ಸಾಧಕನ ಬದುಕಿನಿಂದ ಉತ್ತಮ ಅಂಶ ಪಡೆಯೋಣ

0
15

ದಾವಣಗೆರೆ:

       ಒಬ್ಬ ಸಾಧಕನ ಜೀವನಾನುಭವದಿಂದ ಉತ್ತಮ ಅಂಶಗಳನ್ನು ಪಡೆದು, ಸಾಧನೆಗೈದು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಕಿವಿಮಾತು ಹೇಳಿದರು.

         ಇಲ್ಲಿನ ವಿದ್ಯಾನಗರ ಉದ್ಯಾನವನದ ಕಾವ್ಯಮಂಟಪದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ, ಗ್ರಂಥ ಸರಸ್ವತಿ ಪ್ರತಿಭಾರಂಗದಿಂದ ಆಯೋಜಿಸಿದ ಸಾಧಕರೊಂದಿಗೆ ಸಂವಾದ ಹಾಗೂ ಜಿಲ್ಲಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಡಿದರು.

         ಒಬ್ಬ ಸಾಧಕನ ಸಾಧನೆ ಹಾಗೂ ಆತನ ಜೀವನದ ಅನುಭವಗಳನ್ನು ಎಲ್ಲರೂ ಒಂದೆಡೆ ಸೇರಿ, ಅವರಿಂದ ನಮ್ಮ ಬದುಕಿಗೆ ಬೇಕಾಗುವಂತಹ ಉತ್ತಮ ಅಂಶಗಳನ್ನು ಅರಿತು ಪರಿಭಾವಿಸುವುದು ಒಂದು ದೊಡ್ಡ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪ್ರೇರಣೆಯಾಗಲಿದೆ ಎಂದರು.

        ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಜಾನಪದ ಕಲಾವಿದ ಯುಗಧರ್ಮ ರಾಮಣ್ಣ, ಜಾನಪದ ಎನ್ನುವುದು ಜನಪದ-ಜಾನಪದ-ಜಾಣರ ಪದವಾಗಿದ್ದು, 64 ವಿದ್ಯೆಗಳಿಗೆ ತಾಯಿಬೇರು ಈ ನಮ್ಮ ಜಾನಪದವಾಗಿದೆ. ಅದರ ಆಳ. ಅರಿವು, ವಿಸ್ತೀರ್ಣ,ಅಳತೆಗೆ ನಿಲುಕದ್ದು ಜಾನಪದ. ಜನಪದರು ದಿನನಿತ್ಯದ ಬದುಕನ್ನು ಪದಕಟ್ಟಿ ಹಾಡುತ್ತಿದ್ದರು. ಈ ಪದ, ಶಬ್ಧಕೋಶಗಳನ್ನು ಅವರು ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಕಲಿತು ಬಂದವರಲ್ಲ ಎಂದು ತಿಳಿಸಿದರು.

         ಹಿರಿಯ ಸಾಹಿತಿ .ಎಚ್.ಎ.ಭಿಕ್ಷಾವರ್ತಿಮಠ ಮಾತನಾಡಿ, ಒಬ್ಬ ಪರಿಪಕ್ವವಾದ ಕವಿಯಾಗಿ ರೂಪುಗೊಳ್ಳಬೇಕಾದರೆ ಸಹೃದಯ ಓದುಗಾರನಾಗಿರಬೇಕು. ಆದಷ್ಟು ಸಂಕ್ಷಿಪ್ತ ಪದ ಬಳಕೆಯನ್ನು ಮಾಡಿ ಕವನ ರಚಿಸಿದಾಗ ಅದು ಉತ್ತಮ ಕಾವ್ಯ ವಾಗುತ್ತದೆ. ತಾನು ಬರೆದ ಕವನಗಳನ್ನು ಮತ್ತೆ ಮತ್ತೆ ಓದಿ ಪುನಃ ತಿದ್ದುಪಡಿಮಾಡುವ ಅಭ್ಯಾಸವಿದ್ದಾಗ ಉತ್ತಮ ಗುಣಮಟ್ಟದ ಕವನ ಸೃಷ್ಠಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

        ಗ್ರಂಥ ಸರಸ್ವತಿಯ ಅಧ್ಯಕ್ಷ ಶಿವಕುಮಾರ ಆರ್.ಕುರ್ಕಿ, ಬೆಂಗಳೂರಿನ ರಂಗ ಸಮಾಜದ ಸದಸ್ಯ ಮಲ್ಲಿಕಾರ್ಜುನ ಕಡಕೋಳ, ಕಜಾಪ ಅಧ್ಯಕ್ಷ ಡಾ.ಎಚ್.ವಿಶ್ವನಾಥ, ಸಾಂಸ್ಕತಿಕ ಸಂಘಟಕ ಎನ್.ಎಸ್.ರಾಜು, ಇಪ್ಟಾ ಕಲಾವಿದ ಐರಣಿ ಚಂದ್ರು ಭಾಗವಹಿಸಿದ್ದರು.
ನಂತರ ನಡೆದ ಜಿಲ್ಲಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗಳಾದ ಎಸ್.ಓಂಕಾರಯ್ಯ ತವನಿ„, ಸೀತಾ ಎಸ್.ನಾರಾಯಣ, ರಾಜೇಂದ್ರ ಪ್ರಸಾದ ನೀಲಗುಂದ, ಸುಭಾಷಿಣಿ ಮಂಜುನಾಥ, ಎಚ್.ಕೆ.ಕೊಟ್ರಪ್ಪ, ಜಿ.ಮಹದೇವಪ್ಪ, ಸುಬ್ರಮಣ್ಯ ನಾಡಿಗೇರ, ವೀಣಾ ಕೃಷ್ಣಮೂರ್ತಿ, ಓಂಕಾರಮ್ಮ ರುದ್ರಮುನಿಸ್ವಾಮಿ, ಅನ್ನಪೂರ್ಣ ಪಾಟೀಲ, ವಿನಯಕುಮಾರ ಸಾಹುಕಾರ, ಗೀತಾ ಮಂಜುನಾಥ, ಗಂಗಾಧರ ಬಿ.ಎಲ್.ನಿಟ್ಟೂರು, ಅರುಧತಿ ರಮೇಶ, ಚಂದ್ರಿಕಾ ಜಗನ್ನಾಥ, ಸುನಿತಾ ಪ್ರಕಾಶ, ರೇವಣ್ಣ ಬಳ್ಳಾರಿ, ಗಿರಿಜಾ ಸಿದ್ದಲಿಂಗಪ್ಪ, ವಿ.ಎಚ್.ಮಾರುತಿ, ಕೆ.ಎನ್.ಸ್ವಾಮಿ, ಮಹಾಂತೇಶ ಬಿ.ನಿಟ್ಟೂರು, ಪರಮೇಶ್ವರಪ್ಪ, ಬಸವರಾಜ, ಕೆ.ಜಿ.ಸರೋಜ ನಾಗರಾಜ, ಎ.ಎನ್.ಚಂದ್ರಶೇಖರ ಭಾಗಹಿಸಿದ್ದರು. ಸುಶ್ರಾವ್ಯ ಸಂಗೀತ ವೃಂದದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here