8 ವಿಧಾನಸಭಾ ಕ್ಷೇತ್ರಗಳು: ಭವಿಷ್ಯ ನಿರ್ಧರಿಸಲಿರುವ 16,08,000 ಮತದಾರರು

0
14

ತುಮಕೂರು

        ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು, ಬಿಜೆಪಿ ಅಭ್ಯರ್ಥಿ ಮಾಜಿ ಸಂಸದ ಜಿ ಎಸ್ ಬಸವರಾಜು ಸೇರಿ 15 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಕ್ಷೇತ್ರದ ಮತದಾರರು ಗುರುವಾರ ನಿರ್ಧಾರ ಮಾಡಲಿದ್ದಾರೆ.

       ಕ್ಷೇತ್ರದ 16,08,000 ಮತದಾರರಿಗಾಗಿ 1907 ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಕ್ತ ಹಾಗೂ ಶಾಂತಿಯುತವಾಗಿ ಮತದಾನ ಮಾಡಲು ಎಲ್ಲಾ ಮತಗಟ್ಟೆಗಳಲ್ಲಿ ಸರ್ವಸಿದ್ಧತೆ ಮಾಡಲಾಗಿದೆ. ಗುರುವಾರ ಬೆಳಿಗ್ಗೆ 7ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾರರು ನಿರ್ಭೀತಿಯಿಂದ ತಮ್ಮ ಹಕ್ಕು ಚಲಾಯಿಸಲು ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆ ಸಲುವಾಗಿ ಬುಧವಾರ ಸಂಜೆ 6ಗಂಟೆಯಿಂದ ಮತದಾನ ನಡೆಯುವ ಗುರುವಾರ ಮಧ್ಯರಾತ್ರಿವರೆಗೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಆದೇಶ ಹೊರಡಿಸಿದ್ದಾರೆ.

     ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 1907 ಮತಗಟ್ಟೆ, ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯ ಶಿರಾ ಹಾಗೂ ಪಾವಗಡ ತಾಲ್ಲೂಕಿನಲ್ಲಿ 513 ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕುಣಿಗಲ್ ತಾಲ್ಲೂಕಿನಲ್ಲಿ 264 ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು ಇವುಗಳಲ್ಲಿ 536 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಎಲ್ಲೆಡೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

      ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 16,08,000 ಮತದಾರ ಪೈಕಿ ಪುರುಷರು 803006 ಹಾಗೂ 804874 ಮಹಿಳಾ ಮತದಾರರಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೂ ಸೇರುವ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 410867 ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಕುಣಿಗಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 190913 ಮತದಾರರು ಇದ್ದಾರೆ.

     ಜಿಲ್ಲೆಯಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸುಮಾರು 5 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. 4100 ಪೊಲೀಸ್ ಸಿಬ್ಬಂದಿ, ನಾಲ್ಕು ಕಂಪನಿಗಳ ಆರ್ಮ್‍ಡ್ ಪೊಲೀಸ್, 13 ಕೆಎಸ್‍ಆರ್‍ಪಿ ತುಕಡಿಗಳು ಸೇರಿದಂತೆ 5ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಚುನಾವಣಾ ಮತದಾನಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಈಗಾಗಲೇ ಎಲ್ಲಾ ಕಡೆ ರೂಟ್‍ಮಾರ್ಕ್ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ತಿಳಿಸಿದ್ದಾರೆ.

     ಮತಗಟ್ಟೆಯೊಳಗೆ ಮತದಾರರು ನಿಗಧಿಪಡಿಸಿರುವ ಗುರುತಿನ ಚೀಟಿ ಹಾಜರುಪಡಿಸಿ ಮತ ಚಲಾಯಿಸಬೇಕು. 15 ಅಭ್ಯರ್ಥಿಗಳ ಹೆಸರು ಹಾಗೂ ನೋಟಾ ಸೇರಿ 16 ಕ್ರಮಸಂಖ್ಯೆಗಳ ಒಂದು ಮತಯಂತ್ರದಲ್ಲಿ ಮತದಾರರು ತಮಗೆ ಇಚ್ಚಿಸುವ ಅಭ್ಯರ್ಥಿ ಹೆಸರಿನ ಮುಂದಿರುವ ಬಟನ್ ಒತ್ತುವ ಮೂಲಕ ತಮ್ಮ ಮತ ದಾಖಲಿಸಬಹುದು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here