ಕಂದಾಯ ಪಾವತಿಗೆ ನಗರಸಭೆಯ ಹೊಸ ಸೂತ್ರ

0
12

 ಚಳ್ಳಕೆರೆ

         ರಾಜ್ಯದ ಅನೇಕ ನಗರಸಭೆಗಳಲ್ಲಿ ಅತ್ಯಂತ ಪ್ರಗತಿಯತ್ತ ಸಾಗುತ್ತಿರುವ ನಗರಸಭೆಗಳಲ್ಲಿ ಒಂದಾದ ನಗರಸಭೆಗೆ ಸಾರ್ವಜನಿಕರ ಪಾವತಿಸಬೇಕಾದ ನೀರು, ಮನೆ ಹಾಗೂ ನಿವೇಶಗಳ ಕಂದಾಯಗಳ ಪಾವತಿಗೆ ಹೊಸ ಸೂತ್ರವೊಂದನ್ನು ಅಳವಡಿಸಿ ಜಾರಿಗೊಳಿಸಿದೆ. ಈ ವಿನೂತನ ಕಾರ್ಯಕ್ರಮಕ್ಕೆ ಸಾರ್ವಜನಿಕರಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದ ಪೌರಾಯುಕ್ತ ಜೆ.ಟಿ.ಹನುಮಂತರಾಜು ಮೊದಲ ದಿನವೇ 1.50 ಲಕ್ಷ ಕಂದಾಯ ಹಣ ಸಂದಾಯವಾಗಿದ್ದು, ಭಾನುವಾರ ಮುಂದುವರೆಯುವುದು ಎಂದಿದ್ಧಾರೆ.

         ಪೌರಾಯುಕ್ತ ಜೆ.ಟಿ.ಹನುಮಂತರಾಜು, ಕಂದಾಯ ಅಧಿಕಾರಿಗಳೊಂದಿಗೆ ಸರ್ಕಾರ ರಜೆ ದಿನಗಳಲ್ಲೂ ಸಹ ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ನಗರಸಭೆಯ ಕಂದಾಯ ಪಾವತಿ ಹಿನ್ನೆಲ್ಲೆಯಲ್ಲಿ ಇಲ್ಲಿನ 11ನೇ ವಾರ್ಡ್‍ನಲ್ಲಿ ವಿಶೇಷ ಕಂದಾಯ ಪಾವತಿ ಕೌಂಟರ್‍ನ್ನು ಪ್ರಾರಂಭಿಸಿ ಜನರೇ ನೇರವಾಗಿ ತಮ್ಮ ಮನೆ, ನಲ್ಲಿ, ನಿವೇಶಗಳ ಕಂದಾಯಕಟ್ಟಲು ಅನುವು ಮಾಡಿಕೊಟ್ಟಿದ್ದಾರೆ. ಕಂದಾಯ ಪಾವತಿ ಸಂದರ್ಭದಲ್ಲಿ ಬ್ಯಾಂಕ್‍ನ ಅಧಿಕಾರಿಗಳು ಸಹ ಸ್ಥಳದಲ್ಲೇ ಇದ್ದು, ಹಣವನ್ನು ಸ್ವೀಕರಿಸಿ ರಶೀದಿ ನೀಡುವ ಮೂಲಕ ಸಾರ್ವಜನಿಕರ ಬ್ಯಾಂಕ್‍ಗಳಲ್ಲಿ ಗಂಟೆಗಟ್ಟಲೆ ನಿಲ್ಲುವುದನ್ನು ತಡೆದಿದ್ದಾರೆ. ಪ್ರಸ್ತುತ ನಗರಸಭೆ ಕಚೇರಿಯಲ್ಲೇ ಐಸಿಐಸಿಐ ಬ್ಯಾಂಕ್‍ನ ಕೌಂಟರನ್ನು ಪ್ರಾರಂಭಿಸಲಾಗಿದೆ.

        ಈ ಹಿನ್ನೆಲ್ಲೆಯಲ್ಲಿ ಮೊದಲ ದಿನವೇ ಈ ವಾರ್ಡ್‍ನಲ್ಲಿ ಅನೇಕ ನಾಗರೀಕರು ತಮ್ಮ ವಾರ್ಡ್‍ನಲ್ಲೇ ಪೌರಾಯುಕ್ತರು ಹಾಗೂ ಸಿಬ್ಬಂದಿ ವರ್ಗ ಕಂದಾಯ ಸ್ವೀಕರಿಸಲು ಆಗಮಿಸಿದನ್ನು ಕಂಡು ಸಂತಸಗೊಂಡು ಕಂದಾಯವನ್ನು ಪಾವತಿಸಲು ಮುಂದಾಗಿದ್ಧಾರೆ. ನಮಗೆ ಹಲವಾರು ಕೆಲಸ ಕಾರ್ಯಗಳ ಮಧ್ಯೆ ಕಂದಾಯ ಕಟ್ಟಲು ಸಕಾಲದಲ್ಲಿ ಸಾಧ್ಯವಾಗದೇ ಇದ್ದು, ರಜೆ ದಿನವಾದ ಇಂದು ನಗರಸಭೆಯೇ ನಮ್ಮ ವಾರ್ಡ್‍ನಲ್ಲಿ ಬೀಡುಬಿಟ್ಟು, ಕಂದಾಯವನ್ನು ಸ್ವೀಕರಿಸುವ ಮೂಲಕ ಆದಾಯದ ಹೆಚ್ಚಳದ ಜೊತೆಗೆ ಸಾರ್ವಜನಿಕರಲ್ಲೂ ಸಹ ಕಂದಾಯ ಪಾವತಿ ಬಗ್ಗೆ ಜಾಗೃತಿ ಮೂಡಿಸಿದೆ ಎಂದು ಖ್ಯಾತ ಜೋತಿಷಿ ಅನಂತರಾಮ್ ಗೌತಮ್ ಸಂತಸ ವ್ಯಕ್ತ ಪಡಿಸಿದ್ದಾರೆ.

         11ನೇ ವಾರ್ಡ್‍ನ ನಗರಸಭಾ ಸದಸ್ಯ ಎಸ್.ಜಯಣ್ಣ ಮಾತನಾಡಿ, ನಗರದ ಅಭಿವೃದ್ಧಿಗೆ ಸಾರ್ವಜನಿಕರು ಪಾವತಿಸುವ ಕಂದಾಯವೇ ಆಧಾರವಾಗಿದೆ. ಇಲ್ಲಿನ ನಗರಸಭೆ ಇದೇ ಪ್ರಥಮ ಬಾರಿಗೆ ಈ ಹೊಸ ಸೂತ್ರವನ್ನು ಅಳವಡಿಸಿದ್ದು, ನಾನು ಪ್ರತಿನಿಧಿಸಿರುವ ವಾರ್ಡ್‍ನಿಂದಲೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಅಧಿಕಾರಿಗಳ ಈ ಪರಿಶ್ರಮಕ್ಕೆ ನಾಗರೀಕರೂ ಸಹ ಹೆಚ್ಚು ಸ್ಪಂದಿಸಬೇಕು ಎಂದರು.

        ಉದ್ಯಮಿ ಡಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ಪ್ರತಿನಿತ್ಯದ ವ್ಯವಹಾರದಲ್ಲಿ ನಮಗೆ ಕಚೇರಿಗೆ, ಬ್ಯಾಂಕ್‍ಗೆ ಹೋಗಿ ಕಂದಾಯ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ರಜೆ ದಿನದಲ್ಲೂ ನಗರಸಭೆ ವಾರ್ಡ್‍ನಲ್ಲೇ ಈ ವ್ಯವಸ್ಥೆ ಕಲ್ಪಿಸಿರುವುದು ಸಂತಸ ತಂದಿದೆ. ಇದರಿಂದ ನಮಗೆ ಅನಗತ್ಯ ಸಮಯ ವ್ಯರ್ಥವಾಗುವುದು ತಪ್ಪಿದೆ. ನಮಗೂ ಸಹ ಅಧಿಕಾರಿ ವರ್ಗವೇ ನಮ್ಮ ವಾರ್ಡ್‍ಗೆ ಬಂದಾಗ ಕಂದಾಯ ಪಾವತಿಸಬೇಕು ಎಂದು ಜವಾಬ್ದಾರಿ ಹೆಚ್ಚಾಗುತ್ತಿದೆ. ಪ್ರತಿವರ್ಷವೂ ನಗರಸಭೆ ಈ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಎಂ.ಜೆ.ರಾಘವೇಂದ್ರ, ಭರಮಣ್ಣ, ಮಂಜುನಾಥ, ವಾರ್ಡ್‍ನ ಅನೇಕ ನಾಗರೀಕರು ಕಂದಾಯಾಧಿಕಾರಿ ವಿ.ಈರಮ್ಮ, ಸಮೂಹ ಅಧಿಕಾರಿ ಪಿ.ಪಾಲಯ್ಯ, ಮಂಜುನಾಥ, ತಿಪ್ಫೇಸ್ವಾಮಿ, ವೀರಭದ್ರಿ, ಎನ್.ಮಂಜುನಾಥ, ಬ್ಯಾಂಕ್ ವ್ಯವಸ್ಥಾಪಕ ಜಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here