ಲಕ್ಷ ಲೀಡ್‍ನಿಂದ ಗೆಲ್ಲುವೆ, ಸಚಿವ ಸ್ಥಾನ ಆಕಾಂಕ್ಷಿಯಲ್ಲ

ದಾವಣಗೆರೆ:

        ಮರು ಆಯ್ಕೆ ಬಯಸಿ ನಾಲ್ಕನೇ ಬಾರಿ ದಾವಣಗೆರೆ ಲೋಕಸಭಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ತಾವು ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ತಿಳಿಸಿದ್ದಾರೆ.

        ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 2004ರಲ್ಲಿ 33 ಸಾವಿರ, 2009ರಲ್ಲಿ 2024 ಹಾಗೂ 2014ರ ಚುನಾವಣೆಯಲ್ಲಿ 17600 ಮತಗಳ ಅಂತರದಲ್ಲಿ ಗೆದ್ದಿದ್ದೆ. ಆದರೆ, ಈ ಬಾರಿ ಕನಿಷ್ಟ 1 ಲಕ್ಷ ಮತಗಳ ಅಂತರದ ಗೆಲುವು ನನ್ನದಾಗಲಿದೆ. ತಮ್ಮ ಲೆಕ್ಕಾಚಾರದ ಪ್ರಕಾರ ಒಂದಿಷ್ಟು ಹೆಚ್ಚಾಗಬಹುದು ಅಥವಾ ಸ್ವಲ್ಪ ಕಡಿಮೆಯಾಗಬಹು ಎಂದು ಹೇಳಿದರು.

      ಕಳೆದ ಬಾರಿ ಕಷ್ಟವಿತ್ತು, 3ನೇ ಸಲ ಸ್ಪರ್ಧಿಸಿದಾಗ ಟಫ್ ಆಗಬಹುದೆಂದುಕೊಂಡಿದ್ದೆ. ಆದರೆ, ಮತದಾರರು 17,600 ಮತಗಳ ಮುನ್ನಡೆಯಲ್ಲಿ ನನ್ನನ್ನುಗೆಲ್ಲಿಸಿದರು. ತಾವು ಸಂಸದರಾದ ದಿನದಿಂದಲೂ ಜನರಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ಜನರನ್ನು ನೇರವಾಗಿ ಭೇಟಿಯಾಗುವುದು, ಪ್ರತಿ ವಿಚಾರಕ್ಕೂ ಸ್ಪಂದಿಸುವುದನ್ನು ಮಾಡುತ್ತಿದ್ದೆ. ಹಿಂದೆಲ್ಲಾ ಸಂಸದರೆಂದರೆ ದೇವರಿದ್ದಂತೆ, ದೇವಲೋಕದವರೇ ನೋ, ಇಲ್ಲಿ ಇಲ್ಲಿರಲ್ಲವೆಂಬ ಕಾಲವೂ ಇತ್ತು. ಆದರೆ, ಕಳೆದ ಐದಾರು ಚುನಾವಣೆಯಲ್ಲಿ ಸಂಸದರೆಂದರೆ ಜನರ ಸೇವಕ ಎಂಬುದನ್ನು ಮಾಡಿ ತೋರಿಸಿದ್ದೇವೆ ಎಂದರು.

      ಕಳೆದ ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಮನವಿ ಮಾಡಿದ್ದೇವು. ಈಗ ಮೋದಿ ಸಾಧನೆಯನ್ನು ಮುಂದಿಟ್ಟುಕೊಂಡು ಜನರಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದೇವೆ. ದಾವಣಗೆರೆ ಕ್ಷೇತ್ರದಲ್ಲಿ ಪ್ರತಿ ಕುಟುಂಬಕ್ಕೆ ಶೌಚಾಲಯ, ಬಡ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ, ಆಯುಷ್ಮಾನ್ ಭಾರತ್‍ದಡಿ ಯಾವುದೇ ಆಸ್ಪತ್ರೆಯಲ್ಲಿ 5 ಲಕ್ಷವರೆಗೆ ಉಚಿತ ಚಿಕಿತ್ಸೆ, ಜೀವನ ಸುರಕ್ಷಾ, ಕೃಷಿ ವಿಮಾ, ಮಣ್ಣು ಆರೋಗ್ಯ ಕಾರ್ಡ್, ಮುದ್ರಾದಡಿ ಜಿಲ್ಲೆಯಲ್ಲಿ 651 ಕೋಟಿ, ಸ್ಟಾರ್ಟ್ ಅಪ್, ಸ್ಟ್ಯಾಂಡ್ ಅಪ್ ಯೋಜನೆಯಡಿ ಸೌಲಭ್ಯ ಕಲ್ಪಿಸಿದ್ದೇವೆ ಎಂದು ಹೇಳಿದರು.

         ಪುಲ್ವಾಮಾ ದಾಳಿ ನಂತರ ಭಾರತೀಯ ಸೇನೆಗೆ ಮೋದಿ ಸರ್ಕಾರ ದಾಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ದೇಶಕ್ಕೆ ದಕ್ಷ ನಾಯಕನೆಂದರೆ ಮೋದಿ ಎಂಬುದು ಜನರ ಮನದಲ್ಲಿ ಬೇರೂರಿದೆ. ಕಳೆದ ಬಾರಿಗಿಂತಲೂ 2 ಪಟ್ಟು ಮೋದಿ ಅಲೆ, ಬಿಜೆಪಿ ಅಲೆ ಹೆಚ್ಚಾಗಿದೆ. ಮೋದಿ ಸರ್ಕಾರದ ಸಾಧನೆ, ಅಭಿವೃದ್ಧಿ, ಜನಪರ ಕಾರ್ಯಗಳ ಅಲೆಯೂ ಇದೆ. ರಾಜ್ಯದಲ್ಲಿ 22-23 ಕ್ಷೇತ್ರ ನಾವು ಗೆಲ್ಲುತ್ತೇವೆ. ಕೇಂದ್ರದಲ್ಲೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

        ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಇದೇ ನನ್ನ ಕಡೇ ಚುನಾವಣೆಯೆಂದು ಘೋಷಿಸಿದ್ದೇನೆ. 2024ಕ್ಕೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಬೇಕು, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು, ಪರ್ಟಿಲೈಸರ್ ಫ್ಯಾಕ್ಟರಿ, ಸೆಕೆಂಡ್ ಜನರೇಷನ್ ಎಥೆನಾಲ್ ಘಟಕ ಸ್ಥಾಪನೆ, ದಾವಣಗೆರೆ ರೈಲ್ವೆ ನಿಲ್ದಾಣ ಅಭಿವೃದ್ಧಿ, 2 ರೈಲ್ವೇ ಗೇಟ್‍ಗಳ ಸಮಸ್ಯೆಗೆ ಮುಕ್ತಿ, ಇಎಸ್ ಐ ಆಸ್ಪತ್ರೆ ಕಟ್ಟಡ ನಿರ್ಮಾಣ, ಜಿಲ್ಲಾಸ್ಪತ್ರೆಯಲ್ಲಿ 25 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸ, 11 ಕೋಟಿ ವೆಚ್ಚದಲ್ಲಿ ಹಳೆ ಹೆರಿಗೆ ಆಸ್ಪತ್ರೆಯ ಅಭಿವೃದ್ಧಿ ನನ್ನ ಗುರಿಯಾಗಿವೆ ಎಂದರು.

     ಕೆರೆಗಳನ್ನು ತುಂಬಿಸುವ ಯೋಜನೆಗೆ ಡಿಪಿಆರ್ ಮಾಡಿ, ಕರಡು ತಯಾರಿಸಲು ನಮ್ಮ ಶಾಸಕರಿಗೆ ಹೇಳಿದ್ದೇನೆ. ಸಮಗ್ರ ಕುಡಿಯುವ ನೀರು ಯೋಜನೆಗೆ ರಾಜ್ಯ ಸರ್ಕಾರ ಸಮೀಕ್ಷೆ ಕೈಗೊಂಡು, ಕೇಂದ್ರಕ್ಕೆ ಕಳಿಸಬೇಕು. ಆಗ ಕೇಂದ್ರದಿಂದ ಅನುಮೋದನೆ, ಮಂಜೂರಾತಿ ಕೊಡಿಸುವುದು ನನ್ನ ಜವಾಬ್ಧಾರಿಯೆಂದು ಹೇಳಿದ್ದೇನೆ. ಜಿಲ್ಲೆಯ 6 ಜನ ಬಿಜೆಪಿ ಶಾಸಕರು, ಇಬ್ಬರು ಮಾಜಿ ಸಚಿವರಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

     ಕೈಗಾರಿಕೆ ತರಲು 5ರಿಂದ 19 ಸಾವಿರ ಎಕರೆ ಭೂಮಿ ಸ್ವಾಧೀನವಾಗಬೇಕು. ಅದರಲ್ಲಿ 500 ಎಕರೆ ವಿಮಾನ ನಿಲ್ದಾಣಕ್ಕೆ, ಉಳಿದದ್ದಕ್ಕೆ ಕೈಗಾರಿಕೆ ತರುತ್ತೇನೆ. ಮೊದಲು ರಾಜ್ಯ ಸರ್ಕಾರ ಭೂಮಿ ಒದಗಿಸಲಿ. ಯಾವುದೇ ಕೈಗಾರಿಕೆ ಸ್ಥಾಪಿಸಲು ವಿಮಾನ ನಿಲ್ದಾಣ, ಭೂಮಿಯ ಅಗತ್ಯತೆ ಇರುತ್ತದೆ. ರೈಲ್ವೆ ಮಾರ್ಗ, ರಸ್ತೆ ಮಾರ್ಗವಿದ್ದು, ವಿಮಾನ ನಿಲ್ದಾಣವೂ ಆದಲ್ಲಿ ಸಾಕಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು.

       ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಿದ್ದರೆ ನಮ್ಮ ಕನಸಿನ, ಮಾದರಿ ದಾವಣಗೆರೆ ಜಿಲ್ಲೆ ಮಾಡುತ್ತಿದ್ದೆವು. ಮೇ.23ರ ಹೊತ್ತಿಗೆ ಮೈತ್ರಿ ಸರ್ಕಾರವಿರುವುದಿಲ್ಲವೆಂಬ ಮಾತು ಕೇಳಿ ಬರುತ್ತಿದೆ. ರಮೇಶ್ ಜಾರಕಿಹೊಳಿ ಸಹ ಇದೇ ಮಾತುಗಳನ್ನಾಡುತ್ತಿದ್ದಾರೆ. ನೋಡೋಣ ಏನು ಆಗುತ್ತದೆಯೋ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಈ ಸಂದರ್ಭದಲ್ಲಿ ನೀರಾವರಿ ತಜ್ಞ .ಸಿ.ನರಸಿಂಹಪ್ಪ, ಗಾಯತ್ರಿ ಸಿದ್ದೇಶ್ವರ, ಅಶ್ವಿನಿ ಶ್ರೀನಿವಾಸ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap