ಜಮುರಾ ನಾಟಕೋತ್ಸವಕ್ಕೆ ತೆರೆ;

ಚಿತ್ರದುರ್ಗ :

      ದಾರ್ಶನಿಕರು ವಿವೇಕದ ಮುಖಾಂತರ ಸಾಮಾಜಿಕ ಜಾಗೃತಿಯನ್ನು ಉಂಟುಮಾಡಿದರು. ಈಗ ಇಂಥ ಕಾರ್ಯವನ್ನು ನಾಟಕಗಳು ಮಾಡುತ್ತಿವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

     ನಗರದ ಶ್ರೀಮುರುಘಾಮಠದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆಯುತ್ತಿರುವ ಜಮುರಾ ನಾಟಕೋತ್ಸವದ ಸಮಾರೋಪ ಹಾಗು ಶರಣಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ನಾಟಕಗಳು ಸತ್ಯಾನ್ವೇಷಣೆ ಮಾಡುತ್ತವೆ. ನಮಗೆ ಬೌದ್ಧಿಕತೆಯ ಹುಡುಕಾಟ ಬೇಕು. ಅನ್ವೇಷಣೆಗೆ ಒಳಗಾಗಬೇಕು. ಬಸವಾದಿ ಶರಣರು ಅಂದು ಏಕಕಾಲದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದರು. ಅವರದು ಪ್ರಯೋಗಮುಖಿ ಬದುಕು. ಇಂದು ಖಡ್ಗದ ಮೂಲಕ ಭಯೋತ್ಪಾದನೆ, ಜೀವಹಿಂಸೆ ನಡೆಯುತ್ತಿದೆ. ಆದರೆ ಬಸವಾದಿ ಶರಣರು ಲೇಖನಿ ಮೂಲಕ ರಕ್ತಪಾತರಹಿತ ಕ್ರಾಂತಿ ಮಾಡಿದರು. ಸಾವಿರಾರು ಜನರಿಗೆ ಅವರು ಪ್ರೇರಣೆ ನೀಡಿದರು. ಸತ್ಯದ ಬೋಧನೆ ಯಾರೂ ಬೇಕಾದರೂ ಮಾಡಬಹುದು. ಆದರೆ ಸತ್ಯದ ಸಾಧಕರಾಗಬೇಕು. ತಮ್ಮೊಳಗೆ ಸತ್ಯವನ್ನು ಕಂಡುಕೊಳ್ಳಬೇಕು. ಸಾಧಕರಿಗೆ ಸತ್ಯ, ಶಿವ ಎಲ್ಲವೂ ಒಂದೆ. ಸತ್ಯವನ್ನು ಹೊರಗಡೆ ಹುಡುಕಬಾರದು. ನಮ್ಮೊಳಗೆ ಹುಡುಕಬೇಕು. ಸತ್ಯದ ಪರವಾಗಿ ನಿಲ್ಲುವವರು ಸಮಾಜದ ಪರವಾಗಿ ನಿಲ್ಲುತ್ತಾರೆ ಎಂದರು.

      ಚಿತ್ರದುರ್ಗ ನಗರಸಭೆ ಪೌರಾಯುಕ್ತ ಚಂದ್ರಪ್ಪ ಮಾತನಾಡಿ, ನಾಟಕದ ಉಗಮ ಮನುಷ್ಯನ ಉಗಮದೊಂದಿಗೆ ಆಗಿರಬೇಕು. ಕಾಳಿದಾಸ, ಕುವೆಂಪು, ಬೇಂದ್ರೆ, ಕಂಬಾರರು, ಚಂಪಾ ಮೊದಲಾದವರು ಹಾಗೆಯೇ ನವೋದಯ, ನವ್ಯ, ದಲಿತ ಬಂಡಾಯ ಮೊದಲಾದ ಪ್ರಕಾರಗಳ ನಾಟಕಗಳು ಪ್ರದರ್ಶನಗೊಂಡಿವೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ನಾಟಕ ಮೂಲಕ ನೀಡುತ್ತಿದ್ದಾರೆ. ಟಿವಿ ಚಾನೆಲ್‍ಗಳ ಪ್ರಭಾವದಿಂದ ನಾಟಕಗಳ ಸಂಖ್ಯೆ ಕಡಿಮೆಯಾಗಿದೆ. ಪ್ರತಿಯೊಂದು ಊರುಗಳಲ್ಲಿ ಜಾತ್ರೆ, ಹಬ್ಬದ ಸಂದರ್ಭಗಳಲ್ಲಿ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಇಂದು ಅದರ ಪ್ರಭಾವ ಕಡಿಮೆಯಾಗಿದೆ ಎಂದರು.

     ಮತ್ತೊರ್ವ ಅತಿಥಿ ಶ್ರೀನಿವಾಸ ಜಿ. ಕಪ್ಪಣ್ಣ ಮಾತನಾಡಿ, ಮಠಗಳೆಂದರೆ ಶ್ರೀಮಂತರಿಗಾಗಿ ರಾಜಕಾರಣಿಗಳಿಗಾಗಿ ಎಂಬ ಭ್ರಮ ನನಗೆ ಚಿಕ್ಕಂದಿನಿಂದಲೇ ಇತ್ತು. ಆದರೆ ತದನಂತರ ಅದರ ಅರಿವಾಯಿತು. ನಾಟಕಗಳು ಸತ್ಯವನ್ನು ಹುಡುಕುತ್ತವೆ. ಹಾಗೆಯೇ ಮಠಗಳು ಸಹ ಸತ್ಯವನ್ನು ಹುಡುಕುತ್ತವೆ. ನಂತರದಲ್ಲಿ ನಾನು ಮಠಗಳಿಗೆ ಹೋಗಲು ಆರಂಭಿಸಿದೆ. ಸಮಾಜಕ್ಕೆ ಮಠಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತವೆ. ಮಠಗಳು ಮನಸ್ಸುಗಳನ್ನು ಸೇರಿಸುವ ಕೆಲಸ ಮಾಡುತ್ತಿವೆ. ಮಠಗಳು ನಡೆಸುವ ನಾಟಕಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗಬೇಕು.

    ಜನರಿಗೆ ಹೆದರಿಸುವ, ದಾರಿ ತಪ್ಪಿಸುವ ಹೋಮ, ಜಪ, ತಪ ಮೊದಲಾದವನ್ನು ಶ್ರೀಮಠ ಮಾಡದೆ ಚಿಂತನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾಡುತ್ತಿದೆ. ಜಾತಿ ಇಲ್ಲದ ಒಂದು ವೇದಿಕೆ ಎಂದರೆ ನಾಟಕಗಳು. ಕಲೆ ಎನ್ನುವುದು ಒಂದು ಜಾತಿಯ ಸ್ವತ್ತಲ್ಲ. ಕಲೆ ಎಲ್ಲ ಜಾತಿ ಧರ್ಮಗಳಲ್ಲು ಇದೆ ಅದನ್ನು ಹೇಳಿದರು.

    ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಗುಳೇದಗುಡ್ಡದ ವೃತ್ತಿರಂಗಭೂಮಿ ಕಲಾವಿದೆ ಶ್ರೀಮತಿ ಪ್ರೇಮ ಮಾತನಾಡಿ, ನಾನು ಅತ್ಯಂತ ಕಡುಬಡತನದಿಂದ ಬಂದವಳು. ಬದುಕನ್ನು ಕಟ್ಟಿಕೊಳ್ಳಲು ನಾಟಕ ಮೊರೆ ಹೋದೆ. ನನ್ನ ಮಗ, ಗಂಡ ಮರಣ ಹೊಂದಿದರು. ಆ ನೋವಿನಿಂದ ಹೊರಬರಲು ನಾಟಕಕ್ಕೆ ಹೊಂದಿಕೊಳ್ಳಬೇಕಾಯಿತು ಎಂದು ನುಡಿದರು.

    ನಾಯಕನಹಟ್ಟಿಯ ಶ್ರೀ ತಿಪ್ಪೇರುದ್ರ ಸ್ವಾಮಿಗಳು ಮಾತನಾಡಿದರು. ವೇದಿಕೆಯಲ್ಲಿ ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು, ಶ್ರೀಮತಿ ಅರುಣಾ ಮುಂತಾದವರಿದ್ದರು.ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ನುಲೇನೂರು ಶಂಕರಪ್ಪ ಸ್ವಾಗತಿಸಿದರು. ನಿರಂಜನ ದೇವರಮನೆ ನಿರೂಪಿಸಿದರು.ನಂತರ ಕುಂ.ವೀರಭದ್ರಪ್ಪ ರಚನೆ, ಶ್ರೀಕಾಂತ್ ಎನ್.ವಿ. ನಿರ್ದೇಶನವಿರುವ ಮಾತೆ ಜ್ಯೋತಿರ್ಲಿಂಗಪ್ಪಾಜಿ ನಾಟಕವನ್ನು ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಕಲಾರಂಗ ತಂಡದವರು ಅಭಿನಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap