ಕಾರ್ಯಕ್ಷಮತೆ ವೃದ್ಧಿಗೆ ಕ್ರೀಡೆ ಸಹಕಾರಿ: ಡಿಸಿ

ದಾವಣಗೆರೆ :

         ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗುವುದರ ಜೊತೆಗೆ ಕಾರ್ಯಕ್ಷಮತೆಯೂ ವೃದ್ಧಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅಭಿಪ್ರಾಯಪಟ್ಟರು.

       ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 2018-19ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

      ಕ್ರೀಡೆ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೇ, ಪ್ರತಿನಿತ್ಯ ಎಲ್ಲರೂ ಕ್ರೀಡೆ ಅಥವಾ ಯೋಗದಂತಹ ದೈಹಿಕ ಚಟುವಟಿಕೆಗಾಗಿ ಸ್ವಲ್ಪ ಸಮಯ ಮೀಸಿಲಿಟ್ಟಲ್ಲಿ ಉತ್ತಮ ಆರೋಗ್ಯದೊಂದಿಗೆ ಸಕ್ರಿಯ ಕರ್ತವ್ಯ ನಿರ್ವಹಣೆಗೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಸರ್ಕಾರಿ ನೌಕರರು ಸೇರಿದಂತೆ ಎಲ್ಲರೂ ಪ್ರತಿದಿನ ನಡಿಗೆ, ಓಟ, ಯೋಗ ಸೇರಿದಂತೆ ಯಾವುದೇ ಶಿಸ್ತುಬದ್ದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ನಮಗೆ ಸಮಯವಿಲ್ಲ ಎಂದು ಹೇಳದೇ, ಸಮಯವನ್ನು ಸರಿಯಾಗಿ ನಿರ್ವಹಣೆ ಮಾಡಿಕೊಂಡು ಪ್ರತಿದಿನ ಅರ್ಧ ಅಥವಾ ಒಂದು ಗಂಟೆ ಇಂತಹ ದೈಹಿಕ ಚಟುವಟಿಕೆಗೆ ಮೀಸಲಿಡಬೇಕೆಂದು ಕಿವಿಮಾತು ಹೇಳಿದರು.

      ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಮಾತನಾಡಿ, ಸಾಮಾನ್ಯ ಮನುಷ್ಯ ಸ್ವೀಕರಿಸುವ ಸವಾಲಿಗೂ, ಒಬ್ಬ ಕ್ರೀಡಾಪಟು ಸ್ವೀಕರಿಸುವ ಸವಾಲಿಗೂ ವ್ಯತ್ಯಾಸವಿದೆ. ಸ್ವೀಕರಿಸಿದ ಸವಾಲಿಗೆ ಬದ್ಧರಾಗಿ ಕ್ರೀಡಾಪಟು ತನ್ನನ್ನು ತಾನು ತೊಡಗಿಸಿಕೊಳ್ಳಬೇಕಿರುತ್ತದೆ. ಸೋಲು ಅಥವಾ ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವ ರೂಢಿಸಿಕೊಳ್ಳಬೇಕಿದೆ. ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆ ಮತ್ತು ಇತರೆ ಸಾಂಸ್ಕøತಿಕ ಚಟುವಟಿಕೆಗಳು ಅವಶ್ಯಕವಾಗಿದೆ ಎಂದರು.

       ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಹಾಲೇಶಪ್ಪ ಮಾತನಾಡಿ, ಎಲ್ಲ ನೌಕರರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ. ಇಂತಹ ಪ್ರತಿಭೆಯನ್ನು ಹೊರಹಾಕಲು ಇದೊಂದು ಉತ್ತಮ ಅವಕಾಶವಾಗಿದೆ. ನೌಕರರು ನಿತ್ಯ ಕಡತ, ಕಚೇರಿ, ಕರ್ತವ್ಯದಲ್ಲಿ ಮುಳುಗಿದ್ದು, ಈ ಎರಡು ದಿನಗಳ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆ ಹಾಗೂ ಶಕ್ತಿ ಸಾಮಥ್ರ್ಯಾನುಸಾರ ವಿವಿಧ ಕ್ರೀಡಾ, ಸಾಂಸ್ಕತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಚೈತನ್ಯಶೀಲರಾಗಲು ಇದೊಂದು ಸದಾವಕಾಶವಾಗಿದೆ ಎಂದರು.

      ಹಿಂದೆ ಹಳ್ಳಿಗಾಡಿನಲ್ಲಿ ನಡೆಯುತ್ತಿದ್ದ ವಿವಿಧ ಕ್ರೀಡೆ ಮತ್ತು ವಿಶೇಷ ಆಟಗಳು ಆಡುವವರು ಹಾಗೂ ನೋಡುವವರು ಮೈಮರೆಯುವಂತೆ ಮಾಡುತ್ತಿದ್ದವು. ಈಗ ಅಂತಹ ಹಳ್ಳಿ ಆಟಗಳ ಸೊಗಡು ನಶಿಸುತ್ತಿರುವುದು ವಿಷಾಧನೀಯ ಎಂದ ಅವರು ಸ್ಪರ್ಧಾಳುಗಳು ಈ ಕ್ರೀಡಾಕೂಟದಲ್ಲಿ ಅತ್ಯಂತ ಶಿಸ್ತಿನಿಂದ ಪಾಲ್ಗೊಂಡು, ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕೆಂದು ಆಶಿಸಿದರು.

      ಕರಾಸನೌ ಸಂಘದ ಗೌರವಾಧ್ಯಕ್ಷ ಕೃಷ್ಣಮೂರ್ತಿ, ಕ್ರೀಡಾ ಕಾರ್ಯದರ್ಶಿಗಳಾದ ವಿ.ಧನಂಜಯ, ಸಿ.ಕೃಷ್ಣಪ್ಪ, ಸಾಂಸ್ಕತಿಕ ಕಾರ್ಯದರ್ಶಿಗಳಾದ ವಿ.ಶಾಂತಲಾ, ಸಿ.ಜಿ.ಜಗದೀಶ್ ಕೂಲಂಬಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್ ಉಪಸ್ಥಿತರಿದ್ದರು. ಸಿದ್ದಗಂಗಾ ಶಾಲಾ ಮಕ್ಕಳು ನಾಡಗೀತೆ ಹಾಡಿದರು. ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಸೋಮಶೇಖರ್ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಪರಶುರಾಮಪ್ಪ ಸ್ವಾಗತಿಸಿದರು. ಸಂಘದ ಖಜಾಂಚಿ ಬಿ. ಮಂಜುನಾಥ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap