ಮುದ್ದಹನುಮೇಗೌಡ ಬಲಪ್ರದರ್ಶನ

ತುಮಕೂರು

       ಈವರೆಗೆ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಎಸ್.ಪಿ. ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಶಕ್ತಿಪ್ರದರ್ಶನ ನಡೆಸಿದರು.

       ಸೋಮವಾರ ಬೆಳಗ್ಗೆ ತುಮಕೂರು ನಗರದ ಟೌನ್‍ಹಾಲ್ ವೃತ್ತದಲ್ಲಿ ಮುದ್ದಹನುಮೇಗೌಡ ಅವರ ಬಲಪ್ರದರ್ಶನಕ್ಕೆ ಕಾಂಗ್ರೆಸ್‍ನ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸಾಥ್ ನೀಡಿದರು.

        ಬೆಳಗ್ಗೆ 10-30ರಿಂದಲೇ ಇಲ್ಲಿ ಗೌಡರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ಹಾಗೂ ಕಾಂಗ್ರೆಸ್ ಚಿಹ್ನೆಯ ವಸ್ತ್ರವನ್ನು ಕುತ್ತಿಗೆಗೆ ಸುತ್ತಿಕೊಂಡು ನಿಂತರು. ಟೌನ್‍ಹಾಲ್ ವೃತ್ತದಿಂದ ಒಳಗೆ ಕೃಷ್ಣರಾಜೇಂದ್ರ ಪುರ ಭವನದವರೆಗೂ ಉದ್ದಕ್ಕೂ ಜನರು ಜಮಾಯಿಸಿದರು. ತಮಟೆ ವಾದ್ಯದ ಸದ್ದು ಕಿವಿಗಪ್ಪಳಿಸತೊಡಗಿತು. ಸುತ್ತಲೂ ಬೃಹತ್ ಗಿಡಮರಗಳಿರುವುದರಿಂದ ಬಂದವರೆಲ್ಲ ತಂಪಾದ ನೆರಳಿನಲ್ಲಿ ನಿಂತು ರಾಜಕೀಯ ವಿದ್ಯಮಾನಗಳನ್ನು ಚರ್ಚಿಸತೊಡಗಿದರು. ಹೂವಿನಿಂದ ಅಲಂಕರಿಸಿದ ತೆರೆದ ವಾಹನವೊಂದನ್ನೂ ಇಲ್ಲಿ ಸಿದ್ಧಗೊಳಿಸಿ ಇರಿಸಲಾಗಿತ್ತು.

       ಮಧ್ಯಾಹ್ನ 12-30 ರ ಹೊತ್ತಿಗೆ ಟೌನ್‍ಹಾಲ್ ವೃತ್ತಕ್ಕೆ ಮುದ್ದಹನುಮೇಗೌಡ ಮತ್ತು ಕೆ.ಎನ್.ರಾಜಣ್ಣ ಅವರು ಆಗಮಿಸಿದಾಗ, ಇಲ್ಲಿನ ವಾತಾವರಣದಲ್ಲಿ ರಂಗೇರಿತು. ಅಭಿಮಾನಿಗಳು ಘೋಷಣೆ ಕೂಗತೊಡಗಿದರು. ಈರ್ವರೂ ಮುಖಂಡರು ನೇರವಾಗಿ ತೆರೆದ ವಾಹನ ಏರಿನಿಂತು ಎಲ್ಲರಿಗೂ ಕೈಬೀಸಿದರು. ವಾಹನದಲ್ಲಿ ಮೈಕ್ ವ್ಯವಸ್ಥೆ ಇತ್ತಾದರೂ, ಇಲ್ಲಿ ಮಾತನಾಡುವ ಗೊಡವೆಗೆ ಹೋಗಲಿಲ್ಲ. ಕೂಡಲೇ ಜಿಲ್ಲಾಧಿಕಾರಿ ಕಚೇರಿಯತ್ತ ಮೆರವಣಿಗೆಯನ್ನು ಆರಂಭಿಸಿದರು. ತೆರೆದ ವಾಹನವು ಟೌನ್‍ಹಾಲ್ ವೃತ್ತವನ್ನು ದಾಟಬೇಕಾದರೆ ಸುಮಾರು 20-25 ನಿಮಿಷ ತೆಗೆದುಕೊಂಡಿತು. ತಮಟೆ ವಾದನದೊಂದಿಗೆ, ಅಭಿಮಾನಿಗಳು ಮತ್ತು ಕಾರ್ಯಕರ್ತರು ಮೆರವಣಿಗೆಯಲ್ಲಿ ನಡೆಯುತ್ತ ಸಾಗಿದರು.

ಇಲ್ಲಿದ್ದವರಲ್ಲೇ ಅಲ್ಲೂ ಬರ್ತಾರೆ!

       ಮೆರವಣಿಗೆ ಮುಂದಕ್ಕೆ ಹೋದಬಳಿಕ ಕೃಷ್ಣರಾಜೇಂದ್ರ ಪುರಭವನದ ಮುಂದಿನ ನೆರಳಿನಲ್ಲಿ ಕಡಲೆಕಾಯಿ ತಿನ್ನುತ್ತ ನಿಂತಿದ್ದ ಗುಂಪು ಲೋಕಾಭಿರಾಮವಾಗಿ “ಅಯ್ಯೋ ಬಿಡ್ರಿ… ಇಲ್ಲಿದ್ದವರೇ ಆಮೇಲೆ ಅಲ್ಲಿಗೂ (ದೇವೇಗೌಡರ ರ್ಯಾಲಿ) ಬರ್ತಾರೆ” ಎಂದು ಉದ್ಗರಿಸುತ್ತಿದ್ದುದು ಕೇಳಿಬಂದಿತು.

       “ದೇವೇಗೌಡರು ಮಾಜಿ ಪ್ರಧಾನಿಗಳು. ಅವರು ಸ್ಪರ್ಧಿಸುತ್ತಿರುವುದರಿಂದ ಇಡೀ ದೇಶ ನಮ್ಮ ಊರಿನತ್ತ ನೋಡುವಂತಾಗಿದೆ. ಮಾಜಿ ಪ್ರಧಾನಿಗಳಾದರಿಂದ ಇವರ ಸ್ಪರ್ಧೆಯು ಯಾವಾಗಲೂ ಒಂದು ತೂಕ ಹೆಚ್ಚಾಗಿರುತ್ತದೆ” ಎಂದು ತಮ್ಮದೇ ಆದ ವಿಮರ್ಶೆಯಲ್ಲಿ ಆ ಗುಂಪು ತೇಲಿಹೋಗಿತ್ತು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap