ಭಾರತೀಯ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಪ್ರಭಾವ

ಚಿತ್ರದುರ್ಗ:

       ಕನ್ನಡ ಸಾಹಿತ್ಯ ವಿಶ್ಲೇಷಣೆಯ ಫಲಿತ ಭಾರತದ ಇತರ ಭಾಷೆಗಳ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ ಎಂದು ಸಾಹಿತಿ ಡಾ.ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.

      ನಗರದ ತರಾಸು ರಂಗಮಂದಿರಲ್ಲಿ ಬಂಡಾಯ ಸಾಹಿತ್ಯ ಸಂಘಟನೆ: ಕರ್ನಾಟಕ ಆಯೋಜಿಸಿದ್ದ ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ ಪರಿಕಲ್ಪನಾತ್ಮಕ ಚಿಂತನೆ ಕುರಿತ ಎರಡು ದಿನಗಳ ಸಾಹಿತ್ಯ ಸಂವಾದದ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯದ ಕುರಿತು ಮಾತನಾಡಿದರು.

      ಸಾಹಿತ್ಯ ಬದುಕಿನ ಹೋರಾಟದ ಒಂದು ಭಾಗ. 60-70ರ ದಶಕವು ಅಂಬೇಡ್ಕರ್ ಪ್ರಭಾವದಿಂದ ದಲಿತ ಬರಹಗಾರರು, ಕಲಾವಿದರು, ಬಂಡಾಯ ಒಕ್ಕೂಟ, ಸಾಮಾಜಿಕ ಸಾಂಸ್ಥಿಕ, ಸಾಹಿತ್ಯಕ ದೃಷ್ಟಿಯಿಂದ ಮುಖ್ಯವಾಗಿದೆ. ಆ ಕಾಲದಲ್ಲಿ ಅಕ್ಷರ ಹೊಸ ಕಾವ್ಯ ಕವನ ಸಂಕಲನಕ್ಕೆ ಎದುರಾಗಿ ಬೆನ್ನ ಹಿಂದಿನ ಬೆಳದಿಂಗಳು, ಕಪ್ಪುಜನರ ಕೆಂಪು ಕಾವ್ಯ ಸೇರಿದಂತೆ ಮುಂತಾದ ಕವನ ಸಂಕಲನಗಳು ಬಂಡಾಯ ಸಾಹಿತ್ಯದ ಬಹಳ ದೊಡ್ಡ ಕಾವ್ಯ ಸಂಕಲನದ ಚಳವಳಿಯಾಗಿವೆ ಎಂದರು.

       ನವ್ಯರು ಇಂಗ್ಲೀಷ್ ಸಾಹಿತ್ಯದ ಮುಖೇನ ಕಲಿತ ವಿಷಯವನ್ನು ಕನ್ನಡಕ್ಕೆ ತರಲು ಪ್ರಯತ್ನಿಸಿದರು. ಅಲ್ಲಿಯ ಗ್ರಹಿಕೆಯನ್ನು ಸ್ಥಳೀಯ ನೆಲೆಯಲ್ಲಿ ತಂದರು. ಈ ಕಾಲದ ಕೆಲ ಸಾಹಿತ್ಯ ವ್ಯಕ್ತಿ ಕೇಂದ್ರಿತ ನೆಲೆಯಲ್ಲಿ ಪ್ರಧಾನವಾಯಿತೇ ಹೊರತು ಸಮಾಜಮುಖಿಯಾಗಲಿಲ್ಲ ಎಂದರು.

       60-70ರ ದಶಕದಲ್ಲಿ ಭೂಮಾಲೀಕತ್ವ, ಜಮೀನ್ದಾರಿ ಪದ್ಧತಿ, ಬಂಡವಾಳಶಾಹಿ, ಜಾತಿ ಪದ್ಧತಿ ಸೇರಿದಂತೆ ಮುಂತಾದ ಸಾಮಾಜಿಕ ಪಿಡುಗುಗಳಿಂದ ಪ್ರಭಾವಿತರಾಗಿ ರಾಜ್ಯದ ಹಲವು ಪ್ರಾಂತ್ಯಗಳಲ್ಲಿ ಹಲವರು ಸಾಹಿತ್ಯವನ್ನು ರಚಿಸಿದರು. ಮಂಡ್ಯ ಪ್ರಾಂತ್ಯದಲ್ಲಿ ಬೆಸಗರಹಳ್ಳಿ ರಾಮಣ್ಣ, ಬಳ್ಳಾರಿಯ ಭಾಗದಲ್ಲಿ ಕುಂ.ವೀರಭದ್ರಪ್ಪ, ಶಿರಾ ಭಾಗದಲ್ಲಿ ಬರಗೂರು ರಾಮಚಂದ್ರಪ್ಪ ಹೀಗೆ ಆಯಾ ಪ್ರಾಂತ್ಯದಲ್ಲಿ ಬಂಡಾಯ ಸಾಹಿತ್ಯವು ಪ್ರಾತಿನಿಧ್ಯ ಪಡೆಯಿತು. ಕರಪತ್ರದ ಮೂಲಕ ಬಂಡಾಯ ಆರಂಭವಾಗಿ ಸಂಕ್ರಮಣದ ಮೂಲಕ ವಿಶೇಷತೆ ಪಡೆದು, ಇಡೀ ಪರಂಪರೆಯನ್ನು ಪುನರ್ ವ್ಯಾಖ್ಯಾನ ಮಾಡಿದ ಕಾಲ ಬಂಡಾಯವಾಯಿತು ಎಂದರು.

        ಬಂಡಾಯ ಸಾಹಿತ್ಯ ಮಾಕ್ರ್ಸ್‍ವಾದಿ, ಸಮಾಜವಾದಿ, ಗಾಂಧಿವಾದಿ, ಅಲೆಮಾರಿ, ಬುಡಕಟ್ಟು, ಅಸ್ಪøಶ್ಯತೆ, ಜೀತದಾಳುಗಳು ಸೇರಿದಂತೆ ಎಲ್ಲರ ಜೊತೆ ಮಾತನಾಡಿರುವುದರಿಂದ ಅದು ವ್ಯಾಪಕವಾಗಿದೆ. ಇಂಥ ಮನೋಧರ್ಮದಿಂದ ಬಂಡಾಯ ವೈವಿಧ್ಯಮಯವಾದ ಸಾಹಿತ್ಯವಾಗಿದೆ. ಬಂಡಾಯದಲ್ಲಿ ವೈಚಾರಿಕತೆ ಜೊತೆ ಜೊತೆಯಲ್ಲೇ ಇದೆ. ವಿಮರ್ಶೆ, ವಿಚಾರ, ಸಾಮಾಜಿಕ ವಿಶ್ಲೇಷಣೆ ಎಲ್ಲ ಒಟ್ಟೊಟ್ಟಿಗೆ ಇವೆ ಎಂದರು.

       ಗುಜರಾತಿ ಸಾಹಿತ್ಯದ ಕುರಿತು ಎಂ.ಜಿ.ಹೆಗಡೆ ಮಾತನಾಡಿ, ಗುಜರಾತಿ ಅಸ್ಮಿತೆ ಗಾಂಧಿಯನ್ನು ಮರೆತ, ಮಾತು ಮರೆತ ಅಸ್ಮಿತೆಯಾಗಿದೆ. ಅದು ಎಲ್ಲ ಬಗೆಯ ಪ್ರತಿರೋಧದಿಂದ ಕೂಡಿದೆ ಎಂದರು.ತೆಲುಗು ಸಾಹಿತ್ಯದ ಕುರಿತು ನಗರಗೆರೆ ರಮೇಶ್ ವಿಚಾರ ಮಂಡಿಸಿದರು. ಸಿದ್ದನಗೌಡ ಪಾಟೀಲ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap