ಜನ ಸಂಪರ್ಕ ಸಭೆ

0
15

ಮೊಳಕಾಲ್ಮುರು 

        ಜನ ಸಂಪರ್ಕ ಸಭೆಯು ಬೂಟಾಟಿಕೆಯ ಕಾರ್ಯಕ್ರಮವಾಗದೆ ಜನೋಪಯೋಗಿ ಕಾರ್ಯಕ್ರಮವಾಗಬೇಕಾಗಿದೆ ಎಂದು ಸಂಸದ ಬಿ.ಎನ್.ಚಂದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

      ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಚಿತ್ರದುರ್ಗ . ತಾಲ್ಲೂಕು ಆಡಳಿತ ಮೊಳಕಾಲ್ಮುರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

         ಈ ಹಿಂದೆ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣ ಭೈರೇಗೌಡರು ಬರ ಅಧ್ಯಯನ ವೀಕ್ಷಣೆಗೆ ಬಂದಂತಹ ಸಂದರ್ಭದಲ್ಲಿ ನಾನು ಸಹ ಜೊತೆಯಲ್ಲಿದ್ದು , ಬರ ಪರಿಸ್ಥಿತಿ ಮತ್ತು ಜನರ ಸಮಸ್ಯೆಗಳನ್ನು ಆಲಿಸಿ , ಗ್ರಾಮ ವಾಸ್ತವ್ಯದ ಬದಲು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನಸಂಪರ್ಕ ಸಭೆಗಳನ್ನು ಮಾಡಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

          ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳಿಗಿಂತ ಜನಸಂಪರ್ಕ ಕಾರ್ಯಕ್ರಮ ಮಹತ್ವಪೂರ್ಣವಾದ ಕಾರ್ಯಕ್ರಮವಾಗಿದೆ ಎಂಬ ವಾಸ್ತವತೆಯ ಆಧಾರದ ಮೇಲೆ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿರುವ ಜನ ಸಂಪರ್ಕ ಸಭೆ ಜನರ ಸಮಸ್ಯೆಗೆ ಸೂಕ್ತ ಪರಿಹಾರ ದೊರಕಿಸುವ ಕಾರ್ಯಕ್ರಮವಾಗಬೇಕಾಗಿದೆ ಎಂದು ತಿಳಿಸಿದರು.

          ಸಾರ್ವಜನಿಕರ ಸಮಸ್ಯೆಗಳಿಗೆ ಪರದಾಡುವಂತಹ ಪರಿಸ್ಥಿತಿಯನ್ನು ತಪ್ಪಿಸಿ ಆಯಾ ಜನ ವಸತಿ ಪ್ರದೇಶಗಳಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಜನ ಸಂಪರ್ಕ ನಡೆಸುವ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವುದರೊಂದಿಗೆ 15 ದಿನಗಳಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕಾಗಿದೆ ಎಂದು ಹೇಳಿದರು.

          ಮಹಾನ್ ದಾರ್ಶನಿಕರ ಜಯಂತಿಗಳು ರಜಾ ದಿನಗಳಾಗಿ ಅಧಿಕಾರಿಗಳು ಸೊಂಬೇರಿಗಳಾಗುವ ಬದಲಿಗೆ ಬಸವಣ್ಣನವರ ಸಿದ್ದಾಂತದಂತೆ ಕಾಯಕವೇ ಕೈಲಾಸ ಎಂಬ ತತ್ವದಂತೆ ಸಾರ್ವಜನಿಕ ಬದುಕಿಗೆ ಅನುವಾಗುವಂತಹ ಸೇವೆಯೊಂದಿಗೆ ಕಾರ್ಯ ನಿರ್ವಹಿಸುವುದು ಮಹಾನ್ ದಾರ್ಶನಿಕರ ಸಿದ್ದಾಂತಕ್ಕೆ ಬದ್ದರಾಗಬೇಕಾಗಿದೆ ಎಂದು ತಿಳಿಸಿದರು.

          ಡಾ.ಬಾಬ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದ ಪರಿಕಲ್ಪನೆಗಳು , ಆಶಯಗಳು ಜಾರಿಯಾಗಬೇಕಾದರೆ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿರುತ್ತದೆ.

         ಅತ್ಯಂತ ಹಿಂದುಳಿದ ಮತ್ತು ಸತತ ಬರಗಾಲದಿಂದ ತತ್ತರಿಸಿರುವ ತಾಲ್ಲೂಕಿನ ಮೂಲಭೂತ ಸಮಸ್ಯೆಗಳ ನಿವಾರಣೆಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ 371 ಜೆ ಕಾಲಂ ಜಾರಿಗಾಗಿ ಪಕ್ಷಾತೀತವಾಗಿ , ಜ್ಯಾತ್ಯಾತೀತವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕಾಗಿದೆ ಎಂದು ಹೇಳಿದರು.

          ಕಾರ್ಯಕ್ರಮದಲ್ಲಿ ಶಾಸಕ ಬಿ.ಶ್ರೀ ರಾಮುಲು ಮಾತನಾಡಿ ಹಿಂದುಳಿದ ಹಾಗೂ ಬರದಿಂದ ಸಂಕಷ್ಟದ ಸುಳಿಯಲ್ಲಿರುವ ತಾಲ್ಲೂಕಿನ ಮೂಲಭೂತ ಸಮಸ್ಯೆಗಳಾದ 371 ಜೆ ಕಾಲಂ ಜಾರಿಗೆ ಒತ್ತಾಯ , ಮಾಚೇನಹಳ್ಳಿಯಲ್ಲಿ 24 ಜನ ದುರ್ಘಟನೆಯಿಂದ ಸಾವನ್ನಪ್ಪಿದವರಿಗೆ ಪರಿಹಾರ ಒದಗಿಸುವುದು , ಕುಡಿಯುವ ನೀರಿನ ತುಂಗಾ ಭದ್ರಹಿನ್ನೀರು ಯೋಜನೆ ಶೀಘ್ರ ಜಾರಿಗೆ ಶ್ರಮಿಸುವುದು , ಫಸಲ್ ಭೀಮಾ ಯೋಜನೆಯಿಂದ ರೈತರಿಗೆ ಪರಿಹಾರ ಕೊಡಿಸುವುದು, ಸಾಗುವಳಿ ಉಳುಮೆದಾರರಿಗೆ ಸಾಗುವಳಿ ಚೀಟಿ ವಿತರಿಸುವುದು , ಸಿಡ್ಲಹಳ್ಳದ ಮೂಲಕ ಹರಿಯುವ ನೀರನ್ನು ರಂಗಯ್ಯನದುರ್ಗ ಜಲಾಶಯಕ್ಕೆ ತರುವುದು ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದು ಹೇಳಿದರು.

          ಪ್ರಾಸ್ತವಿಕವಾಗಿ ಜಿಲ್ಲಾಧಿಕಾರಿ ವಿನೋದಪ್ರಿಯ ಮಾತನಾಡಿ ಸಾರ್ವಜನಿಕರ ಸಮಸ್ಯೆಗಳಿಗೆ 15 ದಿನಗಳೊಳಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನಸಂಪರ್ಕ ಸಭೆಯು ಮಹತ್ವಪೂರ್ಣವಾದ ಕಾರ್ಯಕ್ರಮವಾಗಿದ್ದು , ಕಾರ್ಯಕ್ರಮದ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಭೆಗೆ ಸಲ್ಲಿಸುವ ಮೂಲಕ ಸೂಕ್ತ ಪರಿಹಾರ ಪಡೆಯಬಹುದಾಗಿದೆ ಎಂದು ಹೇಳಿದರು.

          ಬಿ.ಜಿ.ಕೆರೆ ಜಿ.ಪಂ. ಸದಸ್ಯ ಹಾಗೂ ಮೊಳಕಾಲ್ಮುರು ವಿಧಾನ ಸಭಾ ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೇಶ್ ಬಾಬು ಮಾತನಾಡಿ ಹಿಂದುಳಿದ ಹಾಗೂ ಬರದಿಂದ ಜನ ಮತ್ತು ಜಾನುವಾರುಗಳು ವಿಷಮ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು , ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸಾರ್ವಜನಿಕರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

         ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಸಭೆಗೆ ಆಗಮಿಸಿ ಪ್ರತಿಭಟನೆ ನಡೆಸುವ ಮೂಲಕ ಬೇಕಾಬಿಟ್ಟಿಯಾಗಿ ತಾಲ್ಲೂಕಿಗೆ ಆಗಮಿಸಿದ ಬರ ಅಧ್ಯಯನ ತಂಡ ರಾತ್ರಿ ವೇಳೆಯಲ್ಲಿ ಯಾವ ಮಾಹಿತಿ ಪಡೆಯಲು ಸಾಧ್ಯ . ಅಂತಹ ಕಾಟಾಚಾರದ ಬೇಟಿಯಿಂದ ಉಪಯೋಗವಿಲ್ಲ ಮತ್ತೊಮ್ಮೆ ಬರಅಧ್ಯಯನ ತಂಡ ಆಗಮಿಸಿ ವಾಸ್ತವಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವ ಮೂಲಕ ಸಂಕಷ್ಟದ ಸುಳಿಯಲ್ಲಿರುವ ಜನತೆಗೆ ಸೂಕ್ತ ಪರಿಹಾರ ಒದಗಿಸಬೇಕಾದೆ ಎಂದು ಆಗ್ರಹಿಸಿ ಶಾಸಕ ಬಿಶ್ರೀರಾಮುಲು , ಸಂಸದ ಬಿ.ಎನ್.ಚಂದ್ರಪ್ಪ ಇವರಿಗೆ ಮನವಿ ಸಲ್ಲಿಸಿದರು.

            ಜಿಲ್ಲಾಡಳಿತ , ಜಿಲ್ಲಾ ಪಂಚಾಯಿತಿ , ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆಗಳ ಮೂಲಕ ದೊರೆಯುವ ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರಿಂದ 192 ಅಹವಾಲುಗಳು ಸ್ವೀಕೃತವಾಗಿದ್ದು , ಸೂಕ್ತ ಪರಿಹಾರ ಒದಗಿಸಲಾವುದು ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು.

         ಸಂದರ್ಭದಲ್ಲಿ ಎಂ.ಎಲ್.ಸಿ. ಜಯಮ್ಮ , ಪ್ರೋಬೆಷನರಿ ಡಿ.ಸಿ. ನಂದಿನಿದೇವಿ , ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ , ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ , ಉಪವಿಭಾಗಾಧಿಕಾರಿ ವಿಜಯಕುಮಾರ್ , ತಹಶೀಲ್ದಾರ್ ಜಿ.ಕೊಟ್ರೇಶ್ , ಹಾನಗಲ್ ಜಿ.ಪಂ.ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ , ಮುಖಂಡರಾದ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ , ಜಗಲೂರಯ್ಯ , ಪಟೇಲ್ ಪಾಪನಾಯಕ , ದಾನಸೂರಯ್ಯ , ನಾಗರಾಜ ಕಟ್ಟೆ , ತಾ.ಪಂ.ಅಧ್ಯಕ್ಷೆ ಲತಮ್ಮ , ಪ.ಪಂ.ಅಧ್ಯಕ್ಷ ಜಿ.ಪ್ರಕಾಶ್ , ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ವಿರೇಶ್ , ತಾ.ಪಂ. ಸದಸ್ಯರಾದ ಟಿ.ಜಿ.ಬಸಣ್ಣ , ನರೇಂದ್ರಬಾಬು , ಬೋರಮ್ಮ , ಮುಖಂಡರಾದ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here