ಧಾರ್ಮಿಕ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣವನ್ನೂ ನೀಡಲು ಮದರೆಸಾಗಳು ಆಧ್ಯತೆ ನೀಡಬೇಕು

ಹರಿಹರ:

       ಧಾರ್ಮಿಕ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣವನ್ನೂ ನೀಡಲು ಮದರೆಸಾಗಳು ಆಧ್ಯತೆ ನೀಡಬೇಕೆಂದು ಅರಣ್ಯ, ಪರಿಸರ ಸಚಿವ ಆರ್.ಶಂಕರ್ ಹೇಳಿದರು.

       ಸಮೀಪದ ಕವಲೆತ್ತು ಗ್ರಾಮದ ಚಮನ್ ಷಾ ವಲಿ ಮತ್ತು ಅಬ್ಬಾಸ್ ಷಾ ವಲಿ ಪೀರ್ ಪಂಜಾಬಿ ಸಮಿತಿಯ ಆಧುನಿಕರಣಗೊಂಡ ಸಬ್ರಿಯಾ ಅರಬ್ಬಿ ಮದರೆಸಾ ಮತ್ತು ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

        ಕೇವಲ ಧಾರ್ಮಿಕ ಶಿಕ್ಷಣ ಈಗಿನ ಕಾಲಮಾನಕ್ಕೆ ಸಾಕಾಗುವುದಿಲ್ಲ. ಮಕ್ಕಳಿಗೆ ಆಧುನಿಕ ಸಾಂಪ್ರದಾಯಿಕ ಶಿಕ್ಷಣದ ಅಗತ್ಯವಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಅನುದಾನದಿಂದ ಮದರೆಸಾದ ಆಧುನೀಕರಣ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭಿಸಿರುವುದು ಸಂತಸಕರ. ಈ ಭಾಗದ ಮಕ್ಕಳಿಗೆ ಈ ಕೇಂದ್ರ ಶಿಕ್ಷಣ ದಾಸೋಹ ನೀಡುವ ಸ್ಥಳವಾಗಿ ಬೆಳೆಯಲಿ ಎಂದು ಹಾರೈಸಿದರು.

        ಸಂಸ್ಥೆಯ ಕಾರ್ಯದರ್ಶಿ ಮೊಹ್ಮದ್ ಖಾನ್ ಸಾಬ್ ಹೊನ್ನಾಳಿ ಮಾತನಾಡಿ, ಈ ದರ್ಗಾವು ಮುಸ್ಲಿಂ ಸಮಾಜದ ಜೊತೆಗೆ ಅನ್ಯ ಸಮಾಜದವರಿಗೂ ಆರಾಧ್ಯ ಕೇಂದ್ರವಾಗಿದೆ. ಗ್ರಾಮಸ್ಥರು ಹಾಗೂ ಭಕ್ತಾದಿಗಳು ಸಹಕಾರದಿಂದ ಅಭಿವೃದ್ಧಿಯನ್ನು ಕಾಣುತ್ತಿದೆ.

         ಇಡೀ ವರ್ಷ ಇಲ್ಲಿಗೆ ಭಕ್ತಾದಿಗಳು ಪರಸ್ಥಳಗಳಿಂದ ಬಂದು ಭಕ್ತಿ ಸಮರ್ಪಣೆ ಮಾಡುತ್ತಾರೆ. ವರ್ಷಕ್ಕೊಮ್ಮೆ ಅದ್ದೂರಿಯಾಗಿ ಉರುಸು ಮಹೋತ್ಸವ ಆಚರಿಸಲಾಗುತ್ತಿದೆ. ಆಗಮಿಸುವ ಭಕ್ತಾದಿಗಳ ವಸತಿಗಾಗಿ ಮುಸಾಫಿರ್ ಖಾನಾ (ಯಾತ್ರಿ ನಿವಾಸ) ನಿರ್ಮಿಸಲು ವಕ್ಫ್ ಮಂಡಳಿ ಅಥವಾ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕೆಂದು ಮನವಿ ಸಲ್ಲಿಸಿದರು.
ಅಗತ್ಯ ಅನುದಾನ ಬಿಡುಗಡೆಗೆ ಇಲಾಖೆ ಸಚಿವರ ಗಮನ ಸೆಳೆಯುವುದಾಗಿ ಸಚಿವರು ಭರವಸೆ ನೀಡಿದರು. ಕೊಡಿಯಾಲ ಹೊಸಪೇಟೆ ಅಂಜುಮನ್ ಅಧ್ಯಕ್ಷ ಅಬ್ಬು ಸ್ವಾಲೇಹಾ ಮತ್ತು ಸಮಿತಿಯವರು ಸಚಿವರಿಗೆ ಕೊಡಿಯಾಲಾದಲ್ಲಿ ಶಾದಿ ಮಹಲ್ ಹಾಗೂ ಅರಬ್ಬಿ ಮದರೆಸಾ ನಿರ್ಮಿಸಲು ಅನುದಾನ ಕೋರಿ ಮನವಿ ನೀಡಿದರು.

          ಗ್ರಾಪಂ ಅಧ್ಯಕ್ಷ ಅಷ್ಠಮೂರ್ತಿ ಎ. ಓಲೇಕಾರ್, ಮಾಜಿ ಅಧ್ಯಕ್ಷರಾದ ರೇವಣಪ್ಪ ಕೋಡೇರ್, ಪುಟ್ಟಪ್ಪ ಮೇಸನ್, ಜಗದೀಶ್ ಎನ್.ಕೆ., ಸಂಸ್ಥೆ ಅಧ್ಯಕ್ಷ ಚಮನ್ ಸಾಬ್ ಮೈದೂರು, ಪದಾಧಿಕಾರಿಗಳಾದ ಖಲೀಲ್‍ಸಾಬ್ ಎಂ. ಹರಿಹರ್, ನೌಷಾದ್ ಗನ್ನೆವಾಲೆ, ಹುಸೇನ್ ಸಾಬ್ ಬುಡಜ್ಜಿ, ಸ್ಯಾಮ್‍ಸನ್ ಮೇಸ್ತ್ರಿ ಇತರರಿದ್ದರು.ನಂತರ ಸಚಿವರಿಗೆ ದರ್ಗಾ ಸಂಸ್ಥೆಯವರು ಸತ್ಕರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap