರಲ್ಲಿ ಸೇರಿದಾಗ ನಮ್ಮ ವೇತನ 60 ರೂಪಾಯಿ ಇತ್ತು. ಆಗಿನ ಕಾಲದಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆಗ ನಾವು ಹೋರಾಟ ಮಾಡಿದ ಪರಿಣಾಮ ಎಚ್.ಎ.ಎಲ್‍ಗೆ ಹಲವಾರು ಕೆಲಸಗಳನ್ನು ನೀಡಲಾಗಿತ್ತು. ಈಗ ಎಚ್.ಎ.ಎಲ್ ಆಡಳಿತ ಮಂಡಳಿಯ ಕೈಯಲ್ಲಿಲ್ಲ. ಸರ್ಕಾರದ ಸುಪರ್ದಿಯಲ್ಲಿದೆ. ನಾವು ಆಡಳಿತ ಮಂಡಳಿ ವಿರುದ್ಧವಿಲ್ಲ. ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಇದ್ದೇವೆ ಎಂದರು.

       ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಡಿ.ಆರ್.ಡಿ.ಓ ಹಲವಾರು ಹಲವಾರು ಕಡೆಗಳಲ್ಲಿ ಮಾರಾಟವಾಗಿದೆ. ಎಲ್ಲಾ ಕಡೆಗಳಲ್ಲಿ ಖಾಸಗಿಯವರ ಪ್ರವೇಶವಾಗುತ್ತಿದೆ. ಬೆಂಗಳೂರು ಸಾರ್ವಜನಿಕ ಸಂಸ್ಥೆಗಳ ರಾಜಧಾನಿಯಾಗಿತ್ತು. ರಷ್ಯಾ ದೇಶದವರು ಸಹ ನಮ್ಮ ಎಚ್.ಎ.ಎಲ್‍ಗೆ ಹೆಮ್ಮೆಯಿಂದ ಹೇಳಿದ್ದಾರೆ. ನಮ್ಮಲ್ಲಿ ಅತಿ ಹೆಚ್ಚು ಪರಿಣಿತಿ ಮತ್ತು ಸಾಮಥ್ರ್ಯವಿದೆ. ಕೇಂದ್ರ ಸರ್ಕಾರಿ ಸಂಸ್ಥೆಯ ಕಂಪೆನಿಗಳು ದೇಶದ ಮಾತೃ ಸ್ಥಾನ ಪಡೆದಿರುವ ಕಂಪೆನಿಗಳಾಗಿವೆ ಎಂದು ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ಹೇಳಿದ್ದರು. ನಾವೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದಾಗಿ ಮಹದೇವನ್ ಎಚ್ಚರಿಕೆ ನೀಡಿದರು.

       ಅನಂತ್ ಪದ್ಮನಾಭನ್ ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಎಚ್.ಎ.ಎಲ್ ಈ ದೇಶದ ಪ್ರತಿಷ್ಠೆಯಾಗಿದೆ. ಆದರೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಎಚ್.ಎ.ಎಲ್ ಬಗ್ಗೆ ಕನಿಷ್ಠ ಮಾಹಿತಿಯಿಲ್ಲ. ರಾಹುಲ್ ಗಾಂಧಿ ಅವರು ಮಹಾಘಟಬಂಧನ್ ನಾಯಕರಾಗಲಿದ್ದು, ಈ ದೇಶದ ಪ್ರಧಾನಿಯಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಉಳಿಸಿ-ಬೆಳೆಸುವ ವಿಶ್ವಾಸವಿದೆ ಎಂದರು.

     ಭಾರತೀಯ ವಾಯುಪಡೆಯ ನಿವೃತ್ತ ಇಂಜಿನಿಯರ್ ಬಾಬು ಟಿ. ರಾಘವ್ ಮಾತನಾಡಿ, ಎಚ್.ಎ.ಎಲ್ ಮತ್ತು ವಾಯುಪಡೆ ಒಂದೇ ವಿಮಾನದ ಎರಡು ರೆಕ್ಕೆಗಳಿದ್ದಂತೆ. ಡಿ.ಆರ್.ಡಿ.ಓ ಮತ್ತು ಇಸ್ರೋ ದೇಹದ ಅಂಗಗಳಿದ್ದಂತೆ. ಜೀವಂತ ಅಂಗಾಗಳನ್ನು ಕೊಲ್ಲುವುದು ಸರಿಯಲ್ಲ. ಈ ಅಂಗಾಂಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಇವು ಇನ್ನಷ್ಟು ಸಮರ್ಥವಾಗಿ ಮತ್ತು ಸದೃಢವಾಗಿ ಕೆಲಸ ಮಾಡುವಂತೆ ಮಾಡಬೇಕು ಎಂದರು.

       ಎಚ್.ಎ.ಎಲ್‍ನ ಎಸ್.ಸಿ-ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಶಿವಲಿಂಗಯ್ಯ, 1940ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 740 ಎಕರೆ ಭೂಮಿ ನೀಡಿದರು. ಕಳೆದ ಒಂದುವರೆ ವರ್ಷದಿಂದ ಎಚ್.ಎ.ಎಲ್‍ನಲ್ಲಿ ಶೇ 50 ರಷ್ಟು ಜನರಿಗೆ ಕೆಲಸ ಇಲ್ಲವಾಗಿದೆ. ವಿಮಾನ ತಯಾರಿಕಾ ವಿಭಾಗದಲ್ಲಿ ಸಾವಿರಾರು ಮಂದಿ ಉದ್ಯೋಗವಿಲ್ಲದೇ ಸುಮ್ಮನೆ ಕುಳಿತುಕೊಂಡಿದ್ದೇವೆ ಎಂದರು.

         ಸಿಐಟಿಯು ಮುಖಂಡ ಹಾಗೂ ನಿವೃತ್ತ ಅಧಿಕಾರಿ ಉಮೇಶ್ ಮಾತನಾಡಿ, ದೇಶದ ರಕ್ಷಣಾ ಉತ್ಪನ್ನಗಳ ಉತ್ಪಾದನಾ ನೀತಿಯಲ್ಲಿ ಬದಲಾವಣೆ ತರಬೇಕಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಬದಲಾವಣೆ ತರಬೇಕಾಗಿದೆ. ಕೇಂದ್ರ ಸರ್ಕಾರ ಎಚ್.ಎ.ಎಲ್ ಸಂಸ್ಥೆಯನ್ನು ಕೊಲ್ಲುತ್ತಿದ್ದು. ಇದನ್ನು ರಕ್ಷಿಸಬೇಕು. ಈ ತಿಂಗಳ 28 ರಿಂದ ಎರಡು ದಿನಗಳ ಕಾಲ ಸಾರ್ವಜನಿಕ ಸಂಸ್ಥೆಗಳನ್ನು ರಕ್ಷಿಸುವ ಸಲುವಾಗಿ ಹೋರಾಟ ನಡೆಸುತ್ತಿದ್ದು, ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap