ಒತ್ತಾಯದ ರಂಗು ಎರಚದೇ ಹೋಳಿ ಆಚರಿಸಿ

ದಾವಣಗೆರೆ :

       ವಿದ್ಯಾರ್ಥಿಗಳು ಹಾಗೂ ಗೊತ್ತಿಲ್ಲದವರ ಮೇಲೆ ಒತ್ತಾಯಪೂರ್ವಕವಾಗಿ ಹೋಳಿ ರಂಗು(ಬಣ್ಣ) ಎರಚದೇ, ಗೊತ್ತಿರುವವರೇ ಸೇರಿಕೊಂಡು ಸಂಭ್ರಮದಿಂದ ಓಕುಳಿ ಆಚರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದ್ದಾರೆ.ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಭಾನುವಾರ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ನಾಗರೀಕ ಸೌಹರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೋಳಿ ಹಬ್ಬದ ದಿನದಂದೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಲ್‍ಟಿಕೇಟ್ ಸೇರಿದಂತೆ ಇತರೆ ಸಾಮಗ್ರಿಗಳನ್ನು ಇಟ್ಟುಕೊಂಡು ಹೋಗುತ್ತಿರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳ ಮೇಲೆ ಯಾವುದೇ ಕಾರಣಕ್ಕೂ ಬಣ್ಣ ಎರಚಬಾರದು ಎಂದರು.

        ಹೋಳಿ ಹಬ್ಬದ ಓಕುಳಿ ಆಚರಣೆಯ ವೇಳೆಯಲ್ಲಿ ಮಹಿಳೆಯರ ಬಗ್ಗೆ ಗೌರವವಿರಲಿ, ಪರಿಚಯಸ್ಥ ಮಹಿಳೆಯರ ಮೇಲೆ ರಂಗು ಎರಚುವುದರಲ್ಲಿ ತಪ್ಪಿಲ್ಲ. ಆದರೆ, ಪರಿಚಯವೇ ಇಲ್ಲದ ಮಹಿಳೆಯರ ಮೇಲೆ ಬಣ್ಣ ಎರುಚುವುದು ವಿಕೃತಿಯಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಗೊತ್ತಿರದವರ ಮೇಲೆ ಒತ್ತಾಯ ಪೂರ್ವಕವಾಗಿ ರಂಗು ಹಾಕಬೇಡಿ ಎಂದು ಕಿವಿಮಾತು ಹೇಳಿದರು.

        ಬುಧವಾರ ಬರುವ ಹೋಳಿ ಹುಣ್ಣಿಮೆಯು ಗುರುವಾರ ಮಧ್ಯಾಹ್ನದ ವರೆಗೆ ಇರುವುದರಿಂದ ಶುಕ್ರವಾರ ಓಕುಳಿ ಆಚರಿಸಲು ಅವಕಾಶ ಮಾಡಿಕೊಡಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಇದಕ್ಕೆ ಅವಕಾಶವಿಲ್ಲ. ಹಬ್ಬದ ದಿನವಾಗಿರುವ ಬುಧವಾರ (ಮಾ.20ರಂದು) ಕಾಮದಹನ ನಡೆಸಬೇಕು ಹಾಗೂ ಗುರುವಾರ (ಮಾ.21ರಂದು) ಓಕುಳಿ ಆಚರಿಸಬೇಕು.

        ಏಕೆಂದರೆ, ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಹಬ್ಬದ ದಿನಬಿಟ್ಟು ಬೇರೆಯ ದಿನಗಳಲ್ಲಿ ಹಬ್ಬ ಆಚರಿಸಲು ಚುನಾವಣಾ ಆಯೋಗದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಅಲ್ಲದೆ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಶುಕ್ರವಾರದಂದು ನಾಯಕನಹಟ್ಟಿ ತಿಪ್ಪೇಸ್ವಾಮಿ ಜಾತ್ರೆಗೆ ಹಾಗೂ ಜಗಳೂರು ತಾಲೂಕಿನ ಕೊಡದಗುಡ್ಡದ ಚೌಡೇಶ್ವರಿ ಹಾಗೂ ವೀರಭದ್ರೇಶ್ವರಸ್ವಾಮಿ ಜಾತ್ರೆಗಳಿಗೆ ನಿಯೋಜಿಸಲಾಗಿದೆ. ಹೀಗಾಗಿ ಪೊಲೀಸ್ ಫೋರ್ಸ್ ಸಮಸ್ಯೆಯೂ ಇರುವ ಕಾರಣ ಗುರುವಾರವೇ ಹೋಳಿಯ ಓಕುಳಿ ಆಚರಿಸಬೇಕೆಂದು ಸಲಹೆ ನೀಡಿದರು.

       ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಆರ್‍ಎಸ್‍ಎಸ್ ಮುಖಂಡ ಕೆ.ಬಿ.ಶಂಕರನಾರಾಯಣ್, ಹೋಳಿ ಹಬ್ಬವನ್ನು ತಲತಲಾಂತರದಿಂದ ಆಚರಣೆ ಮಾಡಿಕೊಂಡು ಬಂದಿದ್ದು, ಪುರಾಣದಲ್ಲಿ ಬರುವ ಕಥೆಯ ಪ್ರಕಾರ ವೈರಾಗಿಯಾಗಿದ್ದ ಪರಮೇಶ್ವರನನ್ನು ಗೃಹಸ್ತಾಶ್ರಮಕ್ಕೆ ತರಲು ದೇವಾನುದೇವತೆಗಳು ನಡೆಸಿದ ಪ್ರಯತ್ನದಲ್ಲಿ ಪರಮೇಶ್ವರನು ತಪಸ್ಸಿಗೆ ಕೂತ ಸಂದರ್ಭದಲ್ಲಿ ರಥಿ-ಮನ್ಮಥರು ಮಾಡುವ ವಿವಿಧ ಭಂಗಿಯ ನೃತ್ಯಕ್ಕೂ ಮನಸೋತದಿದ್ದಾಗ, ಮನ್ಮಥನು ಪರಮೇಶ್ವರನ ಮೇಲೆ ಕಾಮದ ಅಂಶ ಇರುವ ಪುಷ್ಪಕ ಬಾಣವನ್ನು ಬಿಡುತ್ತಾನೆ.

       ಆದರೂ ಕಾಮಕ್ಕೆ ಸೋಲದ ಪರಮೇಶ್ವರ ತನ್ನ ತಪಸ್ಸು ಭಂಗ ಮಾಡಿದ ಮನ್ಮಥನನ್ನು ತನ್ನ ಕೆಂಗಣ್ಣಿನಿಂದ ಭಸ್ಮ ಮಾಡುತ್ತಾನೆ. ಇದರ ಪ್ರತೀಕವಾಗಿಯೇ ಮನುಷ್ಯನಲ್ಲಿರುವ ಕಾಮ ಭಾವನೆಯನ್ನು ಸುಟ್ಟು ಬೂದಿ ಮಾಡಿ, ಸದ್ಭಾವನೆ ಬೆಳೆಸುವ ಸಲುವಾಗಿ ಹೋಳಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

        ಹೋಳಿ ಹಬ್ಬದಲ್ಲಿ ರಂಗು ಎರಚುವಾಗ ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ಪರಿಸರಕ್ಕೂ ಹಾನಿ ಉಂಟಾಗಲಿದೆ ಹಾಗೂ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ. ಈಗಂತು ಟಾರು ಹಾಕುವುದು, ತೆಲೆಯ ಮೇಲೆ ಮೊಟ್ಟೆ ಹೊಡೆಯುವ ವರೆಗೂ ಹೋಳಿ ಆಚರಿಸುವುದು ಸರಿಯಲ್ಲ. ಇದಕ್ಕೆ ಬದಲಾಗಿ ರಾಸಾಯನಿಕ ಅಂಶಗಳೇ ಇಲ್ಲದ ಅರಿಶಿಣ ಸೇರಿದಂತೆ ಬಣ್ಣ-ಬಣ್ಣದ ತರಕಾರಿಗಳನ್ನು ಬಳಕೆ ಮಾಡಿಕೊಂಡು ಬಣ್ಣದಾಟ ಆಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.

        ಹೋಳಿಯ ಓಕುಳಿಯ ದಿನದಂದು ಯುವಕ-ಯುವತಿಯರಂತು ಎಲ್ಲೆ ಮೀರಿ ವರ್ತಿಸುತ್ತಾರೆ. ಕೂಗಾಟ, ಚೀರಾಟ ಮಿತಿ ಮೀರಿರುವುದು ಒಳ್ಳೆಯದಲ್ಲ. ಬಣ್ಣದಾಟ ಆಡುವುದರಿಂದ ಖುಷಿ ಪಡಬೇಕೇ ಹೊರತು, ಕೇವಲ ತೋರಿಕೆಗಾಗಿ ಬಣ್ಣ ಎರಚಬಾರದು. ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವುದರಿಂದ ಶುಕ್ರವಾರ ಓಕುಳಿ ಆಚರಣೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

        ಮುಸ್ಲಿಂ ಸಮುದಾಯದ ಯುವ ಮುಖಂಡ, ಜೆಡಿಎಸ್ ಮುಖಂಡ ಜೆ.ಅಮಾನುಲ್ಲಾ ಖಾನ್ ಮಾತನಾಡಿ, ವೈವಿದ್ಯಮಯ ಆಚರಣೆಯಿಂದ ಕೂಡಿರುವ ಭಾರತವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲಾ ಧರ್ಮಿಯರು ಅವರವರ ಹಬ್ಬ ಆಚರಿಸಿಕೊಳ್ಳು ಸ್ವಾತಂತ್ರ್ಯ ಹೊಂದಿದ್ದು, ಈ ಹಬ್ಬಗಳ ಆಚರಣೆ ಉತ್ಸಾಹದಿಂದ ಕೂಡಿರುವುದರ ಜೊತೆಗೆ ಎಲ್ಲ ಧರ್ಮಿಯರ ಮಧ್ಯೆ ಬಾಂಧವ್ಯ ಬೆಸೆಯುವಂತಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲ ಹಬ್ಬಗಳು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ. ಇದಕ್ಕೆ ಕಾರಣ ಏನೆಂಬುದರ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

         ಹಬ್ಬ ಆಚರಣೆಯ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕಾಗಿದೆ ಎಂದ ಅವರು, ರಾಸಾಯನಿಕಯುಕ್ತ ಬಣ್ಣವನ್ನು ಚೆಲ್ಲುವುದರಿಂದ ಚರ್ಮರೋಗ ಹಾಗೂ ಆ ಬಣ್ಣ ಕಣ್ಣಿಗೆ ಬಿದ್ದರೆ, ದೃಷ್ಟಿ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ವಿಷಕಾರಕವಲ್ಲದ ಬಣ್ಣ ಬಳಿಸುವುದು ಸೂಕ್ತವಾಗಿದೆ. ಅಲ್ಲದೆ, ಅಪರಿಚಯಸ್ಥರ ಮೇಲೆ ಒತ್ತಾಯ ಪೂರ್ವಕವಾಗಿ ಬಣ್ಣ ಹಾಕದೇ, ಸೌರ್ಹಾದಯುತವಾಗಿ ಬಣ್ಣದ ಹಬ್ಬ ಹೋಳಿ ಆಚರಿಸಬೇಕಾಗಿದೆ ಎಂದು ಹೇಳಿದರು.

        ಕಾಂಗ್ರೆಸ್ ಮುಖಂಡ ಎ.ನಾಗರಾಜ್ ಮಾತನಾಡಿ, ಹೋಳಿ ಹಬ್ಬ ಆ ಕಡೆ ಒಂದು ದಿನ, ಈ ಕಡೆ ಒಂದು ದಿನ ಆಚರಿಸುವಂತಾಗಬಾರದು. ಇಡೀ ಊರಿನಲ್ಲಿ ಒಂದೇ ದಿನ ಹಬ್ಬ ಆಚರಣೆಗೆ ತೀರ್ಮಾನ ಕೈಗೊಳ್ಳಬೆಕು. ಹಬ್ಬದಲ್ಲಿ ಯಾವುದೇ ರಾಜಕೀಯ ಬೆರೆಸದೇ, ಶಾಂತಿಯುತವಾಗಿ ಹಬ್ಬ ಆಚರಿಸೋಣ ಎಂದು ತಿಳಿಸಿದರು.

      ಸಿಪಿಐ ಮುಖಂಡ ಆವರಗೆರೆ ಚಂದ್ರು ಮಾತನಾಡಿ, ಕಲುಷಿತ ಪರಿಸ್ಥಿತಿಯಿಂದ ಅನಾರೋಗ್ಯಕ್ಕೆ ತುತ್ತಾಗುವ ವಾತಾವರಣವಿದೆ. ಹೀಗಾಗಿ ವಿಷಕಾರಕ ಬಣ್ಣವನ್ನು ಹೋಳಿ ಹಬ್ಬದ ಎರಚುವುದು ಬೇಡ. ಕೆಲ ಯುವಕರು ಓಕುಳಿಯ ದಿನದಂದು ವೀಲಿಂಗ್ ಮಾಡುವುದರಿಂದ ಸಾರ್ವಜನಿಕರಲ್ಲಿ ಭಯ ಮೂಡುತ್ತದೆ. ಹಬ್ಬ ಎಂದರೆ, ಸಂತಸ, ಸಡಗರ ಇರಬೇಕು. ಕೆಲ ಯುವಕರು ವೀಲಿಂಗ್‍ನಂತಹ ಮೋಜಿಗೆ ಹೋಗಿ ಅನುಹುತ ಮಾಡಿಕೊಂಡು ಪೋಷಕರಿಗೆ ದುಃಖ ತರಬಾರದು ಎಂದರು.ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ನಗರ ಉಪ ವಿಭಾಗದ ಡಿವೈಎಸ್‍ಪಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ವೃತ್ತ ನಿರೀಕ್ಷಕ ಇ.ಆನಂದ್ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap