ಪೊಲೀಸರು ಆರೋಗ್ಯದ ಕಡೆಯೂ ಗಮನಕೊಡಬೇಕು

0
3

ಚಿತ್ರದುರ್ಗ:

        ದೇಹ ಮತ್ತು ಮನಸ್ಸನ್ನು ಸದೃಢವಾಗಿಟ್ಟುಕೊಂಡಾಗ ಮಾತ್ರ ಸಮಾಜ ಮತ್ತು ಇಲಾಖೆಗೆ ಏನಾದರೂ ಕೊಡುಗೆ ನೀಡಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಪೊಲೀಸರಿಗೆ ಕರೆ ನೀಡಿದರು.

      ಪೊಲೀಸ್ ಪೆರೇಡ್ ಮೈದಾನದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ದಿನದ 24 ಗಂಟೆಯೂ ಒತ್ತಡದ ನಡುವೆ ಕೆಲಸ ಮಾಡುವ ಪೊಲೀಸರಿಗೆ ವರ್ಷಕ್ಕೊಮ್ಮೆ ಕ್ರೀಡೆ ಬೇಕೆ ಬೇಕು. ಇದರಿಂದ ಮನಸ್ಸು ಉಲ್ಲಾಸವಾಗಿ ಲವಲವಿಕೆಯಿಂದ ಕರ್ತವ್ಯ ನಿರ್ವಹಿಸಬಹುದು. ಒತ್ತಡದ ನಡುವೆ ಕೆಲವೊಮ್ಮೆ ಎಲ್ಲವೂ ಮರೆತು ಹೋಗುತ್ತದೆ. ಯೌವನದಲ್ಲಿರುವ ಶಕ್ತಿ ವಯಸ್ಸಾದ ಮೇಲೆ ಇರುವುದಿಲ್ಲ. ಗುಣಮಟ್ಟದ ಆಹಾರ, ಒಳ್ಳೆಯ ಆರೋಗ್ಯ ಬೇಕೆಂದರೆ ಉತ್ತಮ ಪರಿಸರವಿರಬೇಕು. ಪರಿಸರ ಕೆಟ್ಟರೆ ಆರೋಗ್ಯ ಕೆಡುತ್ತದೆ ಎಂದು ಸಲಹೆ ನೀಡಿದರು

        ಮೈಮೇಲೆ ಸಮವಸ್ತ್ರವಿದ್ದಾಗ ಯಾವುದೇ ಕಾರಣಕ್ಕೂ ದುಶ್ಚಟಕ್ಕೆ ಬಲಿಯಾಗಬೇಡಿ. ಇದರಿಂದ ಚಾರಿತ್ರ್ಯ ಹಾಳಾಗುವುದಲ್ಲದೆ ನಿಮಗೂ ಮತ್ತು ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಇಲಾಖೆ ನೀಡಿರುವ ಶಸ್ತ್ರಗಳನ್ನು ಯಾವ ರೀತಿ ಬಳಸಬೇಕೆಂಬುದನ್ನು ಸರಿಯಾಗಿ ತಿಳಿದುಕೊಂಡು ಚತುರತೆ ಮತ್ತು ಬುದ್ದಿವಂತಿಕೆಯಿಂದ ಅಪರಾಧಿಗಳನ್ನು ಮಟ್ಟ ಹಾಕಿ ಎಂದು ಕಿವಿಮಾತು ಹೇಳಿದರು.

       ಕರ್ತವ್ಯ ಎಷ್ಟು ಮುಖ್ಯವೋ ನಿಮ್ಮನ್ನು ಅವಲಂಭಿಸಿರುವ ಕುಟುಂಬದ ಕಡೆಗೂ ಗಮನ ನೀಡಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ. ದುಡಿದ ಹಣವನ್ನು ದುಂದು ವೆಚ್ಚ ಮಾಡದೆ ಸಾಧ್ಯವಾದಷ್ಟು ಉಳಿತಾಯ ಮಾಡಿ ನಿವೇಶನ, ಮನೆ ಖರೀಧಿಸಿ ಸಮವಸ್ತ್ರದ ಗೌರವ ಕಾಪಾಡಿಕೊಂಡು ಬೇರೆಯವರಿಗೆ ತೊಂದರೆಯಾಗದಂತೆ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ನೊಂದವರಿಗೆ ನ್ಯಾಯ ಕೊಡುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಂದು ತಿಳಿಸಿದರು.

          ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡುತ್ತ ಬಿಡುವಿಲ್ಲದೆ ಕರ್ತವ್ಯದ ನಡುವೆಯೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸು ಮತ್ತು ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಕಾರಿಯಾಗಲಿದೆ. ಕ್ರೀಡೆಯಿಂದ ಉತ್ತಮ ಸಾಧನೆ ಮಾಡಿದಾಗ ವೈಯಕ್ತಿಕ ಮತ್ತು ಇಲಾಖೆಗೂ ಲಾಭವಾಗುತ್ತದೆ. ಮನಸ್ಸಿನ ಸಮತೋಲನವನ್ನು ಕಾಪಾಡಿಕೊಂಡು ಕ್ರೀಯಾಶೀಲರಾಗಿರಲು ನೆರವಾಗಲಿದೆ ಎಂದು ಹೇಳಿದರು.

         ಕ್ರೀಡೆಯಲ್ಲಿ ಸಾಧನೆ ಮಾಡಲು ಮೊದಲು ದೇಹ ಆರೋಗ್ಯವಾಗಿರಬೇಕು. ಸೋಲು-ಗೆಲುವನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿ ಬೇರೆ ಇಲಾಖೆಗಿಂತಲೂ ಪೊಲೀಸ್ ಕ್ರೀಡಾಕೂಟ ಶಿಸ್ತುಬದ್ದವಾಗಿರುತ್ತದೆ ಎಂದರು.

          ಜಿಲ್ಲಾ ರಕ್ಷಣಾಧಿಕಾರಿ ಡಾ.ಅರುಣ್ ಕೆ.ಮಾತನಾಡಿ ಯಾವುದೇ ಕ್ರೀಡೆಯಲ್ಲಾಗಲಿ ಸೋಲು-ಗೆಲುವ ಮುಖ್ಯವಲ್ಲ. ವ್ಯಕ್ತಿತ್ವವನ್ನು ರೂಪಿಸುತ್ತದೆ. ದೈಹಿಕ ಆರೋಗ್ಯಕ್ಕೆ ಕ್ರೀಡೆ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಅದಕ್ಕಾಗಿ ಪ್ರತಿ ವರ್ಷವೂ ಪೊಲೀಸ್ ಕ್ರೀಡಾಕೂಟವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

        ಹೆಚ್ಚುವರಿ ರಕ್ಷಣಾಧಿಕಾರಿ ಆರ್.ಎಲ್.ಅರಸಿದ್ದಿ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪಾಪಣ್ಣ ವೇದಿಕೆಯಲ್ಲಿದ್ದರು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.ಪ್ರವೀಣ್‍ಕುಮಾರ್ ಕ್ರೀಡಾಜ್ಯೋತಿಯನ್ನು ಹೊತ್ತು ತಂದರು. ಆರ್.ಪಿ.ಐ.ಸೋಮಶೇಖರ್ ಪೊಲೀಸ್ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ದೈಹಿಕ ಶಿಕ್ಷಕ ಶಿವರಾಂ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here