ಯಾರಿಗೂ ಬೇಡವಾದವೇ.? ಕಣ್ಮನ ಸೆಳೆಯುವ ಕಲ್ಯಾಣಿಗಳು..!

0
30

ಮಧುಗಿರಿ

       ಪಟ್ಟಣದ ಶಿರಾಗೇಟ್‍ನಲ್ಲಿರುವ ಸುಮಾರು 400 ವರ್ಷಗಳ ಹಿಂದೆ ನಿರ್ಮಿಸಿದ ಪುರಾತನವಾದ ಅರಸಯ್ಯನ ಕಲ್ಯಾಣಿ ಮತ್ತು ನರಸಯ್ಯನ ಕಲ್ಯಾಣಿಯನ್ನು ಸಂರಕ್ಷಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

       ಶ್ರೀ ವಿಜಯ ನಾಮ ಸಂವತ್ಸರ ಕಾರ್ತಿಕ ಶುಕ್ರವಾರದಂದು ಪರಮೇಶ್ವರ ಪ್ರೌಢ ಪ್ರತಾಪ ರಾಜ ವಡೇಯರಯ್ಯನವರ ಮಗನಾದ ದೊಡ್ಡಯ್ಯನವರು 1621 ರಲ್ಲಿ ಆಕರ್ಷಣೀಯವಾದ ಈ ಅರಸಯ್ಯನ ಕಲ್ಯಾಣಿ ಕಟ್ಟಿಸಿರುತ್ತಾರೆ. ಇದು ತನ್ನದೆ ಆದಂತಹ ಇತಿಹಾಸ ಹೊಂದಿದೆ. ಈ ಕಲ್ಯಾಣಿ ಇಂದು ಅವಸಾನದ ಹಂತ ತಲುಪಿದ್ದು ಕಲ್ಯಾಣಿಯ ಸುತ್ತ ಮುತ್ತಲ ವಾತವರಣ ಕಲುಷಿತಗೊಂಡಿದೆ.

        ನಾಗರಿಕರ ಮನವಿ ಮೇರೆಗೆ ಹಿಂದಿನ ಶಾಸಕ ಕೆ.ಎನ್.ರಾಜಣ್ಣ ತಮ್ಮ ಅವಧಿಯಲ್ಲಿ ಶಿರಾಗೇಟ್ ನಲ್ಲಿರುವ ಅರಸಯ್ಯ ಮತ್ತು ನರಸಯ್ಯನÀ ಕಲ್ಯಾಣಿಗಳನ್ನು ಸ್ವಚ್ಚಗೊಳಿಸಿ ಕಲ್ಯಾಣಿಗೆ ನೀರು ಹರಿಸಿ ಪುನರುಜ್ಜೀವನಗೊಳಿಸಿದ್ದರು. ರಕ್ಷಣೆಗಾಗಿ ಸುತ್ತಲೂ ಕಾಂಪೌಂಡ್ ನಿರ್ಮಾಣದ ಜತೆಗೆ ಸುಂದರ ಉದ್ಯಾನವನ್ನು ನಿರ್ಮಿಸಿ ನೋಡುಗರಿಗೆ ಆಕರ್ಷಣೀಯವಾಗುವಂತೆ ಮಾಡಿದ್ದರು.

         ನಂತರದ ಬೆಳವಣಿಗೆಯಲ್ಲಿ ಸರಿಯಾದ ನಿರ್ವಹಣೆಯಿಲ್ಲದೆ ಸಂಬಂಧಪಟ್ಟ ಇಲಾಖೆಗಳ ಅಸಡ್ಡೆ ಮನೋಭಾವದಿಂದ ಇಂದು ಎರಡೂ ಕಲ್ಯಾಣಿಗಳು ಸ್ಪಚ್ಚತೆ ಕಳೆದುಕೊಂಡು ಹಳೆಯ ರೂಪಕ್ಕೆ ತಿರುಗಿ ಗಿಡಗೆಂಟೆಗಳು ಬೆಳೆದು ವಿಷ ಜಂತುಗಳ ಆವಾಸ ಸ್ಥಾನವಾಗಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕಲ್ಯಾಣಿಯ ಸ್ವಚ್ಚತೆಯ ಕಡೆ ಗಮನಹರಿಸಿ ಪುರಾತನ ಸ್ಥಳಗಳನ್ನು ಸಂರಕ್ಷಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

        ಇಂದಿನ ತಾಂತ್ರಿಕ ಯುಗದಲ್ಲಿ ಇಂತಹ ಅದ್ಬುತ ಕೆತ್ತನೆಯುಳ್ಳ ಶಿಲ್ಪಕೃತಿಗಳನ್ನು ಹೊಂದಿರುವ ಕಲ್ಯಾಣಿಗಳಾಗಲಿ ಅಥವಾ ಕೆರೆ, ಬಾವಿಗಳನ್ನು ನಿರ್ಮಿಸುವುದು ಅಸಾಧ್ಯದ ಕೆಲಸವಾಗಿದೆ. ನಮ್ಮ ಪೂರ್ವಿಕರು ಗ್ರಾಮಗಳ ಹಾಗೂ ಇಲ್ಲಿನ ದೇವಾಲಯಗಳ ಶ್ರೇಯೋಭಿವೃದ್ಧಿಗಾಗಿ ನಿರ್ಮಿಸಿರುವ ಇಂತಹ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೂ ಇದನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿಯಾಗಿದ್ದು ಸ್ಥಳೀಯ ನಾಗರಿಕರು, ನಾನಾ ಸಂಘಟನೆಗಳು, ಸಂಬಂಧಪಟ್ಟ ಇಲಾಖೆಗಳು ಇತ್ತ ಗಮನ ಹರಿಸಿ ಅಭಿವೃದ್ಧಿ ಪಡಿಸಬೇಕಾಗಿದೆ.

      ಸ್ಥಳೀಯ ಚಿಕ್ಕಣ್ಣನ ಪಾಳ್ಯದ ವಾಸಿ ಅಂಜಿನಪ್ಪ ಮಾತನಾಡಿ, ಇಲ್ಲಿಯೇ ಎರಡು ಕಲ್ಯಾಣಿಗಳಿದ್ದು ಶಿರಾಗೇಟ್ ಬಳಿಯಿರುವ ಕಲ್ಯಾಣಿಯನ್ನು ಹಿಂದಿನ ಶಾಸಕ ರಾಜಣ್ಣ ಸ್ವಲ್ಪ ಮಟ್ಟಿಗೆ ಅಭಿವೃದ್ಧಿಪಡಿಸಿದ್ದರು. ಮತ್ತೊಂದು ಕಲ್ಯಾಣಿಯನ್ನು ಯಾರೂ ಅಭಿವೃದ್ಧಿ ಪಡಿಸಲು ಮುಂದಾಗಿಲ್ಲ. ಶಿರಾಗೇಟ್ ಬಳಿಯಿರುವ ಕಲ್ಯಾಣಿಯ ಸಮೀಪವಿರುವ ಅಂಗಡಿಯವರು ಕಸವನ್ನು ಕಲ್ಯಾಣಿಗಳ ಆವರಣದಲ್ಲಿಯೇ ಸುರಿಯುತ್ತಿರುವುದರಿಂದ ಅವ್ಯವಸ್ಥೆ ಉಂಟಾಗುತ್ತಿದ್ದು ಸ್ಥಳೀಯರಿಗೆ ತುಂಬಾ ಅನನುಕೂಲ ಉಂಟಾಗುತ್ತಿದೆ ಎಂದರು.

      ಬೋವಿ ಸಮುದಾಯದ ಅಧ್ಯಕ್ಷ ನಾಗರಾಜು ಮಾತನಾಡಿ, ಇವು ಪ್ರಾಚೀನವಾದ ಕಲ್ಯಾಣಿಗಳಾಗಿದ್ದು, ಈ ಹಿಂದಿನ ಶಾಸಕರ ಅವಧಿಯಲ್ಲಿ ಕಲ್ಯಾಣಿಗಳನ್ನು ಅಭಿವೃದ್ಧಿ ಪಡಿಸಿದ್ದರು. ಈಗ ಕಲ್ಯಾಣಿಗಳ ಸುತ್ತಮುತ್ತಲೂ ಗಿಡಗೆಂಟೆಗಳು ಹಾಗೂ ಪ್ಲಾಸ್ಟಿಕ್ ಹೆಚ್ಚಾಗಿ ಕಂಡು ಬರುತ್ತಿವೆ. ಸಂಬಂಧಪಟ್ಟ ಶಾಸಕರು ಮತ್ತು ಅಧಿಕಾರಿಗಳು ಇತ್ತ್ತ ಗಮನಹರಿಸ ಬೇಕಾಗಿದೆ. ಮತ್ತೊಂದು ಕಲ್ಯಾಣಿಯಂತೂ ತೀರಾ ಅಧೋಗತಿ ತಲುಪಿದ್ದು, ಆಕರ್ಷಣೀಯವಾದ ಇಂತಹ ಕಲ್ಯಾಣಿಗಳ ದುಃಸ್ಥಿತಿ ನೋಡಲು ಆಗುತ್ತಿಲ್ಲ. ಪಕ್ಕದಲ್ಲಿಯೇ ಇರುವ ವಸತಿ ಗೃಹಗಳ ಮೋರಿ ನೀರು ಕಲ್ಯಾಣಿಗೆ ಹರಿಯುತ್ತಿದ್ದು ದುರ್ವಾಸನೆ ಬೀರುತ್ತಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here