ಅಂತರ್‍ ಜಿಲ್ಲಾ ರಸ್ತೆಗಳಲ್ಲಿ ಚೆಕ್‍ಪೋಸ್ಟ್: ಡಿಸಿ ರಾಮ್ ಪ್ರಸಾತ್

ಬಳ್ಳಾರಿ:

    ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಅಂತರ್‍ಜಿಲ್ಲಾ ಎಲ್ಲ ರಸ್ತೆಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಾಣ ಮಾಡಲಾಗುವುದು ಮತ್ತು ಹೆಚ್ಚಿನ ಚಲನವಲನವಿರುವ ತಾಲೂಕುಗಳ ಪ್ರಮುಖ ರಸ್ತೆಗಳಲ್ಲಿಯೂ ಚೆಕ್‍ಪೋಸ್ಟ್ ನಿರ್ಮಾಣ ಮಾಡಿ ಮತ್ತು ಈ ಚೆಕ್‍ಪೋಸ್ಟ್‍ಗಳಿಗೆ ಅಗತ್ಯ ಎಸ್‍ಎಸ್‍ಟಿ ಸಿಬ್ಬಂದಿಯನ್ನು ಕೂಡಲೇ ನಿಯೋಜಿಸಿ ಮತ್ತು ಇಂದಿನಿಂದಲೇ ಕಾರ್ಯಾರಂಭ ಮಾಡುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

       ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಸಂಬಂಧಿಸಿದ ಸಿದ್ಧತೆ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್‍ನಲ್ಲಿ ವಿಡಿಯೋ ಕಾನ್ಪರೆನ್ಸ್ ಮುಖಾಂತರ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ ಅವರು ಸೂಚನೆ ನೀಡಿದರು.

       ಸ್ಟಾಟಿಸ್ಟಿಕಲ್ ಸರ್ವೆಲೈನ್ಸ್ ಟೀಮ್(ಎಸ್‍ಎಸ್‍ಟಿ)ಗಳನ್ನು ಮೂರು ಶಿಫ್ಟ್‍ಗಳಲ್ಲಿ ಇಂದಿನಿಂದಲೇ ಕಾರ್ಯನಿರ್ವಹಿಸುವುದಕ್ಕೆ ಅಗತ್ಯ ವ್ಯವಸ್ಥೆ ಮಾಡಬೇಕು. ಈಗಾಗಲೇ ಮೊದಲ ಹಂತದಲ್ಲಿ 34 ಚೆಕ್‍ಪೋಸ್ಟ್‍ಗಳು ನಿರ್ಮಾಣ ಮಾಡಲಾಗಿದ್ದು, ತಮ್ಮ ತಮ್ಮ ತಾಲೂಕುಗಳಲ್ಲಿ ಹೆಚ್ಚುವರಿ ಚೆಕ್‍ಪೋಸ್ಟ್‍ಗಳು ಬೇಕಿದ್ದಲ್ಲಿ ಮಾಹಿತಿ ನೀಡಿ; ಆ ಕಡೆ ಹೆಚ್ಚುವರಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸುವುದಕ್ಕೆ ಅನುಮತಿ ನೀಡಲಾಗುವುದು. ಎಲ್ಲ ಚೆಕ್‍ಪೋಸ್ಟ್‍ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ, ರಿಜಿಸ್ಟರ್ ಬುಕ್, ಕುಡಿಯುವ ನೀರು, ಯಾವ ಚೆಕ್‍ಪೋಸ್ಟ್ ಎಂಬುದರ ಬಗ್ಗೆ ಮಾಹಿತಿ ಕಡ್ಡಾಯವಾಗಿ ಇರಬೇಕು ಎಂದರು.

      ರೌಡಿಗಳಿಂದ ಆಸ್ತಿ ಮುಚ್ಚಳಿಕೆ ಬರೆಸಿಕೊಳ್ಳಿ: ಚುನಾವಣಾ ಸಂದರ್ಭದಲ್ಲಿ ಜನರ ನಡುವೆ ವೈಮನಸ್ಸು ಬೆಳೆಸಿ ತಮ್ಮ ಬೆಳೆ ಬೆಯಿಸಿಕೊಳ್ಳುವವರ ಸಂಖ್ಯೆ ಜಾಸ್ತಿ ಇರುತ್ತದೆ; ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ಮುಕ್ತ,ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆ ದೃಷ್ಟಿಯಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಅತ್ಯಂತ ಅಚ್ಟುಕಟ್ಟಾಗಿ ಪಾಲನೆ ಮಾಡಿ ಎಂದು ಹೇಳಿದ ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೌಡಿಶೀಟರ್‍ಗಳಿಂದ ಆಸ್ತಿ ಮುಚ್ಚಳಿಕೆ ಬರೆಸಿಕೊಂಡಂತೆ ಈ ವರ್ಷವೂ ಅವರಿಗೆ ನೋಟಿಸ್ ಜಾರಿ ಮಾಡಿ ಆಸ್ತಿ ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಳ್ಳಬೇಕು. ರೌಡಿಶೀಟರ್‍ಗಳ ಪರೇಡ್ ಮಾಡಿಸಿ ಶಾಂತಿಸುವ್ಯವಸ್ಥೆಗೆ ಅಲ್ಪಸ್ವಲ್ಪ ದಕ್ಕೆ ತಂದರೂ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಬೇಕು ಎಂದರು.

      ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದವರಿಗೂ ಈ ಬಾರಿ ನೋಟಿಸ್ ಜಾರಿ ಮಾಡಿ ಅವರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳುವಂತೆ ಸೂಚನೆ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಅವರು, ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ; ಏನೆ ಸಮಸ್ಯೆ ಉಂಟಾದರೇ ತಕ್ಷಣ ಮಾಹಿತಿ ನೀಡಿ ಎಂದರು.

      ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಪ್ರಕರಣ ದಾಖಲಿಸಿ; ಆದರೇ ಯಾರನ್ನೂ ಕೂಡ ಚುನಾವಣಾ ನೆಪದಲ್ಲಿ ವಿನಾಕಾರಣ ಪೀಡಿಸಬೇಡಿ ಎಂದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ, ಸಹಾಯಕ ಆಯುಕ್ತ ರಮೇಶ ಕೊನಪ್ಪರೆರಡ್ಡಿ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಿವಿಧ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap