ಖತರ್ನಾಕ್ ಸರಗಳ್ಳರ ಬಂಧನ..!!

0
5

ಬೆಂಗಳೂರು

       ಕಪ್ಪುಬಣ್ಣದ ಪಲ್ಸರ್ ಬೈಕ್‍ನಲ್ಲಿ ಸುತ್ತಾಡುತ್ತಾ ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರು ಸೇರಿ ಮೂವರನ್ನು ಬಂಧಿಸಿರುವ ವಿಜಯನಗರ ಪೊಲೀಸರು 8 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

        ಲಗ್ಗೆರೆಯ ಚೌಡೇಶ್ವರಿನಗರದ ಪ್ರದೀಪ್ ಅಲಿಯಾಸ್ ಪ್ರದೀಪ್ ರಾಜ್ (22), ಕಬ್ಬನ್ ಪೇಟೆಯ ಮಂಜುನಾಥ್ ಅಲಿಯಾಸ್ ಮಂಜು (22)ಬಂಧಿತ ಸರಗಳ್ಳರಾಗಿದ್ದಾರೆ.ಕಳವು ಮಾಡಿದ ಸರಗಳನ್ನು ವಿಲೇವಾರಿ ಮಾಡುತ್ತಿದ್ದ ಚೋಳೂರು ಪಾಳ್ಯದ ಸುನಿಲ್ (29) ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

          ಬಂಧಿತರಿಂದ 8 ಲಕ್ಷ ರೂ. ಮೌಲ್ಯದ 265 ಗ್ರಾಂ. ತೂಕದ ಚಿನ್ನದ ಸರಗಳು, ಪಲ್ಸರ್, ಹೊಂಡಾ, ಸೇರಿ ಎರಡು ಬೈಕ್‍ಗಳನ್ನು ವಶಪಡಿಸಿಕೊಂಡು ವಿಜಯನಗರದ – 5, ಜ್ಞಾನಭಾರತಿ, ಮಾಗಡಿ ರಸ್ತೆಯ ತಲಾ 1 ಸೇರಿ 7 ಸರ ಅಪಹರಣ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಡಿಸಿಪಿ ರವಿ ಡಿ. ಚನ್ನಣ್ಣನವರ್ ತಿಳಿಸಿದ್ದಾರೆ.

         ಆರೋಪಿಗಳಾದ ಪ್ರದೀಪ್ ಹಾಗೂ ಮಂಜುನಾಥ್, ಪಲ್ಸರ್ ಬೈಕ್‍ನಲ್ಲಿ ಸಂಚರಿಸುತ್ತ, ಒಂಟಿ ಮಹಿಳೆಯರನ್ನು ಗುರುತಿಸಿ ಚಿನ್ನದ ಸರ ಕಳವು ಮಾಡುತ್ತಿದ್ದರು. ಅವುಗಳನ್ನು ಮತ್ತೊಬ್ಬ ಆರೋಪಿ ಸುನಿಲ್ ಮೂಲಕ ಮಾರಾಟ ಮಾಡಿ ಮೋಜು ಮಾಡುತ್ತಿದ್ದರು.

        ಆರೋಪಿ ಪ್ರದೀಪ್ ಕಾಲ್ ಸೆಂಟರ್‍ನಲ್ಲಿ ಕೆಲಸ ಮಾಡುವುದಾಗಿ ಮನೆಯಲ್ಲಿ ಹೇಳುತ್ತಿದ್ದು, ಮತ್ತೊಬ್ಬ ಆರೋಪಿ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಜೊತೆ ಸೇರಿ, ಚಿನ್ನದ ಸರಗಳನ್ನು ಕಳವು ಮಾಡಿ ಬೆಸ್ಟ್ ಕಂಟ್ರೋಲ್ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್ ಮೂಲಕ ಮಾರಾಟ ಮಾಡುತ್ತಿದ್ದರು.

       ಹಲವು ದಿನಗಳಿಂದ ಸರಗಳವು ಮಾಡುತ್ತಿದ್ದ ಆರೋಪಿಗಳು ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ವಿಜಯನಗರದಲ್ಲಿ ಸಂಭವಿಸಿದ್ದ 5 ಸರ ಅಪಹರಣ ಪ್ರಕರಣಗಳ ಪತ್ತೆಗೆ ರಚಿಸಲಾಗಿದ್ದ ಎಸಿಪಿ ಧರ್ಮೇಂದ್ರ, ವಿಜಯನಗರ ಇನ್ಸ್‍ಪೆಕ್ಟರ್ ಭರತ್ ನೇತೃತ್ವದ ವಿಶೇಷ ಪೊಲೀಸ್ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here