ಡಿ.21ಕ್ಕೆ ಮಂತ್ರಿ ಮಂಡಲ ರಚನೆ …!!!

0
44

ಬೆಂಗಳೂರು

          ಮಂತ್ರಿಮಂಡಲ ವಿಸ್ತರಣೆಯಾಗುವುದಿಲ್ಲ ಎಂಬ ಕೆಲ ಶಾಸಕರ ಅನುಮಾನಗಳಿಗೆ ತೆರೆ ಎಳೆದಿರುವ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸೆಂಬರ್ 21 ರಂದೇ ಸಚಿವರ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

          ಡಿಸೆಂಬರ್ 22 ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಂಪುಟಕ್ಕೆ ನೂತನ ಸಚಿವರು ಸೇರ್ಪಡೆಯಾಗಲಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

          ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 22 ರಂದು ಮಂತ್ರಿ ಮಂಡಲ ವಿಸ್ತರಣೆ ಮಾಡಬೇಕು ಎಂದು ಈಗಾಗಲೇ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಅದರಂತೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

          ಡಿಸೆಂಬರ್ 21 ರಂದು ವಿಧಾನಮಂಡಲ ಅಧಿವೇಶನ ಮುಗಿಯಲಿದ್ದು, ನಂತರ ಸಿದ್ದರಾಮಯ್ಯ ಹಾಗೂ ಮತ್ತಿತರ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಲಿದ್ದಾರೆ. ಅಂದು ಸಂಜೆ ರಾಜ್ಯದ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಗೆ ಸಮಯ ನೀಡಿದ್ದಾರೆ ಎನ್ನಲಾಗಿದೆ.

          ಈ ಮಧ್ಯೆ ಮಂತ್ರಿಮಂಡಲ ವಿಸ್ತರಣೆಯಾಗುವುದಿಲ್ಲ ಎಂಬ ಕಂಪ್ಲಿ ಶಾಸಕ ಗಣೇಶ್ ಹೇಳಿಕೆಗೆ ಪ್ರತಿಕ್ರಯಿಸಿದ ಸಿದ್ದರಾಮಯ್ಯ,  ನಿಗದಿಯಂತೆ ಮಂತ್ರಿಮಂಡಲ ವಿಸ್ತರಣೆಯಾಗಲಿದ್ದು, ಯಾವುದೇ ಸಂದೇಹ ಬೇಡ ಎಂದರು.

         ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎನ್ನುವ ಶಾಸಕ ಗಣೇಶ್ ಅವರ ಅಭಿಲಾಷೆಗೆ ಮಾರ್ನುಡಿದ ಸಿದ್ದರಾಮಯ್ಯ, ಅದು ಅವರ ವೈಯಕ್ತಿಕ ಅಭಿಪ್ರಾಯ. ಅದಕ್ಕೆ ನಾನೇನು ಮಾಡಲಿ. ಈಗ ಮುಖ್ಯಮಂತ್ರಿ ಕುರ್ಚಿ ಖಾಲಿ ಎಲ್ಲಿದೆ. ಮುಂದಿನ ಬಾರಿ ನೋಡೋಣ ಎಂದರು.

         ಮಂತ್ರಿಮಂಡಲ ವಿಸ್ತರಣೆ ಭರವಸೆ ಕುರಿತು ಪ್ರತ್ಯೇಕವಾಗಿ ಮಾತನಾಡಿದ ಮಾಜಿ ಸಚಿವ ಹೆಚ್.ಕೆ.ಪಾಟೀಲ್, ನಿಗದಿಯಂತೆ ವಿಸ್ತರಣೆ ಪ್ರಕ್ರಿಯೆ ನಡೆಯಲಿದೆ ಎಂದು ನಮ್ಮ ಶಾಸಕಾಂಗ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಮಾತನ್ನು ನಾವು ನಂಬಲೇಬೇಕಾಗುತ್ತದೆ ಎಂದರು.

         ಮಂತ್ರಿಮಂಡಲ ವಿಸ್ತರಣೆ ಪ್ರಕ್ರಿಯೆ ಮುಂದಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಕೆಲ ಪಕ್ಷದ ಶಾಸಕರು ಅಸಮಾಧಾನಗೊಂಡಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಎಚ್.ಕೆ. ಪಾಟೀಲ್ ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here