ಹುಳು ಹಿಡಿದು ದುರ್ಬಲಗೊಳ್ಳುತ್ತಿರುವ ಮನುಷ್ಯತ್ವ

0
8

ದಾವಣಗೆರೆ:

       ಧರ್ಮ, ಜಾತಿ, ರಾಜಕಾರಣದ ಭರಾಟೆಯಲ್ಲಿ ಮಾನವೀಯತೆಯ ಕಂಬಕ್ಕೆ ಹುಳು ಹಿಡಿದು, ಮನುಷ್ಯತ್ವ ದುರ್ಬಲಗೊಳ್ಳುತ್ತಿದೆ ಎಂದು ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಆತಂಕ ವ್ಯಕ್ತಪಡಿಸಿದರು.

         ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ರೇಷು ಪ್ರಕಾಶನದಿಂದ ಏರ್ಪಡಿಸಿದ್ದ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಹಬ್ಬಿದಾ ಮಲೆ ಮಧ್ಯದೊಳಗೆ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ದಲ್ಲಿ ಕೃತಿ ಕುರಿತು ಅವರು ಮಾತನಾಡಿದರು.

        ಪ್ರಸ್ತುತ ಸಮಾಜದಲ್ಲಿ ಮನುಷ್ಯತ್ವದ ಅಭಾವ ಎದ್ದು ಕಾಣುತ್ತಿದೆ. ಜಾತಿ, ಧರ್ಮ ಹಾಗೂ ರಾಜಕಾರಣದ ಭರಾಟೆಯಲ್ಲಿ ಮಾನವೀಯ ಕಂಬವನ್ನು ಹುಳು ತಿನ್ನುತ್ತಿದ್ದು, ಮಷ್ಯತ್ವ ದುರ್ಬಲಗೊಳ್ಳುತ್ತಿದೆ. ಅಕಸ್ಮಾತ್ ಈ ಮಾನವೀಯ ಕಂಬ ಮುರಿದು ಬಿದ್ದರೆ ಹೇಗೆ? ಎಂಬುದನ್ನು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

          ಮನುಷ್ಯ ಸಂಘ ಜೀವಿಯಾಗಿದ್ದರೂ ಪ್ರತ್ಯೇಕವಾಗಿ ಬದುಕುವ ಮನಸ್ಥಿತಿ ಹೊಂದಿರುವುದು ಅತ್ಯಂತ ವಿಪರ್ಯಾಸವಾಗಿದೆ. ಜನಪ್ರಿಯತೆಯ ಏಣಿ ಹತ್ತಲು ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣದ ಮೊರೆ ಹೋಗುತ್ತಿದ್ದಾನೆ ಎಂದರು.

          ಸಾಮಾಜಿಕ ಹಾಗೂ ಸಾಂಸ್ಕತಿಕ ಬದುಕನ್ನು ಹೇಗೆ ತೆರೆದುಕೊಳ್ಳಬೇಕೆಂಬುದರ ಬಗ್ಗೆ ಪ್ರಯತ್ನಿಸಬೇಕಾಗಿದೆ. ಸಾಂಸ್ಕತಿಕ ಗೊಂದಲದಲ್ಲಿ ರಾಜಕೀಯವಾಗಿ ಮುಂದೆಬರಲು ಕೆಲವರು ಪ್ರಯತ್ನಿಸಿದರೆ, ಮತ್ತೆ ಕೆಲವರು ಈ ಗೊಂದಲದಲ್ಲಿಯೇ ಇದ್ದು, ಬರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಲವರು ತನ್ನ ಪಾಲಿಗೆ ಹೇಗೆ ಬಂದಿದೆಯೋ ಹಾಗೇ ತಣ್ಣಗೆ ಬದುಕುತ್ತಿದ್ದಾರೆಂದು ವಿಶ್ಲೇಷಿಸಿದರು.

         ಕಥೆ ಕೇಳುವ ಹಾಗೂ ಹೇಳುವ ಗುಣ ಮೊದಲಿನಿಂದಲೂ ಇದೆ. ಈ ಕಥೆಗಳು ಮನುಷ್ಯನನ್ನು ಮಧೃವನ್ನಾಗಿಸಲಿದೆ. ವಿನಯವಂತರನ್ನಾಗಿ ಮಾಡಲಿವೆ ಎಂದ ಅವರು, ಸಾಹಿತಿ ಪೈಜ್ನಟ್ರಾಜ್ ‘ಹಬ್ಬಿದಾ ಮಲೆ ಮಧ್ಯದೊಳಗೆ’ ಕಥಾ ಸಂಕಲನದ ಮೂಲಕ ತನ್ನ ಹಾಗೂ ತನ್ನ ಸಮುದಾಯದ ಆತ್ಮ ನಿರೀಕ್ಷಣೆ ಮಾಡಲು ಪ್ರಯತ್ನಿಸಿದ್ದಾರೆ ಎಂದರು.

        ಮಾಧ್ಯಮ ಹಾಗೂ ರಾಜಕಾರಣ ಇನ್ನೊಬ್ಬರನ್ನು ಅನುಮಾನಿಸಿ ನೋಡುವ ರೀತಿಯಲ್ಲಿ ಸಮಾಜದಲ್ಲಿ ಬಹು ದೊಡ್ಡ ಗೋಡೆ ಕಟ್ಟಿವೆ. ಯಾವುದೇ ಒಂದು ಧರ್ಮ ರಾಜಕೀಯ ಪಕ್ಷದ ಬ್ಯಾನರ್ ಆದಾಗ ಅನುಮಾನಿಸಿ ನೋಡುವ ಹಾಗೂ ಕೊಲ್ಲುವ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಲಿದೆ ಎಂದು ನುಡಿದರು.

       ಪೈಜ್ನಟ್ರಾಜ್ “ಅಲ್ಲಾ ದೇವರು-ಅನ್ನ ದೇವರು” ಕಥೆಯ ಮೂಲಕ ಬಡವರು ಅನ್ನಕ್ಕಾಗಿ ಪಡುವ ಸಂಕಷ್ಟವನ್ನು ಅನಾವರಣಗೊಳಿಸಿದ್ದಾರೆ . ಇಡೀ ಭೂಮಿ ವಾಣಿಜ್ಯೀಕರಣಗೊಂಡಿರುವ ಇಂದಿನ ಕಾಲಘಟ್ಟದಲ್ಲಿ ಅನ್ನಯಜ್ಞ ಮಾಡುವ ಜರೂರಿದೆ. ಆದರೆ, ವಿವಿಧ ಕಾರ್ಯಕ್ರಮಗಳನ್ನು ನಾವು ಆಚರಿಸುವ ಸಂದರ್ಭದಲ್ಲಿ ಹಸಿದ ಹೊಟ್ಟೆಯಲ್ಲಿ ಒಬ್ಬ ನಿರ್ಗತಿಕ ಅನ್ನಕ್ಕಾಗಿ ಬಂದರೆ, ನಮ್ಮ ಸ್ಥಿತಿವಂತಿಕೆ, ಗರ್ವ, ಹಮ್ಮು ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು

        ಇಂದು ಮನುಷ್ಯ ಅಧಿಕಾರ ಹಾಗೂ ಶ್ರೀಮಂತಿಕೆಯಿಂದ ಮಾತ್ರ ದೊಡ್ಡವನಾಗಿದ್ದಾನೆಯೇ ಹೊರತು, ಮನುಷ್ಯನಾಗಿ ದೊಡ್ಡವನಾಗಿಲ್ಲ ಎಂದ ಅವರು, ಎಲ್ಲಾ ಸಮುದಾಯದವರು ಒಳ್ಳೆಯವರು ಹಾಗೂ ಕೆಟ್ಟವರಿದ್ದಾರೆ. ಆದರೆ, ಒಂದು ಸಮುದಾಯದವರನ್ನೇ ಕೆಟ್ಟವರನ್ನಾಗಿ ಬೊಟ್ಟು ಮಾಡುವ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿರುವುದು ಅತ್ಯಂತ ದೌರ್ಭಾಗ್ಯ ಎಂದರು.

         ಫೈಜ್ನಟ್ರಾಜ್ ಅವರ 20 ರೂಪಾಯಿಯ ಕಥೆಯಲ್ಲಿ ಸೈಕಲ್‍ನಲ್ಲಿ ಐಸ್ ಕ್ಯಾಂಡಿ ಮಾರಿ ಮಕ್ಕಳಿಗೆ ಬದುಕು ಕಟ್ಟಿಕೊಟ್ಟ ಅಜ್ಜನೊಬ್ಬ ಇಳಿ ವಯಸ್ಸಿನಲ್ಲಿ 20 ರೂಪಾಯಿಗಾಗಿ ಮಗನಿಂದ ನಿಂದನೆಗೆ ಒಳಗಾಗಿ, ಮತ್ತೆ ಐಸ್ ಕ್ಯಾಂಡಿ ಮಾರಲು ಮೂಲೆಯಲ್ಲಿ ಧೂಳು ಹಿಡಿದ್ದ ಸೈಕಲ್ ಅನ್ನು ಒರೆಸಿ ಸಿದ್ಧಗೊಳಿಸಿದ ನೋವಿನ ಕಥೆ ಇದೆ. ಇಲ್ಲಿ ಬರುವ ಪಾತ್ರಗಳು ಮುಸ್ಲಿಂ ವ್ಯಕ್ತಿಗಳದ್ದಿರಬಹುದು. ಆದರೆ, ಎಲ್ಲಾ ಜಾತಿ, ಧರ್ಮಿಯರ ನೋವಿನ ಕತೆ ಇದಾಗಿದೆ ಎಂದ ಅವರು, ಪೈಜ್ ಬರೆದಿರುವ ಬಹುಪಾಲು ಕಥೆಗಳಲ್ಲಿ ಎದುರಿಸುತ್ತಿರುವ ಸವಾಲುಗಳ ಮಧ್ಯೆಯೇ ತಣ್ಣಗೆ ಬದುಕು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

        ಆದರೆ, ಅದನ್ನು ಕೆದಕಿ ನೋಡುವ ಪ್ರಯತ್ನ ಮಾಡಬೇಕಿತ್ತು ಎಂದರು.ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ, ನಮ್ಮೂರಿನ ಹುಡುಗ ಪೈಜ್ನಟ್ರಾಜ್ ಅವರ ಕಥಾ ಸಂಕಲನ ಲೋಕಾರ್ಪಣೆ ಆಗುತ್ತಿರುವುದು ಸಂತಸ ತಂದಿದೆ. ಇವರಿಂದ ಇನ್ನಷ್ಟು ಕೃತಿಗಳು ಹೊರ ಬರಲಿ. ಸಂತೆಬೆನ್ನೂರು ಐತಿಹಾಸಿಕ ಪುಷ್ಕರಣಿಗೆ ಅಷ್ಟೇ ಅಲ್ಲದೆ, ಆ ಹೋಬಳಿಯ 40 ಹಳ್ಳಿಯ ಜನರಿಗೆ ಒಳ್ಳೆಯ ಶಿಕ್ಷಣ ಸಿಕ್ಕಿರುವುದರ ಪರಿಣಾಮ ಶೈಕ್ಷಣಿಕ, ಸಾಹಿತ್ಯ, ರಾಜಕೀಯ ಎಲ್ಲಾ ರಂಗದಲ್ಲಿಯೂ ಇದ್ದಾರೆ ಎಂದರು.

        ಮನುಷ್ಯ ಇಂದು ಆಧುನಿಕತೆಯ ನಾಗಲೋಟಕ್ಕೆ ಬೆನ್ನು ಬಿದ್ದಿರುವ ಪರಿಣಾಮ ಸಾಹಿತ್ಯಾಸಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಮಕ್ಕಳಾದಿಯಾಗಿ ಹಿರಿಯರು ಸಹ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಸಾಹಿತಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

          ಕಥೆಗಾರ ಹೆಚ್.ಬಿ.ಇಂದ್ರಕುಮಾರ್ ಮಾತನಾಡಿ, ವಾಣಿಜ್ಯ ನಗರಿಯಾಗಿರುವ ದಾವಣಗೆರೆಯಲ್ಲಿ ವ್ಯಾಪಾರ ಮಾಡುವವರಷ್ಟೇ ಇದ್ದಾರೆ. ಅಲ್ಲಿರುವವರಿಗೆ ಸಾಹಿತ್ಯದ ಬಗ್ಗೆ ಏನೂ ಗೊತ್ತಿಲ್ಲ ಎಂಬ ಅಪವಾದ ಹಿಂದೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಾಗುವ ಮೂಲಕ ಆ ಅಪವಾದವನ್ನು ಹುಸಿ ಗೊಳಿಸಲಾಗಿದೆ ಎಂದರು.

            ಯಾವುದೇ ಊರಿನಲ್ಲಿ ಜನರ ಪ್ರಪಂಚ ಇದ್ದೇ ಇರುತ್ತದೆ. ಆ ಜನರಿಗೆ ನೋವು ಸಹ ಇರುತ್ತದೆ. ಆ ನೋವನ್ನು ಸಾಹಿತ್ಯಕ್ಕೆ ಮುಖಾಮುಖಿ ಮಾಡುವ ಕೆಲಸ ಆಗಬೇಕಿದೆ. ಈ ಮೂಲಕ ನಮ್ಮ ಊರಿನ ಸಾಂಸ್ಕತಿಕ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕು. ಧರ್ಮ-ಜಾತಿ-ರಾಜಕಾರಣದ ಮೇಲೆ ಬದುಕುವುದಕ್ಕಿಂತ ಮಾನವೀಯ ನೆಲೆಯಲ್ಲಿ ಬದುಕುವ ಪ್ರಯತ್ನ ಹೆಚ್ಚು ಆಗಬೇಕೆಂದು ಆಶಯ ವ್ಯಕ್ತಪಡಿಸಿದರು.ಕಸಾಪ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಸಂತೆಬೆನ್ನೂರು ಫೈಜ್ಞಟ್ರಾಜ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here