ವ್ರತಾಚರಣೆ ಮೂಲಕ ಅಯ್ಯಪ್ಪನ ದರ್ಶನದಿಂದ ಮುಕ್ತಿ

ಬರಗೂರು

       ನಲವತ್ತೆಂಟು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಅಯ್ಯಪ್ಪ ವ್ರತಾಚರಣೆ ಮಾಡಿ ಶಬರಿಮಲೈ ಯಾತ್ರೆ ಕೈಗೊಂಡು ಅಯ್ಯಪ್ಪಸ್ವಾಮಿ ದರ್ಶನ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯನ್ನು ಪಡೆಯಬಹುದೆಂದು ಬರಗೂರಿನ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಗುರುಸ್ವಾಮಿಯಾದ ವೀರಭದ್ರಸ್ವಾಮಿ ತಿಳಿಸಿದರು.

         ಶಿರಾ ತಾಲ್ಲೂಕು ಬರಗೂರು ಗ್ರಾಮದ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಏರ್ಪಡಿಸಿದ್ದ ಪಡಿಪೂಜೆ ಹಾಗೂ ಅದ್ದೂರಿ 26ನೇ ವರ್ಷದ ವೈಭವದ ಅಯ್ಯಪ್ಪಸ್ವಾಮಿ ಉತ್ಸವ ಮೆರವಣಿಗೆ ಕಾರ್ಯಕ್ರಮದಲ್ಲಿ ಹಿತ ನುಡಿದು ಭಕ್ತರಿಗೆ ಸಲಹೆ ನೀಡಿದರು. ಅಯ್ಯಪ್ಪ ಭಕ್ತರು ಕೇವಲ 5-7 ದಿನಗಳಿಗೆ ಸೀಮಿತಗೊಳಿಸಿ ವ್ರತಾಚರಣೆ ಮಾಡಿದರೆ ಸಾಲದು ಅರ್ಧ ಮಂಡಲ ಅಥವಾ ಒಂದು ಮಂಡಲ, ಅಂದರೆ 21 ರಿಂದ 48 ದಿನಗಳ ಕಾಲ ವ್ರತಾಚರಣೆ ಮಾಡುವುದರಿಂದ ಸಕಲ ಸಿದ್ಧಿಗಳನ್ನು ಪಡೆಯಬಹುದು.

          ವ್ರತಾಚರಣೆ ಮುಗಿದ ನಂತರ ಪವಿತ್ರ ಇಡುಮುಡಿಯನ್ನು ಕಟ್ಟಿಕೊಂಡು ಶಬರಿಮಲೆ ಯಾತ್ರ್ರೆ ಮಾಡಿ ಅಯ್ಯಪ್ಪ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಇದರ ಅರಿವು ಶ್ರದ್ದಾಭಕ್ತಿಯಿಂದ ವ್ರತ ಮಾಡಿದವರಿಗೆ ಮಾತ್ರ ಗೋಚರಿಸುತ್ತದೆ. 18 ವರ್ಷಗಳ ಕಾಲ ಕಠಿಣ ವ್ರತಾಚರಣೆ ಮಾಡಿ ಶ್ರೀಸ್ವಾಮಿಯ ದರ್ಶನ ಪಡೆಯುವುದರಿಂದ ತಮ್ಮ ಜೀವನದಲ್ಲಿ ಮುಕ್ತಿಯನ್ನು ಪಡೆಯಬಹುದಾಗಿದೆ ಎಂದರು.

          ಇದೇ ವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಭಕ್ತರು ಭಜನೆ ಮತ್ತು ಶರಣು ಘೋಷಗಳೊಂದಿಗೆ ಶ್ರೀಗಣೇಶ, ಅಯ್ಯಪ್ಪ, ಸುಬ್ರಹ್ಮಣ್ಯ ಸ್ವಾಮಿಯ ಭಾವಚಿತ್ರದ ಉತ್ಸವದಲ್ಲಿ ವೈಭವದ ಮೆರವಣಿಗೆ ನಡೆಸಿದರು. ಶ್ರೀಅಯ್ಯಪ್ಪ ದೇವಸ್ಥಾನದಲ್ಲಿ ಪಡಿಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

           ಶ್ರೀಅಯ್ಯಪ್ಪಸ್ವಾಮಿ ಸೇವಾಟ್ರಸ್ಟ್‍ನ ಅಧ್ಯಕ್ಷ ಗುರುಸ್ವಾಮಿ, ಖಜಾಂಚಿ ಎಚ್.ಹನುಮಂತರಾಯಪ್ಪ, ಟ್ರಸ್ಟ್ ಸದಸ್ಯರಾದ ನರಸಿಂಹಮೂರ್ತಿಸ್ವಾಮಿ, ಕೆ.ಹನುಮಂತರಾಯಪ್ಪ, ಲೋಕೇಶ್, ರಾಜು, ನಾಗಭೂಷಣ್, ರೇಣುಕಾ ಪ್ರಸಾದ್ ಹಾಗೂ ಅಪಾರ ಸಂಖ್ಯೆಯ ಅಯ್ಯಪ್ಪ ಭಕ್ತರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap