ಗ್ರಾಮೀಣ ಜನರಲ್ಲಿ ಸ್ವಚ್ಚತೆಯ ಅರಿವನ್ನು ಮೂಡಿಸುವಲ್ಲಿ ಎನ್‍ಎಸ್‍ಎಸ್ ಶಿಬಿರಗಳು ಸಹಕಾರಿ

ಚಳ್ಳಕೆರೆ

       ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆತ್ಮಸ್ಥರ್ಯವನ್ನು ತುಂಬಲು ಕಾರಣವಾಗುತ್ತವೆ. ಶಿಕ್ಷಣವನ್ನು ಹೆಚ್ಚು ಗೌರವಿಸುವ ವಿದ್ಯಾರ್ಥಿ ಸೇವಾಚಟುವಟಿಕೆಗಳನ್ನು ಸಹ ಗೌರವಿಸಬೇಕಿದೆ. ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಯಲ್ಲಿ ಎನ್‍ಎಸ್‍ಎಸ್ ಸೇವಾ ಯೋಜನೆಗಳು ಗುಣಾತ್ಮಕ ಪರಿಣಾಮಗಳನ್ನು ಬೀರುತ್ತವೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾರಾಮಣ್ಣ ತಿಳಿಸಿದರು.

           ಅವರು, ಶನಿವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಪ್ರಸ್ತುತ ವರ್ಷದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಕಾಲೇಜಿನಲ್ಲಿ ಎನ್‍ಎಸ್‍ಎಸ್ ಶಿಬಿರದ ಕಾರ್ಯಕ್ರಮಗಳು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದು ಗ್ರಾಮೀಣ ಜನರಲ್ಲಿ ಸ್ವಚ್ಚತೆಯೂ ಸೇರಿದಂತೆ ಹಲವಾರು ಯೋಜನೆಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳು ಸಂತೋಷದಿಂದ ಈ ಶಿಬಿರದಲ್ಲಿ ಭಾಗವಹಿಸಿ ಎಲ್ಲರೊಡನೆ ಬೆರೆತು ಶಿಬಿರದ ಉದ್ದೇಶವನ್ನು ಸಾರ್ಥಕಗೊಳಿಸಿದ್ಧಾರೆ. ಪ್ರಸ್ತುತ ವರ್ಷವೂ ಸಹ ಹೆಚ್ಚು ಶಿಬಿರಗಳು ಗ್ರಾಮೀಣ ಪ್ರದೇಶದಲ್ಲೇ ನಡೆಯುವಂತಾಗಲಿ ಎಂದು ಶುಭಹಾರೈಸಿದರು.

           ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ್ ಮಾತನಾಡಿ, ಎನ್‍ಎಸ್‍ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಂಯಮವನ್ನು ಕಲಿಸಿಕೊಡುತ್ತವೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಗೌರವ ಮತ್ತು ವಿಶ್ವಾಸ ಅವರಿಗೆ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚು ಸ್ಪೂರ್ತಿ ನೀಡುತ್ತದೆ. ವಿಶೇಷವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ನಿರಂತರವಾಗಿ ಹಲವಾರು ವರ್ಷಗಳಿಂದ ಗ್ರಾಮೀಣ ಭಾಗದಲ್ಲೇ ಎನ್.ಎಸ್‍ಎಸ್ ಶಿಬಿರವನ್ನು ಆಯೋಜಿಸಿ ಗ್ರಾಮೀಣ ಜನರಿಂದ ಪ್ರಶಂಸೆಗೆ ಪಾತ್ರವಾಗಿದೆ ಎಂದರು.

             ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪಿ.ಎನ್.ಕೃಷ್ಣಪ್ರಸಾದ್ ಮಾತನಾಡಿ, ಪ್ರಸ್ತುತ ವರ್ಷವೂ ಸಹ ಎನ್‍ಎಸ್‍ಎಸ್ ಶಿಬಿರ ವಿದ್ಯಾರ್ಥಿಗಳ ಬುದ್ದಿ ಕೌಶಲ್ಯವನ್ನು ಹೆಚ್ಚಿಸುವಲ್ಲಿ ನೆರವಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. ಈ ಶಿಬಿರದ ಎಲ್ಲಾ ಕಾರ್ಯಕ್ರಮಗಳಿಗೆ ತಾವೂ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ಸಹಕಾರ ನೀಡುವರು ಎಂದರು.

              ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್ ಶಿಬಿರಾಧಿಕಾರಿ ಎಂ.ರವೀಶ್, ಉಪನ್ಯಾಸಕರಾದ ವಸಂತಕುಮಾರ್, ಅಬೀಬುಲ್ಲಾ, ಲೋಹಿತ್, ಮಂಜುನಾಥ, ಪತ್ರಕರ್ತ ಟಿ.ಜೆ.ತಿಪ್ಪೇಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap