ರಾಜಕಾರಣಿಗಳ ನಟನೆಯಿಂದ ಸಮಾಜ ಅವನತಿ

0
17

ದಾವಣಗೆರೆ

        ಬಣ್ಣ ಹಚ್ಚದೆ ನಿಜಜೀವನದಲ್ಲೇ ಅಭಿನಯ ಮಾಡುವ ಕೆಲ ರಾಜಕಾರಣಿಗಳ ನಟನೆ ಸಮಾಜದ ಅವನತಿಗೆ ಕಾರಣವಾಗಲಿದೆ ಎಂದು ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

       ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಸಂಜೆ ರಾಜ್ಯ ರಂಗಭೂಮಿ ಕಲಾವಿದರ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ನಾಟಕೋತ್ಸವ, ಸುಗಮ ಸಂಗೀತ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕೆಲ ರಾಜಕಾರಣಿಗಳು ಬಣ್ಣ ಹಚ್ಚದೇ ನಿಜ ಜೀವನದಲ್ಲಿ ನಟನೆ ಮಾಡುತ್ತಿರುತ್ತಾರೆ. ಇಂಥವರಿಂದ ಸಮಾಜ ಅವನತಿಯೂ ಕಾಣಬಹುದು ಎಂದರು.

      ರಂಗ ಕಲಾವಿದರು ಯಾರಿಗೂ ಸಹ ಕೇಡು ಬಯಸುವವರಲ್ಲ. ತಾವು ನೋವುಂಡು, ಇತರರಿಗೆ ಸಂತೋಷ ಉಣ ಬಡಿಸುವವರಾಗಿದ್ದಾರೆ. ನಾನಾ ಸಮಸ್ಯೆಗಳ ನಡುವೆಯೂ ರಂಗ ಸೇವೆ ಮುಂದುವರೆಸಿರುವ ಇಂತಹ ಕಲಾವಿದರಿಗೆ ಸರ್ಕಾರ, ಸಮಾಜ ಸೂಕ್ತ ಉತ್ತೇಜನ ಕೊಡಬೇಕೆಂದು ಒತ್ತಾಯಿಸಿದರು.

      ಪ್ರಸ್ತುತ ವೃತ್ತಿ ರಂಗಭೂಮಿಯು ಸಂಕಷ್ಟ ಅನುಭವಿಸುತ್ತಿರುವ ಕಾರಣ, ಹಿಂದಿನ ವೈಭವ ಈಗ ಇಲ್ಲವಾಗಿದೆ. ಪ್ರೇಕ್ಷಕರನ್ನು ಆಕರ್ಷಿಸುವ ಸಲುವಾಗಿ ಮನಸ್ಸನ್ನು ವಿಕಾರಗೊಳಿಸುವ ಹಾಡು, ನೃತ್ಯ, ಸಂಭಾಷಣೆಯನ್ನು ಇಂದು ನಾಟಕಗಳಲ್ಲಿ ಕಾಣುತ್ತಿದ್ದೇವೆ. ಆದರೆ, ವೃತ್ತಿ ರಂಗಭೂಮಿಗೆ ಇರುವ ತಾಕತ್ತು ಹವ್ಯಾಸಿ ರಂಗಭೂಮಿಗೆ ಇಲ್ಲ. ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಕಲಾವಿದರು ಪರಸ್ಪರ ಕಲಿಯುವುದು ಬೇಕಾದಷ್ಟಿದೆ. ಹವ್ಯಾಸಿ, ವೃತ್ತಿ ಒಂದಾದಾಗ ರಂಗಭೂಮಿ ಗಟ್ಟಿಯಾಗಲಿದೆ ಎಂದು ಹೇಳಿದರು.

     ಕಲಾವಿದರ ಸಂಘಗಳೂ ಸಹ ಒಗ್ಗಟ್ಟಾಗಿ ಕಲೆಗೆ ಶಕ್ತಿ ತುಂಬಬೇಕು. ಈ ದಿಸೆಯಲ್ಲಿ ಎರಡೂ ಕಡೆಯವರು ಸಮಾಲೋಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳುವುದಾದರೆ, ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧ ಎಂದು ಸ್ವಾಮೀಜಿ ಘೋಷಿಸಿದರು.

      ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಮಾತನಾಡಿ, ಜಗತ್ತು ಎಂಬ ರಂಗಭೂಮಿಯಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಕಲಾವಿದರೇ ಆಗಿದ್ದೇವೆ. ಕೆಲವರು ಬಣ್ಣ ಹಚ್ಚಿಕೊಂಡು ಅಭಿನಯಿಸಿದರೆ, ಇನ್ನೂ ಕೆಲವರು ಅದ್ಯಾವುದೂ ಇಲ್ಲದೇ ಅಭಿನಯಿಸುತ್ತಾರೆ. ಮನುಷ್ಯನಲ್ಲಿ ಅಭಿನಯ ಅಂತರ್ಗತವಾಗಿದೆ. ಆದರೆ ರಂಗಭೂಮಿ ಎಂದರೆ ಅಭಿನಯವೊಂದೇ ಅಲ್ಲ.

      ಹಿನ್ನೆಲೆಯ ತಾಂತ್ರಿಕ ಕೆಲಸಗಳೂ ಮುಖ್ಯವಾಗಿವೆ. ಹೊಸ ಕಲಾವಿದರಿಗೆ ಸಮಗ್ರ ರಂಗ ತರಬೇತಿ ಅವಶ್ಯಕತೆ ಇದ್ದು, ಮುಂದಿನ 25 ವರ್ಷಗಳ ಕಾಲ ರಂಗಭೂಮಿಯನ್ನು ಸಬಲವಾಗಿ ಕಟ್ಟಲು ಅನುಕೂಲವಾಗುವಂತೆ ಹೊಸ ತಲೆಮಾರಿನ ಕಲಾವಿದರಿಗೆ ತರಬೇತಿ ನೀಡಬೇಕಾದ ಅವಶ್ಯಕತೆ ಇದೆ ಎಂದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಕೆ.ವೀರಯ್ಯ ಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕೂಟದ ಗೌರವ ಕಾರ್ಯದರ್ಶಿ ಚಿಂದೋಡಿ ಶಂಭುಲಿಂಗಪ್ಪ, ಪಾಲಿಕೆ ಸದಸ್ಯ ದಿನೇಶ ಶೆಟ್ಟಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು.ವೇದಿಕೆ ಕಾರ್ಯಕ್ರಮದ ನಂತರ ಪಿ.ಬಿ.ದುತ್ತರಗಿ ರಚನೆಯ ಮುದುಕನ ಮದುವೆ ನಾಟಕ ಪ್ರದರ್ಶನಗೊಂಡಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here