ಯಡಿಯೂರಪ್ಪ ವಿರುದ್ಧ 1800 ಕೋಟಿ ಹಗರಣದ ಬಾಂಬ್ ಸಿಡಿಸಿದ ಸುರ್ಜಿವಾಲ…!!!!

ನವದೆಹಲಿ

      ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ 1800 ಕೋಟಿ ರೂಗಳ ಹಗರಣ ನಡೆದಿದ್ದು ಈ ಪೈಕಿ ಒಂದು ಸಾವಿರ ಕೋಟಿ ರೂಪಾಯಿ ಬಿಜೆಪಿ ಹೈಕಮಾಂಡ್‍ಗೆ ತಲುಪಿದೆ ಎಂದು ಕಾಂಗ್ರೆಸ್ ಇಂದು ಬಾಂಬ್ ಸಿಡಿಸಿದೆ.

       ದೆಹಲಿಯಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ವಕ್ತಾರ ಸುರ್ಜೇವಾಲಾ,ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ಹಗರಣದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಅವರ ಕೈ ಬರಹದ ದಾಖಲೆ ಸಿಕ್ಕಿದೆ.ಅದರ ಪ್ರಕಾರ,1800 ಕೋಟಿ ರೂಗಳನ್ನು ಯಡಿಯೂರಪ್ಪ ವಿವಿಧ ಮೂಲಗಳಿಗೆ ನೀಡಿದ್ದಾರೆ ಎಂದು ಆರೋಪಿಸಿದರು.

        ಇವತ್ತು ಪ್ರಧಾನಿಯಾಗಿರುವ ನರೇಂದ್ರಮೋದಿ ಸರ್ಕಾರದಲ್ಲಿರುವ ಸಚಿವ ನಿತೀನ್ ಗಡ್ಕರಿ,ಅರುಣ್ ಜೇಟ್ಲಿ,ರಾಜನಾಥ್ ಸಿಂಗ್ ಸೇರಿದಂತೆ ಹಲವರಿಗೆ ಯಡಿಯೂರಪ್ಪ ಹಣ ರವಾನಿಸಿದ್ದಾರೆ ಎಂದು ಆರೋಪಿಸಿದರು.

       ಅವತ್ತು ರಾಜ್‍ನಾಥ್‍ಸಿಂಗ್ ಅವರಿಗೆ ನೂರು ಕೋಟಿ ರೂಪಾಯಿ ತಲುಪಿದೆ.ಗಡ್ಕರಿ ಕುಟುಂಬದಲ್ಲಿ ನಡೆದ ವಿವಾಹವೊಂದಕ್ಕೆ ಹತ್ತು ಕೋಟಿ ರೂಪಾಯಿ ತಲುಪಿದೆ.ತಮ್ಮ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೋರಾಟ ನಡೆಸಲು ಯಡಿಯೂರಪ್ಪ ಐವತ್ತು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

        ಅದೇ ರೀತಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗೆ ಒಂದು ಸಾವಿರ ಕೋಟಿ ರೂಪಾಯಿ ತಲುಪಿದೆ.ಈ ಎಲ್ಲವುಗಳ ಕುರಿತು ಯಡಿಯೂರಪ್ಪ ಅವರು ತಮ್ಮದೇ ಹಸ್ತಾಕ್ಷರದಲ್ಲಿ ಬರೆದಿದ್ದಾರೆ.

       ಇವತ್ತು ಭ್ರಷ್ಟಾಚಾರ ನಿರ್ಮೂಲನೆಯ ಕುರಿತು ಪ್ರಧಾನಿ ನರೇಂದ್ರಮೋದಿ ಮಾತನಾಡುತ್ತಾರೆ.ಅವರ ಮಾತನ್ನು ಕೇಳಿದರೆ ಇನ್ನೇನು ದೇಶದಲ್ಲಿ ಭ್ರಷ್ಟಾಚಾರವೇ ನಿಂತುಹೋಯಿತೇನೋ ಎಂಬಂತೆ ಬಾಸವಾಗುತ್ತದೆ ಎಂದು ವ್ಯಂಗ್ಯವಾಡಿದರು.

       ಹೀಗಾಗಿ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಪ್ರಾಮಾಣಿಕತೆಯಿಂದ ನಡೆದುಕೊಳ್ಳಲಿ.ಲೋಕಪಾಲ್ ಸಂಸ್ಥೆಯ ವತಿಯಿಂದ ಯಡಿಯೂರಪ್ಪ ಅವರ ಕಾಲದಲ್ಲಾದ ಹಗರಣಗಳ ಕುರಿತು ತನಿಖೆ ನಡೆಯಲಿ ಎಂದರು.

       ಸರ್ಕಾರ ಬರುವ ಮುನ್ನ ನರೇಂದ್ರ ಮೋದಿಯವರಾಡಿದ ಯಾವ ಮಾತುಗಳೂ ಈಡೇರಿಲ್ಲ.ಕಾಳಧನ ಹೋಗಿಲ್ಲ.ಭ್ರಷ್ಟಾಚಾರ ನಿಂತಿಲ್ಲ.ಉದ್ಯೋಗ ಪರ್ವ ಶುರುವಾಗಿಯೇ ಇಲ್ಲ.ನಿರುದ್ಯೋಗದ ಸರಣಿ ಮುಂದುವರಿದಿದೆ.

      ಹೀಗಿದ್ದರೂ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಆಸೆಯಿಂದ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದಾರೆ.ಹೀಗೆ ಸುಳ್ಳು ಹೇಳುವ ಮೊದಲು ಯಡಿಯೂರಪ್ಪ ಅವರ ಹಸ್ತಾಕ್ಷರ ಹೊಂದಿರುವ ಡೈರಿಯ ಕುರಿತು,ಅದರಲ್ಲಿ ಹೇಳಿರುವ ಒಂದು ಸಾವಿರದ ಎಂಟು ನೂರು ಕೋಟಿ ರೂಗಳ ಕುರಿತು ತನಿಖೆ ನಡೆಸಲಿ ಎಂದರು.

ರಾಜ್ಯ ಬಿಜೆಪಿ ವಿರೋಧ

      ಈ ಮಧ್ಯೆ ಕಾಂಗ್ರೆಸ್ ವಕ್ತಾರ ಸುರ್ಜೇವಾಲಾ ಅವರ ಆರೋಪಗಳ ಕುರಿತು ಬೆಂಗಳೂರಿನಲ್ಲಿಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ,ಯಡಿಯೂರಪ್ಪ ಕಾಲದಲ್ಲಿ ಇಂತಹ ಹಗರಣ ನಡೆದಿದೆ ಎಂಬುದೇ ಸುಳ್ಳು ಎಂದಿದೆ.

      ಐಟಿ ವಶಪಡಿಸಿಕೊಂಡಿದೆ ಎನ್ನಲಾದ ಡೈರಿಯೇ ನಕಲಿ.ಮತ್ತು ಅದರಲ್ಲಿರುವ ಯಡಿಯೂರಪ್ಪ ಅವರ ಸಹಿಯೂ ನಕಲಿ ಎಂಬುದು ತನಿಖೆಯಿಂದ ಯಾವತ್ತೋ ಬಯಲಾಗಿದೆ.

      ಆದರೆ ಪ್ರಧಾನಿ ನರೇಂದ್ರಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಹತಾಶರಾಗಿದ್ದಾರೆ.ಯಾವ ಕಾರಣಕ್ಕೂ ಮರಳಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅರಿವಾಗಿರುವುದರಿಂದ ಅವರಿಗೆ ಇದನ್ನು ಸಹಿಸಿಕೊಳ್ಳುವುದು ಕಷ್ಟವಾಗಿದೆ.

     ಸಧ್ಯದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸೋಲುವುದು ಖಚಿತ ಎಂಬುದು ಗೊತ್ತಿರುವುದರಿಂದ ಇಂತಹ ಊಹಾಪೋಹದ ಆರೋಪಗಳನ್ನು ಮಾಡಲಾಗುತ್ತಿದೆ.

     ಆದರೆ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲ.ಬದಲಿಗೆ ನಿಶ್ಚಿತವಾಗಿ ಬಿಜೆಪಿ ದೇಶದ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ.ಈ ವಿಷಯದಲ್ಲಿ ಯಾವುದೇ ಸಂದೇಹ ಬೇಕಿಲ್ಲ.ಆದರೆ ಚುನಾವಣಾ ಲಾಭಕ್ಕಾಗಿ ಕಾಂಗ್ರೆಸ್ ಇಂತಹ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ.ಆಧಾರ ರಹಿತವಾದ ಇಂತಹ ಆರೋಪಗಳನ್ನು ಮಾಡುವುದರಿಂದ ಅದಕ್ಕೆ ಯಾವ ಲಾಭವೂ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದೆ.

     ಎಲ್ಲಕ್ಕಿಂತ ಮುಖ್ಯವಾಗಿ ಮುಗಿದ ಅಧ್ಯಾಯವೊಂದನ್ನು ಹಿಡಿದುಕೊಂಡು ಜಗ್ಗುತ್ತಿರುವುದೇ ಕಾಂಗ್ರೆಸ್ ಪಕ್ಷ ನೈತಿಕವಾಗಿ ದಿವಾಳಿಯಾಗಿದೆ ಎಂಬುದರ ಸಂಕೇತ ಎಂದೂ ಅದು ಟೀಕಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap