ಫೆ.13ರಿಂದ ಜಾತ್ರಾಮಹೋತ್ಸವ, ಅಗತ್ಯ ಸಿದ್ಧತೆಗೆ ಸೂಚನೆ

ದಾವಣಗೆರೆ :

       ಬಂಜಾರ ಸಮುದಾಯದ ಕುಲಗುರು ಶ್ರೀ ಸಂತ ಸೇವಾಲಲ್ ಅವರ ಜಯಂತಿಯ ಪ್ರಯುಕ್ತ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ.13ರಿಂದ 15ರ ವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ ನಡೆಸಬೇಕೆಂದು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

         ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಶ್ರೀಸಂತ ಸೇವಾಲಾಲರ 280ನೇ ಜನ್ಮ ದಿನಾಚರಣೆ ಅಂಗವಾಗಿ ಸೂರಗೊಂಡನಕೊಪ್ಪದಲ್ಲಿ ಜರುಗಲಿರವ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಕುರಿತು ಚರ್ಚಿಸಲು ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

        ಸೂರಗೊಂಡನಕೊಪ್ಪ ಶ್ರೀಸಂತಸೇವಾಲಾಲರ ಜನ್ಮ ಸ್ಥಳವಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಸುಮಾರು ಎರಡೂವರೆಯಿಂದ ಮೂರು ಲಕ್ಷ ಜನ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಕುಡಿಯುವ ನೀರು, ಪ್ರಸಾದ, ಧಾರ್ಮಿಕ ಆಚರಣೆಗೆ ಸೂಕ್ತ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಅನಿಯಮಿತ ವಿದ್ಯುತ್ ವ್ಯವಸ್ಥೆ, ಕಾನೂನು ಶಿಸ್ತು ಪರಿಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

         ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಸಮಾಜ ಕಲ್ಯಾಣ ಸಚಿವರಾದ ಪ್ರಿಯಾಂಕ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್, ಅರಣ್ಯ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.

         ಫೆ.14ರ ಬೆಳಿಗ್ಗೆ ನೀರಿನ ಅವಶ್ಯಕತೆ ಹೆಚ್ಚಿದ್ದು ಸುಮಾರು 40 ರಿಂದ 50 ಟ್ಯಾಂಕರ್ ನೀರುಬೇಕಾಗಿದ್ದು, ಇದಕ್ಕಾಗಿ 20 ರಿಂದ 30 ಟ್ರಾಕ್ಟರ್‍ಗಳನ್ನು ನಿಯೋಜಿಸಬೇಕು. ಅಡುಗೆ ಮಾಡುವ ಸ್ಥಳ ಸೇರಿದಂತೆ ಇತರೆಡೆಯೂ ಅವಶ್ಯಕತೆಕನುಗುಣವಾಗಿ ನೀರು ಸರಬರಾಜು ಮಾಡಬೇಕು. ನೀರು ಖಾಲಿಯಾದ ತಕ್ಷಣ ಪುನಃ ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು. ಇದಕ್ಕೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಜೊತೆಗೆ 4 ರಿಂದ 5 ಜನ ಅಧಿಕಾರಿಗಳನ್ನು ನೇಮಿಸಬೇಕು. ನೀರಿನ ವ್ಯವಸ್ಥಿತ ಸರಬರಾಜಿಗೆ ಒಂದು ಹೆಲ್ಪ್‍ಲೈನ್ ತೆರೆದು ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದು ವ್ಯವಸ್ಥೆ ಮಾಡಬೇಕೆಂದು ಹೇಳಿದರು.

        ಚಿನ್ನಿಕಟ್ಟೆಯಿಂದ ಹೊಸ ಜೋಗ ಮುಖಾಂತರ ಸೂರಗೊಂಡನಕೊಪ್ಪ ರಸ್ತೆ ದುರಸ್ತಿಗೊಳಿಸಬೇಕಾಗಿದೆ. ಅದರಲ್ಲೂ ಹೊಸಜೋಗದಿಂದ ಸೂರಗೊಂಡನಕೊಪ್ಪದವರೆಗೆ ರಸ್ತೆ ಮೋಟರಬಲ್ ಆಗಬೇಕೆಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸೂಚಿಸಿದರು.

ಸಿಸಿ ಟಿವಿ ಅಳವಡಿಕೆ:

      ಫೆ. 13, 14 ಮತ್ತು 15 ರಂದು ಭಕ್ತಾದಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ವಿಶೇಷ ಅತಿಥಿಗಳು ಸೇರಿದಂತೆ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಕೆಆರ್‍ಐಡಿಎಲ್ ವತಿಯಿಂದ ನಿರ್ವಹಿಸಬೇಕು. ಸುಮಾರು 35 ರಿಂದ 40 ಕೌಂಟರ್‍ಗಳಲ್ಲಿ ಆಹಾರ ವಿತರಣೆಗೆ ವ್ಯವಸ್ಥೆ ಮಾಡಬೇಕು ಹಾಗೂ ಅಡುಗೆ ತಯಾರಿಸುವ, ಊಟದ ಪ್ರದೇಶದಲ್ಲಿ ಸುರಕ್ಷತಾ ದೃಷ್ಟಿಯಿಂದ ಸಿಸಿ ಟಿವಿಗಳನ್ನು ಅಳವಡಿಸಬೇಕೆಂದು ಹೇಳಿದರು.

        ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಶಿವಮೊಗ್ಗ, ಶಿಕಾರಿಪುರ, ಹರಿಹರ, ಹೊನ್ನಾಳಿ, ರಾಣೆಬೆನ್ನೂರು, ದಾವಣಗೆರೆ, ಚನ್ನಗಿರಿ ಮತ್ತು ಭದ್ರಾವತಿಗಳಿಂದ ಸೂರಗೊಂಡನಕೊಪ್ಪದ ಭಾಯಾಗಡ್‍ವರೆಗೆ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವೇಳೆಯಲ್ಲಿ ಮಾತನಾಡಿದ ಸಚಿವ,

      ಈ ಪ್ರದೇಶ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಲಿದ್ದು, ಹೊನ್ನಾಳಿಯಿಂದ ಸೂರಗೊಂಡನಕೊಪ್ಪದವರೆಗೆ ನಿರಂತರವಾಗಿ ಒಂದು ಬಸ್‍ನ್ನು ಓಡಿಸುವಂತೆ ಸೂಚಿಸಿದರು.ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಯನ್ನು ಶ್ರೀಸೇವಾಲಾಲ್ ಜನ್ಮಸ್ಥಾನ ಮಹಾಮಠದ ಸಮಿತಿಯವರು ಧಾರ್ಮಿಕ ಆಚರಣೆಯ ವ್ಯವಸ್ಥೆಯನ್ನು ನಿರ್ವಹಿಸುವರು. ಇನ್ನು ಜಾತ್ರೆಗೆ ಬರುವ ಭಕ್ತಾದಿಗಳ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿರುವೆಡೆ ಪಾರ್ಕಿಂಗ್ ಶುಲ್ಕ ಪಡೆಯುವುದು ಬೇಡ ಶ್ರೀಸೇವಾಲಾಲ್ ಪ್ರತಿಷ್ಠಾನದಿಂದ ಜಮೀನಿನವರಿಗೆ ಪಾರ್ಕಿಂಗ್ ಶುಲ್ಕ ನೀಡಲಾಗುವುದು ಎಂದರು.

       ಡಿಸಿ ಡಾ.ಬಗಾದಿ ಗೌತಮ್ ಮಾತನಾಡಿ, ನಿರ್ಮಿತಿ ಕೇಂದ್ರದವರು ಇಲ್ಲಿ ಮಹಿಳೆಯರಿಗೆ 50 ಮತ್ತು ಪುರುಷರಿಗೆ 40 ಶೌಚಾಲಯ ನಿರ್ಮಿಸಬೇಕು. ವಿದ್ಯುತ್ ದೀಪಾಲಂಕಾರ ಪ್ರತಿಷ್ಟಾನ ನಿರ್ವಹಿಸಲಿದೆ. ವೇದಿಕೆ ನಿರ್ಮಾಣ, ಆಧಾತ್ಮಿಕ ವೇದಿಕೆ, ಯುವ ವೇದಿಕೆ, ಕಬಡ್ಡಿ ಮತ್ತು ಕುಸ್ತಿ ವೇದಿಕೆಯನ್ನು ಕೆಆರ್‍ಐಡಿಎಲ್ ನಿರ್ವಹಿಸಲಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಡೊಳ್ಳು, ನಂದಿಕೋಲು, ವೀರಗಾಸೆ, ಗೊಂಬೆ ಕುಣಿತ ಸೇರಿದಂತೆ ಐದು ತಂಡಗಳಲ್ಲಿ ಕಳುಹಿಸಲಾಗುವುದು. ಅಗ್ನಿಶಾಮಕ ಸೇವೆ, ಪೊಲೀಸ್ ಕಂಟ್ರೋಲ್ ರೂಂ ಸ್ಥಾಪನೆ, ತಾತ್ಕಾಲಿಕ ಪೊಲೀಸ್ ಠಾಣೆ ಸ್ಥಾಪನೆ ಇರುತ್ತದೆ. ಡಿಹೆಚ್‍ಓ ಅವರು ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮತ್ತು ಆಂಬುಲೆನ್ಸ್ ಸೇವೆ ಒದಗಿಸಲಿದ್ದಾರೆಂದು ಮಾಹಿತಿ ನೀಡಿದರು.

       ಸಚಿವರು ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿವಿಧ ಇಲಾಖೆಗಳು ಹಾಗೂ ಸೇವಾಲಾಲ್ ಪ್ರತಿಷ್ಟಾನ ಸೇರಿದಂತೆ ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.ಸಭೆಯಲ್ಲಿ ಮಾಜಿ ಮುಜರಾಯಿ ಸಚಿವರಾದ ರುದ್ರಪ್ಪ ಲಮಾಣಿ, ಶ್ರೀಸೇವಾಲಾಲ್ ಕ್ಷೇತ್ರಾಭಿವೃದ್ಧಿ ಹಾಗೂ ನಿರ್ವಹಣಾ ಪ್ರತಿಷ್ಠಾನದ ಎಂ.ಡಿ ಹೀರಾಲಾಲ್, ಶ್ರೀ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯಕ್, ತಾಂಡಾ ಅಭಿವೃದ್ಧಿ ನಿಗಮದ ಯೋಜನಾ ನಿರ್ದೇಶಕ ಭೋಜ್ಯಾನಾಯ್ಕ್, ತಾಂಡಾ ಅಭಿವೃದ್ಧಿಗಳು, ಜಿ ಪಂ ಸಿಇಓ ಎಸ್ ಅಶ್ವತಿ, ಎಡಿಸಿ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಸಂತೊಷ್‍ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ನ್ಯಾಮತಿ ಮತ್ತು ಹೊನ್ನಾಳಿ ತಾಲ್ಲೂಕು ಅಧಿಕಾರಿಗಳು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap