ತುಮಕೂರು ನಗರ: ‘ಪೊಲೀಸರ ಕ್ರಮ ಯಾರ ವಿರುದ್ಧ?’

0
45

ತುಮಕೂರು

       ತುಮಕೂರು ನಗರದಲ್ಲಿ ರೌಡಿ ಹಾವಳಿ ನಿಯಂತ್ರಣಕ್ಕೆಂದು ಪೊಲೀಸರು ರಾತ್ರಿ ವೇಳೆ ಕೈಗೊಳ್ಳುತ್ತಿರುವ ನಿರ್ಬಂಧಗಳು ಇದೀಗ ನಾಗರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದು, ‘‘ಪೊಲೀಸರು ಕೈಗೊಳ್ಳುತ್ತಿರುವ ಕ್ರಮ ಯಾರ ವಿರುದ್ಧ?’’ ಎಂಬ ಜಿಜ್ಞಾಸೆಗೆ ಎಡೆಮಾಡಿಕೊಡುತ್ತಿದೆ. ಪೊಲೀಸರ ತೀವ್ರ ಕ್ರಮದಿಂದ ಬೆರಳೆಣಿಕೆಯ ಪುಂಡಪೋಕರಿಗಳಿಗಿಂತ, ಬಹುಸಂಖ್ಯಾತರಾದ ನಾಗರಿಕರು ಬವಣೆಗೆ ಗುರಿಯಾಗುವಂತಾಗಿರುವುದೇ ಇಂತಹುದೊಂದು ಜಿಜ್ಞಾಸೆಗೆ ಕಾರಣವಾಗುತ್ತಿದೆ.

      ಇದೀಗ ನಗರದಲ್ಲಿ ರಾತ್ರಿ 9 ಗಂಟೆ ಆಯಿತೆಂದರೆ ವಿವಿ‘ ಬಗೆಯ ವ್ಯಾಪಾರಸ್ಥರಿಗೆ ತಳಮಳ ಆರಂ‘ವಾಗುತ್ತಿದೆ. ‘‘ಯಾವಾಗ ಪೊಲೀಸರು ಬಂದು ಬಾಗಿಲು ಹಾಕುವಂತೆ ತಮ್ಮದೇ ಶೈಲಿಯಲ್ಲಿ ತಾಕೀತು ಮಾಡುವರೋ’’ ಎಂಬ ಆತಂಕ ಶುರುವಾಗುತ್ತದೆ. ಅದು ದೊಡ್ಡ ದೊಡ್ಡ ಮಳಿಗೆಗಳನ್ನು ಹೊಂದಿರುವವರಿರಬಹುದು, ಸಸ್ಯಾಹಾರಿ ಅಥವಾ ಮಾಂಸಾಹಾರಿ ಹೋಟೆಲ್‌ಗಳವರಿರಬಹುದು, ಬೇಕರಿಗಳವರಿರಬಹುದು , ದಿನಸಿ ಅಂಗಡಿಗಳವರಿರಬಹುದು, ರಸ್ತೆ ಬದಿ ತಿಂಡಿ-ತಿನಿಸು-ತರಕಾರಿ ಮಾರುವವರಿರಬಹುದು- ಇವರೆಲ್ಲರೂ ಈಗ ರಾತ್ರಿ 9 ಗಂಟೆಯ ಬಳಿಕ ವ್ಯಾಪಾರ-ವಹಿವಾಟು ಸ್ಥಗಿತಕ್ಕೆ ತೊಡಗಬೇಕಾಗುತ್ತಿದೆ. ಕಾರಣ ‘‘ಪೊಲೀಸರು ಬರುತ್ತಾರೆಂಬ ಭಯದಿಂದ !!’’

        ನಗರದಲ್ಲಿ ಇತ್ತೀಚೆಗೆ ಬೆಳಗಿನ 8-30 ರಲ್ಲಿ ನಡುರಸ್ತೆಯಲ್ಲೆ ಮಾಜಿ ಮೇಯರ್ ರವಿಕುಮಾರ್ ಹತ್ಯೆಗೊಳಗಾಗಿದ್ದರು. ಆ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ತುಮಕೂರು ನಗರದಲ್ಲಿ ರೌಡಿಗಳು, ಪುಂಡು-ಪೋಕರಿಗಳನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ದಿವ್ಯಾ ವಿ.ಗೋಪಿನಾಥ್ ಅವರು ಕಠಿಣ ನಿರ್ಧಾರ ಕೈಗೊಂಡರು.

       ಅದರ ಭಾಗವಾಗಿ ನಗರಾದ್ಯಂತ ಎಲ್ಲ ವ್ಯಾಪಾರ ವಹಿವಾಟುಗಳನ್ನು ರಾತ್ರಿ 10-30 ರ ಹೊತ್ತಿಗೆ ಸ್ಥಗಿತಗೊಳಿಸಲು ಪೊಲೀಸರು ಕ್ರಮ ಜರುಗಿಸಲಾರಂಭಿಸಿದರು. ವೈನ್ ಸ್ಟೋರ್‌ಗಳಿಗೆ ರಾತ್ರಿ 10-30 ರವರೆಗೆ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ರಾತ್ರಿ 11-30 ರವರೆಗೆ ತೆರೆದಿರಲು ಕಾನೂನಿನ ಪ್ರಕಾರ ಅವಕಾಶ ಇರುವುದರಿಂದ ಅವುಗಳನ್ನು ಹೊರತುಪಡಿಸಿ ಉಳಿದ ವ್ಯಾಪಾರ -ವಹಿವಾಟುಗಳನ್ನು ರಾತ್ರಿ 10-30 ರ ಹೊತ್ತಿಗೆ ಬಂದ್ ಮಾಡಿಸಲು ಪೊಲೀಸರು ತೊಡಗಿದರು.

        ಆ ಮೂಲಕ ರಾತ್ರಿ ವೇಳೆ ನಡೆಯುವ ಅಪರಾಧ ಕೃತ್ಯಗಳನ್ನು ತಡೆಹಿಡಿಯುವ ಉದ್ದೇಶವನ್ನು ಪೊಲೀಸ್ ಇಲಾಖೆ ಹೊಂದಿ ಇಂಥ ಕ್ರಮಕ್ಕೆ ಮುಂದಾಯಿತು. ಇದಕ್ಕೆ ನಾಗರಿಕ ವಲಯ ಎಲ್ಲೂ ಸಹ ವಿರೋಧ ವ್ಯಕ್ತಪಡಿಸಲಿಲ್ಲ. ಅಂದರೆ ಪೊಲೀಸ್ ಕ್ರಮಕ್ಕೆ ನಾಗರಿಕ ವಲಯದ ಬೆಂಬಲ-ಸಹಕಾರ ಇರುವುದು ಖಚಿತವಾಯಿತು.

       ಆದರೆ ಪೊಲೀಸರು ಮೇಲಧಿಕಾರಿಗಳ ಆದೇಶವನ್ನು ಜಾರಿಗೊಳಿಸುವಾಗ ತೆರಿಗೆದಾರ ನಾಗರಿಕರೊಡನೆ ತೋರಿದ ಅಸೌಜನ್ಯದ ನಡವಳಿಕೆಯು ನಾಗರಿಕರಲ್ಲಿ ತೀವ್ರ ಅಸಂತೋಷವನ್ನು, ಅಸಮಾಧಾನವನ್ನು ಉಂಟು ಮಾಡಿರುವುದು ಈಗ ಗುಟ್ಟಾಗಿ ಉಳಿಯುತ್ತಿಲ್ಲ. ಇದೇ ಈಗ ನಗರಾದ್ಯಂತ ಬಹುಮುಖ ಚರ್ಚೆಗೆ ಗ್ರಾಸವಾಗುತ್ತಿದೆ. ಪುಂಡಪೋಕರಿಗಳ ಬದಲು, ನಾಗರಿಕರನ್ನೇ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೇನೋ ಎಂಬಂತಹ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಹೋಟೆಲ್‌ಗಳಿಗೆ ರಾತ್ರಿ 11 ರವರೆಗೂ ಅವಕಾಶವಿರಲಿ

       ‘‘ಸಾರ್ವಜನಿಕ ಹಿತದೃಷ್ಟಿಯಿಂದ ರಾತ್ರಿ 11 ಗಂಟೆಯವರೆಗೂ ಹೋಟೆಲ್‌ಗಳವರಿಗೆ ವ್ಯಾಪಾರ ಮಾಡಲು ಅವಕಾಶ ಇರಬೇಕು’’ ಎಂಬುದು ತುಮಕೂರಿನ ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದ ಅಧ್ಯಕ್ಷ ಶ್ರೀನಿವಾಸ ಹತ್ವಾರ್ ಅವರ ಖಚಿತ ಅಭಿಪ್ರಾಯ.
‘‘ಗ್ರಾಹಕರು ಬಂದರೆ ಮಾತ್ರ ಹೋಟೆಲ್‌ಗಳು ತೆರೆದಿರುತ್ತವೆ. ಇಲ್ಲದಿದ್ದರೆ ಇಲ್ಲ. ಗ್ರಾಹಕರು ಬಂದು ಹೋಗುತ್ತಾರೆಂದರೆ ಅಲ್ಲಿ ವಾತಾವರಣ ಚೆನ್ನಾಗಿದೆಯೆಂದು ಅರ್ಥ. ಜನಸಂಚಾರ ಇದ್ದರಷ್ಟೇ ಇವೆಲ್ಲ ಸಾಧ್ಯ. ಆದ್ದರಿಂದ ಮೊದಲಿನಿಂದಲೂ ಇರುವಂತೆ ಈಗಲೂ ರಾತ್ರಿ 11 ಗಂಟೆಯವರೆಗೂ ಹೋಟೆಲ್‌ಗಳಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ಬೀದಿಬದಿ ವ್ಯಾಪಾರಸ್ಥರಿಗೆ ನಿಯಮದಂತೆ ವ್ಯವಸ್ಥೆ ಮಾಡಿಕೊಡಲಿ’’ ಎಂದು ಅವರು ಹೇಳಿದರು.

          ‘‘ಪೊಲೀಸರ ಉದ್ದೇಶಕ್ಕೆ ನಮ್ಮ ಸಹಕಾರ ಇರುತ್ತದೆ’’ ಎಂದು ಹೇಳಿದ ಅವರು, ‘‘ಪೊಲೀಸರ ಈಗಿನ ಕ್ರಮಗಳಿಂದ ರಾತ್ರಿ 10 ಗಂಟೆಯೊಳಗೇ ಹೋಟೆಲ್‌ಗಳನ್ನು ಮುಚ್ಚುವಂಥ ಪರಿಸ್ಥಿತಿ ಉಂಟಾಗಿದೆ. ಇದರಿಂದ ವ್ಯಾಪಾರಸ್ಥರಿಗಷ್ಟೇ ಅಲ್ಲದೆ, ಊಟೋಪಹಾರಗಳಿಗೆ ಹೋಟೆಲ್‌ಗಳನ್ನು ಅವಲಂಬಿಸಿರುವ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ. ಕಾರ್ಪೊರೇಷನ್ ನಿಯಮಾವಳಿಯಲ್ಲಿ ವೇಳೆ (ಟೈಮಿಂಗ್ಸ್) ಬಗ್ಗೆ ಉಲ್ಲೇಖವೇನೂ ಇಲ್ಲ. ಆದ್ದರಿಂದ ಇದನ್ನು ಪುನರ್‌ಪರಿಶೀಲನೆ ಮಾಡಬೇಕು’’ ಎಂದರು.

        ‘‘ಬೆಂಗಳೂರಿನಲ್ಲಿ ರಾತ್ರಿ 1 ಗಂಟೆಯವರೆಗೂ ಹೋಟೆಲ್‌ಗಳು ತೆರೆದಿರಬಹುದು. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣಗಳಲ್ಲಿರುವ ಹೋಟೆಲ್‌ಗಳು ಮಾತ್ರ 24 ಗಂಟೆಗಳೂ ತೆರೆದಿರಬಹುದು. ಸಾರ್ವಜನಿಕರ ಹಿತದೃಷ್ಟಿಯಿಂದ ಇದಕ್ಕೆ ಅಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಸುರಕ್ಷತೆಗೇನೂ ತೊಂದರೆ ಆಗಿಲ್ಲ. ಬೆಂಗಳೂರು ಹೊರತುಪಡಿಸಿ ಇತರೆಡೆ ರಾತ್ರಿ 11ರವರೆಗೂ ಹೋಟೆಲ್‌ಗಳು ತೆರೆದಿರಬಹುದೆಂದು ಹಿಂದೆಯೇ ಚರ್ಚೆ ಆಗಿದೆ. ಆದ್ದರಿಂದ ಈಗಲೂ ತುಮಕೂರು ನಗರದಲ್ಲಿ ರಾತ್ರಿ 11 ರವರೆಗೂ ಕಾಲಾವಕಾಶ ಕೊಡಬೇಕು’’ ಎಂದು ಶ್ರೀನಿವಾಸ ಹತ್ವಾರ್ ಅಭಿಪ್ರಾಯಪಟ್ಟರು.

   ಪ್ರತಿಷ್ಠಿತ ಹೋಟೆಲ್‌ನಲ್ಲಿ ಪೊಲೀಸರಿಂದ ಕಿರಿಕಿರಿ

           ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಪ್ರತಿಷ್ಠಿತ ‘‘ಹಟ್’’ ಹೋಟೆಲ್‌ನಲ್ಲೂ ಪೊಲೀಸರು ಕಿರಿಕಿರಿ ಮಾಡಿರುವ ಸಂಗತಿ ಈಗ ಬೆಳಕಿಗೆ ಬಂದಿದೆ. ಇದು ಪೂರ್ಣ ಸಸ್ಯಾಹಾರಿ ಹೋಟೆಲ್ ಆಗಿದ್ದು, ಸಂಜೆ ನಂತರ ಕುಟುಂಬಸ್ಥರೇ ಅಧಿಕ ಸಂಖ್ಯೆಯಲ್ಲಿ ಬಂದು ಹೋಗುವ ಸ್ಥಳವಾಗಿದೆ. ಅದರಲ್ಲೂ ಅಧಿಕಾರಿಗಳು, ವ್ಯಾಪಾರಸ್ಥರು, ವಿವಿಧ ಕ್ಷೇತ್ರಗಳ ಗಣ್ಯರು ಊಟೋಪಹಾರಕ್ಕೆ ಇಲ್ಲಿಗೆ ಬರುತ್ತಾರೆ. ವ್ಯಾಪಾರಸ್ಥರು ತಮ್ಮ ವಹಿವಾಟು ಮುಗಿದ ಬಳಿಕ ಕುಟುಂಬದೊಂದಿಗೆ ರಾತ್ರಿ 9 ಗಂಟೆ ಹೊತ್ತಿಗೆ ಬಂದು ಊಟ ಮಾಡಿ ತೆರಳುವುದು ಇಲ್ಲಿ ಸಹಜ.

         ಹೀಗಿರುವಾಗ ಇಲ್ಲಿಗೂ ‘‘ನುಗ್ಗಿದ’’ ಪೊಲೀಸರು ಹೋಟೆಲ್‌ನ ವ್ಯವಸ್ಥಾಪಕರ ಜೊತೆ ಅತ್ಯಂತ ಅನುಚಿತವಾಗಿ, ಅಸೌಜನ್ಯದಿಂದ ವರ್ತಿಸಿ, ಪೊಲೀಸ್ ಠಾಣೆಗೂ ಕರೆದೊಯ್ದಿರುವರೆಂಬುದು ತೀವ್ರ ಟೀಕೆಗೆ ಒಳಗಾಗುತ್ತಿದೆ.

          ‘‘ಸಾಮಾನ್ಯವಾಗಿ ರಾತ್ರಿ 10-30 ರ ಹೊತ್ತಿಗೆ ನಮ್ಮ ಹೋಟೆಲ್ ವೇಳೆ ಕೊನೆಗೊಳ್ಳುತ್ತದೆ. ಗ್ರಾಹಕರೆಲ್ಲ ಹೊರಟು ಕೊನೆಗೆ ಬಾಗಿಲು ಹಾಕುವಾಗ 11 ಗಂಟೆ ಆಗುತ್ತಿತ್ತು. ಆದರೆ ಈಗ ಪೊಲೀಸರ ಒತ್ತಡದಿಂದ ರಾತ್ರಿ 9-45 ರ ಹೊತ್ತಿಗೇ ಬಾಗಿಲು ಹಾಕುವ ಪರಿಸ್ಥಿತಿ ಉಂಟಾಗುತ್ತಿದೆ. ಈ ವಾತಾವರಣ ನೋಡಿ ಹೋಟೆಲ್‌ಗೆ ರಾತ್ರಿ ವೇಳೆ ಊಟಕ್ಕೆ ಬರುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೋಟೆಲ್ ವ್ಯಾಪಾರಕ್ಕೆ ‘ಕ್ಕೆ ಉಂಟಾಗುತ್ತಿದೆ’’ ಎಂದು ‘‘ಹಟ್’’ ಹೋಟೆಲ್ ಮಾಲೀಕ ರಂಗನಾಥ್ ಅವರು ಪ್ರತಿಕ್ರಿಯಿಸಿದರು.

          ‘‘ಮೊನ್ನೆ ನಾನು ಊರಿನಲ್ಲಿರಲಿಲ್ಲ. ಅಂದು ರಾತ್ರಿ ಸುಮಾರು 10 ಗಂಟೆಯಲ್ಲಿ ಹೋಟೆಲ್‌ಗೆ ಬಂದ ಬೀಟ್ ಪೊಲೀಸ್ ಇನ್ನೂ ಹೋಟೆಲ್ ತೆರೆದಿದ್ದು, ಲೈಟ್‌ಗಳನ್ನು ಆ್ ಮಾಡಿಲ್ಲ ಎಂದು ಹೋಟೆಲ್ ಮ್ಯಾನೇಜರ್ ಬಳಿ ಆಕ್ಷೇಪಿಸಿದ್ದಾರೆ. ಅನುಚಿತವಾಗಿ, ಅಸೌಜನ್ಯದಿಂದ ಮಾತನಾಡಿದ್ದಾರೆ. ಬಳಿಕ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಹೋಟೆಲ್ ಎಲ್ಲಿದೆ? ಇಲ್ಲಿಗೆ ಬರುವ ಜನರು ಎಂಥವರು? ಎಷ್ಟು ಹೊತ್ತಿಗೆ ಬಾಗಿಲು ಹಾಕುತ್ತಾರೆ? ಎಂಬುದು ಪೊಲೀಸರಿಗೆ ಗೊತ್ತಿದ್ದೂ ಈ ರೀತಿ ವರ್ತಿಸಿದ್ದು ನೋವುಂಟು ಮಾಡಿತು’’ ಎಂದು ಅವರು ವಿಷಾದದಿಂದ ಹೇಳಿದರು.

  ಬಸ್ ನಿಲ್ದಾಣದ ಘಟನೆಯಿದು

          ‘‘ಇತ್ತೀಚೆಗೆ ನಾನು ತುಮಕೂರಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಹೋಗಿದ್ದೆ. ಆಗ ವೇಳೆ ರಾತ್ರಿ 10 ಗಂಟೆ ಆಗಿತ್ತಷ್ಟೇ. ಅಲ್ಲಿದ್ದವರನ್ನೆಲ್ಲ ಪೊಲೀಸರು ಹೊರ ಹೋಗುವಂತೆ ಓಡಿಸುತ್ತಿದ್ದರು. ಆಗ ಒಬ್ಬ ಪ್ರಯಾಣಿಕರು ಆಗಷ್ಟೇ ಧರ್ಮಸ್ಥಳದಿಂದ ಇಲ್ಲಿಗೆ ಬಂದಿಳಿದಿದ್ದರು. ಅವರು ಗೌರಿಬಿದನೂರಿಗೆ ಹೋಗಬೇಕಿತ್ತು. ಆದರೆ ಮರುದಿನ ಬೆಳಗ್ಗೆ 6-30ಕ್ಕೆ ಬಸ್ ಇರುವುದಾಗಿ ಅವರಿಗೆ ಗೊತ್ತಾಯಿತು. ಹೀಗಾಗಿ ಅಲ್ಲೇ ಕುಳಿತಿದ್ದರು.

        ಆಗ ಪೊಲೀಸರು ಇವರನ್ನು ಹೊರಹೋಗುವಂತೆ ಸೂಚಿಸಿದರು. ಆಗ ಅವರು ತಾವು ಈಗಷ್ಟೇ ಧರ್ಮಸ್ಥಳದಿಂದ ಬಂದಿದ್ದು, ಗೌರಿಬಿದನೂರಿಗೆ ಹೋಗಲು ಬಸ್ಸಿಲ್ಲದೆ ಇಲ್ಲೇ ಕುಳಿತಿರುವುದಾಗಿಯೂ, ಮುಂಜಾನೆ ಬಸ್ ಇರುವುದಾಗಿಯೂ ಹೇಳಿದರು. ಇದನ್ನೆಲ್ಲ ಕೇಳಿಸಿಕೊಳ್ಳದ ಪೊಲೀಸರು ಇಲ್ಲಿಂದ ತಕ್ಷಣ ಹೊರಹೋಗಬೇಕಷ್ಟೇ ಎಂದು ದಬಾಯಿಸಿ ಕಳಿಸಿದರು. ಅವರ ಬಳಿ ಲಾಡ್ಜ್‌ನಲ್ಲಿ ತಂಗುವಷ್ಟು ಹಣ ಇತ್ತೋ ಇಲ್ಲವೋ? ರಾತ್ರಿ ಊಟಕ್ಕೆ ಏನು ಮಾಡಿಕೊಂಡರೋ ಗೊತ್ತಿಲ್ಲ.

       ಇಂಥ ಪ್ರಯಾಣಿಕರು ಅನಿರೀಕ್ಷಿತ ಸಂದ‘ರ್ಗಳಲ್ಲಿ ಉಳಿದುಕೊಳ್ಳಲು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕೊಠಡಿ ವ್ಯವಸ್ಥೆ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಹೊರದಬ್ಬಿದರೆ ಏನರ್ಥ?’’ ಎಂದು ಪರಿಸರವಾದಿ ಸುಬ್ರಹ್ಮಣ್ಯ ಅಡಿಗ ಅವರು ತಾವು ಪ್ರತ್ಯಕ್ಷ ಕಂಡ ಪ್ರಸಂಗವನ್ನು ವಿವರಿಸುತ್ತ, ಪ್ರಶ್ನಿಸಿದರು.

        ‘‘ಅನೇಕ ವೈನ್ ಸ್ಟೋರ್‌ಗಳು ಸಕಾಲಕ್ಕೆ ಮುಚ್ಚಲ್ಪಡುತ್ತಿರುವುದರಿಂದ ಕುಡುಕರು ಬೆಳ್ಳಂಬೆಳಗ್ಗೆಯೇ ವೈನ್ ಸ್ಟೋರ್‌ಗಳ ಬಳಿ ಕುಡಿತಕ್ಕಾಗಿ ಬರುವ ಅನೇಕ ನಿದರ್ಶನಗಳಿವೆ. ಕುಡುಕರಿಗಾಗಿ ಬೆಳಗ್ಗೆಯೇ ಮದ್ಯವನ್ನು ಪೂರೈಸುವವರೂ ಇದ್ದಾರೆ. ಬೆಳಗ್ಗೆಯೇ ಕುಡಿದು ಗಲಾಟೆ ಮಾಡುವವರು ಇದ್ದಾರೆ. ಎಲ್ಲ ಕ್ರೈಂಗಳು ಆರಂಭವಾಗುವುದು ಹಾಗೂ ಕ್ರಿಮಿನಲ್‌ಗಳು ಸೇರುವುದು ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ . ಆದ್ದರಿಂದ ಪೊಲೀಸರು ಮೊದಲು ಅಲ್ಲಿ ಗಮನಿಸಬೇಕು. ಅದು ಬಿಟ್ಟು ಈ ರೀತಿ ನಾಗರಿಕರಲ್ಲಿ ಭಯ ಮೂಡಿಸಬಾರದು’’ ಎಂದೂ ಅವರು ಹೇಳಿದರು.

       ‘‘ರಾತ್ರಿ 10 ರೊಳಗೆ ಎಲ್ಲ ಹೋಟೆಲ್‌ಗಳನ್ನು ಹಾಗೂ ಬೀದಿ ಬದಿ ಹೋಟೆಲ್‌ಗಳನ್ನು ಮುಚ್ಚಿಸುತ್ತಿರುವುದರಿಂದ ನೂರಾರು ಜನರು ರಾತ್ರಿ ಊಟಕ್ಕೆ ತೊಂದರೆ ಅನುಭವಿಸುವಂತಾಗುತ್ತಿದೆಯೆಂಬುದು ಗಂಭೀರ ಸಂಗತಿ. ಇದರ ಬಗ್ಗೆ ಯಾರೊಬ್ಬರೂ ಚಿಂತಿಸುತ್ತಿಲ್ಲ’’ ಎಂದು ಅಡಿಗ ಅವರು ವಿಷಾದದಿಂದ ಉದ್ಗರಿಸಿದರು.

ಕಾರ್ಖಾನೆಗಳ ಕಾರ್ಮಿಕರಬವಣೆ ಹೇಳತೀರದು

         ನಗರದ ಆಟೋ ಚಾಲಕ ಕೆ.ಎಂ.ಶಿವಕುಮಾರ್ ಮತ್ತು ಮಾಹಿತಿ ಹಕ್ಕು ಹೋರಾಟಗಾರ ಇಮ್ರಾನ್ ಪಾಷ ಅವರು ಇನ್ನೊಂದು ಪ್ರಮುಖ ಸಮಸ್ಯೆಯತ್ತ ಗಮನ ಸೆಳೆದರು. ‘‘ನಗರದೊಳಗೆ ಮತ್ತು ನಗರದ ಹೊರವಲಯದಲ್ಲಿ ಹಾಗೂ ಡಾಬಸ್ ಪೇಟೆಯಲ್ಲಿರುವ ವಿವಿಧ ಕಾರ್ಖಾನೆಗಳಿಗೆ ಪ್ರತಿನಿತ್ಯ ನಗರದಿಂದ ನೂರಾರು ಕಾರ್ಮಿಕರು ಕೆಲಸಕ್ಕೆ ಹೋಗಿಬರುತ್ತಾರೆ. ಎರಡನೇ ಶ್‌ಟಿನಲ್ಲಿರುವ ಕಾರ್ಮಿಕರು ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ವಾಪಸ್ ತುಮಕೂರು ನಗರಕ್ಕೆ ಮರಳುವಾಗ ವೇಳೆ ರಾತ್ರಿ ಸುಮಾರು 11 ಗಂಟೆಯಾಗಿರುತ್ತದೆ.

       ಅವರು ವಿವಿಧ ವಾಹನಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ನಿರ್ದಿಷ್ಟ ಪಾಯಿಂಟ್‌ನಲ್ಲಿ ಇಳಿದು ಅಲ್ಲಿಂದ ಮನೆಗೆ ಮರಳುತ್ತಾರೆ. ಕೆಲವರು ದಾರಿಯಲ್ಲಿ ಊಟ ಮಾಡಿಕೊಂಡು ಹೋಗುತ್ತಾರೆ. ಆದರೆ ಈಗ ಹೋಟೆಲ್‌ಗಳಿಲ್ಲದೆ ಅವರ ಬವಣೆ ಹೇಳತೀರದು. ಜೊತೆಗೆ ಅವರು ರಾತ್ರಿ ಮನೆಗೆ ತೆರಳುವುದೂ ಪೊಲೀಸರ ಈಗಿನ ನಿಯಂತ್ರಣದಿಂದ ಕಷ್ಟಕರವಾಗುತ್ತಿದೆ’’ ಎಂದು ಅವರು ತಾವು ಗಮನಿಸಿರುವ ಸಮಸ್ಯೆಯನ್ನು ವಿವರಿಸಿದರು.

      ‘‘ಅನೇಕ ವ್ಯಾಪಾರಸ್ಥರು ತಮ್ಮ ಮಳಿಗೆ ಬಾಗಿಲು ಹಾಕಿಕೊಂಡು ರಾತ್ರಿ 9 ರ ಹೊತ್ತಿಗೆ ಮನೆಗೆ ಬರುತ್ತಾರೆ. ಬಳಿಕ ಅವರು ದಿನಸಿ ಹಾಗೂ ತರಕಾರಿ ತರಲು ಮನೆಯಿಂದ ಹೊರಬರುತ್ತಾರೆ. ಆದರೆ ಈಗ ಆ ಹೊತ್ತಿಗೆ ಅಂಗಡಿಗಳು ಮುಚ್ಚುತ್ತಿರುವುದರಿಂದ ಜನತೆಗೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಪರಊರಿಗೆ ಉದ್ಯೋಗಕ್ಕೆ ತೆರಳಿ ರಾತ್ರಿ ವಾಪಸ್ ಬರುವವರ ಸ್ಥಿತಿಯೂ ಇದೇ ಆಗಿದೆ. ಈ ಸಮಸ್ಯೆಯನ್ನು ಯಾರೂ ಕೇಳಿಸಿಕೊಳ್ಳುವಂತೆ ಕಾಣುತ್ತಿಲ್ಲ’’ ಎಂದು ಉದಾಹರಣೆಗಳನ್ನು ನೀಡಿದರು.

        ‘‘ರಸ್ತೆ ಬದಿ ತಿಂಡಿ-ತಿನಿಸು ಮಾರುವವರು ರಾತ್ರಿ 9-30 ರೊಳಗೆ ಬಂದ್ ಮಾಡಬೇಕಾಗಿರುವುದರಿಂದ ವ್ಯಾಪಾರ ಆಗದೆ, ತಾವು ಮಾಡಿದ್ದ ಆಹಾರ ಪದಾರ್ಥಗಳನ್ನು ಬೀದಿಗೆ ಚೆಲ್ಲಿ ಹೋಗಿರುವ ಪ್ರಸಂಗಗಳೂ ನಡೆದಿವೆ’’ ಎಂದು ಅವರು ತಿಳಿಸಿದರು.
ಬೆಂಗಳೂರಿಗೆ ಹೋಗಿ

ಬರುವವರ ಸಮಸ್ಯೆ

       ರಾಜಧಾನಿ ಬೆಂಗಳೂರಿಗೆ ಪ್ರತಿನಿತ್ಯ ತುಮಕೂರಿನಿಂದ ಸಾವಿರಾರು ಜನರು ವಿವಿಧ ಉದ್ಯೋಗಾರ್ಥ ಹೋಗಿಬರುತ್ತಾರೆ. ಬಸ್ ಹಾಗೂ ರೈಲುಗಳಲ್ಲಿ ಸಂಚರಿಸುತ್ತಾರೆ. ಹಿಂತಿರುಗುವಾಗ ಅವರ ಉದ್ಯೋಗಕ್ಕೆ ಅನುಸಾರ ಸಮಯ ಆಗುತ್ತದೆ. ರಾತ್ರಿ 11, 11-30, 12 ಗಂಟೆ ಹೀಗೆ ವಿವಿಧ ಸಮಯಗಳಲ್ಲಿ ಬಂದಿಳಿಯುತ್ತಾರೆ. ಅವರನ್ನು ಮನೆಗೆ ಕರೆದೊಯ್ಯಲು ಅವರ ಕುಟುಂಬ ವರ್ಗದವರು ನಿರ್ದಿಷ್ಟ ಸ್ಥಳಗಳಿಗೆ ದ್ವಿಚಕ್ರ ವಾಹನಗಳಲ್ಲಿ ಬಂದಿರುತ್ತಾರೆ.

      ಇದು ಮೊದಲಿನಿಂದಲೂ ನಡೆಯುತ್ತಿದ್ದ ಕ್ರಮ. ಆದರೆ ಈಗ ಇದಕ್ಕೂ ತೊಂದರೆ ಆಗುತ್ತಿದೆ. ಕುಟುಂಬ ವರ್ಗದವರು ಬಂದು ಕಾಯುವುದೂ ಕಷ್ಟ ಹಾಗೂ ರಾತ್ರಿ ಇವರು ಮನೆಗೆ ನಡೆದು ಹೋಗುವುದೂ ಕಷ್ಟ ಅನ್ನುವಂತಾಗುತ್ತಿದೆ. ಪೊಲೀಸರಿಗೆ ಇವೆಲ್ಲ ಅರ್ಥವಾಗುವುದಿಲ್ಲವೇ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ. ‘‘ಪೊಲೀಸರು ಯಾರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ?’’ ಎಂಬುದೇ ಈಗ ತುಮಕೂರು ನಗರದ ಎಲ್ಲ ತೆರಿಗೆದಾರ ನಾಗರಿಕರ ಪ್ರಶ್ನೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here