ಆದರ್ಶಗಳಿಗೆ ಬೆಲೆ ಕಟ್ಟುವುದನ್ನು ಕಲಿತುಕೊಳ್ಳಬೇಕು; ಪಂಡಿತಾರಾಧ್ಯ

0
6

ಚಿತ್ರದುರ್ಗ;

         ಅನುಭವ, ಅನುಭಾವ, ಆಲೋಚನೆಗಳಿಂದ ಯಾರಾದರೂ ಹಿರಿಯರಾಗಲು ಸಾಧ್ಯ. ನಾಯಿ-ನರಿ, ಹದ್ದು-ಕಾಗೆಗಳಂತೆ ಬದುಕಿದರೆ ಅದು ಸಾರ್ಥಕ ಜೀವನವಾಗದು. ಎಷ್ಟು ವರ್ಷ ಬದುಕಿದೆವು ಎನ್ನುವುದಕ್ಕಿಂತ ಜೀವನದಲ್ಲಿ ಬದ್ಧತೆಯಿಂದ ಹೇಗೆ ಬದುಕಿದೆವು ಎನ್ನುವುದು ಬಹಳ ಮುಖ್ಯ. ವಸ್ತುಗಳಿಗೆ ಬೆಲೆ ಕಟ್ಟುವುದಲ್ಲ; ಆದರ್ಶಗಳಿಗೆ ಬೆಲೆ ಕಟ್ಟುವುದನ್ನು ಮಕ್ಕಳು ಕಲಿತುಕೊಳ್ಳಬೇಕು. ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.

        ಅವರು ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜನೆಗೊಂಡಿದ್ದ `ಧ್ಯಾನ, ಮೌನ, ಪ್ರಾರ್ಥನೆ, ಚಿಂತನಾ’ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

        ಕೇವಲ ವಯಸ್ಸಿನ ಆಧಾರದ ಮೇಲೆ ಹಿರಿಯರೆಂದು ಗೌರವಿಸಬೇಕಿಲ್ಲ; ಚಿಕ್ಕ ವಯಸ್ಸೆಂದು ಅವಗಣಿಸಬೇಕಿಲ್ಲ. ಆದರ್ಶದ ದಾರಿಯಲ್ಲಿ ಸಾಗುವವರೆಲ್ಲೂ ಹಿರಿಯರು. ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ, ಆದರ್ಶದ ಜೀವನ ನಡೆಸುವ ಮೂಲಕ ಮಕ್ಕಳೂ ಹಿರಿಯರಾಗಬಹುದು ಮೌಲ್ಯಗಳು ಕೇವಲ ಶಬ್ದಗಳಲ್ಲಿ ಮಾತ್ರ ಇಲ್ಲ ಪ್ರಾಣಿ, ಪಕ್ಷಿಗಳ ನಡವಳಿಕೆಗಳಲ್ಲೂ ನಾವು ಮೌಲ್ಯಗಳನ್ನು ಗುರುತಿಸುವುದನ್ನು ಕಲಿಯಬೇಕು ಎಂದು ನುಡಿದರು

       ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡವರು ಮಾತ್ರ ಹಿರಿಯರು ಎನ್ನಲು ಸಾಧ್ಯ. ಹಲವು ಆದರ್ಶಗಳನ್ನು ಮೈಗೂಡಿಸಿ ಕೊಳ್ಳುವುದು ಕಷ್ಟವಾಗಬಹುದು. ಆದರೆ ಕನಿಷ್ಟ ಒಂದು ಮೌಲ್ಯವನ್ನಾದರೂ ಬದ್ಧತೆಯಿಂದ ಜೀವನ ಪೂರ್ತಿ ನಡೆದುಕೊಳ್ಳಬೇಕು. ಸಾಲುಮರದ ತಿಮ್ಮಕ್ಕ ಇದಕ್ಕೆ ಒಂದು ಒಳ್ಳೆಯ ಉದಾಹರಣೆ. `ಸತ್ಯ ವಾಕ್ಯಕೆ ಮೀರಿ ನಡೆದಡೆ ಮೆಚ್ಚನಾ ಪರಮಾತ್ಮ’ ಎನ್ನುವ ಗೋವಿನ ಹಾಡು ಮಕ್ಕಳಿಗೆ ಮಾದರಿಯಾಗಬೇಕು ಎಂದರು

       ಸರಳಾಗಿ ಬದುಕುವ, ಸತ್ಯವನ್ನು ಹೇಳುವ, ಪರೋಪಕಾರ ಬುದ್ಧಿಯನ್ನು ಮೈಗೂಡಿಸಿಕೊಳ್ಳುವ, ಪ್ರಾಮಾಣಿಕತೆಯನ್ನು ಮೆರೆಯುವಂತಹ ಜೀವನ ಮೌಲ್ಯಗಳನ್ನು ರೂಢಿಸಿಕೊಂಡರೆ ಸಾಮಾನ್ಯರೂ ಅಸಾಮಾನ್ಯರಾಗಬಹುದು. ಜನರ ಮನಸ್ಸಿನಲ್ಲಿ ದಾಖಲಾಗುವಂಥ ಕೆಲಸಗಳನ್ನು ನಾವು ಮಾಡಬೇಕು. ಆಗ ಬದುಕಿಗೆ ಮೌಲ್ಯ ಬರುವುದು. ಇದು ಕೇವಲ ಒಬ್ಬ ಬಸವಣ್ಣ, ಅಕ್ಕಮಹಾದೇವಿ, ಗಾಂಧಿ, ಬುದ್ಧ, ಏಸುಗಳಿಗೆ ಮಾತ್ರ ಸೀಮಿತವಲ್ಲ; ಮನಸ್ಸು ಮಾಡಿದರೆ ಪ್ರತಿಯೊಬ್ಬರೂ ಒಬ್ಬೊಬ್ಬ ಆದರ್ಶ ಪುರುಷರಾಗಬಹುದು ಎಂದು ಸ್ವಾಮೀಜಿ ಹೇಳಿದರು.

       `ಹಿರಿಯರ ಜೀವನ ಮೌಲ್ಯಗಳು’ ಕುರಿತಂತೆ ಮಾತನಾಡಿದ ಚಿತ್ರದುರ್ಗದ ವಿದ್ಯಾಧಿಕಾರಿಗಳಾದ ಸಿ ಎಂ ತಿಪ್ಪೇಸ್ವಾಮಿ ಕೇವಲ ವಯಸ್ಸಿನಲ್ಲಿ ಅಲ್ಲದೆ; ಅನಸರಣಾ ಯೋಗ್ಯವಾದ ನಡಾವಳಿಕೆಗಳನ್ನು ಇಟ್ಟುಕೊಂಡಿರುವವರೆಲ್ಲರೂ ಹಿರಿಯರು ಎಂದರು
ಅಶೋಕ ಕೇವಲ ಬೌದ್ಧರಿಗಷ್ಟೇ ಅಲ್ಲ; ಭಾರತೀಯ ಸಂಸ್ಕೃತಿಯ ದೇದೀಪ್ಯಮಾನವಾದ ಬೆಳಕಿದ್ದಂತೆ. ಆತ ತನ್ನ ಅಲೋಚನೆಗಳನ್ನು ಭಾರತ, ಪಾಕಿಸ್ಥಾನ, ಅಫಘಾನಿಸ್ಥಾನದ ಹಲವು ಬಂಡೆಗಳ ಮೇಲೆ ಶಾಸನ ಕೆತ್ತಿಸಿದ್ದಾನೆ. ಅಂಥದೊಂದು ಶಾಸನ ಮೊಳಕಾಲ್ಮೂರು ತಾಲ್ಲೂಕಿನಲ್ಲಿಯೂ ಇದೆ. ಆ ಶಾಸನದಲ್ಲಿ ಹಿರಿಯರನ್ನು ಗೌರವಿಸುವಂತೆ, ಪ್ರಾಣಿಗಳಲ್ಲಿ ದಯೆ ತೋರುವಂತೆ, ಸತ್ಯ, ಪ್ರಾಮಾಣಿಕತೆ, ನಿಷ್ಠೆಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದ್ದಾನೆ ಎಂದರು

        ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ವೀರಗಲ್ಲುಗಳಿರುವುದು ಕರ್ನಾಟಕದಲ್ಲಿ ಮಾತ್ರ. ಹೆಬ್ಬಳ್ಳಿಯಲ್ಲಿ ವೀರಗಲ್ಲು, ಬಾಗೂರಿನಲ್ಲಿ ಮಾಸ್ತಿಕಲ್ಲುಗಳಿವೆ. ಮೆಣಸಿನೋಡು ಶಾಲೆಯ ಆವರಣದಲ್ಲಿ ಸತ್ಯನಿಷ್ಠನೊಬ್ಬನ ಸಮಾಧಿಯಿದೆ. ಜೈನಮುನಿ ನಂದಿಸೇನನ ಬಗ್ಗೆ ಶ್ರವಣಬೆಳಗೊಳದಲ್ಲಿ ಶಾಸನವೊಂದಿದೆ. ಈ ಎಲ್ಲ ಶಾಸನಗಳಲ್ಲಿ ಹಿರಿಯರು ಬದುಕಿನ ಮೌಲ್ಯಗಳನ್ನು ತಿಳಿಯಪಡಿಸಿದ್ದಾರೆ. ಅವು ಕೇವಲ ದಾಖಲೆಗಾಗಿ ಅಲ್ಲದೆ ಬದುಕಿನಲ್ಲಿ ಅಳವಡಿಸಿಕೊಳ್ಳುವಂಥವು ಎಂದರು

         ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯರಾದ ಹೊನ್ನೇಶಪ್ಪ, ಸಂಗಾಪುರ್, ಶಿವಕುಮಾರ್ ಮೊದಲಾದ ಅಧ್ಯಾಪಕರಿದ್ದರು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ನೌಕರರು, ಗ್ರಾಮಸ್ಥರು, ಕಲಾವಿದರು ಮುಂತಾದವರು ಸಾಮೂಹಿಕ ಪ್ರಾರ್ಥನೆ, ಶಿವಮಂತ್ರಲೇಖನ, ಧ್ಯಾನ, ಮೌನದಲ್ಲಿ ಭಾಗವಹಿಸಿದ್ದರು. ಹೆಚ್ ಎಸ್ ನಾಗರಾಜ್ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here