ರಾಷ್ಟ್ರವಲ್ಲ, ಅಂತರಾಷ್ಟ್ರೀಯ ನಾಟಕೋತ್ಸವ ನಡೆಯಲಿ

ಸಾಣೇಹಳ್ಳಿ:

         ರಾಷ್ಟ್ರೀಯ ನಾಟಕೋತ್ಸವವನ್ನು ಪ್ರತಿ ವರ್ಷವೂ ಅಂತರಾಷ್ಟ್ರೀಯ ನಾಟಕೋತ್ಸವವನ್ನಾಗಿ ಆಚರಿಸಬೇಕು. ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ರಾಜ್ಯ ಸರ್ಕಾರ ಮಾಡಿಕೊಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದರು.

          ಇಲ್ಲಿನ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಮಠದ ಪರಂಪರೆಯಿರುವ ತುಮಕೂರಿನ ಸಿದ್ಧಗಂಗ ಕ್ಷೇತ್ರದಿಂದ ಬಂದವನು. ನನಗೆ ಮಠದ ತ್ಯಾಗ ಮನೋಭಾವದ ಬಗ್ಗೆ ತಿಳಿದಿದೆ. ಸಿದ್ಧಗಂಗ ಶ್ರೀಗಳು ತುಮಕೂರಿನಲ್ಲಿ ಶ್ರಮಿಸುತ್ತಿರುವಂತೆ ಸಾಣೇಹಳ್ಳಿಯಲ್ಲಿ ಕಲೆಯ ಉಳಿವಿಗಾಗಿ ಪಂಡಿತಾರಾಧ್ಯ ಶ್ರೀಗಳು ಶ್ರಮಿಸುತ್ತಿದ್ದಾರೆಂದು ಶ್ಲಾಘಿಸಿದರು.

         ಕಲೆ, ನಾಟಕ, ಸಂಗೀತ ಮುಂತಾದ ಸಾಂಸ್ಕತಿಕ ಮನೋಭಾವವೇ ನಮ್ಮ ದೇಶದ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ನಮ್ಮ ದೇಶವನ್ನು ಈ ಹಿಂದೆ ಸುಸಂಸ್ಕತ ದೇಶವೆಂದು ಭಾವಿಸಿದ್ದರು. ಆದರೆ, ಆಧುನಿಕ ಭಾರತ ಬೇರೊಂದು ಭಾರತವಾಗಿ ರೂಪಗೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ಹಿಂದೆ ಇದ್ದ ಗೌರವ ಇಂದು ಇಲ್ಲವಾಗಿದೆ. ಬಸವಣ್ಣ ವಿಶ್ವಕ್ಕೆ ಸಂದೇಶಕೊಟ್ಟವರು.

          ಅಂಬೇಡ್ಕರ್ ದೇಶಕ್ಕೆ ಸಂವಿಧಾನವನ್ನು ಕೊಟ್ಟವರು. ಭಾರತೀಯರೆಲ್ಲರೂ ಒಂದೆ ಎನ್ನುವ ಸಂಕಲ್ಪ ಸಂವಿಧಾನದ್ದಾಗಿದೆ. ಇದೇ ಸಂದೇಶವನ್ನು ನಾಟಕಗಳ ಮೂಲಕ ಜಗತ್ತಿಗೆ ಕಳುಹಿಸುವ ಕೆಲಸವನ್ನು ಸ್ವಾಮೀಜಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲೂ ರಂಗಭೂಮಿಯ ಸಂಸ್ಕತಿ ಉಳಿಯಬೇಕು. ರಾಜಕಾರಣಿಗಳು ಒಂದು ಸಭೆ ಮಾಡಲು ಸಾಕಷ್ಟು ಕಷ್ಟ ಪಡುತ್ತೇವೆ.

          ಆದರೆ ಇಷ್ಟು ಜನರನ್ನು ಸ್ವಾಮಿಜಿಗಳು ಸೇರಿಸಿರುವುದು ಅವರ ತ್ಯಾಗ ಮನೋಭಾವವನ್ನು ತೋರಿಸುತ್ತದೆ. ಕಳೆದ 21 ವರ್ಷಗಳಿಂದ ನಾಟಕೋತ್ಸವ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಪದವಿ ಪಡೆಯುವುದೇ ಶಿಕ್ಷಣದ ಉದ್ದೇಶವಲ್ಲ; ವಿವೇಕವಂತರನ್ನಾಗಿ ರೂಪಿಸುವುದೇ ಶಿಕ್ಷಣದ ಉದ್ದೇಶ ಎಂದರು.

         ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಭಗವಂತ ನಮಗೆಲ್ಲ ಒಂದೊಂದು ಪಾತ್ರವನ್ನು; ರೈತ, ರಾಜಕಾರಣಿ, ಸೇವಕ, ಅಧಿಕಾರಿ ಮುಂತಾದ ಪಾತ್ರ ಕೊಟ್ಟಿದ್ದಾನೆ. ಆಯಾಯ ಪಾತ್ರಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಭಗವಂತ ಎಂದಿಗೂ ಮೆಚ್ಚುವುದಿಲ್ಲ. ಜನ ಬಯಸಿದ್ದನ್ನು ಕೊಡುವುದು ಮುಖಂಡನ ಕೆಲಸವಲ್ಲ; ಜನರಿಗೆ ಏನು ಬೇಕೋ ಅದನ್ನು ತಿಳಿದು ಕೊಡುವುದು ನಿಜವಾದ ಮುಖಂಡನ ಕೆಲಸ ಎಂದರು.

         ದಿನದಿಂದ ದಿನಕ್ಕೆ ಸರಕಾರ, ಸಮಾಜ, ಸ್ವಾಮಿಗಳು ನೈತಿಕ ಅಧೋಗತಿಗೆ ಇಳಿಯುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಆಲೋಚನೆಗಳು, ನಂಬಿಕೆಗಳು ಸ್ಥಾವರವಾಗಿರುವುದು. ಜಂಗಮದ ಪ್ರತಿರೂಪ ಚಕ್ರ. ಈ ಚಕ್ರ ಚಲನಶೀಲತೆಯನ್ನು ಹೊಂದಿರುವುದು ಎಂದ ಅವರು, ಇಂದು ಹೊಸ ಹೊಸ ದೇವಸ್ಥಾನಗಳನ್ನು ಕಟ್ಟುವ ಸ್ಪರ್ಧೆ ಎಲ್ಲೆಡೆ ನಡೆದಿದೆ. ದೇವಸ್ಥಾನವನ್ನು ಕಟ್ಟುವ ಮೊದಲು ಮನಸ್ಸುಗಳನ್ನು ಕಟ್ಟಬೇಕು ಎಂದು ನುಡಿದರು.

         ಕರ್ನಾಟಕ ವಿಧಾನ ಪರಿಷತ್‍ನ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ಈ ನಾಡನ್ನು, ದೇಶವನ್ನು ಸುಧಾರಿಸಲು ಸ್ವಾಮಿಜಿಗಳಾದವರೆಲ್ಲರೂ ಪಂಡಿತಾರಾಧ್ಯ ಶ್ರೀಗಳಾಗಬೇಕು. ಸಮಾಜಕ್ಕೆ ಕೊಡುಗೆ ನೀಡುವವರು ಮಾತ್ರ ನಿಜ ಸ್ವಾವಿಮೀಜಿಗಳಾಗಲು ಸಾಧ್ಯ. ಪಂಡಿತಾರಾಧ್ಯ ಶ್ರೀಗಳು ಬಸವಣ್ಣನವರ ನೂರಕ್ಕೆ ನೂರರಷ್ಟು ಆಶಯವನ್ನು ಅನುಷ್ಟಾನಗೊಳಿಸುತ್ತಿದ್ದಾರೆ ಎಂದರು.

         ಸರಕಾರ ಮಾಡುವ ಕೆಲಸವನ್ನು ಪಂಡಿತಾರಾಧ್ಯ ಶ್ರೀಗಳು ಮಾಡುತ್ತಿದ್ದಾರೆ. ಆದರೆ, ಟಿವಿಯಲ್ಲಿ ಮುಂಜಾನೆ ಕೆಲ ಸ್ವಾಮಿಗಳು ಭವಿಷ್ಯ ಹೇಳುವ ಮೂಲಕ ಮೂಢನಂಬಿಕೆಯನ್ನು ಜನರಲ್ಲಿ ಬಿತ್ತುವ ಮಾನಸಿಕ ಭಯೋತ್ಪಾದಕರಾಗಿದ್ದಾರೆ. ನನ್ನ ತಂಗಿಯ ಮಗಳು ಇವರ ಮಾತನ್ನು ಕೇಳಿ ಸ್ವಂತ ಅತ್ತೆ-ಮಾವಂದಿರನ್ನು ಮನೆಯಿಂದ ಹೊರಗಿಟ್ಟಿದ್ದಳು. ಅವಳನ್ನು ಸರಿದಾರಿಗೆ ತರಲು ಸಾಕುಸಾಕಾಯಿತು. ಇಂಥ ಮೌಢ್ಯವನ್ನು ಬಿತ್ತುವ ಸ್ವಾಮಿಗಳನ್ನು ನಿಯಂತ್ರಿಸುವ ಕಾನೂನಿನ ಬಗ್ಗೆ ಸದನದಲ್ಲಿ ಚರ್ಚಿಸಲಾಗುವುದು ಎಂದರು.

         ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನಾಗಮೋಹನದಾಸ್ ಮಾತನಾಡಿ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಹುಟ್ಟಿದಂತಹ ದೇಶ ನಮ್ಮದು. ಅವರ ಆಶಯಗಳನ್ನು ನಮ್ಮ ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಆದರೆ ಆ ಆಶಯಗಳು ಪೂರ್ಣಪ್ರಮಾಣದಲ್ಲಿ ಈಡೇರಿಲ್ಲ. ಇದಕ್ಕೆ ಕಾರಣ ಅನುಷ್ಠಾನಗೊಳಿಸುವ ನಾವೇ ಹೊರತು ಸಂವಿಧಾನವಲ್ಲ. ನಮ್ಮ ಸರಕಾರಗಳು ಈ ನಿಟ್ಟಿನಲ್ಲಿ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ಸಂವಿಧಾನ ಕತೆ, ಕಾದಂಬರಿ, ಕವಿತೆಯಲ್ಲ; ಅದೊಂದು ರಾಜಕೀಯ ಕಾರ್ಯಕ್ರಮ. ಉಳುವವನಿಗೆ ಭೂಮಿ, ದುಡಿಯುವವನಿಗೆ ಕೂಲಿ ಕೊಡುವ ಕಾರ್ಯಕ್ರಮ. ವಿದ್ಯಾವಂತ, ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಕಾರ್ಯಕ್ರಮ. ಶೇ. 20 ರಷ್ಟಿದ್ದ ಅಕ್ಷರಸ್ಥರ ಸಂಖ್ಯೆ ಶೇ. 80 ರಷ್ಟು ಅಕ್ಷರಸ್ಥರಾಗಿದ್ದೇವೆಯೇ ಹೊರತು ವಿವೇಕವಂತರಾಗಿಲ್ಲ. ನಾಟಕಗಳು ಇಂಥ ವಿವೇಕವನ್ನು ಬೆಳೆಸುವನಿಟ್ಟಿನಲ್ಲಿ ಸಮರ್ಥವಾಗಿವೆ ಎಂದರು.

        ಸಂಸದ ಜಿ ಎಂ ಸಿದ್ಧೇಶ್ವರ `ಅಭಿವ್ಯಕ್ತಿ ಸ್ವಾತಂತ್ರ ’ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕ ಬಿ ಜಿ ಗೋವಿಂದಪ್ಪ `ಶಿವಸಂಚಾರ ಭಿತ್ತಿ ಪತ್ರ’ ಬಿಡುಗಡೆ ಮಾಡಿದರು. ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ `ನಾಟಕೋತ್ಸವದ ಕೈಪಿಡಿ’ ಲೋಕಾರ್ಪಣೆಗೊಳಿಸಿದರು. ವಿಧಾನಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ `ಜೀವನ ಮೌಲ್ಯ’ ಕೃತಿ ಬಿಡುಗಡೆಗೊಳಿಸಿದರು. ಹಿರಿಯ ಪತ್ರಕರ್ತ ರವೀಂದ್ರಭಟ್ ಐನಕೈ `ಹುರುಳಿಲ್ಲದ ಸಿರಿ’ ಕೃತಿಯನ್ನು ಬಿಡುಗಡೆ ಮಾಡಿದರು.

         ಕನ್ನಡ ಮತ್ತು ಸಂಸ್ಕತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ದಾವಣಗೆರೆ ಉದ್ಯಮಿ ಅಣಬೇರು ರಾಜಣ್ಣ, ಬೆಂಗಳೂರಿನ ದೀಪಾ ಆರ್ ಭಟ್, ಚಳ್ಳಕೆರೆಯ ಶಾಸಕ ರಘುಮೂರ್ತಿ ಕಾರ್ಯಕ್ರಮದಲ್ಲಿದ್ದರು.

         ಶಿವಸಂಚಾರದ ಜ್ಯೋತಿ, ದಾಕ್ಷಾಯಣಿ, ನಾಗರಾಜ್, ಸತೀಶ್ ವಚನಗೀತೆ, ಕನ್ನಡಗೀತೆ, ಭಾವಗೀತೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು. ಸಾಣೇಹಳ್ಳಿಯ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀಶಿವಕುಮಾರ ಪ್ರಾಥಮಿಕ ಶಾಲೆಯ ಮಕ್ಕಳು ಆಕರ್ಷಕವಾಗಿ ನೃತ್ಯರೂಪಕವನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿ ಆರ್ ಕೆ ತನುಜ ಸ್ವಾಗತಿಸಿದರು. ಭೂಮಿಕಾ ಮತ್ತು ಚೈತ್ರಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ನಂತರ ಊರು ಸುಟ್ಟರೂ ಹನುಮಪ್ಪ ಹೊರಗ ನಾಟಕ ಪ್ರದರ್ಶನವಾಯಿತು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap