ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಕಲಿಕೆಯಿಂದ ಅಪರಾಧ ತಡೆ ಸಾಧ್ಯ : ಕೆಂಗಬಾಲಯ್ಯ

ದಾವಣಗೆರೆ 

         ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವುದರಿಂದ ಅಪರಾಧ ತಡೆ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆಂಗಬಾಲಯ್ಯ ಅಭಿಪ್ರಾಯಪಟ್ಟರು.

          ವಿಜನ್ ಇಂಟರ್‍ನ್ಯಾಷನಲ್ ಸ್ಕೂಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಗಾಂಧೀನಗರ ಪೊಲೀಸ್ ಠಾಣೆ ದಾವಣಗೆರೆ ಇವರ ಸಹಯೋಗದಲ್ಲಿ ಇಂದು ಮಧ್ಯಾಹ್ನ ದಾವಣಗೆರೆಯ ವಿಜನ್ ಇಂಟರ್ ನ್ಯಾಷನಲ್ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

           ಶಿಕ್ಷಣದ ಉದ್ದೇಶ ಉತ್ತಮ ಜೀವನ ಕಟ್ಟಿಕೊಡುವುದಾಗಿರಬೇಕು. ಕೇವಲ ವೃತ್ತಿ-ಜೀವನೋಪಾಯಕ್ಕಾಗಿ ವಿದ್ಯೆ ಕಲಿಸದೇ, ಮಾನವೀಯ ಮೌಲ್ಯಗಳನ್ನು ಶಿಕ್ಷಣದಲ್ಲಿ ನೀಡಬೇಕು. ಉತ್ತಮ ಮಾನವೀಯ ಮೌಲ್ಯಗಳಿಂದ ಮಾತ್ರ ಉತ್ತಮ ನಾಗರೀಕರಾಗಲು ಸಾಧ್ಯವಾಗುತ್ತದೆ. ಆಗ ಯಾವುದೇ ಅಪರಾಧಗಳೂ ನಡೆಯುವುದಿಲ್ಲ ಎಂದರು.

            ಇಂದಿನ ಪೀಳಿಗೆ ಮೊಬೈಲ್ ಮತ್ತು ಟಿವಿ ಗೆ ಮಾರು ಹೋಗುತ್ತಿದೆ. ಮೊಬೈಲ್ ಮತ್ತು ಟಿವಿ ಬಳಕೆಗೆ ವಾತಾವರಣವೂ ಪೂರಕವಾಗಿದ್ದು, ಇವುಗಳ ಅತಿಯಾದ ಬಳಕೆ ಚಟವಾಗಿ ಪರಿಣಮಿಸುತ್ತಿದೆ. ಹಾಗೂ ಅನೇಕ ಮನೋದೈಹಿಕ ಸಮಸ್ಯೆಗಳು ಇದರಿಂದ ಹೆಚ್ಚುತ್ತಿವೆ. ಆದ್ದರಿಂದ ದೊಡ್ಡವರು ಮಕ್ಕಳನ್ನು ಮೊಬೈಲ್ ಮತ್ತು ಟಿವಿ ಯಿಂದ ಆದಷ್ಟು ದೂರವಿಡಬೇಕಿದೆ.

         18 ವರ್ಷ ತುಂಬದ ಮಕ್ಕಳು ವಾಹನ ಚಾಲನೆ ಪರವಾನಿಗೆ ಇಲ್ಲದೇ ವಾಹನ ಚಲಾಯಿಸಬಾರದು. ಕಾನೂನಿನ ವಿರುದ್ದ ನಡೆದುಕೊಳ್ಳಬಾರದು. ಹಾಗೆಯೇ ಹಿರಿಯರೂ ಕೂಡ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ ಅವರ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸಿಕೊಡಬೇಕು.

           ನಮ್ಮ ನೆಲದ ಕಾಯ್ದೆ-ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ಯಾವುದೇ ಅಪರಾಧಗಳು ನಡೆಯುವುದಿಲ್ಲ. ಆದ್ದರಿಂದ ನಾವೆಲ್ಲ ಕಾನೂನನ್ನು ಪಾಲಿಸುವುದರೊಂದಿಗೆ, ಮುಂದಿನ ಪೀಳಿಗೆಗೂ ಮಾರ್ಗದರ್ಶಕರಾಗಿರಬೇಕು. ಮಕ್ಕಳು ಗುರು-ಹಿರಿಯರಿಗೆ, ಪೋಷಕರು ಮತ್ತು ಸುತ್ತಲಿನವರಿಗೆ ಗೌರವದಿಂದ ಕಾಣಬೇಕು. ಆಗ ನಿಮ್ಮ ಘನತೆಯೂ ಹೆಚ್ಚುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

           ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಅರುಣಕುಮಾರ್.ಎಲ್.ಹೆಚ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯಕರ ವಾತಾವರಣ ಮತ್ತು ನಿರ್ದಿಷ್ಟ ಮಾರ್ಗದರ್ಶನ ಹಾಗೂ ಅನಿಷ್ಟ ಪದ್ದತಿಗಳಿಂದ ಕಾಪಾಡಿದಲ್ಲಿ ದೇಶದ ಅಭಿವೃದ್ಧಿ ತನ್ನಿಂದ ತಾನೇ ಆಗುತ್ತದೆ ಎಂದರು.

           ಜಗತ್ತಿನ ಯಾವುದೇ ದೇಶದಲ್ಲಿ ಯುದ್ದ, ಭೀಕರ ಬರ ಸೇರಿದಂತೆ ಇತರೆ ಕ್ಷೋಭೆಗಳು ಎದುರಾದಲ್ಲಿ ಇತರೆ ದೇಶಗಳು ನೆರವಿಗೆ ಧಾವಿಸುತ್ತವೆ. ಎಲ್ಲರೂ ಒಂದೇ ಎನ್ನುವ ಮಾನವೀಯತೆ ಇಲ್ಲಿ ಕಾಣುತ್ತದೆ. ಧರ್ಮ, ಜಾತಿ, ರಾಷ್ಟ್ರೀಯತೆಗಳ ಆಧಾರದಲ್ಲಿ ಶೋಷಣೆ ಮತ್ತು ಯುದ್ದಗಳು ಆಗಬಾರದು. ನಾವೆಲ್ಲ ಒಂದೇ ಎನ್ನುವುದನ್ನು ಎತ್ತಿಹಿಡಿಯಲು 1948 ರ ಡಿ.10 ರಂದು ಮಾನವೀಯ ಹಕ್ಕುಗಳ ಒಡಂಬಡಿಕೆಗೆ ಅನೇಕ ದೇಶಗಳು ಒಪ್ಪಿ ಸಹಿ ಹಾಕಿವೆ. ಈಗಾಗಲೇ 2 ಮಹಾಯುದ್ದಗಳು ನಡೆದು ಅಪಾರ ಹಾನಿಯಾಗಿದೆ. ಮೂರನೇ ಮಹಾಯುದ್ದವಾಗದಂತೆ ತಡೆಯುವಲ್ಲಿ ಈ ಮಾನವೀಯ ಹಕ್ಕುಗಳ ಒಡಂಬಡಿಕೆ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ಈ ಜಗತ್ತು ಎಲ್ಲ ಧರ್ಮ, ರಾಷ್ಟ್ರಗಳಿಗೆ ಸೇರಿದ್ದು. ಏಸು, ಬುದ್ದ, ಪೈಗಂಬರ ಹೀಗೆ ಎಲ್ಲ ಮಹನೀಯರು ಶಾಂತಿ, ದಯೆ, ಸಹಕಾರ ಮತ್ತು ಅಹಿಂಸೆಯನ್ನು ಸಾರಿದ್ದಾರೆ. ಆದರೆ ಧರ್ಮ-ಜಾತಿ ರಾಜಕಾರಣ ನಡೆಯುತ್ತಿರುವುದು ವಿಷಾಧನೀಯ ಎಂದರು.

              ಮಕ್ಕಳನ್ನು ಶೋಷಣೆಮುಕ್ತಗೊಳಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಗೆ ಬಂದಿದ್ದು, ಮಕ್ಕಳನ್ನು ಅಪರಾಧದಿಂದ ಮುಕ್ತಗೊಳಿಸಿ, ಉತ್ತಮ ಭವಿಷ್ಯ ನೀಡುವಲ್ಲಿ ಪೋಷಕರು, ಶಿಕ್ಷಕರು ಹಾಗೂ ಇಡೀ ಸಮಾಜದ ಪಾತ್ರ ಮತ್ತು ಜವಾಬ್ದಾರಿ ಇದೆ. ಹಾಗೂ ಈ ಬಗ್ಗೆ ಎಲ್ಲರೂ ಜಾಗೃತರಾಗಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಬೇಕಾಗಿದೆ ಎಂದರು.

             ಗಾಂಧಿನಗರದ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಇಮ್ರಾನ್ ಮಾತನಾಡಿ, ಪೊಲೀಸ್ ಇಲಾಖೆಯ ಮುಖ್ಯ ಕಾರ್ಯಗಳೆಂದರೆ ಅಪರಾಧ ತಡೆ ಮತ್ತು ಅಪರಾಧ ಪತ್ತೆ ಹಚ್ಚುವಿಕೆಯಾಗಿದೆ. ಆದರೆ ಸಮಾಜದಲ್ಲಿ ಯಾವುದೇ ರೀತಿಯ ತಪ್ಪು ಮತ್ತು ಅಪರಾಧಗಳನ್ನು ತಡೆಗಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯಾವುದೇ ಅಪರಾಧದಿಂದ ಅಪರಾಧಿ ಮತ್ತು ಅಪರಾಧಕ್ಕೆ ಬಲಿಯಾದ ಇಬ್ಬರಿಗೂ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿ ಬಾರದಂತೆ ತಡೆಯಲು ಇಲಾಖೆ ಕೆಲಸ ಮಾಡುತ್ತಿದೆ. ಇಂತಹ ಅಪರಾಧಗಳನ್ನು ತಡೆಯುವಲ್ಲಿ ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದರು.

             ಮಕ್ಕಳ ಮೇಲಿನ ಅಪರಾಧ ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶಾಲಾ ವಾತಾವರಣ, ನೆರೆ-ಹೊರೆ ಮತ್ತು ಸುತ್ತಲಿನ ವಾತಾವರಣದಿಂದ ಆಗುವ ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಿಸುವ ಕುರಿತು ಎಲ್ಲರಲ್ಲಿ ಜಾಗೃತಿ ಮೂಡಿಸಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಚಟುವಟಿಕೆಗಳು, ಸಹವಾಸ, ಅಭ್ಯಾಸಗಳ ಮೇಲೆ ನಿಗಾ ಇಡಬೇಕು. ಸಮಸ್ಯೆಗಳು ಕಂಡು ಬಂದರೆ ಚರ್ಚಿಸಿ ಬಗೆಹರಿಸಬೇಕು. ಒಟ್ಟಿನಲ್ಲಿ ಅವರ ಬಾಲ್ಯ ಜೀವನದಲ್ಲಿ ಯಾವುದೇ ಕಹಿ ಘಟಿಸದಂತೆ ಜಾಗೃತೆ ವಹಿಸಬೇಕು. ಹಾಗೂ ಯಾವುದೇ ರೀತಿಯ ಅಪರಾಧಗಳು ಕಂಡು ಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ತಿಳಿಸಬೇಕು. ಅಪರಾಧಗಳನ್ನು ತಡೆಯುವಲ್ಲಿ ಸಹಕರಿಸಬೇಕೆಂದರು.

             ವಿಜನ್ ಇಂಟರ್ ನ್ಯಾಷನಲ್ ಶಾಲಾ ಕಾನೂನು ಸಲಹಾಗಾರರು ಮತ್ತು ವಕೀಲರಾದ ರಜ್ವೀ ಖಾನ್ ಮಾತನಾಡಿ, 1400 ವರ್ಷಗಳ ಹಿಂದೆಯೇ ಪ್ರವಾದಿ ಪೈಗಂಬರರು ನಾವೆಲ್ಲ ಹೇಗೆ ನೆರೆ-ಹೊರೆಯೊಂದಿಗೆ, ಈ ಸಮಾಜದೊಂದಿಗೆ ಶಾಂತಿಯಿಂದ ಕೂಡಿ ಬಾಳಬೇಕೆಂದು ತಿಳಿಸಿದ್ದಾರೆ. ಏಸು, ಬುದ್ದ, ಬಸವ, ಪೈಗಂಬರ್‍ರಂತಹ ಮಹನೀಯರ ಮಾತುಗಳನ್ನು ಪಾಲಿಸಿದಲ್ಲಿ ಅಪರಾಧಗಳೇ ನಡೆಯುವುದಿಲ್ಲವೆಂದರು.

            ಮಕ್ಕಳು ಅಮೂಲ್ಯ ರತ್ನಗಳಿದ್ದಂತೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಇಂತಹ ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಉತ್ತಮ ಭವಿಷ್ಯ ನೀಡುವುದು ನಮ್ಮ ಕರ್ತವ್ಯವಾಗಿದೆ. ಮಕ್ಕಳು ದುರಭ್ಯಾಸಗಳಿಂದ ದೂರ ಇರುವಂತಹ ವಾತಾವರಣವನ್ನು ಪೋಷಕರು, ಶಿಕ್ಷಕರು ನಾವು-ನೀವೆಲ್ಲ ಸೃಷ್ಟಿಸಬೇಕು. ಮಕ್ಕಳ ಮನಸ್ಸು ಬಿಳಿ ಹಾಳೆ ಇದ್ದ ಹಾಗೆ. ಆ ಬಿಳಿ ಹಾಳೆಯ ಮೇಲೆ ಉತ್ತಮವಾದುದ್ದನ್ನೇ ಚಿತ್ರಿಸೋಣವೆಂದು ಕರೆ ನೀಡಿದರು.

            ವೇದಿಕೆ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳು, ನ್ಯಾಯಾಧೀಶರು, ವಕೀಲರು ಮತ್ತು ಆರಕ್ಷಕ ಅಧಿಕಾರಿಗಳೊಂದಿಗೆ ಸಂವಾದಿಸಿದರು.

              ನಸ್ರೀನ್ ಪಾಟಿಲ್, ಷಫೀಕ್ ಪಂಡಿತ್, ಹಿಮಾಯತ್‍ವುಲ್ಲಾ, ಮಹಮ್ಮದ್ ಗೌಸ್, ಅಬ್ದುಲ್ ಖದೀರ್, ಜವೀವುಲ್ಲಾ ಖಾನ್, ರಫೀಕ್, ಅಬ್ದುಲ್ ರಹಮಾನ್, ಸೈಯದ್, ಜುಬೇರ್, ಹಾಗೂ ಶಾಲಾ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು. ವಿಜನ್ ಇಂಟರ್‍ನ್ಯಾಷನಲ್ ಶಾಲೆಯ ಮುಖ್ಯ ಶಿಕ್ಷಕ ಮಹಮ್ಮದ್ ಸಜ್ಜಾದ್ ಕಾರ್ಯಕ್ರಮ ನಿರ್ವಹಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap