ಮೇಲ್ಮನೆ ಸಭಾಪತಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ

ಬೆಳಗಾವಿ

         ಡಿಸೆಂಬರ್ 12 ರಂದು ನಡೆಯಲಿರುವ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳಾಗಿರುವ ಕಾಂಗ್ರೆಸ್-ಜೆಡಿಎಸ್ ನಲ್ಲಿ ಮೇಲ್ಮನೆ ಸಭಾಪತಿ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.

         ಡಿಸೆಂಬರ್ 10 ರಂದು ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ನೂತನ ಸಭಾಪತಿ ಆಯ್ಕೆಯಾಗಬೇಕಿದೆ. ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರ ನಿವೃತ್ತಿಯಿಂದ ತೆರವಾಗಿರುವ ಸ್ಥಾನಕ್ಕೆ ಇದೂವರೆಗೆ ಚುನಾವಣೆ ನಡೆದಿರಲಿಲ್ಲ. ಮೈತ್ರಿ ಸರ್ಕಾರ ರಚನೆಯಾಗುತ್ತಿದ್ದಂತೆ ಮಾಜಿ ಸಚಿವ ಬಸವರಾಜ ಹೊರಟ್ಟಿಯವರನ್ನು ಹಂಗಾಮಿ ಸಭಾಪತಿಯಾಗಿ ನೇಮಿಸಲಾಗಿತ್ತು. ಈ ನೇಮಕವನ್ನು ಪ್ರತಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸಿ, ಸದನದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಮುಂದಿನ ಅಧಿವೇಶನದಲ್ಲಿ ನೂತನ ಸಭಾಪತಿಯನ್ನು ಆಯ್ಕೆ ಮಾಡುವುದಾಗಿ ಮುಖ್ಯಮಂತ್ರಿಗಳು ಸದನದಲ್ಲಿ ಭರವಸೆ ನೀಡಿದ್ದರು.

        ಒಟ್ಟು 75 ಸಂಖ್ಯಾಬಲದ ವಿಧಾನ ಪರಿಷತ್ತಿನಲ್ಲಿ 38 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ಬಿಜೆಪಿ 18, ಜೆಡಿಎಸ್ 14 ಸದಸ್ಯರನ್ನು ಹೊಂದಿದೆ. ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸಿಗೆ ಸಭಾಪತಿ ಸ್ಥಾನ ಸಿಗಬೇಕಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿರುವುದರಿಂದ ಸಭಾಧ್ಯಕ್ಷ ಮತ್ತು ಸಭಾಪತಿ ಸ್ಥಾನವನ್ನು ಕೂಡ ಹಂಚಿಕೆ ಮಾಡಿಕೊಳ್ಳಬೇಕೆಂದು ಈ ಹಿಂದೆ ತೀರ್ಮಾನಿಸಲಾಗಿತ್ತು. ಅದರಂತೆ ವಿಧಾನಸಭೆಯಲ್ಲಿ ಸಭಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸಿನ ರಮೇಶ್ ಕುಮಾರ್ ಅವರಿಗೆ ಬಿಟ್ಟುಕೊಡಲಾಗಿತ್ತು.

         ವಿಧಾನ ಪರಿಷತ್ತಿನಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ಸಭಾಪತಿ ಸ್ಥಾನವನ್ನು ತನಗೆ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿದೆ. ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ, ತಮ್ಮ ಆಪ್ತ ಎಸ್.ಆರ್.ಪಾಟೀಲ್ ಅವರಿಗೆ ಸಭಾಪತಿ ಸ್ಥಾನ ಕೊಡಿಸಲು ಪಟ್ಟು ಹಿಡಿದಿದ್ದಾರೆ. ಇತ್ತ ಜೆಡಿಎಸ್, ಹೊಂದಾಣಿಕೆ ಸೂತ್ರದಂತೆ ಸಭಾಪತಿ ಸ್ಥಾನವನ್ನು ತನಗೆ ಬಿಟ್ಟುಕೊಡಬೇಕು ಎಂದು ಪಟ್ಟುಹಿಡಿದಿದೆ. ಬಜೆಟ್ ಅಧಿವೇಶನದ ಸಂದರ್ಭದಲ್ಲೇ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿತ್ತು. ಆದರೆ ಕಾಂಗ್ರೆಸ್-ಜೆಡಿಎಸ್ ನಡುವೆ ಒಮ್ಮತ ಮೂಡಿರಲಿಲ್ಲ.

         ಡಿಸೆಂಬರ್ 11 ರ ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಿದೆ. ಡಿ.12 ರ ಕಲಾಪದ ಆರಂಭದ ಮೊದಲ ಅವಧಿಯಲ್ಲಿ ಸಭಾಪತಿ ಚುನಾವಣೆ ನಡೆಯಲಿದೆ. ಸಭಾಪತಿ ಸ್ಥಾನಕ್ಕೆ ಹಂಗಾಮಿ ಸಭಾಪತಿಯವರೇ ಸ್ಪರ್ಧಿಸುತ್ತಿರುವುದರಿಂದ ಹಿರಿಯ ಸದಸ್ಯರೊಬ್ಬರನ್ನು  ಸಭಾಪತಿಯನ್ನಾಗಿ ರಾಜ್ಯಪಾಲರು ಆಯ್ಕೆ ಮಾಡುತ್ತಾರೆ. ಈ ಹಿಂದೆ ಮೊದಲ ಬಾರಿಗೆ ಲೋಕಸಭೆಯಲ್ಲಿ ಹಂಗಾಮಿ ಸಭಾಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿಯವರು ಸಭಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ ಅಂದಿನ ರಾಷ್ಟ್ರಪತಿ  ಸಭಾಧ್ಯಕ್ಷರನ್ನು ನೇಮಕ ಮಾಡಿದ್ದರು. ಈಗ ಕರ್ನಾಟಕದಲ್ಲೂ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.

          ಹೀಗಾಗಿ ಡಿಸೆಂಬರ್ 10 ರಿಂದ 12 ರವರೆಗೆ ಮೂರು ದಿನ ಕಲಾಪವನ್ನು  ಸಭಾಪತಿ ನಡೆಸಲಿದ್ದಾರೆ. ಪರಿಷತ್ತಿನಲ್ಲಿ ಹಿರಿಯ ಸದಸ್ಯರಾಗಿ ಪ್ರತಾಪ್ ಚಂದ್ರಶೆಟ್ಟಿ, ಎಸ್.ಆರ್.ಪಾಟೀಲ್, ಅಲ್ಲಂ ವೀರಭದ್ರಪ್ಪ ಇದ್ದಾರೆ

            ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು ಸದನದಲ್ಲಿ ಚರ್ಚೆಯಾಗುತ್ತವೆ. ಹೀಗಾಗಿ ಪರಿಷತ್ತಿನಲ್ಲಿ ಸುಗಮ ಕಲಾಪಕ್ಕಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉತ್ತರ ಕರ್ನಾಟಕ ಭಾಗದವರೇ ಆಗಿರುವ ಹೊರಟ್ಟಿಯವರನ್ನು ಅಧಿವೇಶನ ಆರಂಭವಾಗುವುದರೊಳಗೆ ನೇಮಿಸಬೇಕೆಂದು ಕಾಂಗ್ರೆಸನ್ನು ಒತ್ತಾಯಿಸಿದ್ದರು. ಆದರೆ ಇದಕ್ಕೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಒಪ್ಪುತ್ತಿಲ್ಲ. ಉತ್ತರ ಕರ್ನಾಟಕ ಭಾಗದವರೇ ಆಗಿರುವ ಎಸ್.ಆರ್.ಪಾಟೀಲರನ್ನು ನೇಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಜೆಡಿಎಸ್ ನಾಯಕರು ಚರ್ಚೆ ನಡೆಸಿದ್ದಾರೆ. ಆದರೆ ಸಮನ್ವಯ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಒಪ್ಪದ ಕಾರಣ ಸಭಾಪತಿ ಸ್ಥಾನದ ಕುರಿತು ಚರ್ಚೆ ನಡೆಯಲಿಲ್ಲ. ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯರ ಗೆಲುವಿಗೆ ಎಸ್.ಆರ್.ಪಾಟೀಲ್ ಶ್ರಮಿಸಿದ್ದರು. ಹೀಗಾಗಿ ಎಸ್.ಆರ್.ಪಾಟೀಲರನ್ನು ಸಭಾಪತಿಯಾಗಿ ನೇಮಿಸಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಒತ್ತಾಯಿಸುತ್ತಿದ್ದಾರೆ.

           ಇಂದು ಅಂದರೆ ಡಿಸೆಂಬರ್ 8 ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಬೇಕಿತ್ತು. ಒಂದು ವೇಳೆ ಇಂದು ಶಾಸಕಾಂಗ ಸಭೆ ನಡೆದಿದ್ದರೆ, ಸಭಾಪತಿ ಸ್ಥಾನದ ಬಗ್ಗೆ ಸಿದ್ದರಾಮಯ್ಯ ಚರ್ಚಿಸುತ್ತಿದ್ದರು.

          ದೂರವಾಣಿಯಲ್ಲಿ ಯುಎನ್‍ಐ ಜೊತೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಎಸ್.ಆರ್.ಪಾಟೀಲ್, ಡಿಸೆಂಬರ್ 10 ರಂದು ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ತಾವು ಸ್ಪರ್ಧಿಸಬೇಕೇ ಬೇಡವೇ ಅನ್ನುವುದು ನಿರ್ಧಾರವಾಗಲಿದೆ. ಪಕ್ಷ ಸ್ಪರ್ಧಿಸು ಎಂದರೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಅಲಂಕರಿಸಿದರೆ ಉಪಸಭಾಪತಿ ಸ್ಥಾನ ಜೆಡಿಎಸ್ ಪಾಲಾಗಲಿದೆ ಎಂದರು. ವಿಧಾನ ಪರಿಷತ್ ಮುಖ್ಯ ಸಚೇತರಾಗಿ ಜೆಡಿಎಸ್ ಸದಸ್ಯ ಚೌಡರೆಡ್ಡಿ ತೂಪಲ್ಲಿ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

       ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಒಪ್ಪದ ಕಾರಣ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಹಂಗಾಮಿ ಸಭಾಪತಿ ಬಸವರಾಜಹೊರಟ್ಟಿ ಸೋಮವಾರ ನಾಮಪತ್ರ ಸಲ್ಲಿಸುವುದು ನಿಶ್ಚಿತ. ಎಸ್.ಆರ್.ಪಾಟೀಲ್ ಕೂಡ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ. ಡಿಸೆಂಬರ್ 10 ರಂದು ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap