ಪರೋಕ್ಷವಾಗಿ ಭಾರತ್ ಬಂದ್ ಸಮರ್ಥಿಸಿಕೊಂಡ ಪರಮೇಶ್ವರ್

0
4

ಬೆಂಗಳೂರು

       ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ ಜಿಎಸ್‍ಟಿ ಅಸಮರ್ಪಕ ಜಾರಿ, ಬೆಲೆ ಏರಿಕೆ, ಕಾರ್ಮಿಕ ವಿರೋಧಿ ನೀತಿಗಳನ್ನು ಎಲ್ಲರು ವಿರೋಧಿಸಲೇ ಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳುವ ಮೂಲಕ ಭಾರತ್ ಬಂದ್ ಅನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

         ನಗರದ ಸಿರ್ಸಿ ವೃತ್ತದ ಮೇಲ್ಸೇತುವೆ ಕಾಮಗಾರಿಯ ಪರಿಶೀಲಿಸಿದ ನಂತರ ಸುದ್ದಿಗಾರ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರದ ಕೆಲವು ನೀತಿಗಳನ್ನು ವಿರೋಧಿಸಿ ಬಂದ್‍ಗೆ ಕರೆ ನೀಡಲಾಗಿದೆ. ಕೇಂದ್ರದ ಜನ ವಿರೋಧಿ ನೀತಿಗಳನ್ನು ವಿರೋಧಿಸುವುದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದರು.

         ರಾಜ್ಯದಲ್ಲಿ ಬಂದ್‍ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೆಲವೆಡೆ ಬಂದ್‍ನ ಪರಿಸ್ಥಿತಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆಗೆ ವಿಶೇಷ ಗಮನಹರಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

        ಕಾಂಗ್ರೆಸ್ ವರಿಷ್ಠರು ನೀಡಿದ್ದ ನಿಗಮ ಮಂಡಳಿ ನೇಮಕಾತಿ ಪಟ್ಟಿಯಲ್ಲಿ ಕೆಲ ಶಾಸಕರ ಹೆಸರು ತಡೆಹಿಡಿದಿರುವ ಬಗ್ಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಬಳಿ ನಿನ್ನೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ನೀರಾವರಿ ಸಂಬಂಧಿತ ಪ್ರಮುಖ ಸಭೆ ಇದ್ದ ಕಾರಣ ಈ ಕುರಿತು ಗಮಹರಿಸಲು ಸಾಧ್ಯವಾಗಿಲ್ಲ ಎಂದರು.

         ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗ ಶೆಟ್ಟಿ ಅವರ ಆಪ್ತ ಕಾರ್ಯದರ್ಶಿ ಬಳಿ ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರದಲ್ಲಿ ಕಾನೂನು ಬದ್ಧವಾಗಿ ತನಿಖೆ ನಡೆಯುತ್ತಿದೆ. ಆದರೆ ಸಚಿವರು ಇದರಲ್ಲಿ ತಮ್ಮ ಪಾತ್ರವಿಲ್ಲ. ಹಣ ಇಟ್ಟುಕೊಂಡಿದ್ದ ತಪ್ಪಿತಸ್ಥನ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಿ ಎಂದು ಸ್ವತಃ ಸಚಿವರೇ ಹೇಳಿದ್ದಾರೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಯಲಿದ್ದು, ಈ ಬಗ್ಗೆ ಯಾವುದೇ ಕಳವಳ ಬೇಡ ಎಂದರು.

        ರಾಜ್ಯದಲ್ಲಿ ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ನಮ್ಮ ಸರಕಾರ ಸಂಪೂರ್ಣ ಬದ್ಧವಿದೆ. ಕನ್ನಡ ನಮ್ಮಮಾತೃ ಭಾಷೆ. ಕನ್ನಡವನ್ನು ಎಂದೆಂದಿಗೂ ಕಡೆಗಣಿಸಲು ಸಾಧ್ಯವಿಲ್ಲ. ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಇಂಗ್ಲಿಷ್ ಜ್ಞಾನ ಅಗತ್ಯ. ಅವರು ಬೇರೆ ರಾಜ್ಯ, ರಾಷ್ಟ್ರಗಳಿಗೆ ತೆರಳಿದಾಗ ಅವರಿಗೆ ಇಂಗ್ಲಿಷ್ ಅತ್ಯಂತ ಅವಶ್ಯಕವಾಗಿರುತ್ತದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

         ಇಂಗ್ಲೀಷ್ ಶಾಲೆಗಳ ವಿಚಾರದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯವಿರುತ್ತದೆ. ಅದನ್ನು ಗೌರವಿಸಬೇಕಾಗುತ್ತದೆ. ಸರ್ಕಾರದ ನಿಲುವನ್ನು ವಿರೋಧಿಸುವವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ ಎಂದರು.

        ಹೊಸ ತಂತ್ರಜ್ಞಾನ ಬಳಸಿ ಸಿರ್ಸಿ ವೃತ್ತದ ಮೇಲ್ಸೇತುವೆಯ ಡಾಂಬರೀಕರಣ ಮಾಡಲಾಗುತ್ತಿದೆ. ಸಿರ್ಸಿ ವೃತ್ತದ 2.5 ಕಿ.ಮೀ. ಮೇಲ್ಸೆತುವೆಯ ಒಂದು ಭಾಗದಲ್ಲಿ ಮಿನಿರಲ್ ಆಧಾರಿತ “ಆಸ್ಫಾಲ್ಟಿಕೋ ಸೀಲ್’ನ ಶೀಟ್‍ನನ್ನು ಹಾಕಲಾಗುತ್ತಿದೆ. ಈ ಟೆಕ್ನಾಲಜಿಯಿಂದ ಫ್ಲೈ ಒವರ್ ಮೇಲೆ ನೀರು ನಿಲ್ಲುವುದಿಲ್ಲ. ಗುಂಡಿ ಬೀಳುವುದಿಲ್ಲ. ಈ ಶೀಟ್‍ನನ್ನು 140 ಡಿಗ್ರಿ ಉಷ್ಣಾಂಶದಲ್ಲಿ ಬಿಸಿ ಮಾಡಿ ಅದನ್ನು ರಸ್ತೆಗೆ ಹಾಕಿ, ಅದರ ಮೇಲೆ ಡಾಂಬರೀಕರಣ ಮಾಡಲಾಗುತ್ತದೆ. 4.5 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಒಂದು ಭಾಗದ ರಸ್ತೆ ಕಾಮಗಾರಿಗೆ 30 ದಿನಗಳ ಗಡುವು ನೀಡಲಾಗಿದ್ದು, ಈ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದರು.

       ಈ ಮೇಲ್ಸೇತುವೆಯಲ್ಲಿ ಆಗಾಗ್ಗೆ ರಸ್ತೆ ಗುಂಡಿ ಬೀಳುವ ಹಾಗೂ ಮಳೆ ನೀರು ನಿಲ್ಲುವ ದೂರುಗಳು ಕೇಳಿ ಬರುತ್ತಿದ್ದವು. ಈ ದೃಷ್ಟಿಯಿಂದ ನೂತನ ತಂತ್ರಜ್ಞಾನ ಬಳಸಲಾಗಿದೆ. 30 ದಿನಗಳ ಕಾಲ ಈ ಕಾಮಗಾರಿ ನಡೆಯುವುದರಿಂದ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here