ಮತ ಎಣಿಕೆಗೆ ಕ್ಷಣಗಣನೆ…!

0
16

ಬೆಂಗಳೂರು

       ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಫಲಿತಾಂಶ ಲಭ್ಯವಾಗಲಿದೆ.

        ಮೈತ್ರಿ ಸರ್ಕಾರದ ಅಂಗ ಪಕ್ಷಗಳಾದ ಕಾಂಗ್ರೆಸ್ ಇಲ್ಲವೆ ಜೆಡಿಎಸ್ ಮೇಲುಗೈ ಸಾಧಿಸುತ್ತದೆಯೋ, ಎರಡೂ ಪಕ್ಷಗಳನ್ನು ಎದುರಿಸಿ ಬಿಜೆಪಿ ಗೆಲುವುನ ದಡ ಸೇರುತ್ತದೆಯೋ ಎನ್ನುವ ರಾಜಕೀಯ ಕುತೂಲಕ್ಕೆ ಉತ್ತರ ದೊರೆಯಲಿದೆ.

        ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿಸಲಾಗಿರುವ ಉಪಸಮರದಲ್ಲಿ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಹಾಗೂ ಪ್ರತಿಪಕ್ಷ ಬಿಜೆಪಿಯ ಹುರಿಯಾಳುಗಳು ತಮ್ಮ ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಲು ಸೆಣಸಿದ್ದರು.

        ನಾಳೆ ಬೆಳಿಗ್ಗೆ ಮತ ಎಣಿಕೆ ಆರಂಭವಾಗಲಿದ್ದು, ಮತದಾರನ ಒಲವು ಯಾರ ಪರ ಎಂಬುದಕ್ಕೆ ಮಧ್ಯಾಹ್ನದ ವೇಳೆಗೆ ಉತ್ತರ ದೊರೆಯಲಿದೆ. ನ. 3 ರಂದು ನಡೆದ ಉಪಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಸ್ವೀಕರಿಸಿದ್ದ ಮೂರು ಪಕ್ಷಗಳ ಘಟಾನುಘಟಿ ನಾಯಕರು ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಸರ್ವ ಪ್ರಯತ್ನ ಮಾಡಿದ್ದರು.

        ಮತದಾರರನ ಒಲವು ಯಾರ ಪರ ಎಂಬುದು ವಿದ್ಯುನ್ಮಾನ ಮತ ಯಂತ್ರಗಳಲ್ಲಿ ದಾಖಲಾಗಿದ್ದು, ನಾಳೆ ಬಹಿರಂಗಗೊಳ್ಳಲಿದೆ. ಲೋಕಸಭಾ ಚುನಾವಣೆಗೆ ಇನ್ನು ಆರು ತಿಂಗಳು ಇರುವಾಗ ನಡೆದಿರುವ ಈ ಉಪಚುನಾವಣೆ ಮೈತ್ರಿ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಚುನಾವಣೆಯ ಗೆಲುವು ಮೈತ್ರಿ ಪಕ್ಷಗಳ ಮುಂದಿನ ಭವಿಷ್ಯ ನಿರ್ಧರಿಸಲಿವೆ. ಹಾಗೆಯೇ ಜನರ ಒಲವು ಯಾರ ಕಡೆ ಇದೆ ಎಂಬುದು ಗೊತ್ತಾಗಲಿದೆ.

        ಈ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶತ ಪ್ರಯತ್ನ ನಡೆಸಿದ್ದು, ಚುನಾವಣಾ ಪ್ರಚಾರ ಎಲ್ಲೆ ಮೀರಿ ಸೌಜನ್ಯದ ರೇಖೆಯನ್ನು ದಾಟಿ ಮುಖಂಡರುಗಳು ವಾಕ್ ಸಮರ ಎಗ್ಗಿಲ್ಲದೆ ನಡೆದಿತ್ತು.

        ಈ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಸಹ ಮೈತ್ರಿ ಪಕ್ಷಗಳ ವಿರುದ್ಧ ತನ್ನದೇ ಆದ ರೀತಿಯಲ್ಲಿ ಪ್ರತಿ ಹೋರಾಟ ನಡೆಸಿತ್ತು.

        ನ. 3 ರಂದು ನಡೆದ ಮತದಾನದಲ್ಲಿ ಐದು ಕ್ಷೇತ್ರಗಳಲ್ಲಿ ಸರಾಸರಿ ಶೇ. 65 ರಷ್ಟು ಮತದಾನವಾಗಿದ್ದು, ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅತ್ಯಂತ ಹೆಚ್ಚು ಅಂದರೆ ಶೇ. 77 ರಷ್ಟು ಮತದಾನವಾಗಿತ್ತು. ಮಂಡ್ಯ, ಬಳ್ಳಾರಿ, ಶಿವಮೊಗ್ಗ ಲೋಕಸಭೆಗೆ ಹಾಗೂ ರಾಮನಗರ ಮತ್ತು ಜಮಖಂಡಿ ವಿಧಾನಸಭೆ ಕ್ಷೇತ್ರಗಳಿಗೆ ಈ ಉಪಚುನಾವಣೆ ನಡೆದಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here