ಚಂದನವನದಿಂದ ಶ್ರೀಗಳಿಗೆ ನುಡಿನಮನ…!!!

0
17

ಬೆಂಗಳೂರು

        ನುಡಿದಂತೆ ನಡೆದ, ಸಾಮಾನ್ಯರಂತೆ ಬದುಕಿ ಅಸಾಮಾನ್ಯರಾದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‍ಸಿಸಿ) ಇಂದು ನುಡಿನಮನ ಸಲ್ಲಿಸಿತು.

         ಶ್ರೀಗಳು ಶಿವೈಕ್ಯರಾಗಿ 11 ದಿನಗಳಾದ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಉಪಾಧ್ಯಕ್ಷ ಕರಿಸುಬ್ಬು, ಮಾಜಿ ಅಧ್ಯಕ್ಷ, ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಸೇರಿದಂತೆ ಹಲವರು ಉಪಸ್ಥಿತರಿದ್ದರು.

        ಶ್ರೀಗಳ ತ್ರಿವಿಧ ದಾಸೋಹ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ನೆನೆದ ಕೆಎಫ್‍ಸಿಸಿಯ ಎಲ್ಲ ಸದಸ್ಯರೂ ಪುಷ್ಪನಮನ ಸಲ್ಲಿಸಿದರು. ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ಜನರು ದಾಸೋಹ ಮಾಡುವ ಸಿದ್ಧಗಂಗಾ ಮಠಕ್ಕೆ ಈ ಹಿಂದೆಯೂ 1 ಲಕ್ಷ ರೂಪಾಯಿ ದೇಣಿಗೆ ನೀಡಲಾಗಿತ್ತು. ಇದೀಗ ಕಿರಿಯ ಶ್ರೀಗಳು ಮಠದ ಜವಾಬ್ದಾರಿ ವಹಿಸಿಕೊಂಡಿದ್ದು, ಮಂಡಳಿಯ ವತಿಯಿಂದ 5 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.

-:ಕಣ್ಣಿಗೆ ಕಾಣುವ ದೇವರು:-

         ಸಿದ್ಧಗಂಗೆಯ ಸಂತ ಡಾ. ಶಿವಕುಮಾರ ಶ್ರೀಗಳು ಕಣ್ಣಿಗೆ ಕಾಣುವ ದೇವರು. ಮಾಗಡಿ ತಾಲೂಕಿನ ವೀರಾಪುರದ ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಕೇವಲ 300 ರೂಪಾಯಿಗಳೊಂದಿಗೆ ಸಿದ್ಧಗಂಗೆಗೆ ಆಗಮಿಸಿ, ಸಾವಿರಾರು ವಿದ್ಯಾರ್ಥಿಗಳ ಅನ್ನ, ಜ್ಞಾನ, ವಿದ್ಯಾ ದಾಸೋಹಕ್ಕಾಗಿ ಜೋಳಿಗೆ ಹಿಡಿದು ಬೇಡಿದ ಸಂತ ಎಂದು ಕೆಎಫ್‍ಸಿಸಿ ಅಧ್ಯಕ್ಷ ಚಿನ್ನೇಗೌಡ ತಿಳಿಸಿದರು.

-:ರಾಜಕಾರಣಿಗಳಿಗೆ ತಲೆಬಾಗದ ಶ್ರೀ:-

          ಸಿದ್ಧಗಂಗಾ ಮಠಕ್ಕೆ ಎಲ್ಲ ಪಕ್ಷಗಳ ರಾಜಕಾರಣಿಗಳೂ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದರು. ಶ್ರೀಗಳು ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ, ಭೋಜನ ಮಾಡಿಸಿ ಕಳುಹಿಸುತ್ತಿದ್ದರು. ಯಾರೊಬ್ಬರಿಗೂ ತಲೆಬಾಗದೆ ಎಲ್ಲರೂ ತಮ್ಮನ್ನು ತಲೆಯೆತ್ತಿ ಗೌರವಿಸುವಂತೆ ನಡೆದುಕೊಂಡವರು. ರಾಜ್ಯಾದ್ಯಂತ 260ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿಕೊಟ್ಟವರು ಎಂದು ಕೆಎಫ್‍ಸಿಸಿ ಸದಸ್ಯರೊಬ್ಬರು ನುಡಿ ನಮನದಲ್ಲಿ ತಿಳಿಸಿದರು.

-:ಗಂಭೀರ ವ್ಯಕ್ತಿತ್ವದ ಸಹನಾಮೂರ್ತಿ:-

         ಶಿವಕುಮಾರ ಶ್ರೀಗಳಿಗೆ ಅಭಿಮಾನಿ ಪತ್ರಿಕೆಯ ಲೇಖನವೊಂದರಿಂದ ನೋವುಂಟು ಮಾಡಿದ ಘಟನೆಯ ಬಗ್ಗೆ ಹಂಚಿಕೊಂಡ ಸಾ.ರಾ. ಗೋವಿಂದು, “ಅದು ಅಭಿಮಾನಿ ಪತ್ರಿಕೆ ಉತ್ತುಂಗದಲ್ಲಿದ್ದ ಕಾಲ. ವೆಂಕಟೇಶ್ ಸಂಪಾದಕರಾಗಿದ್ದರೆ ನಾನು ವ್ಯವಸ್ಥಾಪಕ ಸಂಪಾದಕನಾಗಿದ್ದೆ. ನಮ್ಮ ಕಣ್ತಪ್ಪಿಸಿ ಸಿದ್ಧಗಂಗಾ ಮಠ ಹಾಗೂ ಶ್ರೀಗಳ ಬಗ್ಗೆ ಅನುಚಿತ ಲೇಖನ ಪ್ರಕಟವಾಗಿಬಿಟ್ಟಿತು. ಅದನ್ನು ಕಂಡು ಆಘಾತಕ್ಕೊಳಗಾದ ನಾನು ಹಾಗೂ ವೆಂಕಟೇಶ್ ಸ್ವಾಮೀಜಿ ಬಳಿ ಕ್ಷಮಾಯಾಚನೆಗೆ ತೆರಳಿದೆವು. ಮಧ್ಯಾಹ್ನ 12.30ರ ಸುಮಾರಿಗೆ ಮಠ ತಲುಪಿದ ನಮಗೆ ಮೊದಲು ಭೋಜನ ಮಾಡಿಸಿ ಬಳಿಕ ಭೇಟಿಯ ಕಾರಣ ವಿಚಾರಿಸಿದರು. ‘ಲೇಖನ ನಮ್ಮ ಕಣ್ತಪ್ಪಿ ಪ್ರಕಟವಾಗಿದೆ. ಉದ್ದೇಶಪೂರ್ವಕ ಆಗಿದ್ದಲ್ಲ. ಕ್ಷಮಿಸಬೇಕು’ ಎಂದಾಗ, ‘ನೀವುಗಳು ಇನ್ನೂ ಚಿಕ್ಕವರು. ಮುಂದೆ ಸಾಧಿಸಬೇಕಾದ್ದು ಸಾಕಷ್ಟಿದೆ. ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ಗಮನಹರಿಸಬೇಕು’ ಎಂದು ಬುದ್ಧಿವಾದ ಹೇಳಿದ ಸಹನಾಮೂರ್ತಿ” ಎಂದು ನೆನಪಿಸಿಕೊಂಡರು.

-:ಕ್ಯಾತ್ಸಂದ್ರ ರೈಲ್ವೆ ಮೇಲ್ಸೇತುವೆಗೆ ಆಗ್ರಹಿಸಿ ಫೆ. 10ಕ್ಕೆ ಪ್ರತಿಭಟನೆ:-

          ತುಮಕೂರಿನ ಕ್ಯಾತ್ಸಂದ್ರ ರೈಲ್ವೆ ಗೇಟನ್ನು ಪ್ರತಿದಿನ ಸಾವಿರಾರು ಮಕ್ಕಳು, ದೊಡ್ಡವರು ದಾಟುತ್ತಾರೆ. ಯಾವ ಕ್ಷಣದಲ್ಲಾದರೂ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಇದರ ಬಗ್ಗೆ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ. ಹೀಗಾಗಿ ಅಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಫೆ. 10ರಂದು ಪ್ರತಿಭಟನೆ ನಡೆಸುವುದಾಗಿ ಈಗಾಗಲೇ ವಾಟಾಳ್ ನಾಗರಾಜ್ ಹಾಗೂ ತಾವು ಘೋಷಿಸಿರುವುದಾಗಿ ತಿಳಿಸಿದ ಸಾ.ರಾ. ಗೋವಿಂದು, ಅಂದು ಬೆಳಗ್ಗೆ 11.30 ರಿಂದ ಸಂಜೆ 6 ಗಂಟೆಯವರೆಗೆ ರೈಲು ತಡೆ ಪ್ರತಿಭಟನೆ ನಡೆಸುವುದಾಗಿ ಪುನರುಚ್ಚರಿಸಿದರು.

-:ಭಾರತರತ್ನ ಎನ್ನೋಣ. . :-

        ಸಮಾಜೋದ್ಧಾರಕ ಶಿವಕುಮಾರ ಸ್ವಾಮೀಜಿಯವರಿಗೆ ‘ಭಾರತರತ್ನ’ ನೀಡಬೇಕೆಂಬುದು ಕನ್ನಡಿಗರೆಲ್ಲರ ಆಗ್ರಹ ಹಾಗೂ ಆಶಯವಾಗಿತ್ತು. ಆದರೆ ಅದಿನ್ನೂ ಈಡೇರಿಲ್ಲ. ಕಾರಣಗಳು ಏನೇ ಇರಬಹುದು. ಕೇಂದ್ರ ಸರ್ಕಾರ ಪ್ರಶಸ್ತಿ ನೀಡಲಿ, ಬಿಡಲಿ, ವಿಶ್ವರತ್ನ ಎನಿಸಿಕೊಂಡಿರುವ ಅವರನ್ನು ನಾವುಗಳು ಇಂದಿನಿಂದಲೇ ‘ಭಾರತರತ್ನ’ ಎಂದು ಕರೆಯೋಣವೆಂದು ಸಾ.ರಾ. ಗೋವಿಂದು ಸಲಹೆ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here