ಹಾವೇರಿ ಜಿಲ್ಲೆಯಲ್ಲಿ ‘ನಿರ್ಭಯ’ ವಿಶೇಷ ಮಹಿಳಾ ಪೊಲೀಸ್ ಪಡೆ ಕಾರ್ಯಾರಂಭ

ಹಾವೇರಿ

       ನಿರ್ಭಯ ಹೆಸರು ಕೇಳಿದರೆ ಪುಂಡಪೋಕರಿಗಳು ಓಡಿಹೋಗುವ ಸನ್ನಿವೇಶ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ‘ನಿರ್ಭಯ’ ವಿಶೇಷ ಮಹಿಳಾ ಪೊಲೀಸ್ ಪಡೆ ಚುರುಕುತನದಿಂದ ಕಾರ್ಯನಿರ್ವಹಿಸಬೇಕು ಎಂದು ದಾವಣಗೆರೆ ಪೂರ್ವ ವಲಯ ಐ.ಜಿ.ಪಿ ಬಿ.ದಯಾನಂದ ಅವರು ಹೇಳಿದರು.

         ಶುಕ್ರವಾರ ನಗರದ ಶಿವಶಕ್ತಿ ಪ್ಯಾಲೇಸ್‍ನಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಲಾದ ನಾಗರಿಕರ ಬಂದೂಕು ತರಬೇತಿ ಕಾರ್ಯಕ್ರಮದ ಸಮಾರಂಭ ಹಾಗೂ ‘ನಿರ್ಭಯ’ ವಿಶೇಷ ಮಹಿಳಾ ಪೊಲೀಸ್ ಪಡೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿವ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಮಟ್ಟಾಹಾಕುವ ಉದ್ದೇಶದಿಂದ ರಾಜ್ಯಾದ್ಯಂತ ವಿವಿಧ ಹೆಸರಿನಲ್ಲಿ ವಿಶೇಷ ಮಹಿಳಾ ಪೊಲೀಸ್ ಪಡೆಗಳು ಕಾರ್ಯನಿರ್ವಹಿಸುತ್ತಿವೆ.

         ಬೆಂಗಳೂರಿನಲ್ಲಿ ಮಹಿಳಾ ಸಿಬ್ಬಂದಿಯೊಳಗೊಂಡ ಅಭಯ ಹೆಸರಿನ ಗಸ್ತುವಾನ ಕಾರ್ಯನಿರ್ವಹಿಸುತ್ತಿದೆ. ಮೈಸೂರಿನಲ್ಲಿ ಚಾಮುಂಡಿ ಹೆಸರಿನಲ್ಲಿ, ಬೇರೆ ಕಡೆಯಲ್ಲಿ ಚನ್ನಮ್ಮ ಹೆಸರಿನಲ್ಲಿ ಕಾರ್ಯಪ್ರವೃತ್ತರಾದರೆ ಹಾವೇರಿಯಲ್ಲಿ ನಿರ್ಭಯ ಹೆಸರಿನಲ್ಲಿ ಕಾರ್ಯಾರಂಭ ಮಾಡಲಾಗುತ್ತಿದೆ. ಈ ವಿಶೇಷ ಪಡೆಗಳು ಜನನಿಬೀಡಿದ ಪ್ರದೇಶಗಳಲ್ಲಿ ಅಂದರೆ ಬಸ್ ನಿಲ್ದಾಣ, ಸಂತೆ, ಜಾತ್ರೆ ಹಾಗೂ ಶಾಲಾ-ಕಾಲೇಜು ಪ್ರದೇಶಗಳಲ್ಲಿ ಮಹಿಳೆಯರಿಗೆ ತೊಂದರೆ ನೀಡುವರನ್ನು ಗುರುತಿಸಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ತಿಳಿಸಲಾಗಿದೆ ಎಂದು ಹೇಳಿದರು.
ಈ ಪಡೆಗಳಿಗೆ ಈಗಾಗಲೇ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಗಸ್ತು ವಾಹನ ನೀಡಲಾಗುವುದು ಹಾಗೂ ಹೆಚ್ಚಿನ ತರಬೇತಿ ಹಾಗೂ ಸೌಲಭ್ಯಗಳು ಬೇಕು ಎಂದು ಕಂಡುಬಂದರೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

         ಇತ್ತೀಚಿಗೆ ನಾಗರಿಕ ಬಂದೂಕು ತರಬೇತಿ ಸಾಕಷ್ಟು ಪ್ರಚಲಿತ ಪಡೆಯುತ್ತಿದೆ. ನಾಗರಿಕರು ಆಯುಧ ಬಳಕೆ ಕುರಿತು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಆಯುಧ ಬಳಕೆ ಬಗ್ಗೆ ಮಾಹಿತಿ ಇಲ್ಲದಿದ್ದರೆ ಅವಘಡಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ ಹಾಗೂ ಈಗ ಆಯುಧ ಲೈಸನ್ಸ್ ಪಡೆಯಲು ತರಬೇತಿ ಕಡ್ಡಾಯವಾಗಿದೆ. ನಾಗರಿಕ ಬಂದೂಕು ತರಬೇತಿ ಆಯೋಜನೆಯಿಂದ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯ ಉತ್ತಮ ಬಾಂಧವ್ಯ ಬೆಳೆಯಲು ಸಹಕಾರಿಯಾಗಿದೆ. ಪೂರ್ವ ವಲಯದ ಹಲವು ಜಿಲ್ಲೆಗಳಲ್ಲಿ ವಿವಿಧ ಹಬ್ಬಗಳ ಸಂದರ್ಭದಲ್ಲಿ ಬಂದೋಬಸ್ತ ಸಮಯದಲ್ಲಿ ಬಂದೂಕು ತರಬೇತಿ ಪಡೆದ ನಾಗರಿಕರು ಪೊಲೀಸರೊಂದಿಗೆ ಕಾರ್ಯನಿರ್ವಹಿಸಿದ ಉದಾಹರಣೆಗಳಿವೆ.

        ಸೌಹಾರ್ದಯುತ ವಾತಾವಣ ನಿರ್ಮಾರ್ಣಕ್ಕೆ ಈ ತರಬೇತಿ ಸಹಕಾರಿಯಾಗಿದೆ ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 32 ಕಾನಸ್ಟೇಬಲ್ ಹಾಗೂ ಹೆಡ್ ಕಾನಸ್ಟೇಬಲ್‍ಗಳಿಗೆ ಮಹಿಳಾ ದೌರ್ಜನ್ಯ ತಡೆಗೆ ಹಾಗೂ ಆತ್ಮ ರಕ್ಷಣೆಗೆ ಒಳಾಂಗಣ ಹಾಗೂ ಹೊರಾಂಗಣ ತರಬೇತಿ ನೀಡಲಾಗಿದೆ.

          ಕಿರುಕುಳ ನೀಡುವ ಪುಂಡಪೋಕರಿಗಳಿಗೆ ಮೊದಲು ಹಿರಿಯ ಸಮ್ಮುಖದಲ್ಲಿ ಬುದ್ದಿವಾದ ಹೇಳಲಾಗುವುದು. ಮತ್ತೆ ಕಿರಿಕುಳು ನೀಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿ.ಆರ್.ಟಿ.ಸಿ. ಕಾರ್ಯದರ್ಶಿ ಡಾ.ಮೃತ್ಯುಂಜಯ ತುರ್ಕಾಣಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಬಂದೂಕು ತರಬೇತಿ ಪಡೆದ ನಾಗರಾಜ ಈಳಗೇರಿ ಹಾಗೂ ಮಲ್ಲಿಕಾರ್ಜುನಯ್ಯ ಮಹಾಂತಿಮಠ ಅವರು ಅನಿಸಿಕೆ ಹಂಚಿಕೊಂಡರು.

          ಪ್ರಮಾಣಪತ್ರ ವಿತರಣೆ: ಬಂದೂಕು ತರಬೇತಿ ಪಡೆದ ನಾಗರಿಕರಿಗೆ ಇದೇ ಸಂದರ್ಭದಲ್ಲಿ ಅಧಿಕಾರಿಗಳು ಪ್ರಮಾಣಪತ್ರ ವಿತರಿಸಿದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಜಗದೀಶ, ಡಿ.ವೈ.ಎಸ್.ಪಿ.ಕುಮಾರಪ್ಪ ಇತರರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap