ಬೆಳೆ ಮೌಲ್ಯ ವರ್ಧನೆಯಿಂದ ಸಂಕಷ್ಟ ಪರಿಹಾರ

ದಾವಣಗೆರೆ:

      ರೈತ ಬೆಳೆದ ಬೆಳೆಗೆ ಮೌಲ್ಯ ವರ್ಧನೆ ಮಾಡಿಕೊಂಡಲ್ಲಿ ಅನ್ನದಾತನ ಸಂಕಷ್ಟ ಪರಿಹಾರ ಆಗಲು ಸಾಧ್ಯ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ಪ್ರತಿಪಾದಿಸಿದರು.

       ನಗರದ ರೇಣುಕಾ ಮಂದಿರದ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಸೋಮವಾರ ಪ್ರಗತಿಪರ ರೈತರೊಂದೊಇಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

       ರೈತ ಕೇವಲ ಬೆಳೆ ಬೆಳೆದರೆ ಸಾಲದು, ಅದನ್ನು ಮಾರುಕಟ್ಟೆ ತಂದು ಮೌಲ್ಯ ವರ್ಧನೆ ಮಾಡುವ ಜಾಣ್ಮೆ ಹೊಂದಬೇಕು. ಆಗ ಮಾತ್ರ ಅನ್ನದಾತ ಅನುಭವಿಸುತ್ತಿರುವ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗಲಿದೆ. ಅಲ್ಲದೆ, ಲಾಭ ಹೆಚ್ಚುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

          ಸಾವಯವ ಕೃಷಿಗೆ ಹಾಗೂ ಸಿರಿಧಾನ್ಯಗಳನ್ನು ಬೆಳೆಯಲು ಸರ್ಕಾರ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರ ಜತೆಗೆ ಸಿರಿಧಾನ್ಯ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಸಿರಿಧಾನ್ಯ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದು, ರೈತರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

        ಹಿಂದೆ ಕುಟುಂಬಕ್ಕೆ ಎಷ್ಟುಬೇಕೋ, ಅಷ್ಟು ದವಸಧಾನ್ಯಗಳನ್ನು ಬೆಳೆಯಲು ಮಾತ್ರ ಕೃಷಿ ಸೀಮಿತವಾಗಿತ್ತು. ಆಗ ರೈತರು ತಮ್ಮಲ್ಲಿದ್ದ ಧಾನ್ಯವನ್ನು ಇನ್ನೊಬ್ಬರಿಗೆ ಕೊಟ್ಟು ಅವರಿಗೆ ಬೇಕಾದ ದಾನ್ಯವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ, ಕಾಲ ಕ್ರಮೇಣ ಜನಸಂಖ್ಯೆ ಹೆಚ್ಚಾದ ಕಾರಣ ಆಗ ರೈತ ಬೆಳೆಯುತ್ತಿದ್ದ ಧಾನ್ಯದಲ್ಲಿ ಇಡೀ ದೇಶಕ್ಕೆ ಆಹಾರ ಒದಗಿಸಲಾಗುತ್ತಿರಲಿಲ್ಲ. ಆದ್ದರಿಂದ ಹೆಚ್ಚು ಆಹಾರ ಉತ್ಪಾದನೆ ಮಾಡುವ ಉದ್ದೇಶದಿಂದ ಸರ್ಕಾರವು ಹಸಿರು ಕ್ರಾಂತಿಯ ಹೆಸರಿನಲ್ಲಿ ರೈತರಿಗೆ ರಾಸಾಯನಿಕ ಗೊಬ್ಬರ ಮೂಲಕ ಹೆಚ್ಚು ಇಳುವರಿ ಪಡೆಯಲು ಉತ್ತೇಜನ ನೀಡಿತು. ಹೀಗೆ ರಾಸಾಯನಿಕ ಗೊಬ್ಬರದಿಂದ ಬೆಳೆಯಲಾದ ಕೃಷಿ ಉತ್ಪನ್ನಗಳು ವಿಷಪೂರತವಾಗಿ ಇಂದು ಮನುಷ್ಯನ ಆರೋಗ್ಯಕ್ಕೆ ಮಾರಕವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

      ಹೀಗೆ ರಾಸಾಯನಿಕ ಗೊಬ್ಬರ ಮತ್ತು ಕೀಟ ನಾಶಕದಿಂದ ಬೆಳೆಯುವ ಬೆಳೆಯಿಂದಾಗುವ ದುಷ್ಪರಿಣಾಮವನ್ನು ಅರಿತ ಸರ್ಕಾರವು ಈಗ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಸಾಮೂಹಿಕ ಕೃಷಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳುವ ರೈತನಿಗೆ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯುತ್ತಿದೆ. ಈಗಾಗಲೇ ಈ ಸೌಲಭ್ಯವನ್ನು ನೀಡಲು ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದರು.

       ರೈತ ಉತ್ಪನಗಳಿಗೆ ಮೌಲ್ಯ ವರ್ಧನೆಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುವುದರ ಜತೆಗೆ ಸಿರಿಧಾನ್ಯಗಳ ಸಂಸ್ಕರಣೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

      ಕೂಡ್ಲಗಿ ತಾಲ್ಲೂಕಿನ ಪ್ರಗತಿಪರ ಕೃಷಿಕ ಹೆಚ್.ವಿ. ಸಜ್ಜನ್ ಮಾತನಾಡಿ, ರೈತರು ತಮ್ಮ ಮಕ್ಕಳ ಮದುವೆ, ಸೀಮಂತ ಕಾರ್ಯಕ್ರಮಗಳ ಬಗ್ಗೆ ಕನಸು ಕಾಣುವಂತೆ ಕೃಷಿ ಕ್ಷೇತ್ರದಲ್ಲೂ ಶ್ರೀಮಂತ ಕನಸು ಕಾಣಬೇಕು. ಆಗ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದರು.

       ಭೂ ತಾಯಿಯ ಮಡಲಿನಲ್ಲಿರುವ ರೈತ ಶ್ರೀಮಂತ ಕನಸುಗಾರ ಆಗಬೇಕು. ಕೃಷಿ ಎಂದರೆ ಕೇವಲ ಬೆಳೆಯುವ, ಕೆಲಸ ಮಾಡುವುದು ಎಂಬ ಕಲ್ಪನೆ ಇದೆ. ಈ ಪರಿಕಲ್ಪನೆ ಸರಿಯಲ್ಲ. ಕೃಷಿಯಲ್ಲಿ ಮಾಡದಿರುವ ಕೆಲಸಕ್ಕೆ ಕೈ ಹಾಕಬೇಕು. ಬರಡು ಭೂಮಿಯಲ್ಲಿ ಬೆಳೆ ಬೆಳೆಯುವ ಛಲ ಹೊಂದಬೇಕು. ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

      ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಅಧ್ಯಕ್ಷ ಟಿ. ಕೃಪ, ಉಪ ಕೃಷಿ ನಿರ್ದೇಶಕಿ ಎಂ.ಆರ್. ಹಂಸವೇಣಿ, ಹರಪನಹಳ್ಳಿ ಉಪ ಕೃಷಿ ನಿರ್ದೇಶಕಿ ಜಿ.ಎಸ್. ಸ್ಪೂರ್ತಿ, ಪ್ರಗತಿಪರ ರೈತರಾದ ಹೆಚ್.ವಿ. ಸಜ್ಜನ್, ಕೊರಲೆ ಹೆಚ್.ಕೆ. ರಘು, ತರಳಬಾಳು ಕೃಷಿ ಕೇಂದ್ರದ ಮುಖ್ಯಸ್ಥ ದೇವರಾಜ್, ನಿವೃತ್ತ ಕೃಷಿ ಅಧಿಕಾರಿ ರಾಜಶೇಖರ್ ಇನ್ನಿತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap