ಭತ್ತ ಖರೀದಿ ಕೇಂದ್ರಗಳ ಆರಂಭ: ರೈತರು ಸದುಪಯೋಗಪಡಿಸಿಕೊಳ್ಳಲು ಕರೆ

ಬಳ್ಳಾರಿ

         ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಜಿಲ್ಲೆಯ ರೈತರು ಬೆಳೆದ ಉತ್ತಮಗುಣಮಟ್ಟದ (ಎಫ್‍ಎಕ್ಯೂ) ಭತ್ತವನ್ನು ರೈತರಿಂದ ನೇರವಾಗಿ ನೊಂದಾಯಿತ ಅಕ್ಕಿ ಗಿರಣಿಗಳ ಮೂಲಕ ಖರೀದಿಸಲು ನಿರ್ಧರಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿನಿರ್ದೇಶಕ ಶ್ರೀಧರ್ ಹೇಳಿದರು.

         ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಬಳ್ಳಾರಿ ಜಿಲ್ಲೆಯ 3 ಭತ್ತ ಖರೀದಿ ಕೇಂದ್ರಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

          ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ಉತ್ತಮ ಗುಣಮಟ್ಟದ ಭತ್ತವನ್ನು ರೈತರಿಂದ ಬಳ್ಳಾರಿ,ಕಂಪ್ಲಿ ಹಾಗೂ ಸಿರಗುಪ್ಪ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರಗಳಲ್ಲಿ ಗುಣಮಟ್ಟ ಪರಿಶೀಲಿಸಿ ನಂತರ ರೈತರಿಗೆ ಸಮೀಪವಿರುವ ಅಕ್ಕಿಗಿರಣಿಗಳಲ್ಲಿ ಖರೀದಿಸಲಾಗುವುದು. ಈ ಪ್ರಕ್ರಿಯೆಯು 2019ರ ಮಾ. 31ರವರೆಗೆ ನಡೆಯಲಿದೆ ಎಂದರು.

            ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಪಿ.ಕೆ.ಹುಲಿಯಣ್ಣ ಅವರು ಮಾತನಾಡಿ, ಸಾಮಾನ್ಯ ಭತ್ತಕ್ಕೆ ರೂ.1750 ಹಾಗೂ ಗ್ರೇಡ್ ಎ ಭತ್ತಕ್ಕೆ ರೂ.1770ಗಳನ್ನು ಸರಕಾರವು ನಿಗದಿಪಡಿಸಿದೆ ಎಂದರು.

         ಈ ಯೋಜನೆಯಡಿಯಲ್ಲಿ ಭತ್ತವನ್ನು ಮಾರಾಟ ಮಾಡಲು ಇಚ್ಚಿಸುವ ರೈತರು ಖರೀದಿ ಕೇಂದ್ರಗಳಲ್ಲಿ ಡಿ.5ರಿಂದ ಡಿ.15ರವರೆಗೆ ಪಹಣಿ, ಆಧಾರ್‍ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಳ್ಳಬೇಕು. ನೊಂದಣಿ ಮಾಡಿಸಿಕೊಂಡ ರೈತರಿಂದ ಮಾತ್ರ ಭತ್ತ ಖರೀದಿಸಲಾಗುವುದು ಎಂದರು.

         ನೊಂದಣಿ ಮಾಡಿಸಿದ ರೈತರು ಖರೀದಿ ಕೇಂದ್ರಕ್ಕೆ ಭತ್ತದ ಮಾದರಿಯನ್ನು ತಂದು ಗುಣಮಟ್ಟ ಪರಿವೀಕ್ಷಕರಿಂದ (ಗ್ರೇಡರ್)ಪರಿಶೀಲನೆ ಮಾಡಿಸಿ, ದೃಢೀಕರಣ ಪ್ರಮಾಣ ಪತ್ರವನ್ನು ಪಡೆದ ನಂತರ ತಮಗೆ ಸಮೀಪವಿರುವ ನೊಂದಣಿ ಮಾಡಿಸಿರುವ ಅಕ್ಕಿಗಿರಣಿಗೆ ಹೋಗಿ ಭತ್ತವನ್ನು ತಮ್ಮ ಸ್ವಂತ ಖರ್ಚಿನಲ್ಲಿ ತೆಗೆದುಕೊಂಡು ಹೋಗಿ ಒಪ್ಪಿಸಬಹುದು ಎಂದರು.ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗಮನಕ್ಕೆ ತರಬಹುದು ಎಂದರು.

         ಈ ಸಂದರ್ಭದಲ್ಲಿ ಎಪಿಎಂಸಿ ಉಪನಿರ್ದೇಶಕ ಮೋಹನಕುಮಾರ, ಕಾರ್ಯದರ್ಶಿ ಖಲೀಲ್, ಆಹಾರ ನಿರೀಕ್ಷಕ ರವಿ ರಾಠೋಡ ಸೇರಿದಂತೆ ರೈತರು ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಿಬ್ಬಂದಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap