ತಾಳ್ಮೆ, ನೆಮ್ಮದಿಯ ಬದುಕು ಕಣ್ಮರೆ: ರಂಭಾಪುರಿಶ್ರೀ

ಚನ್ನಗಿರಿ:

          ಆಧುನಿಕತೆಯ ಭರಾಟೆಯಿಂದಾಗಿ ಒತ್ತಡದಲ್ಲಿ ಸಿಲುಕಿರುವ ಮನುಷ್ಯನಲ್ಲಿ ತಾಳ್ಮೆ, ನೆಮ್ಮದಿಯ ಬದುಕು ಕಣ್ಮರೆಯಾಗಿ, ದ್ವೇಷ ಅಸೂಯೆ, ಕ್ರೋಧವುಳ್ಳ ಸಮಾಜ ನಿರ್ಮಾಣವಾಗುತ್ತಿದೆ ಎಂದು ಬಾಳೇಹೊನ್ನೂರಿನ ರಂಭಾಪುರಿ ಜಗದ್ಗುರು ಶ್ರೀಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಆತಂಕ ವ್ಯಕ್ತಪಡಿಸಿದರು.

          ತಾಲೂಕಿನ ಮಾವಿನಹೊಳೆಯಲ್ಲಿ ನಿರ್ಮಾಣಗೊಂಡ ಶ್ರೀ ಗುರು ಮಹಾರುದ್ರಸ್ವಾಮಿ ದಾಸೋಹ ಮಂದಿರ ಮತ್ತು ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನ ಉದ್ಘಾಟನೆ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

          ಇಂದು ಮಠಗಳಿಂದ ಧರ್ಮ ಜಾಗೃತಿಯನ್ನು ಸಾರಲಾಗುತ್ತಿದೆ, ಸಂಸ್ಕøತಿ ಅಚಾರ-ವಿಚಾರಗಳನ್ನು ಉಳಿಸಲು ಮಠಾಧೀಶರಿಂದ ಮಾತ್ರ ಸಾಧ್ಯ, ಅದ್ದರಿಂದ ಗುರುಗಳ ಮೇಲೆ ಭಕ್ತಿ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು ಬದುಕು ಒಂದು ಹೂದೋಟ . ಮಾನವ ಜೀವನ ಸುಖ ಶಾಂತಿಯಿಂದ ಸಮೃದ್ಧಗೊಳ್ಳಬೇಕು. ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಸಮರ್ಪಿಸಿಕೊಂಡು ಬಾಳಿದಾಗ ಬದುಕು ಸಾರ್ಥಕಗೊಳ್ಳುವುದು, ಮನುಷ್ಯ ಹೊರಗಿನ ಸಂಪತ್ತು ಗಳಿಸಿದನೇ ಹೊರತು ಒಳಗಿರುವ ಅಧ್ಯಾತ್ಮ ಸಂಪತ್ತು ಅರಿಯದಾದ. ಸುಖಾಪೇಕ್ಷಿಯಾದ ಮನುಷ್ಯ ದೇವರು ಮತ್ತು ಧರ್ಮದಲ್ಲಿ ನಂಬಿಗೆ ಶೃದ್ಧೆಗಳನ್ನು ಹೊಂದಿರಬೇಕು.

         ಸಂಪತ್ತು ಗಳಿಸುವುದೇ ಜೀವನದ ಪರಮ ಗುರಿಯಲ್ಲ. ಸಂಪತ್ತಿನ ಜೊತೆಗೆ ಒಂದಿಷ್ಟು ಜ್ಞಾನ ಸಂಪತ್ತು ಸಂಪಾದಿಸಿಕೊಂಡು ಬಾಳುವುದು ಹೆಚ್ಚು ಶ್ರೇಯಸ್ಕರ. ವೀರಶೈವ ಧರ್ಮದಲ್ಲಿ ಕಾಯಕ ಮತ್ತು ದಾಸೋಹಕ್ಕೆ ವಿಶೇಷ ಮಹತ್ವ ಕೊಟ್ಟಿದ್ದನ್ನು ಮರೆಯುವಂತಿಲ್ಲ. ಸತ್ಯ ಶುದ್ಧವಾದ ಬದುಕಿನಿಂದ ಶಾಂತಿ ಸಂತೃಪ್ತಿಯ ಬದುಕು ನಿರ್ಮಾಣಗೊಳ್ಳುತ್ತದೆ. ಮಾವಿನಹೊಳೆ ಕ್ಷೇತ್ರನಾಥನಾಗಿ ಪೂಜೆಗೊಳ್ಳುವ ಶ್ರೀ ಗುರು ಮಹಾರುದ್ರಸ್ವಾಮಿ ಭಕ್ತರ ಪಾಲಿಗೆ ಕಾಮಧೇನು ಕಲ್ಪವೃಕ್ಷ. ಭಕ್ತ ಸಂಕುಲದ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿ ಸುಖ ಸಂಪತ್ತು ಕರುಣಿಸುವ ಕುಲದೈವ. ಇಂದು ಈ ಕ್ಷೇತ್ರದಲ್ಲಿ ದಾಸೋಹ ಮಂದಿರ ಮತ್ತು ಸಮುದಾಯ ಭವನ ನಿರ್ಮಾಣಗೊಂಡಿರುವುದು ಸಂತೋಷವನ್ನು ಉಂಟು ಮಾಡುತ್ತದೆ ಎಂದರು.

         ಉಜ್ಜಯಿನಿ ಜಗದ್ಗುರು ಶ್ರೀಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಮನುಷ್ಯ ಜೀವನದಲ್ಲಿ ಕ್ಷೇತ್ರಯಾತ್ರೆ ತೀರ್ಥಯಾತ್ರೆ ಮತ್ತು ಗುರು ಯಾತ್ರೆ ಪೂಜೆ ಮಾಡಿ ಪುಣ್ಯ ಸಂಪಾದಿಸಿಕೊಳ್ಳಬೇಕು. ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳಿಂದ ಶ್ರೇಯೋಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಶ್ರೀ ಗುರು ಮಹಾರುದ್ರಸ್ವಾಮಿ ಕ್ಷೇತ್ರ ಹೆಚ್ಚು ಅಭಿವೃದ್ಧಿಯಾಗುತ್ತಿರುವುದು ಭಕ್ತ ಸಮೂಹಕ್ಕೆ ಸಂತೋಷ ತಂದಿದೆ ಎಂದರು.

          ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ತಾನು ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನಾದರೂ ಧರ್ಮ ಕಾರ್ಯಗಳಿಗೆ ಕೊಟ್ಟಿದ್ದಾದರೆ ಕ್ಷೇತ್ರಗಳು ಬೆಳೆಯಲು ಸಾಧ್ಯವಾಗುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿ ಇಂಥ ಕ್ಷೇತ್ರಗಳಿಂದ ಸಿಗಲು ಸಾಧ್ಯವಾಗುವುದು. ಶ್ರೀ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೊಂಡು ಬರುವ ಭಕ್ತರಿಗೆ ಹೆಚ್ಚು ಅನುಕೂಲ ಕಲ್ಪಿಸಲೆಂದರು.

         ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀಶೈಲ ಜಗದ್ಗುರುಗಳು ಶ್ರೀ ಗುರು ಮಹಾರುದ್ರಸ್ವಾಮಿ ನಿತ್ಯ ದಾಸೋಹ ಮಂದಿರ ಉದ್ಘಾಟಿಸಿದರು ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಮಾಡಾಳು ವಿರುಪಾಕ್ಷಪ್ಪ ವಹಿಸಿದ್ದರು. ಸಂಸದ ಬಿ,ವೈ. ರಾಘವೇಂದ್ರ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಮಾಜಿ ಮಾಜಿ ಶಾಸಕ ಮಹಿಮಾ ಪಟೇಲ್, ಪುರಸಭಾ ಮಾಜಿ ಸದಸ್ಯ ಕೆ.ಪಿ.ಎಂ.ಶಿವಲಿಂಗಯ್ಯ, ಜಿ.ಪಂ.ಅಧ್ಯಕ್ಷೆ ಜಯಶೀಲ ಕೆ.ರಾಜಣ್ಣ, ಜಿ.ಪಂ.ಸದಸ್ಯೆ ಮಂಜುಳ ಟಿ.ವಿ. ರಾಜು, ತಾ.ಪಂ, ಅಧ್ಯಕ್ಷೆ ರೂಪ ಶ್ರೀಧರ, ಗ್ರಾ.ಪಂ. ಅಧ್ಯಕ್ಷೆ ಎಲ್. ಶೈಲಜಾ ಬಸವರಾಜಪ್ಪ ಪಾಲ್ಗೊಂಡಿದ್ದರು.

          ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಚನ್ನಗಿರಿ ವಿರಕ್ತ ಮಠದ ಜಯದೇವ ಸ್ವಾಮಿಗಳು, ಹಿರೇಮಠದ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಶಿಲಾಮಠದ ಡಾ|| ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

          ಅನೇಕ ರಾಜಕೀಯ ಧುರೀಣರು ಮತ್ತು ಗಣ್ಯ ದಾನಿಗಳು ಪಾಲ್ಗೊಂಡು ಗುರು ರಕ್ಷೆ ಸ್ವೀಕರಿಸಿದರು. ಕಾರ್ಯದರ್ಶಿ ತಿಪ್ಪೇಸ್ವಾಮಿ ಸ್ವಾಗತಿಸಿದರು. ಶಿವಮೊಗ್ಗದ ಹುಮಾಯೂನ್ ಹರ್ಲಾಪುರ ಸಂಗೀತ ಸೇವೆ ಸಲ್ಲಿಸಿದರು. ಶಿವಮೊಗ್ಗ ಶಾಂತಾ ಆನಂದ ನಿರೂಪಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಕೇಂದ್ರ ಸಚಿವ ಅನಂತ್‍ಕುಮಾರ್ ನಿಧನಕ್ಕೆ ಮಠಾಧೀಶರು, ರಾಜಕಾರಣಿಗಳು ಸಂತಾಪ ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap