ನರೇಗಾದಲ್ಲಿ ಸಾವಿರ ಕೆರೆಗಳ ಅಭಿವೃದ್ಧಿಗೆ ಕ್ರಮ

ಚಿತ್ರದುರ್ಗ

       ಬರುವ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಒಂದು ಸಾವಿರ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಕೆರೆ ಹೂಳೆತ್ತುವುದು, ಕೆರೆಗಳ ಬದುಗಳನ್ನು ಅಭಿವೃದ್ಧಿಪಡಿಸುವುದು, ಗೋಕಟ್ಟೆ, ಕಲ್ಯಾಣಿಗಳನ್ನು ಪುನಶ್ಚೇನಗೊಳಿಸುವುದು ಸೇರಿದಂತೆ ಜಲ ಸಂರಕ್ಷಣೆ ಕೆಲಸಗಳನ್ನು ಮಾತ್ರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಸತ್ಯಭಾಮ ತಿಳಿಸಿದ್ದಾರೆ

       ಜಿಲ್ಲೆಯಲ್ಲಿ ಜಲಾಮೃತ ದಿನ ಆಚರಿಸುವ ಸಂಬಂಧ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.2019 ರ ವರ್ಷವನ್ನು ಜಲವರ್ಷವನ್ನಾಗಿ ಆಚರಿಸಲಾಗುತ್ತಿದೆ. 2019-20 ಸಾಲಿನ ಉದ್ಯೋಗಖಾತ್ರಿ ಯೋಜನೆಯಡಿ ಶೇ. 88 ರಷ್ಟು ಕೂಲಿ ಮೊತ್ತ ಮತ್ತು ಶೇ. 12 ರಷ್ಟು ಸಾಮಗ್ರಿ ಮೊತ್ತದ ಅನುಪಾತದಡಿ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಒತ್ತು ನೀಡಲಾಗುವುದು. ನೀರು ಕೂಡ ನೈಸರ್ಗಿಕ ಸಂಪನ್ಮೂಲವಾಗಿರುವುದರಿಂದ, ಉದ್ಯೋಗಖಾತ್ರಿ ಯೋಜನೆಯಡಿ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

       ಜಿಲ್ಲೆಯಲ್ಲಿ ಒಣ ಭೂಮಿ ಹೆಚ್ಚಾಗಿದ್ದು, ಗಿಡ, ಮರಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಈ ವರ್ಷ ಸರ್ಕಾರಿ ಕಟ್ಟಡಗಳ ಆವರಣ, ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ಸರ್ಕಾರಿ, ಅರೆ ಸರ್ಕಾರಿ ಕಚೇರಿ ಆವರಣಗಳಲ್ಲಿ ಲಭ್ಯವಿರುವ ಖಾಲಿ ಸ್ಥಳಗಳಲ್ಲಿ ಅತಿ ಹೆಚ್ಚು ಗಿಡಗಳನ್ನು ನೆಡಬೇಕು. ಅಲ್ಲದೆ ಪ್ರತಿಯೊಂದು ಗಿಡವನ್ನೂ, ಸಂರಕ್ಷಿಸಲು ಗಿಡಗಳ ದತ್ತು ಸ್ವೀಕಾರದಂತಹ ಕ್ರಮಗಳನ್ನು ಕೈಗೊಳ್ಳಬೇಕು. ಹಣ್ಣಿನ ಗಿಡಗಳು, ಹೂವಿನ ಗಿಡಗಳು ಅಲ್ಲದೆ ನೆರಳನ್ನು ನೀಡುವ ಗಿಡಗಳಿಗೆ ಆದ್ಯತೆ ನೀಡಬೇಕು. ಗಿಡಗಳನ್ನು ಹಾಕಿದ ಕುರಿತು ಜಿಪಿಎಸ್ ನಲ್ಲಿ ದಾಖಲಾಗಬೇಕು. ಇಲ್ಲದಿದ್ದಲ್ಲಿ ಗಿಡಗಳ ದಾಖಲೀಕರಣ ಸಾಧ್ಯವಾಗುವುದಿಲ್ಲ ಎಂದು ತಾಕೀತು ಮಾಡಿದರು.

       ಪ್ರತಿ ಹನಿ ನೀರೂ ಜೀವ ಹನಿಯಾಗಿದ್ದು, ರಾಜ್ಯದ ಜನತೆಯಲ್ಲಿ ಜಲಸಾಕ್ಷರತೆಯನ್ನು ರೂಪಿಸಿ, ಲಭ್ಯವಿರುವ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸಿ, ಸಂರಕ್ಷಣೆ ಮಾಡಲು ಹಾಗೂ ರಾಜ್ಯಾದ್ಯಂತ ಹಸಿರೀಕರಣಗೊಳಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಇದೇ ಮಾ. 22 ರಂದು ಜಿಲ್ಲೆಯಾದ್ಯಂತ ಜಲಾಮೃತ ದಿನಾಚರಣೆಯನ್ನಾಗಿ ಆಚರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು

        ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಲಸಾಕ್ಷರತೆ, ಜಲ ಸಂರಕ್ಷಣೆ, ನೀರಿನ ಸದ್ಬಳಕೆ ಹಾಗೂ ಹಸಿರೀಕರಣ ಸೇರಿದಂತೆ ಪ್ರಮುಖ ನಾಲ್ಕು ವಿಷಯಗಳನ್ನಾಧರಿಸಿ, ರಾಜ್ಯಾದ್ಯಂತ ‘ಜಲಾಮೃತ’ ದಿನವನ್ನು ಸಮುದಾಯ ಚಾಲಿತ ಜಲಸಂರಕ್ಷಣಾ ಆಂದೋಲನವನ್ನಾಗಿ ಪ್ರಾರಂಭಿಸುತ್ತಿದ್ದು, ಇರುವ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸಿ, ನೀರಿನ ಹೊಸ ಮೂಲಗಳನ್ನು ಸೃಷ್ಟಿಸುವುದು, ನೀರನ್ನು ಸಂರಕ್ಷಿಸುವುದು, ನೀರನ್ನು ಮಿತ ಹಾಗೂ ಸದ್ಬಳಕೆ ಮಾಡಿಕೊಳ್ಳುವುದು ಅಲ್ಲದೆ ಗಿಡಗಳನ್ನು ಬೆಳೆಸಿ ಹಸಿರೀಕರಣಗೊಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದರು

       2019 ರ ವರ್ಷವನ್ನು ಕರ್ನಾಟಕವು ಜಲವರ್ಷ ಎಂಬುದಾಗಿ ಘೋಷಿಸಿದ್ದು, ಇದನ್ನು ಯಶಸ್ವಿಗೊಳಿಸಲು ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತ್ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಶಾಲೆಗಳು, ಕಾಲೇಜುಗಳು, ಎನ್‍ಜಿಒ ಗಳು, ಸರ್ಕಾರಿ ಇಲಾಖೆಗಳು, ಮಹಿಳೆಯರು, ಮಕ್ಕಳು, ರೈತರು, ಸಂಶೋಧನಾ ಸಂಸ್ಥೆಗಳು, ತಜ್ಞರು ಹಾಗೂ ಇತರೆ ಭಾಗಿದಾರರನ್ನು ಸಹವರ್ತಿಗಳನ್ನಾಗಿಸಿಕೊಂಡು, ಆಂದೋಲನ ಯಶಸ್ವಿಗೆ ಸಹಕರಿಸಬೇಕಿದೆ ಎಂದು ಕರೆ ನೀಡಿದರು

        ಕರ್ನಾಟಕ ರಾಜ್ಯವು ಇಡೀ ದೇಶದಲ್ಲಿಯೇ 2 ನೇ ಅತಿ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯವಾಗಿದ್ದು, ಜಲಸಾಕ್ಷರತೆಯ ಕೊರತೆ, ನೀರಿನ ಬಳಕೆ ಕುರಿತ ನಿರ್ಲಕ್ಷ್ಯ, ಜಾಗೃತಿಯ ಕೊರತೆ, ಕಾಡು ನಷ್ಟ, ಅಲ್ಲದೆ ಪರಿಸರದ ಮೇಲಿನ ತೀವ್ರ ದುಷ್ಪರಿಣಾಮಗಳು, ಜಲಸಾಕ್ಷರತೆಯ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಲಸಾಕ್ಷರತೆಯನ್ನು ಮೂಡಿಸಲು ಮಾ. 22 ರಂದು ಜಿಲ್ಲೆಯಾದ್ಯಂತ ಜಲಾಮೃತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಕೆ.ಸತ್ಯಭಾಮ ಹೇಳಿದರು

         ಕಾರ್ಯಕ್ರಮ ನಿಮಿತ್ತ ಜಲ ಸಂರಕ್ಷಣೆ, ಜಲ ಸಾಕ್ಷರತೆ ಕುರಿತು ಸರ್ಕಾರಿ ಕಟ್ಟಡ, ಗ್ರಾ.ಪಂ. ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ಗೋಡೆ ಬರಹಗಳು, ಪರಿಸರ ಸ್ನೇಹಿ ಬ್ಯಾನರ್‍ಗಳನ್ನು ಅಳವಡಿಸಬೇಕು. ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗದ ರೀತಿಯಲ್ಲಿ ಎಚ್ಚರ ವಹಿಸಬೇಕು ಎಂದರು.ಜಿ.ಪಂ. ಉಪಕಾರ್ಯದರ್ಶಿ ಬಸವರಾಜ್ ಅವರು ಜಲಾಮೃತ ಕಾರ್ಯಕ್ರಮದ ಕುರಿತು ವಿವರಣೆ ನೀಡಿದರು. ಸಭೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಶಶಿಧರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap