ತಿಂಗಳಿಗೊಂದು ಪುಸ್ತಕ ಪರಿಚಯ 106 ನೇ ಕಾರ್ಯಕ್ರಮ

ತುರುವೇಕೆರೆ :

      ಸಂಸ್ಕತ ಕವಿಗಳಿಗಿಂತಲೂ ಪ್ರಧಾನವಾಗಿ ಜೈನ ಕವಿಗಳು ಕನ್ನಡ ಸಾಹಿತ್ಯ ಪರಂಪರೆ ಹುಟ್ಟು ಮತ್ತು ಬೆಳವಣಿಗೆಗೆ ಹೇತುವಾದವರು ಎಂದು ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

       ಪಟ್ಟಣದ ಗಾಯಿತ್ರಿ ಸಮುದಾಯ ಭವನದಲ್ಲಿ ಶನಿವಾರ ಚಿದಂಬರೇಶ್ವರ ಉಚಿತ ಗ್ರಂಥಾಲಯ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ತಿಂಗಳಿಗೊಂದು ಪುಸ್ತಕ ಪರಿಚಯ 106 ನೇ ಕಾರ್ಯಕ್ರಮದಲ್ಲಿ ರನ್ನನ ‘ಗದಾಯುದ್ದ’ ಕೃತಿಯ ಬಗ್ಗೆ ಮಾತನಾಡುತ್ತಾ ಹೇಳಿದರು.

       ಸಂಸ್ಕತ ಭಾಷೆಗೆ ಪರ್ಯಾಯವಾಗಿ ಸ್ಥಳೀಯ ಭಾಷೆಗಳನ್ನೂ ಕಾವ್ಯ ಭಾಷೆಯಾಗಿ ಬರೆಯಬಹುದೆಂದು ಜೈನ ಕವಿಗಳು ಮೊದಲಿಗೆ ತೋರಿಸಿಕೊಟ್ಟರು. ಅದರ ಫಲಶ್ರುತಿಯಾಗಿ ಕನ್ನಡ ಸಾಹಿತ್ಯ ಉದಯಿಸಿತು ಎಂಬ ವಾಸ್ತವ ಸತ್ಯವನ್ನು ಅರಿಯ ಬೇಕಿದೆ.

        ಯಾವುದೇ ಕೃತಿಯನ್ನು ಧ್ಯಾನ ಸ್ಥಿತಿ ಮತ್ತು ಗಂಭೀರ ಓದುವಿನಿಂದ ಮಾತ್ರ ಆ ಕೃತಿಯ ಆಶಯ ಸಹೃದಯನಿಗೆ ದಕ್ಕುತ್ತದೆ. ಪಂಪ ‘ಮಹಾಭಾರತ’ದ ಕಥೆಯನ್ನು ಕಟ್ಟಿಕೊಡುವ ಕ್ರಮಕ್ಕೂ ರನ್ನ ‘ಮಹಾಭಾರತ’ ನಿರೂಪಿಸುವ ವಿಧಾನಕ್ಕೂ ಬಹಳ ವ್ಯತ್ಯಾಸವಿದೆ. ಹಾಗಾಗಿ ಪಂಪನ ಕೃತಿಯನ್ನು ನಮಸ್ಕರಿಸುತ್ತೇವೆ, ರನ್ನನ ಗ್ರಂಥವನ್ನು ಓದುತ್ತೇವೆ ಎಂದಿರುವ ತೀ.ನಂ.ಶ್ರೀ. ಅವರ ಮಾತು ಅಕ್ಷರಶಃ ದಿಟ. ಯಾವ ಕವಿಗೂ ಅವನದೆ ಆದ ಶೈಲಿ, ಭಾಷೆ, ಲೋಕದರ್ಶನದ ಆಶಯಗಳಿರುತ್ತವೆ. ಇಂತಹ ಸಮನ್ವಯತೆ ಕಾಯ್ದುಕೊಂಡವರು

       ಪಂಪ-ರನ್ನರು. ರನ್ನ ಸಿಂಹಾವಲೋಕನ ತಂತ್ರದೊಂದಿಗೆ ಮಹಾಭಾರತ ಕಥೆಯನ್ನು ಕೆಲ ವಿಶೇಷಣಗಳ ಮೂಲಕ ಸಂವೇದನಾಶೀಲವಾಗಿ ಬಳಸಿದ್ದರಿಂದಲೇ ಅವನ ಬರವಣಿಗೆ ಶೈಲಿ ವಿನೂತ ಮತ್ತು ಅನನ್ಯವಾದೆನಿಸಿದೆ. ಇವುಗಳಿಂದಲೇ ರನ್ನ ಪ್ರತಿಭೆ ಅನಾವರಣವಾಗುತ್ತದೆಂದು ವಿವರಿಸಿದರು.

       ಸಂಸ್ಕತ ಸಾಹಿತ್ಯದಲ್ಲಿ ನಾಯಕ ಪರಂಪರೆ ಇದೆ. ಆದರೆ ಕನ್ನಡ ಸಾರಸ್ವತ ಲೋಕದಲ್ಲಿ ಪ್ರತಿನಾಯಕ ಪರಂಪರೆ ಇದೆ. ಪಂಪ ‘ಪಂಪಭಾರತ’ದ ಆರಂಭದಲ್ಲಿ ನಾಯಕ ಪರಂಪರೆಯನ್ನು ಶಾಬ್ದಿಕವಾಗಿ ಚಿತ್ರಿಸಿದರೂ ಅಂತಿಮವಾಗಿ ಪ್ರತಿನಾಯಕ ಪರಂಪರೆಯನ್ನು ಪ್ರತಿಪಾದಿಸುತ್ತಾನೆ.

          ರನ್ನ ಆತ್ಮಪ್ರತ್ಯದ ಮೂಲಕ ಕಾವ್ಯದೊಳಗೆ ಮಾತನಾಡಿದರೆ, ಪಂಪನದು ಗಾಂಭೀರ ನುಡಿಯಾಗಿರುತ್ತದೆ.ಕೊನೆ ಒಂದೂವರೆ ದಿನ ನಡೆಯುವ ‘ಗದಾಯುದ್ದ’ವನ್ನು ರನ್ನ ತನ್ನ ‘ಗದಾಯುದ್ದ’ ಕೃತಿಯಲ್ಲಿ ಇಡೀ ಮಹಾಭಾರತದ ಕಥೆಯನ್ನು ನೆನಪಿನ ಬುತ್ತಿಯೊಳಗೆ ಬಿಚ್ಚಿಕೊಳ್ಳುವ ರೀತಿ ಸಿಂಹಾವಲೋಕನ ಕ್ರಮದಲ್ಲಿ ಕಾವ್ಯ ರಚಿಸಿದ್ದು ಅವನ ಸೃಜನಶೀಲತೆಗೆ ಹಿಡಿದ ಕೈಗನ್ನಡಿ. ರನ್ನ ಕಾವ್ಯ ವೀರ ಕಾವ್ಯವಾಗಲು ಸಾದ್ಯವಿಲ್ಲ. ಏಕೆಂದರೆ ರನ್ನ ಅಹಿಂಸೆ ಪ್ರತಿಪಾದಿಸುವ ಜೈನ ಪರಂಪರೆಯ ಹಿನ್ನಲೆಯಲ್ಲಿ ಬಂದವನು.

         ಜೊತೆಗೆ ಪಂಪ-ರನ್ನ ಇಬ್ಬರೂ ತನ್ನ ಕಾವ್ಯದಲ್ಲಿ ಯುದ್ದ ಪ್ರಚೋದಿಸುವ ಅಂಶಗಳನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ ಎನ್ನುವುದನ್ನು ಮನಗಾಣ ಬೇಕಿದೆ.ದುರ್ಯೋಧನ ರಣರಂಗಕ್ಕೆ ಹೋದ ವೇಳೆ ಆತನ ದುಃಖದ ವಿವರಗಳು ರನ್ನನ ವ್ಯಕ್ತಿತ್ವವನ್ನೇ ಪ್ರತಿಬಿಂಬಿಸುತ್ತದೆ. ದುರ್ಯೋಧನನ ಸೇಡು ಕೇವಲ ಗುಣಾತ್ಮಕವಾದುದೆ ವಿನಹ ಮಾನವೀಯ ನೆಲೆಯ ಚೌಕಟ್ಟನ್ನು ಎಂದಿಗೂ ಮೀರಿರದು. ಅಭಿಮನ್ಯುವಿನ ಸಾವಿನ ಬಗೆಗಿನ ಲೋಕ ಸತ್ಯದ ಮಾತುಗಳು, ಗುರು ಶಿಷ್ಯರ ಪಾವಿತ್ರತೆ, ಭೀಷ್ಮಾಚಾರ್ಯರ ಭೇಟಿ, ಅಶ್ವತ್ತಾಮ ಪ್ರಸಂಗಗಳು ನಾಟಕೀಯ ದೃಶ್ಯ ಕಾವ್ಯಗಳಿದ್ದಂತೆ ಆದ್ದರಿಂದಲೇ ರನ್ನನ್ನು ಶಕ್ತಿ ಕವಿ ಎಂದು ವಿಮರ್ಶಕರು ಹೊಗಳಿರುವುದು.

       ರನ್ನ ತನ್ನ ಕಾವ್ಯದೊಳಗಿನ ವಿಶೇಷಣಗಳನ್ನು ಔಚಿತ್ಯವರಿತು ಪ್ರಯೋಗಿಸಿದ್ದಾನೆ. ಹಿಂಸೆ, ಕೌರ್ಯಗಳಿಗೆ ಬಳಸುತ್ತಿದ್ದ ಯುದ್ದ ಪರಿಕರಗಳನ್ನು ರನ್ನ ಶಾಂತಿ, ಅರಿವಿನ ಪರಿಕರಗಳಾಗಿ ಬಳಸಿರುವುದು ಆತನ ಪ್ರತಿಭೆಯ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ.
ಆಡಳಿತದಲ್ಲಿ ಕನ್ನಡ ಅನುಷ್ಟನಗೊಳ್ಳಲಿ : ಜಾಗತೀಕರಣದಿಂದ ಭಾರತದೊಳಗಿನ ಬಹುತ್ವ ಕಳೆದು ಹೋಗುತ್ತಿದೆ. ಜೀವಪರವಾದ ನಿಲುವುಗಳು ನಾಶವಾಗುತ್ತಿವೆ.

       ಬದುಕಿನ ನೆಲಮೂಲ ಜ್ಞಾನ ಕಣ್ಮರೆಯಾಗುತ್ತಿದೆ. ಆಡಳಿತದಲ್ಲಿ ಕನ್ನಡ ಭಾಷೆಯ ಅನುಷ್ಠಾನವನ್ನು ಸಮರ್ಥವಾಗಿ ಜಾರಿಗೆ ತರುವಲ್ಲಿ ಐಎಎಸ್ ಅಧಿಕಾರಿಗಳು ವಿಫಲರಾಗಿದ್ದಾರೆ. ಜೊತೆಗೆ ರಾಜಕಾರಣಿಗಳಲ್ಲೂ ಇಚ್ಛಾ ಶಕ್ತಿ ಬೇಕು. ಐಎಎಸ್, ಐಪಿಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡಲ್ಲೇ ಬರೆಯುವಂತೆ ಅವಕಾಶ ಕಲ್ಪಿಸ ಬೇಕೆಂದು ಈಗಾಗಲೇ ಸರ್ಕಾರದ ಮೇಲೆ ಒತ್ತಡ ತರಲಾಗಿದೆ. ತನ್ನ ಪರಿಸರ ಭಾಷೆಯಿಂದ ಕಲಿತ ಮಗು ಹೆಚ್ಚು ಪರಿಪಕ್ವವಾಗಿರುತ್ತದೆ ಎಂದರು.

       ಈ ಸಂದರ್ಭದಲ್ಲಿ ಚಿದಂಬರೇಶ್ವರ ಉಚಿತ ಗ್ರಂಥಾಲಯ, ತಾಲೂಕು ಕಸಾಪ, ತಾಲೂಕು ಕುರುಬರ ಸಂಘದ ವತಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯರನ್ನು ಮೈಸೂರು ಪೇಟ ಧರಿಸಿ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಗೌರವಾದ್ಯಕ್ಷ ಪೊ. ಪುಟ್ಟರಂಗಪ್ಪ ವಹಿಸಿದ್ದರು. ಗಣಕ ಪರಿಷತ್ ಕಾರ್ಯದರ್ಶಿ ಜಿ.ಎಸ್.ನರಸಿಂಹಮೂರ್ತಿ, ಪಂಡಿತಾರಾಧ್ಯ, ಚಿದಂಬರೇಶ್ವರ ಉಚಿತ ಗ್ರಂಥಾಲಯದ ಸಂಸ್ಥಾಪಕ ರಾಮಚಂದ್ರು, ಹೋಬಳಿ ಅಧ್ಯಕ್ಷ ಎನ್.ಆರ್.ಜಯರಾಮ್, ಉಷಾ ಶ್ರೀನಿವಾಸ್, ಸಾಹಿತಿ ತುರುವೇಕೆರೆ ಪ್ರಸಾದ್, ಕುರುಬರ ಸಂಘದ ತಾಲೂಕು ಅಧ್ಯಕ್ಷ ನಾಗೇಶ್, ಆನಂದ್ ವಾಡೆಕರ್ ಮತ್ತು ಅನೇಕ ಸಾಹಿತ್ಯಾಶಕ್ತರು ಪಾಲ್ಗೊಂಡಿದ್ದರು. ಕೃಷ್ಣಚೈತನ್ಯ ನಿರೂಪಿಸಿ, ಕ.ಸಾ.ಪ. ನಂ. ರಾಜು ಸ್ವಾಗತಿಸಿ, ಬಸವರಾಜು ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap