ಕುವೆಂಪುರನ್ನು ಹೊಸ ಪೀಳಿಗೆಗೆ ಪರಿಚಯಿಸಬೇಕಿದೆ

0
14

ತುಮಕೂರು

         ಕುವೆಂಪು ಅಂತಹ ವಿಶ್ವ ಮಾನವರನ್ನು ಹೊಸ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಕೆ.ಪಿ.ಸಿ.ಸಿ.ವಕ್ತಾರ ಹಾಗು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.

        ನಗರದ ಸಪ್ತಗಿರಿ ಬಡಾವಣೆಯ ನಳಂದ ಕಾಲೇಜಿನಲ್ಲಿ ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನೋತ್ಸವ ಹಾಗೂ ಕುವೆಂಪು ಅವರ ಭಾವಗೀತೆಗಳ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಜಾತಿ, ಧರ್ಮ, ಭಾಷೆ ಎಲ್ಲವನ್ನು ಮೀರಿ ಬೆಳೆದು, ಮನುಷ್ಯ ವಿಶ್ವ ಮಾನವನಾಗಿ ಬದಲಾಗಬೇಕು ಎಂಬ ಸಂದೇಶವನ್ನು ಸಾರಿದ ಯುಗದ ಕವಿ, ಇಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಅವರ ಸಾಧನೆಗಳ ಪರಿಚಯ ಆಗಬೇಕೆಂದರು.

          ಮನುಷ್ಯ ಹುಟ್ಟುತ್ತಾ ಅಲ್ಪಜೀವಿ, ಬೆಳೆಯುತ್ತಾ ವಿಶ್ವ ಮಾನವ ಎಂಬುದನ್ನು ತಮ್ಮ ಅನಿಕೇತನ ಕವಿತೆಯ ಮೂಲಕ ಇಡೀ ಜಗತ್ತಿಗೆ ಸಾರಿದವರು ಕುವೆಂಪು.ಮನುಷ್ಯ ತಾನು ನಿಂತ ನೆಲದಲ್ಲಿಯೇ ಜಾತಿ, ಧರ್ಮ, ಭಾಷೆ, ಗಡಿಯನ್ನು ಮೀರಿ ಬೆಳೆಯುವುದನ್ನು ಕಲಿಯಬೇಕು.ಅಂತಹ ವಾತಾವರಣ ಪೋಷಕರಿಂದ ಸೃಷ್ಟಿಯಾಗಬೇಕೆಂದು ಬಯಸಿದ್ದರು.ಬುದ್ದ, ಅನಿಬೆಸೆಂಟ್,ಟಾಲ್ಸ್‍ಟಾಯ್ ಸೇರಿದಂತೆ ಹಲವರ ಜೀವನ ವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಕುವೆಂಪು, ತಮ್ಮ ಕವಿತೆ, ನಾಟಕ, ಕಾದಂಬರಿ, ವಿಮರ್ಶಾ ಗ್ರಂಥ,ವಿಡಂಬನಾ ಲೇಖನಗಳ ಮೂಲಕ ಹೊಸತನ್ನು ಕಟ್ಟಿಕೊಡುವ ಕೆಲಸ ಮಾಡಿ, ಇಡೀ ವಿಶ್ವಕ್ಕೆ ಮಾದರಿಯಾದರು ಎಂದು ಮುರುಳೀಧರ ಹಾಲಪ್ಪ ನುಡಿದರು.

         ಹುಟ್ಟುತ್ತಲೇ ಯಾರು ಬುದ್ದಿವಂತರಲ್ಲ. ನಿರಂತರ ಪರಿಶ್ರಮಕ್ಕೆ ,ಅದಕ್ಕೆ ಅವರ ತಂದೆ ತಾಯಿಗಳ ಪ್ರೋತ್ಸಾಹ ಎಲ್ಲವೂ ಒಬ್ಬ ವ್ಯಕ್ತಿ ಸಾಧನೆ ಮಾಡಲು ಕಾರಣವಾಗುತ್ತದೆ ಎಂದು ಥಾಮಸ್ ಅಲ್ವ ಎಡಿಸನ್ ಅವರ ಜೀವನವನ್ನು ಉದಾಹರಿಸಿದ ಮುರುಳೀಧರ ಹಾಲಪ್ಪ, ಮಕ್ಕಳಿಗೆ ಉತ್ತಮ ವಾತಾವರಣ ಸೃಷ್ಟಿಸುವುದು ಎಷ್ಟು ಮುಖವೋ,ಹಾಗೆಯೇ ಮಕ್ಕಳು ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ಅಷ್ಟೇ ಮುಖ ಎಂದು ಕಿವಿ ಮಾತು ಹೇಳಿದರು.

       ಕಾರ್ಯಕ್ರಮದಲ್ಲಿ ಹಾಲಪ್ಪ ಪ್ರತಿಷ್ಠಾನದಿಂದ ಜಿಲ್ಲಾ ಒಕ್ಕಲಿಗರ ನೌಕರರ ವೇದಿಕೆಯ ಮೂಲಕ ನೀಡಲಾಗುವ ಕುವೆಂಪು ಪ್ರಶಸ್ತಿಯನ್ನು ಸ್ವೀಕರಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಬೈರಪ್ಪನವರು ಮಾತನಾಡಿ, ಕುವೆಂಪು ಕನ್ನಡ ನಾಡಿನಲ್ಲಿ ಹುಟ್ಟಿ ಎಲ್ಲವೂ ಮೀರಿ ಬೆಳೆದ ಸಾಹಿತಿ,ಅವರ ಹೆಸರಿನಲ್ಲಿ ಇಂದು ಪಡೆದಿರುವ ಪ್ರಶಸ್ತಿಗೆ ಬೆಲೆ ಕಟ್ಟಲಾಗದು.ಪ್ರತಿಯೊಂದು ಆತ್ಮವೂ ದಿವ್ಯವೇ ಎಂಬ ಸ್ವಾಮಿ ವಿವೇಕಾನಂದರ ಸಂದೇಶದಂತೆ,ದಡ್ಡರು ಯಾರು ಇಲ್ಲ, ಅವಕಾಶಗಳು ಸಿಕ್ಕಾಗ, ತಮ್ಮೊಳಗಿನ ಶಕ್ತಿಯನ್ನು ತೋರ್ಪಡಿಸುವ ಮೂಲಕ ಸಮುದಾಯಕ್ಕೆ, ಸಮಾಜಕ್ಕೆ ಒಳಿತಾಗುವಂತೆ ನಡೆದುಕೊಂಡರೆ, ಜನರು ನಿಮ್ಮನ್ನು ಗುರುತಿಸುತ್ತಾರೆ ಎಂದರು.

         ಇಂದು ಈ ದೇಶದಲ್ಲಿದ್ದ ಹಲವು ಮೌಢ್ಯಗಳನ್ನು ತೊಡೆದು ಹಾಕಲು ಶ್ರಮಿಸಿದ ದಾರ್ಶಾನಿಕರನ್ನು ಒಂದು ಜಾತಿಗೆ ಸಿಮೀತಗೊಳಿಸುತ್ತಿರುವುದು ನಿಜಕ್ಕೂ ಒಪ್ಪುವಂತಹದ್ದಲ್ಲ. ಕನಕದಾಸರನ್ನು ಕುರುಬ ಸಮುದಾಯಕ್ಕೆ, ಕುವೆಂಪು ಅವರನ್ನು ಒಕ್ಕಲಿಗ ಸಮುದಾಯಕ್ಕೆ ಸಿಮೀತಗೊಳಿಸಿ, ಅವರನ್ನು ಕುಬ್ಜರನ್ನಾಗಿಸುತಿದ್ದೇವೆ. ಈ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಪ್ರೊ.ಕೆ.ಬೈರಪ್ಪ ನುಡಿದರು.

        ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆಯ ಕಾರ್ಯದರ್ಶಿ ಅಶ್ವತ್‍ಕುಮಾರ್,ಕಳೆದ 10 ವರ್ಷಗಳಿಂದ ಸಂಘ ಕುವೆಂಪು ಅವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.ಅಲ್ಲದೆ ಸರಕಾರಿ, ಖಾಸಗಿ ಎನ್ನದೆ ಎಲ್ಲಾ ವಿವಿಧದ ನೌಕರರಿಗೂ ತೊಂದರೆಯಾದಾಗ ಅವರ ನೋವುಗಳಿಗೆ ಸ್ಪಂದಿಸಿ, ಅವರ ಬೆನ್ನಿಗೆ ನಿಲ್ಲುವ ಮೂಲಕ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದೆ. ಕಳೆದ ಬಾರಿ ಈ ಸಮಾರಂಭಕ್ಕೆ ಮುರುಳೀಧರ ಹಾಲಪ್ಪ ಬಂದಾಗ ತಮ್ಮ ಹಾಲಪ್ಪ ಪ್ರತಿಷ್ಠಾನದವತಿಯಿಂದ ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದರು.ಅದರಂತೆ ಈ ಬಾರಿ ಪ್ರೊ.ಕೆ.ಬೈರಪ್ಪ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.

          ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಗೋವಿಂದರಾಯ ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಗಂಗಾಧರೇಶ್ವರ್ ವಿದ್ಯಾಸಂಸ್ಥೆ ಅಧ್ಯಕ್ಷ ವೈ.ಸಿ.ಲಕ್ಕಪ್ಪ, ಎಸ್.ಜಿ.ಎಂ.ವಿದ್ಯಾಸಂಸ್ಥೆ ಅಧ್ಯಕ್ಷ ಹನುಮಂತರಾಯಪ್ಪ, ಉಪ್ಪಾರಹಳ್ಳಿ ಕುಮಾರಸ್ವಾಮಿ, ಮುಖಂಡರಾದ ರಂಗಸ್ವಾಮಿ, ಬೋರೇಗೌಡ, ಬೈರೇಗೌಡ, ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಅಧ್ಯಕ್ಷ ಶಂಕರ್ ವಹಿಸಿದ್ದರು.
ಇದೇ ವೇಳೆ ಕುವೆಂಪು ಅವರ ಭಾವಗೀತೆಗಳ ಗಾಯನ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here