ಇಂದಿರಾ ಆಡಳಿತಾವಧಿ ಸುವರ್ಣಯುಗ: ಡಿ.ಬಸವರಾಜ್

0
18

ದಾವಣಗೆರೆ:

      ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರ ಆಡಳಿತಾವಧಿಯು ಭಾರತದ ಬಡಜನತೆಗೆ ಸುವರ್ಣಕಾಲವಾಗಿತ್ತು ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಸ್ಮರಿಸಿದರು.

        ನಗರದ ಎಂ.ಸಿ.ಸಿ. ‘ಎ’ ಬ್ಲಾಕ್‍ನಲ್ಲಿರುವ ತಮ್ಮ ಗೃಹಕಛೇರಿಯಲ್ಲಿ ಜಿಲ್ಲಾ ಕಾಂಗ್ರೆಸ್‍ನ ಕಾರ್ಮಿಕ ವಿಭಾಗದಿಂದ ಶ್ರೀಮತಿ ಇಂದಿರಾಗಾಂಧಿಯವರ 34ನೇ ಪುಣ್ಯತಿಥಿ ಸಮಾರಂಭದಲ್ಲಿ ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

       ಇಂದಿರಾಗಾಂಧಿಯವರು ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕ್ಕಿದ್ದರಲ್ಲದೇ, ದೇಶಕ್ಕಾಗಿ ಅವರು ಸಲ್ಲಿಸಿದ ಅಪಾರ ಸೇವೆ, ಅನನ್ಯವಾಗಿದೆ. ಅವರ ಆಡಳಿತದ ಅವಧಿಯಲ್ಲಿ ದೇಶದಲ್ಲಿನ 14 ಖಾಸಗಿ ವಾಣಿಜ್ಯ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಮಾಡಿ ಶ್ರೀಸಾಮಾನ್ಯರು, ಬಡವರು, ರೈತರು, ಕಾರ್ಮಿಕರು, ಬ್ಯಾಂಕ್ ನೆರವು ಪಡೆದು ಆರ್ಥಿಕವಾಗಿ ಸಬಲತೆ ಹೊಂದುವಂತೆ ಮಾಡಿದ ದಿಟ್ಟ ಮಹಿಳೆ ಎಂದರು.

       ಭೂಸುಧಾರಣೆ ಕಾಯ್ದೆ ಜಾರಿಗೊಳಿಸಿ ಉಳುವವನೇ ಹೊಲದೊಡೆಯ ನೀತಿ ಅನ್ವಯ ಲಕ್ಷಾಂತರ ಬಡ ರೈತರಿಗೆ ಭೂಒಡೆತನ ನೀಡಿದರು. ದೇಶದಲ್ಲಿನ ಬಡತನ ನಿರ್ಮೂಲನೆಗಾಗಿ 20 ಅಂಶಗಳ ಕಾರ್ಯಕ್ರಮ ಜಾರಿ ಮಾಡಿದರು. ಬಡತನ ನಿರ್ವಹಣೆಗೆ ಗರೀಬಿ ಹಠಾವೋ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 15 ಅಂಶಗಳ ಕಾರ್ಯಕ್ರಮ ಜಾರಿಗೆ ತಂದಿದ್ದರು. ಅಲ್ಲದೆ, ಭಾರತದಲ್ಲಿ ಆಹಾರದ ಕೊರತೆ ಉಂಟಾದಾಗ ಕೃಷಿಗೆ ಹೆಚ್ಚಿನ ಒತ್ತು ನೀಡಿ ಹಸಿರುಕ್ರಾಂತಿ ಮಾಡಿ ಆಹಾರ ಸ್ವಾವಲಂಬನೆಗೆ ಪ್ರಯತ್ನಿಸಿ ಯಶಸ್ವಿಕಂಡಿದ್ದರು ಎಂದರು.

      ನೆರೆರಾಷ್ಟ್ರ ಪಾಕಿಸ್ತಾನವು ಭಾರತದೊಡನೆ ಯುದ್ಧಸಾರಿದಾಗ ಯುದ್ಧಭೂಮಿಗೆ ತೆರಳಿ ಸೈನಿಕರನ್ನು ಹುರುದುಂಬಿಸಿ ಭಾರತಕ್ಕೆ ಜಯತಂದು ಬಾಂಗ್ಲಾದೇಶ ಉದಯಕ್ಕೆ ಕಾರಣರಾದರು. ಇಂದಿರಾಗಾಂಧಿಯವರ ಆಡಳಿತ ಶೈಲಿ, ಸಾಧನೆಗಳನ್ನು ಕೊಂಡಾಡಿದ ಹಾಗೂ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಗೆಲವು ದೊರಕಿಸಿಕೊಟ್ಟಿದ್ದಕ್ಕಾಗಿ ಅಂದಿನ ವಿರೋಧಪಕ್ಷದ ನಾಯಕರಾಗಿದ್ದ ಅಟಾಲ್‍ಬಿಹಾರಿ ವಾಜಪೇಯಿರವರು ಲೋಕಸಭಾ ಅಧಿವೇಶನದಲ್ಲಿ ಇಂದಿರಾಗಾಂಧಿಯವರನ್ನು ದುರ್ಗಾದೇವಿಗೆ ಹೋಲಿಕೆ ಮಾಡಿ ಪ್ರಶಂಸಿದ್ದರು ಎಂದು ನೆನೆದರು.

         ಭಾರತ ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಜೀವನವನ್ನೇ ತ್ಯಾಗಮಾಡಿ ಅಮರರಾಗಿದ್ದಾರೆ. ತೊಟ್ಟಿಲು ತೂಗುವ ಕೈ ದೇಶದ ಚುಕ್ಕಾಣಿಯನ್ನು ಯಶಸ್ವಿಯಾಗಿ ನಡೆಸಬಲ್ಲರು ಎಂಬುದನ್ನು ಇಂದಿರಾಗಾಂಧಿಯವರು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಅವರ ವಿಚಾರಧಾರೆಗಳು ಕಾಂಗ್ರೆಸ್ ಪಕ್ಷಕ್ಕೆ ಅಡಿಪಾಯವಾಗಿದ್ದು, ಇಂದಿಗೂ ಅವರ ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷ ಮತ್ತು ದೇಶಕ್ಕೆ ಭದ್ರ ಬುನಾದಿಯಾಗಿವೆ ಎಂದರು.

         ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಅಲ್ಲಾವಲಿ ಘಾಜಿಖಾನ್ ವಹಿಸಿದ್ದರು. ಕೆ.ಪಿ.ಸಿ.ಸಿ. ಕಾರ್ಮಿಕ ವಿಭಾಗದ ರಾಜ್ಯಕಾರ್ಯದರ್ಶಿ ಆಶ್ರಫ್‍ಅಲಿ, ಕೆ.ಜಿ. ರಹಮತ್‍ವುಲ್ಲಾ, ಜಿಲ್ಲಾ ಕಾಂಗ್ರೆಸ್ ಮಹಿಳಾ ಮುಖಂಡರಾದ ದ್ರಾಕ್ಷ್ಯಯಣಮ್ಮ, ಮಮ್ತಾಜ್‍ಬೇಗಂ, ಉಮಾ ತೋಟಪ್ಪ, ರಾಜೇಶ್ವರಿ ಉಮೇಶ್, ಲಿಯಾಖತ್‍ಅಲಿ, ಅಬ್ದುಲ್ ಜಬ್ಬಾರ್, ನಿಟ್ಟುವಳ್ಳಿ ಪ್ರವೀಣ್, ಸಾಧಿಕ್‍ಖಾನ್, ಖಾಜಿಖಲೀಲ್, ಡಿ.ಶಿವಕುಮಾರ್, ಬಿ. ವಿನಾಯಕ, ಎಸ್.ಪಿ.ಎಸ್. ನಗರ ಹೆಚ್.ಹರೀಶ್, ರಮೇಶ್, ಬಿ.ಸಿ. ಬಸವರಾಜ್, ಹಯಾಜ್, ಮಹಮ್ಮದ್ ಸಾಬ್, ರೇವಣ್ಣ ಗೋಡಾಳ್, ಮಹಮ್ಮದ್ ಅಶ್ರಪ್, ಭೀಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here